ಲೋಕಸಭೆ ಚುನಾವಣೆ 2024; ಯಾವುದೇ ಸಂದರ್ಭದಲ್ಲೂ ಮಕ್ಕಳನ್ನು ಚುನಾವಣಾ ಕೆಲಸಗಳಿಗೆ ಬಳಸಬೇಡಿ, ರಾಜಕೀಯ ಪಕ್ಷಗಳಿಗೆ ಆಯೋಗದ ತಾಕೀತು
ಲೋಕಸಭೆ ಚುನಾವಣೆ 2024: ದೇಶದ ಉದ್ದಗಲಕ್ಕೂ ಲೋಕಸಭಾ ಚುನಾವಣಾ ಕಾವು ನಿಧಾನವಾಗಿ ಏರತೊಡಗಿದೆ. ಚುನಾವಣಾ ಆಯೋಗ ಕೂಡ ಸಾರ್ವತ್ರಿಕ ಚುನಾವಣೆ ಸಿದ್ಧತೆಯನ್ನು ಭರದಿಂದ ಮಾಡಿದೆ. ಈ ನಡುವೆ, ಯಾವುದೇ ಸಂದರ್ಭದಲ್ಲೂ ಮಕ್ಕಳನ್ನು ಚುನಾವಣಾ ಕೆಲಸಗಳಿಗೆ ಬಳಸಬೇಡಿ, ರಾಜಕೀಯ ಪಕ್ಷಗಳಿಗೆ ಆಯೋಗವು ತಾಕೀತು ಮಾಡಿದೆ. ಮೂರು ಅಂಶದ ಮಾರ್ಗಸೂಚಿ ವಿವರ ಹೀಗಿದೆ.
ನವದೆಹಲಿ: ಲೋಕಸಭೆ ಚುನಾವಣೆ ಸಮೀಪದಲ್ಲಿದೆ. ಚುನಾವಣಾ ಕೆಲಸಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿ ಕಾಣುವ ದೃಶ್ಯ. ಆದರೆ, ಈ ಸಲ ಯಾವುದೇ ಕಾರಣಕ್ಕೂ, ಯಾವುದೇ ರೀತಿಯಲ್ಲಿ ಮಕ್ಕಳನ್ನು ಚುನಾವಣೆ ಸಂಬಂಧಿತ ಕೆಲಸಗಳಲ್ಲಿ ಬಳಸಬಾರದು ಎಂದು ಭಾರತದ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ, ಚುನಾವಣಾ ಅಧಿಕಾರಿಗಳಿಗೆ ತಾಕೀತು ಮಾಡಿದೆ.
ಚುನಾವಣಾ ಕೆಲಸ, ಕಾರ್ಯಗಳಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡದ್ದು ಕಂಡುಬಂದಲ್ಲಿ, ನಿಯಮ ಉಲ್ಲಂಘನೆ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದೂ ಚುನಾವಣಾ ಆಯೋಗ ಎಚ್ಚರಿಸಿದೆ. ರಾಜಕೀಯ ಪಕ್ಷಗಳು, ನಾಯಕರು, ಚುನಾವಣಾ ಆಯೋಗದ ಪದಾಧಿಕಾರಿಗಳ ನೆರವಿಗಾಗಿ ಚುನಾವಣಾ ಆಯೋಗವು ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.
ಚುನಾವಣಾ ಕಾರ್ಯಗಳಲ್ಲಿ ಮಕ್ಕಳ ಬಳಕೆ; ಆಯೋಗದಿಂದ 3 ಅಂಶಗಳ ಮಾರ್ಗಸೂಚಿ
1) ಚುನಾವಣೆ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳ ಭಾಗವಹಿಸುವಿಕೆ ನಿಷೇಧ: ರ‍್ಯಾಲಿಗಳು, ಘೋಷಣೆ ಕೂಗುವುದು, ಪೋಸ್ಟರ್ ಅಥವಾ ಕರಪತ್ರಗಳ ಹಂಚುವಿಕೆ, ಅಥವಾ ಯಾವುದೇ ಇತರ ಚುನಾವಣಾ ಸಂಬಂಧಿತ ಚಟುವಟಿಕೆ ಸೇರಿ ಯಾವುದೇ ರೀತಿಯ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ತೊಡಗಿಸಬಾರದು ಎಂದು ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾಗಿ ನಿರ್ದೇಶಿಸಲಾಗಿದೆ. ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಮಕ್ಕಳನ್ನು ತಮ್ಮ ತೋಳುಗಳಲ್ಲಿ ಎತ್ತಿಕೊಳ್ಳುವುದು, ಮಗುವನ್ನು ವಾಹನದಲ್ಲಿ ಅಥವಾ ರ‍್ಯಾಲಿಗಳಲ್ಲಿ ಯಾವುದೇ ರೀತಿಯಲ್ಲಿ ಪ್ರಚಾರ ಕಾರ್ಯಗಳಿಗೆ ಬಳಸಬಾರದು.
2) ಪ್ರಚಾರದಲ್ಲಿ ಎಲ್ಲೂ ಮಕ್ಕಳು, ಮಕ್ಕಳ ಸಂಬಂಧಿತ ಸಂಕೇತ ಬಳಕೆ ಬೇಡ: ಕವಿತೆ, ಹಾಡುಗಳು, ಆಡುಮಾತಿನ ಪದಗಳು, ರಾಜಕೀಯ ಪಕ್ಷ/ಅಭ್ಯರ್ಥಿಗಳ ಚಿಹ್ನೆಗಳ ಪ್ರದರ್ಶನ, ರಾಜಕೀಯ ಪಕ್ಷದ ಸಿದ್ಧಾಂತವನ್ನು ಪ್ರದರ್ಶಿಸುವುದು, ರಾಜಕೀಯ ಪಕ್ಷದ ಸಾಧನೆಗಳನ್ನು ಪ್ರಚಾರ ಮಾಡುವುದು ಸೇರಿ ಯಾವುದೇ ರೀತಿಯಲ್ಲಿ ರಾಜಕೀಯ ಪ್ರಚಾರದಲ್ಲಿ ಹೋಲಿಕೆಯನ್ನು ಸೃಷ್ಟಿಸಲು ಮಕ್ಕಳನ್ನು ಬಳಸಬಾರದು. ಎದುರಾಳಿಯನ್ನು ಟೀಕಿಸುವುದಕ್ಕೂ ಮಕ್ಕಳನ್ನು ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಬಳಸಬಾರದು.
ಆದಾಗ್ಯೂ, ರಾಜಕೀಯ ನಾಯಕರ ಸಾಮೀಪ್ಯದಲ್ಲಿ ಮತ್ತು ರಾಜಕೀಯ ಪಕ್ಷದಿಂದ ಯಾವುದೇ ಚುನಾವಣಾ ಪ್ರಚಾರ ಚಟುವಟಿಕೆಯಲ್ಲಿ ಭಾಗಿಯಾಗದ ಮಗು ಪೋಷಕರೊಂದಿಗೆ ಅಲ್ಲಿ ಜೊತೆಗಿದ್ದರೆ ಅಂತಹ ಪ್ರಕರಣಗಳನ್ನು ಮಾರ್ಗಸೂಚಿಗಳ ಉಲ್ಲಂಘನೆ ಎಂದು ಅರ್ಥೈಸಲಾಗುವುದಿಲ್ಲ.
3) ಕಾನೂನು ಅನುಸರಣೆ: ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆ, 2016 ರಿಂದ ತಿದ್ದುಪಡಿ ಮಾಡಲಾದ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ, 1986 ರ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸುವುದಕ್ಕೆ ಸಂಬಂಧಿಸಿ 2014ರಲ್ಲಿ ಬಾಂಬೆ ಹೈಕೋರ್ಟ್ ತೀರ್ಪನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಚುನಾವಣಾ ಅಧಿಕಾರಿಗಳು, ಪಾಲಕರಿಗೆ ಏನು ಸೂಚನೆ
ಚುನಾವಣಾಧಿಕಾರಿಗಳಿಗೇನು ಸೂಚನೆ: ಚುನಾವಣೆಗೆ ಸಂಬಂಧಿಸಿದ ಯಾವುದೇ ಕೆಲಸಗಳಲ್ಲೂ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ. ಈ ಆದೇಶವನ್ನು ಪಾಲಿಸುವುದು, ಅನುಷ್ಠಾನಗೊಳಿಸುವುದು ಜಿಲ್ಲಾ ಚುನಾವಣಾಧಿಕಾರಿಗಳ ಹೊಣೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಪಾಲಕರಿಗೆ ಏನು ಸೂಚನೆ: ಮಕ್ಕಳು ಅಪ್ಪ-ಅಮ್ಮ, ಪೋಷಕರೊಂದಿಗೆ ರಾಜಕೀಯ ನಾಯಕರ ಬಳಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾಜರಿದ್ದರೆ ತಪ್ಪೇನಿಲ್ಲ. ಆದರೆ ಆ ಮಕ್ಕಳನ್ನು ಚುನಾವಣೆ ಸಂಬಂಧಿ ವಿಚಾರಗಳಿಗೆ ಯಾವುದೇ ರೀತಿಯಲ್ಲಿ ಬಳಸಿಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ.