Sabarimala Season: ಶಬರಿಮಲೆ ಅಯ್ಯಪ್ಪ ಭಕ್ತರೇ ಗಮನಿಸಿ; ಅಯ್ಯಪ್ಪನ ಸನ್ನಿಧಿ ಪಲ್ಲಕ್ಕಿ, ಪ್ರಸಾದ ದರ ದುಬಾರಿ, ತೆಂಗಿನ ಧಾರಣೆಯಲ್ಲೂ ಏರಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sabarimala Season: ಶಬರಿಮಲೆ ಅಯ್ಯಪ್ಪ ಭಕ್ತರೇ ಗಮನಿಸಿ; ಅಯ್ಯಪ್ಪನ ಸನ್ನಿಧಿ ಪಲ್ಲಕ್ಕಿ, ಪ್ರಸಾದ ದರ ದುಬಾರಿ, ತೆಂಗಿನ ಧಾರಣೆಯಲ್ಲೂ ಏರಿಕೆ

Sabarimala Season: ಶಬರಿಮಲೆ ಅಯ್ಯಪ್ಪ ಭಕ್ತರೇ ಗಮನಿಸಿ; ಅಯ್ಯಪ್ಪನ ಸನ್ನಿಧಿ ಪಲ್ಲಕ್ಕಿ, ಪ್ರಸಾದ ದರ ದುಬಾರಿ, ತೆಂಗಿನ ಧಾರಣೆಯಲ್ಲೂ ಏರಿಕೆ

Sabarimala Season: ಕೇರಳದ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪಸ್ವಾಮಿ ಈ ವರ್ಷದ ಅವಧಿ ಶುರುವಾಗಿದೆ. ಆದರೆ ಈ ವರ್ಷ ಹಲವಾರು ಸೇವೆಗಳು, ಉತ್ಪನ್ನಗಳ ದರವನ್ನು ಏರಿಕೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಈ ಬಾರಿಯ ಕೇರಳದ ಶಬರಿಮಲೆ ಯಾತ್ರೆ ದರ ದುಬಾರಿಯ ಬಿಸಿಯೊಂದಿಗೆ ಶುರುವಾಗಿದೆ.
ಈ ಬಾರಿಯ ಕೇರಳದ ಶಬರಿಮಲೆ ಯಾತ್ರೆ ದರ ದುಬಾರಿಯ ಬಿಸಿಯೊಂದಿಗೆ ಶುರುವಾಗಿದೆ.

ಮಂಗಳೂರು: ಶಬರಿಮಲೆ ಸೀಸನ್ ಆರಂಭಗೊಂಡಿದೆ. ಒಂದೆಡೆ ಶಬರಿಮಲೆ ಆಡಳಿತ ಹಲವಾರು ರೀತಿಯಲ್ಲಿ ದರ ಪರಿಷ್ಕರಣೆ ಮಾಡುತ್ತಿದೆ. ಇನ್ನೊಂದೆಡೆ ಹೊರಗಿನ ಮಾರುಕಟ್ಟೆಯಲ್ಲಿ ವಿಶೇಷವಾಗಿ ಉತ್ತರ ಕೇರಳದಲ್ಲಿ ತೆಂಗಿನಕಾಯಿ, ತೆಂಗಿನೆಣ್ಣೆ ಧಾರಣೆ ಏರಿಕೆ ಕಾಣುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ನಾನಾ ಭಾಗಗಳಿಂದ ಅಯ್ಯಪ್ಪ ಭಕ್ತರ ಯಾತ್ರೆ ಶುರುವಾಗಿರು ನಡುವೆ ದರ ದುಬಾರಿಯ ಹೊರೆಯು ಭಕ್ತರ ಮೇಲೆ ಈ ಬಾರಿ ಬೀಳಬಹುದು. ಏಕೆಂದರೆ ಹಲವು ದರಗಳನ್ನು ಶಬರಿಮಲೆ ದೇಗುಲ ಮಂಡಳಿ ಏರಿಸಿದೆ. ಆಕ್ಷೇಪಗಳ ನಡುವೆಯೂ ಹೊಸ ದರಗಳು ಜಾರಿಯಾಗಿವೆ. ಕೇರಳ ಸರ್ಕಾರ ಆದಾಯವನ್ನು ವೃದ್ದಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ.

ಪಲ್ಲಕ್ಕಿ ಸೇವೆಯೂ ದುಬಾರಿ

ಪಂಪಾ ತೀರದಿಂದ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಯಾತ್ರಿಕರನ್ನು ಹೊತ್ತು ಸಾಗಿಸಲು ಪ್ರಯಾಣಿಕರ ತೂಕ ಆಧರಿಸಿ ಪಲ್ಲಕ್ಕಿ ದರ ನಿಗದಿಪಡಿಸಲಾಗುತ್ತದೆ. ತೂಕದ ಆಧಾರದಲ್ಲಿ ಇಲ್ಲಿ ಎ, ಬಿ ಮತ್ತು ಸಿ ವಿಭಾಗದಲ್ಲಿ ದರ ಪರಿಷ್ಕರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಪ್ರಯಾಣದರ ಪರಿಷ್ಕರಣೆ ಸಭೆ ಕರೆಯಲಾಗಿದೆ. ದೇವಸ್ವಂ ಮಂಡಳಿ (ಆಡಳಿತ) 3,500 ರೂ ನಿಗದಿಪಡಿಸಿದ್ದರೂ ಇದನ್ನು ಒಪ್ಪಲು ಪಲ್ಲಕ್ಕಿ ವಾಹಕರು ತಯಾರಿಲ್ಲ.

ಅರವಣ ಪ್ರಸಾದದ ಬೆಲೆಯೂ ಏರಿಕೆ

ಶಬರಿಮಲೆ ಮಕರಜ್ಯೋತಿ ಸೀಸನ್ ನಲ್ಲಿ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ಸಂದರ್ಭ ಆರು ದೇವಸ್ಥಾನಗಳಲ್ಲಿ ಅರವಣ ಪ್ರಸಾದ ದರ ಏರಿಕೆ ಮಾಡಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ಕನಿಷ್ಠ 20 ರೂಗಳಷ್ಟು ಹೆಚ್ಚಳ ಮಾಡಲು ಬೋರ್ಡ್ ನಿರ್ಧರಿಸಿದೆ.

ನಿಲಕ್ಕಲ್, ಪಂದಳಂ, ಎರುಮೇಲಿ, ಅಚ್ಚನ್ ಕೋವಿಲ್, ಆರ್ಯಂಕಾವ್ ಮತ್ತು ಕುಳತ್ತುಪುಯ ದೇವಸ್ಥಾನಗಳಲ್ಲಿ ಅರವಣ ಪ್ರಸಾದ ದರ 65 ರೂಗಳಿಂದ 85 ರೂಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ತೆಂಗಿನಕಾಯಿ, ತೆಂಗಿನೆಣ್ಣೆಯೂ ದುಬಾರಿ

ತೆಂಗಿನಕಾಯಿ, ತೆಂಗಿನ ಎಣ್ಣೆ ದರವೂ ಏರಿಕೆ ಆಗುತ್ತಿದೆ. ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತಿತರ ರಾಜ್ಯಗಳಿಂದ ಅಯ್ಯಪ್ಪ ಭಕ್ತರು ಆಗಮಿಸುವ ಹೊತ್ತು. ಹೀಗಾಗಿ ದಕ್ಷಿಣ ಭಾರತದಲ್ಲಿ ಹಸಿ ತೆಂಗಿನಕಾಯಿಗೆ ಬೇಡಿಕೆ ಹೆಚ್ಚಾಗಲಿದೆ. ಈಗಾಗಲೇ ಪ್ರತಿ ಕೆ.ಜಿ. ಹಸಿ ತೆಂಗಿನಕಾಯಿಗೆ ಕಾಸರಗೋಡು ಮಾರುಕಟ್ಟೆಯಲ್ಲಿ 45 ರೂಗಳಿದ್ದರೆ, ಒಣ ತೆಂಗಿನಕಾಯಿಗೆ 47 ರೂ ಇದೆ. ಕೊಬ್ಬರಿ ಎಣ್ಣೆ ದರ 260 ರೂಗಳಿಗೆ ಏರಿದ್ದು, ಇನ್ನೂ ಜಾಸ್ತಿಯಾಗುವ ಸಂಭವವಿದೆ. ಅಲ್ಲದೆ, ಇಳುವರಿ ಕೊರತೆಯೂ ಇರುವ ಕಾರಣ ಮುಂದಿನ ದಿನಗಳಲ್ಲಿ ತೆಂಗಿನಕಾಯಿ, ತೆಂಗಿನ ಎಣ್ಣೆ ಬೆಲೆ ಹೆಚ್ಚಾಗಲಿದೆ.

ವ್ಯಾಪಾರಿಗಳು ಈ ಹಿನ್ನೆಲೆಯಲ್ಲಿ ದಾಸ್ತಾನು ಇರಿಸಲು ಆರಂಭಿಸಿದ್ದಾರೆ. ಕೇರಳ, ತಮಿಳುನಾಡಿನಲ್ಲಿ ತೆಂಗಿನ ಬೆಲೆ ಏರುತ್ತಿದ್ದಂತೆ ಕರ್ನಾಟಕದಲ್ಲೂ ದಾಸ್ತಾನು ಮಾಡುತ್ತಿರುವ ವ್ಯಾಪಾರಿಗಳು ಲಾಭದ ನಿರೀಕ್ಷೆಯಲ್ಲಿದ್ದಾರೆ. ಇಷ್ಟೇ ಅಲ್ಲ, ಕಾಳುಮೆಣಸಿನ ಧಾರಣೆಯು ನಿಧಾನವಾಗಿ ಏರಿಕೆ ಕಾಣಲಾರಂಭಿಸಿದೆ. ಮಳೆಯ ಏರುಪೇರು, ಇಳುವರಿ ಸಮಸ್ಯೆಯಿಂದಾಗಿ ಪ್ರತಿ ಕೆಜಿ ಕಾಳುಮೆಣಸಿಗೆ 600 ರೂವರೆಗೆ ಧಾರಣೆ ಇದೆ.

ಶಬರಿಮಲೆಯಲ್ಲಿ ಕೆಲವು ಸೇವೆಗಳು, ಉತ್ಪನ್ನಗಳ ದರ ಏರಿಕೆಯಾಗಿರುವುದು ತಿಳಿದಿದೆ. ಶಬರಿಮಲೆಗೆ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಕರ್ನಾಟಕದಿಂದಲೂ ಹೋಗುವವರು ಅಧಿಕ. ದರ ಏರಿಕೆಯಿಂದ ಹೊರೆಯಾದರೂ ದೇವರ ಸೇವೆಗೆ ಹೊರಟಾಗ ಇದನ್ನು ಭರಿಸುವುದು ಅನಿವಾರ್ಯ ಎನ್ನುವುದು ಭಕ್ತರ ಅಭಿಪ್ರಾಯ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.