ಬಿಜೆಪಿ ರೋಡ್‌ಶೋನಲ್ಲಿ ನಟ ಮಿಥುನ್ ಚಕ್ರವರ್ತಿ ಪರ್ಸ್ ಕಳವು, ದಯವಿಟ್ಟು ವಾಪಸ್ ನೀಡಿ ಎಂದು ಕಳ್ಳರಲ್ಲಿ ಪರಿಪರಿಯಾಗಿ ವಿನಂತಿಸಿದ ಸಂಘಟಕರು
ಜಾರ್ಖಂಡ್‌ನಲ್ಲಿ ನಡೆದ ಮೆಗಾ ರೋಡ್ ಶೋ ವೇಳೆ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಅವರ ಜೇಬಿನಿಂದ ಕಿಸೆ ಕಳ್ಳರು ಪರ್ಸ್ ಕದ್ದಿದ್ದಾರೆ. ನಟ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರು. ದಯವಿಟ್ಟು ಪರ್ಸ್ ನೀಡುವಂತೆ ಆಯೋಜಕರು ಮನವಿ ಮಾಡುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಜಾರ್ಖಂಡ್‌ನ ಚುನಾವಣಾ ಪ್ರಚಾರದ ವೇಳೆ ನಟ ಕಮ್ ರಾಜಕಾರಣಿ ಮಿಥುನ್ ಚಕ್ರವರ್ತಿ ರೋಡ್ ಶೋ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಕಳ್ಳನೊಬ್ಬ ನೇರವಾಗಿ ಮಿಥುನ್ ಚಕ್ರವರ್ತಿ ಅವರ ಕಿಸೆಗೆ ಕೈ ಹಾಕಿ ಪರ್ಸ್ ಕದ್ದಿದ್ದಾನೆ. ಚಕ್ರವರ್ತಿಯವರು ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರು. ಜೇಬುಗಳ್ಳರ ತೊಂದರೆಯ ನೇರ ಅನುಭವಕ್ಕೆ ಅವರು ಒಳಗಾದರು. ಇದಾದ ಬಳಿಕ ಪರ್ಸ್ ಹಿಂತುರುಗಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ. ಈ ರೀತಿ ಮನವಿ ಮಾಡಿದರೂ ಕಳ್ಳ ಪರ್ಸ್ ವಾಪಸ್ ನೀಡಿಲ್ಲ.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕನ ಪರ್ಸ್ ಅನ್ನು ದಯವಿಟ್ಟು ನೀಡಿ ಎಂದು ಜೇಬುಗಳ್ಳರಿಗೆ ಪದೇ ಪದೇ ಮನವಿ ಮಾಡುತ್ತಿರುವುದು ಕಾಣಿಸಿದೆ. "ಪರ್ಸ್ ಯಾರು ಕದ್ದರೂ ಅದನ್ನು ಮಿಥುನ್ ಅವರಿಗೆ ಹಿಂತುರುಗಿಸಿ" ಎಂದು ಒತ್ತಾಯಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಮಿಥುನ್ ಚಕ್ರವರ್ತಿ ಅವರು ಬಿಜೆಪಿ ಅಭ್ಯರ್ಥಿ ಅಪರ್ಣಾ ಸೇನ್ ಗುಪ್ತಾ ಅವರ ಪರ ಪ್ರಚಾರ ಮಾಡಲು ಜಾರ್ಖಂಡ್‌ನ ನಿರ್ಸಾ ಅಸೆಂಬ್ಲಿ ಪ್ರದೇಶದಲ್ಲಿ ಬೃಹತ್ ರೋಡ್‌ಶೋ ನಡೆಸಿದರು. ಈ ಸಂದರ್ಭದಲ್ಲಿ ಸಾವಿರಾರು ಜನರು ನೆರೆದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು.
ಸ್ಥಳದಲ್ಲಿ ಭದ್ರತಾ ಪಡೆಗಳು ಇದ್ದರೂ ಪ್ರೇಕ್ಷಕರನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ನಟನ ಜತೆ ಫೋಟೋ, ವಿಡಿಯೋ ತೆಗೆದುಕಳ್ಳಲು ಎಲ್ಲರೂ ಮುಗಿಬಿದ್ದರು. ಈ ಗಡಿಬಿಡಿಯ ನಡುವೆ ಖತರ್ನಾಕ್ ಕಳ್ಳನೊಬ್ಬ ಪರ್ಸ್ ಎಗರಿಸಿದ್ದ. ಈ ಘಟನೆಯಿಂದ ಬೇಸರಗೊಂಡ ಚಕ್ರವರ್ತಿ ಅವರು ಬೇಗ ಕಾರ್ಯಕ್ರಮ ಮುಗಿಸಿದರು.
ಅಕ್ಟೋಬರ್ 27 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷಪೂರಿತ ಭಾಷಣದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿದ ನಂತರ ಚಕ್ರವರ್ತಿ ಇತ್ತೀಚೆಗೆ ಸುದ್ದಿಯಲ್ಲಿದ್ದರು. "ನಾವು ನಿನ್ನನ್ನು ಕೊಂದು ನೆಲಕ್ಕೆ ಎಸೆಯುವ ದಿನ ಬರುತ್ತದೆ" ಎಂದು ಇನ್ನೊಂದು ಧರ್ಮದ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದರು. ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಟ ಈ ಹೇಳಿಕೆ ನೀಡಿದ್ದರು.