ಕೇರಳ ಐಎಎಸ್ ಅಧಿಕಾರಿ ಮೊಬೈಲ್ ಹ್ಯಾಕ್, ಧಾರ್ಮಿಕ ವಾಟ್ಸ್ಆ್ಯಪ್ ಗ್ರೂಪ್ ರಚನೆ; ದಾಖಲಾಯಿತು ಪ್ರಕರಣ
ಕೇರಳದಲ್ಲಿ ಐಎಎಸ್ ಅಧಿಕಾರಿಯೊಬ್ಬರ ಮೊಬೈಲ್ ನಂಬರ್ ಹ್ಯಾಕ್‌ನೊಂದಿಗೆ ಧಾರ್ಮಿಕ ಹಿನ್ನೆಲೆಯೊಂದಿಗೆ ಅಧಿಕಾರಿಗಳ ವಾಟ್ಸ್ಆ್ಯಪ್ ಗ್ರೂಪ್ ರಚಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ತಿರುವನಂತಪುರ: ಐಎಎಸ್ ಅಧಿಕಾರಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿದ್ದೂ ಅಲ್ಲದೇ ಧಾರ್ಮಿಕ ಹಿನ್ನೆಲೆಯ ಎರಡು ವಾಟ್ಸ್ಆ್ಯಪ್ ಗ್ರೂಪ್‌ಗಳನ್ನು ರಚಿಸಿರುವ ಪ್ರಕರಣ ಕೇರಳದಲ್ಲಿ ನಡೆದಿದೆ. ಈ ಕುರಿತು ಕೇರಳ ಕೇಡರ್‌ನ ಐಎಎಸ್ ಅಧಿಕಾರಿ ನೀಡಿರುವ ದೂರು ಆಧರಿಸಿ ಸೈಬರ್ ಪ್ರಕರಣ ದಾಖಲಿಸಿರುವ ಕೇರಳ ಸೆನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇರಳದಲ್ಲಿ ಆಗಾಗ ಇಂತಹ ಪ್ರಕರಣಗಳು ನಡೆದಿದ್ದರೂ ಐಎಎಸ್ ಅಧಿಕಾರಿಯೊಬ್ಬರ ಮೊಬೈಲ್ ನಂಬರ್ ಆಧರಿಸಿ ವಾಟ್ಸ್ಆ್ಯಪ್ ಗ್ರೂಪ್ ಸ್ಥಾಪಿಸಿ ಅವರನ್ನೇ ಅಡ್ಮಿನ್ ಮಾಡಿರುವುದು ವಿವಾದದ ಕೇಂದ್ರ ಬಿಂದು. ಯಾವ ಉದ್ದೇಶದಿಂದ ಇದನ್ನು ಮಾಡಿದ್ದಾರೆ. ಹ್ಯಾಕ್ ಮಾಡಿದವರು ಯಾರು ಎನ್ನುವ ಕುರಿತು ತನಿಖೆ ತೀವ್ರಗತಿಯಿಂದಲೇ ನಡೆದಿದೆ.
ಅಪರಿಚಿತ ಸೈಬರ್ ಅಪರಾಧಿಗಳು ತಮ್ಮ ಮೊಬೈಲ್ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ ಮತ್ತು ಅವರ ಅನುಮತಿಯಿಲ್ಲದೇ ಧಾರ್ಮಿಕ ವಾಟ್ಸ್ಆ್ಯಪ್ ಗುಂಪುಗಳನ್ನು ರಚಿಸಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಕೇರಳದ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಕರಾಗಿರುವ ಅಧಿಕಾರಿ ಕೆ.ಗೋಪಾಲಕೃಷ್ಣನ್ ದೂರು ನೀಡಿದ ನಂತರ ಇದು ಬಯಲಾಯಿತು.
ಹ್ಯಾಕರ್ಗಳು ತಮ್ಮನ್ನು ಮಲ್ಲು ಹಿಂದೂ ಅಧಿಕಾರಿಗಳು ಮತ್ತು ಮಲ್ಲು ಮುಸ್ಲಿಂ ಆಫೀಸರ್ಸ್ ಎಂಬ ಎರಡು ವಾಟ್ಸಾಪ್ ಗುಂಪುಗಳಿಗೆ ಅಡ್ಮಿನ್ ಮಾಡಿದ್ದಾರೆ. ಮೊದಲು ಹಿಂದೂ ಅಧಿಕಾರಿಗಳು, ಆನಂತರ ಮಲ್ಲು ಮುಸ್ಲಿಂ ಅಧಿಕಾರಿಗಳ ಗುಂಪನ್ನು ಸಹ ರಚಿಸಲಾಯಿತು. ಸಹ ಅಧಿಕಾರಿಗಳು ಈ ಬಗ್ಗೆ ಎಚ್ಚರಿಸಿದಾಗ ಅವರು ಗುಂಪನ್ನು ತೆಗೆದಯ ಹಾಕಿದೆ.ಅನುಮತಿಯಿಲ್ಲದೆ ಧಾರ್ಮಿಕ ವಾಟ್ಸ್ಆ್ಯಪ್ ಗ್ರೂಪ್ಗಳನ್ನು ರಚಿಸಲಾಗಿದೆ. ಸರ್ಕಾರಿ ಅಧಿಕಾರಿಯಾಗಿರುವ ನನ್ನ ನಂಬರ್ ದುರ್ಬಳಕೆ ಮಾಡಿ ಇಂತಹ ಕೃತ್ಯ ಎಸಗಲಾಗಿದೆ.ಪ್ರಶ್ನಾರ್ಹ ಗುಂಪುಗಳಿಗೆ ತಾನು ಯಾವುದೇ ಅಧಿಕಾರಿಗಳನ್ನು ಸೇರಿಸಿಲ್ಲ ಎಂದು ಅಧಿಕಾರಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನುವುದು ಅವರ ದೂರಿನ ಸಾರಾಂಶ.
ಅಧಿಕಾರಿಯ ಪ್ರಕಾರ, ಮಲ್ಲು ಹಿಂದೂ ಅಧಿಕಾರಿಗಳ ಗುಂಪನ್ನು ಅಕ್ಟೋಬರ್ 30 ರಂದು ರಚಿಸಲಾಗಿದೆ. ಹಲವಾರು ಇತರ ಹಿರಿಯ ಅಧಿಕಾರಿಗಳನ್ನು ಗುಂಪಿಗೆ ಸೇರಿಸಲಾಯಿತು. ಅಂತಹ ಗುಂಪಿನ ಅನೌಪಚಾರಿಕತೆಯನ್ನು ಅಧಿಕಾರಿಗಳು ತಿಳಿಸಿದಾಗ ಅದನ್ನು ತೆಗೆದು ಹಾಕಲಾಯಿತು.
ಅದೇ ರೀತಿ ಮುಸ್ಲೀಂ ಅಧಿಕಾರಿಗಳ ಗುಂಪು ರಚಿಸಿ ತೆಗೆದು ಹಾಕಲಾಗಿದೆ. ಇದೇ ರೀತಿ ಬೇರೆ ಬೇರೆ 11 ಗುಂಪುಗಳನ್ನು ರಚಿಸಲಾಗಿದೆ ಎನ್ನುವುದು ವಿಚಾರಣೆಯಿಂದ ಗೊತ್ತಾಗಿದೆ. ಇದರಲ್ಲಿ ಗೋಪಾಲಕೃಷ್ಣನ್ ಹೆಸರು ಎರಡು ಗ್ರೂಪ್‌ಗಳಲ್ಲಿತ್ತು ಎಂದು ಹೇಳಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ತಿರುವನಂತಪುರಂ ಪೊಲೀಸ್ ಕಮಿಷನರ್ ಸ್ಪರ್ಜನ್ ಕುಮಾರ್ ಅವರು ವಾಟ್ಸ್ಆ್ಯಪ್ ಗುಂಪುಗಳ ಬಗ್ಗೆ ವಿವರಗಳನ್ನು ಕೋರಿದ್ದಾರೆ
ಹಿಂದೂ ಐಎಎಸ್ ಅಧಿಕಾರಿಗಳಿಗಾಗಿ ವಾಟ್ಸ್ಆ್ಯಪ್ ಗ್ರೂಪ್ ರಚಿಸಿದ ಘಟನೆಯನ್ನು ಕೇರಳ ಸರ್ಕಾರ ಪರಿಶೀಲಿಸಲಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಪಿ.ರಾಜೀವ್ ಹೇಳಿದ್ದಾರೆ.
ಈ ವಿವಾದದ ಕುರಿತು ಪ್ರತಿಕ್ರಿಯಿಸಿದ ರಾಜೀವ್, ಹಿಂದೂ ಐಎಎಸ್ ಅಧಿಕಾರಿಗಳಿಗಾಗಿ ನಿರ್ದಿಷ್ಟವಾಗಿ ಗುಂಪು ರಚಿಸುವ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲಿದೆ ಎಂದು ಹೇಳಿದರು.
ಸರ್ಕಾರ ಈ ವಿಷಯವನ್ನು ಪರಿಶೀಲಿಸುತ್ತದೆ. ಸಾರ್ವಜನಿಕ ಆಡಳಿತ ಇಲಾಖೆಯ ಅಡಿಯಲ್ಲಿ ಬರುವ ಐಎಎಸ್ ಅಧಿಕಾರಿಗಳಿಗೆ ಸಾಮಾನ್ಯ ನೀತಿ ಸಂಹಿತೆ ಇದೆ. ನಾವು ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಏನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸೋಣ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.