ಮಧ್ಯಪ್ರದೇಶದ ಹರ್ದಾದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 7 ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ, ವೀಡಿಯೊ
ಮಧ್ಯಪ್ರದೇಶದ ಹರ್ದಾದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಉಂಟಾಗಿದ್ದು 7 ಸಾವು ಸಂಭವಿಸಿದೆ. ಕನಿಷ್ಠ 60ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಈ ಸ್ಫೋಟ ಸಂಭವಿಸಿದ್ದು, ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ಸಾವು, ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಹೇಳಿದೆ.
ಭೋಪಾಲ್: ಮಧ್ಯಪ್ರದೇಶದ ಹರ್ದಾ ಪಟ್ಟಣದ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಘಟನೆಯ ವಿವರಗಳನ್ನು ಕೋರಿದ್ದಾರೆ.
ಪಟಾಕಿ ಕಾರ್ಖಾನೆ ಘಟಕದ ಒಳಗೆ ಮತ್ತು ಸುತ್ತಮುತ್ತ ಹಲವಾರು ಜನರು ಸಿಲುಕಿರುವ ಶಂಕೆ ಇದೆ. ಘಟನೆಯ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಆಗಾಗ್ಗೆ ಸ್ಫೋಟಗಳು ಸಂಭವಿಸುತ್ತಿರುವುದನ್ನು ಮತ್ತು ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಓಡುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.
ಈ ನಡುವೆ, ಪಟಾಕಿ ಘಟಕದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ. ಘಟಕದ ಒಳಗೆ ಮತ್ತು ಸುತ್ತಮುತ್ತ ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ ಎಂದು ಹರ್ದಾ ಜಿಲ್ಲಾಧಿಕಾರಿ ರಿಷಿ ಗಾರ್ಗ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಘಟನೆಯ ವಿವರ ಕೋರಿದ ಮುಖ್ಯಮಂತ್ರಿ ಮೋಹನ್ ಯಾದವ್
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಘಟನೆಯ ವಿವರಗಳನ್ನು ಕೋರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಚಿವ ಉದಯ್ ಪ್ರತಾಪ್ ಸಿಂಗ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಿತ್ ಕೇಸರಿ ಮತ್ತು ಗೃಹರಕ್ಷಕ ದಳದ ಮಹಾನಿರ್ದೇಶಕ ಅರವಿಂದ್ ಕುಮಾರ್ ಅವರಿಗೆ ಹೆಲಿಕಾಪ್ಟರ್ ಮೂಲಕ ಹರ್ದಾಗೆ ಧಾವಿಸುವಂತೆ ಸಿಎಂ ನಿರ್ದೇಶನ ನೀಡಿದರು. ಇಂದೋರ್, ಭೋಪಾಲ್ ಮತ್ತು ರಾಜ್ಯ ರಾಜಧಾನಿಯ ಏಮ್ಸ್ನ ಆಸ್ಪತ್ರೆಗಳಲ್ಲಿನ ಸುಟ್ಟಗಾಯ ಘಟಕಗಳಿಗೆ ಯಾವುದೇ ತುರ್ತು ಪರಿಸ್ಥಿತಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ನಿರ್ದೇಶಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಂಕಿಯನ್ನು ನಿಭಾಯಿಸಲು ಇಂದೋರ್ ಮತ್ತು ಭೋಪಾಲ್ ನಿಂದ ಅಗ್ನಿಶಾಮಕ ದಳಗಳನ್ನು ಸಹ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಭೆಯನ್ನೂ ಕರೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹರ್ದಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ಸಂಜೀವ್ ಕಾಂಚನ್ ಮಾತನಾಡಿ, ಮಂಗಳವಾರ ಬೆಳಗ್ಗೆ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಇಡೀ ನಗರ ಕಪ್ಪು ಹೊಗೆಯಿಂದ ಆವರಿಸಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಬೆಂಕಿಗೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಹರ್ದಾ, ಬೆತುಲ್, ಖಾಂಡ್ವಾ ಮತ್ತು ನರ್ಮದಾಪುರಂನಿಂದ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳನ್ನು ಕರೆಸಲಾಗಿದೆ.
ಹರ್ದಾ ಜಿಲ್ಲೆಯ ಬೈರಾಗರ್ ಪ್ರದೇಶದಲ್ಲಿ ಬೆಂಕಿಯಲ್ಲಿ ಸುಮಾರು 60 ಮನೆಗಳು ಸುಟ್ಟುಹೋಗಿವೆ. 60ಕ್ಕೂ ಹೆಚ್ಚು ಜನರು ಸ್ಫೋಟಕ್ಕೆ ಸಿಲುಕಿದ್ದಾರೆ. 30ಕ್ಕೂ ಹೆಚ್ಚು ವಾಹನ ಸವಾರರು ಕೂಡ ಇದರಲ್ಲಿದ್ದಾರೆ. ಆಡಳಿತ 100ಕ್ಕೂ ಹೆಚ್ಚು ಮನೆಗಳನ್ನು ತೆರವು ಮಾಡಿದೆ. ಕಾರ್ಖಾನೆಯಲ್ಲಿ ನಿರಂತರವಾಗಿ ಸ್ಫೋಟಗಳು ನಡೆಯುತ್ತಿವೆ. ಸ್ಫೋಟದಲ್ಲಿ ಹೆಚ್ಚಿನ ಸಂಖ್ಯೆಯ ದ್ವಿಚಕ್ರ ವಾಹನಗಳು ಸಹ ಬೆಂಕಿಗೆ ಆಹುತಿಯಾಗಿವೆ.
ಪುಣೆಯ 11 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅನಾಹುತ
ಮತ್ತೊಂದು ಘಟನೆಯಲ್ಲಿ, ಪುಣೆ ನಗರದ ಮೊಹಮ್ಮದಿ ಪ್ರದೇಶದ ದೆಹಲಿ ಪಬ್ಲಿಕ್ ಸ್ಕೂಲ್ ಬಳಿಯ 11 ಅಂತಸ್ತಿನ ಕಟ್ಟಡದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಐದು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಪುಣೆ ಅಗ್ನಿಶಾಮಕ ಇಲಾಖೆ ತಿಳಿಸಿದೆ