ಜಮ್ಮು-ಕಾಶ್ಮೀರದ ಅಮರನಾಥ ದೇವಾಲಯಕ್ಕೆ ಕೃಷ್ಣಶಿಲೆಯ ನಂದಿವಿಗ್ರಹ, ಮೈಸೂರು ಶೈಲಿ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್
ಜಮ್ಮು-ಕಾಶ್ಮೀರದ ಅಮರನಾಥ ದೇವಾಲಯಕ್ಕೆ ಕೃಷ್ಣಶಿಲೆಯ ನಂದಿವಿಗ್ರಹ ಮೈಸೂರಿನಿಂದ ರವಾನೆಯಾಗಿದೆ. ಕೃಷ್ಣಶಿಲೆಯಲ್ಲಿ ಮೈಸೂರು ಶೈಲಿ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಕೆಲಸ ಈಗ ಮತ್ತೊಮ್ಮೆ ಗಮನಸೆಳೆದಿದೆ.
ಮೈಸೂರು: ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಬಾಲರಾಮನ ವಿಗ್ರಹದ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರಿಗೆ ಅಮರನಾಥ ದೇಗುಲದ ನಂದಿ ವಿಗ್ರಹ ಕೆತ್ತನೆಮಾಡಿಕೊಟ್ಟು ಮತ್ತೆ ಸುದ್ದಿಯಲ್ಲಿದ್ದಾರೆ.
ಭಾರತದ ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರವಾಗಿರುವ ಕಾಶ್ಮೀರದ ಅಮರನಾಥ ದೇಗುಲಕ್ಕಾಗಿ ಮೈಸೂರು ಶೈಲಿಯ ಕೃಷ್ಣಶಿಲೆಯ ನಂದಿ ವಿಗ್ರಹವನ್ನು ಅರುಣ್ ಯೋಗಿರಾಜ್ ಮಾಡಿಕೊಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅಮರನಾಥ ದೇವಾಲಯದ ಆಡಳಿತ ಮಂಡಳಿ, ದೇವಸ್ಥಾನಕ್ಕಾಗಿ ನಂದಿ ವಿಗ್ರಹ ಕೆತ್ತನೆ ಮಾಡಿಕೊಡುವಂತೆ ಅರುಣ್ ಯೋಗಿರಾಜ್ ಅವರ ಬಳಿ ಕೇಳಿಕೊಂಡಿತ್ತು. ಇದರಂತೆ, ಅರುಣ್ ಯೋಗಿರಾಜ್ ಅವರು ಎರಡೂವರೆ ತಿಂಗಳು ಪರಿಶ್ರಮ ಹಾಕಿದ್ದು, ಸುಂದರ ನಂದಿ ವಿಗ್ರಹ ಕೆತ್ತನೆ ಮಾಡಿದ್ದಾರೆ. ಈ ನಂದಿ ವಿಗ್ರಹವನ್ನು ಬುಧವಾರ (ಮೇ 29) ಅಮರನಾಥಕ್ಕೆ ಕಳುಹಿಸಿಕೊಡಲಾಗಿದೆ. ಜೂನ್ ಅಂತ್ಯದಲ್ಲಿ ಅಮರನಾಥ ದೇವಾಲಯದ ಹಿಮದ ಉದ್ಭವ ಲಿಂಗದ ಎದುರುಭಾಗದಲ್ಲಿ ಈ ನಂದಿ ವಿಗ್ರಹ ಪ್ರತಿಷ್ಠಾಪನೆಯಾಗುವ ನಿರೀಕ್ಷೆ ಇದೆ.
ಅಮರನಾಥದ ನಂದಿ ವಿಗ್ರಹಕ್ಕೆ ಗುಜ್ಜೇಗೌಡನಪುರದ ಕೃಷ್ಣ ಶಿಲೆ ಬಳಕೆ
ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೆ ಬಳಸಿದ ಬಾಲರಾಮನ ವಿಗ್ರಹ ಕೆತ್ತನೆ ಮಾಡಲು ಬಳಸಿದ್ದ ಅದೇ ಮಾದರಿಯ ಕೃಷ್ಣಶಿಲೆಯನ್ನು ಈ ನಂದಿವಿಗ್ರಹಕ್ಕೆ ಬಳಸಲಾಗಿದೆ. ಮೈಸೂರು ಸಮೀಪದ ಗುಜ್ಜೇಗೌಡನಪುರದ ರಾಮದಾಸ್ ಅವರ ಜಮೀನಿನಲ್ಲಿ ದೊರೆತ ಕೃಷ್ಣಶಿಲೆಯನ್ನೇ ಈಗ ಅಮರನಾಥದ ನಂದಿ ವಿಗ್ರಹ ನಿರ್ಮಾಣಕ್ಕೂ ಬಳಸಲಾಗಿದೆ.
ಕೃಷ್ಣ ಶಿಲೆ ಯಾವುದೇ ವಾತಾವರಣದಲ್ಲೂ ನಾಶವಾಗುವುದಿಲ್ಲ. ಅಮರನಾಥ ಮಂಜು, ಶೀತ ಮಾರುತ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರಣ, ಕೃಷ್ಣಶಿಲೆಯನ್ನೇ ನಂದಿ ವಿಗ್ರಹ ನಿರ್ಮಾಣಕ್ಕೆ ಬಳಸಲಾಗಿದೆ. ಈ ನಂದಿ ವಿಗ್ರಹವು 3 ಅಡಿ ಎತ್ತರವಿದೆ.
ಅಯೋಧ್ಯೆಯ ಬಾಲರಾಮ, ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆ ಹಾಗೂ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಸುಭಾಷ್‌ಚಂದ್ರ ಬೋಸ್ ಪ್ರತಿಮೆಗಳ ಮೂಲಕ ಶಿಲ್ಪಿ ಅರುಣ್ ಯೋಗಿರಾಜ್ ದೇಶದ ಮನೆಮಾತಾಗಿದ್ದಾರೆ.
ಬಹುಬೇಡಿಕೆಯ ಶಿಲ್ಪಿ ಅರುಣ್ ಯೋಗಿರಾಜ್
ಮೈಸೂರಿನ ಹಿರಿಯ ಶಿಲ್ಪ ಕಲಾವಿದರ ಕುಟುಂಬದ ಐದನೇ ತಲೆಮಾರಿನ ಕುಡಿಯಾಗಿರುವ ಅರುಣ್ ಯೋಗಿರಾಜ್. ಸ್ತುತ ದೇಶದ ಬಹುಬೇಡಿಕೆಯ ಶಿಲ್ಪಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅರುಣ್ ಯೋಗಿರಾಜ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಅರುಣ್ ಅವರ ತಂದೆ ಯೋಗಿರಾಜ್ ಕೂಡ ನುರಿತ ಶಿಲ್ಪಿ. ಅವರು ಕಾಲವಾಗಿದ್ದಾರೆ. ಅರುಣ್ ಯೋಗಿರಾಜ್ ಅವರ ಅಜ್ಜ ಬಸವಣ್ಣ ಶಿಲ್ಪಿ ಮೈಸೂರು ರಾಜರ ಪೋಷಕತ್ವದಲ್ಲಿ ಶಿಲ್ಪಕಲೆ ಮುಂದುವರಿಸಿದವರು. ಅರುಣ್ ಬಾಲ್ಯದಿಂದಲೂ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಎಂಬಿಎ ಮುಗಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ಬಳಿಕ ಶಿಲ್ಪಕಲೆಯ ಆಸಕ್ತಿ ಕಾರಣ 2008ರಿಂದ ಕೆತ್ತನೆ ವೃತ್ತಿ ಮುಂದುವರಿಸಿ ಹದಿನೈದು ವರ್ಷದಲ್ಲಿ ಹೆಮ್ಮೆಯ ಸಾಧನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)