Kannada News  /  Nation And-world  /  Mk Stalin Asks Amit Shah To Direct Amul To Desist From Procuring Milk In Tamil Nadu Mgb
ಅಮುಲ್​ ವಿಚಾರದಲ್ಲಿ ಅಮಿತ್​ ಶಾಗೆ ಸ್ಟಾಲಿನ್​ ಪತ್ರ
ಅಮುಲ್​ ವಿಚಾರದಲ್ಲಿ ಅಮಿತ್​ ಶಾಗೆ ಸ್ಟಾಲಿನ್​ ಪತ್ರ

Amul in Tamil Nadu: ಕರ್ನಾಟಕದ ಬಳಿಕ ತಮಿಳುನಾಡಲ್ಲಿ ಅಮುಲ್​ ವಿರುದ್ಧ ಆಕ್ರೋಶ; ಅಮಿತ್​ ಶಾಗೆ ಪತ್ರ ಬರೆದ ಸಿಎಂ ಸ್ಟಾಲಿನ್​

25 May 2023, 18:42 ISTMeghana B
25 May 2023, 18:42 IST

Amul in Tamil Nadu: ಗ್ರಾಮೀಣ ಹಾಲು ಉತ್ಪಾದಕರ ಜೀವನೋಪಾಯವನ್ನು ಸುಧಾರಿಸುವಲ್ಲಿ ಮತ್ತು ಗ್ರಾಹಕರ ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸುವಲ್ಲಿ ಆವಿನ್ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ತಕ್ಷಣವೇ ಮಧ್ಯಸ್ಥಿಕೆವಹಿಸಿ ತಮಿಳುನಾಡಿನಲ್ಲಿ ಹಾಲು ಸಂಗ್ರಹಿಸದಂತೆ ಅಮುಲ್​ಗೆ ಸೂಚಿಸಲು ಅಮಿತ್ ಶಾರನ್ನು ಸ್ಟಾಲಿನ್​ ಒತ್ತಾಯಿಸಿದ್ದಾರೆ.

ಚೆನ್ನೈ ( ತಮಿಳುನಾಡು): ಕರ್ನಾಟಕದಲ್ಲಿ ನಂದಿನಿ - ಅಮುಲ್​ ವಿವಾದ ಸದ್ಯ ತಣ್ಣಗಾಗಿದೆ. ಆದರೆ ಇದೀಗ ತಮಿಳುನಾಡಲ್ಲಿ ಅಮುಲ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಹಾಲು ಸಂಗ್ರಹಿಸುವುದನ್ನು ನಿಲ್ಲಿಸುವಂತೆ ಗುಜರಾತ್​​ನ ಡೈರಿ ಬ್ರ್ಯಾಂಡ್​ ಅಮುಲ್‌ಗೆ (AMUL -Anand Milk Union Limited) ನಿರ್ದೇಶನ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಪತ್ರ ಬರೆದಿದ್ದಾರೆ.

ಅಮುಲ್ ಇಲ್ಲಿಯವರೆಗೆ ತಮಿಳುನಾಡಿನಲ್ಲಿರುವ ಮಳಿಗೆಗಳ ಮೂಲಕ ಮಾತ್ರ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿತ್ತು. ಆದರೆ ಇದೀಗ ಈ ಗುಜರಾತ್​ ಮೂಲದ ಅಮುಲ್​​ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಹಾಲು ಶೀತಲೀಕರಣ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ತನ್ನ ಬಹು-ರಾಜ್ಯ ಪರವಾನಗಿಯನ್ನು ಬಳಸಿಕೊಂಡಿರುವುದು ತಮ್ಮ ಗಮನಕ್ಕೆ ಬಂದಿದೆ. ಕೃಷ್ಣಗಿರಿ, ಧರ್ಮಪುರಿ, ವೆಲ್ಲೂರು, ರಾಣಿಪೇಟ್, ತಿರುಪತ್ತೂರ್, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಲು ಸಂಗ್ರಹಿಸಲು ಅಮುಲ್ ಯೋಜನೆ ರೂಪಿಸಿದೆ ಎಂದು ಸಿಎಂ ಸ್ಟಾಲಿನ್​ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಮುಲ್​ನ ಈ ನಡೆ ಇದು ಅನಾರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸುತ್ತದೆ. ಭಾರತದಲ್ಲಿ ಹಾಲಿನ ಶೆಡ್ ಪ್ರದೇಶಗಳಲ್ಲಿ ಒಂದು ಸಹಕಾರಿ ಸಂಸ್ಥೆಯ ಅಭಿವೃದ್ಧಿಗೆ ಸಹಾಯವಾಗುವ ನಿಯಮ ಉಲ್ಲಂಘಿಸುವಂತಿಲ್ಲ. ಆದರೆ ಈ ರೀತಿಯ ಅಡ್ಡ-ಸಂಗ್ರಹಣೆಯು 1970 ರಲ್ಲಿ ಪ್ರಾರಂಭವಾದ ಆಪರೇಷನ್ ವೈಟ್ ಫ್ಲಡ್‌ (Operation White Flood) ಯೋಜನೆಯು ನಿಯಮಕ್ಕೆ ವಿರುದ್ಧವಾಗಿದೆ ಎಂದು ಸ್ಟಾಲಿನ್​ ಹೇಳಿದ್ದಾರೆ.

13 ಜನವರಿ 1970 ರಂದು ಪ್ರಾರಂಭವಾದ ಆಪರೇಷನ್ ವೈಟ್ ಫ್ಲಡ್, ವಿಶ್ವದ ಅತಿದೊಡ್ಡ ಡೈರಿ ಅಭಿವೃದ್ಧಿ ಕಾರ್ಯಕ್ರಮ ಮತ್ತು ಭಾರತದ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಮಹತ್ವದ ಯೋಜನೆಯಾಗಿದೆ. ಭಾರತವನ್ನು ಹಾಲಿನ ಕೊರತೆಯ ರಾಷ್ಟ್ರದಿಂದ ಅದರ ಅತಿದೊಡ್ಡ ಉತ್ಪಾದಕನಾಗಿ ಪರಿವರ್ತಿಸಿದ ಕೀರ್ತಿ ಆಪರೇಷನ್ ವೈಟ್ ಫ್ಲಡ್​ ಯೋಜನೆಗೆ ಸೇರುತ್ತದೆ.

ದೇಶದಲ್ಲಿ ಚಾಲ್ತಿಯಲ್ಲಿರುವ ಹಾಲಿನ ಕೊರತೆಯ ಸನ್ನಿವೇಶದಲ್ಲಿ ಗ್ರಾಹಕರಿಗೆ ಇದು ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಅಮುಲ್‌ನ ನಡೆಯು ಆವಿನ್‌ನ ಹಾಲಿನ ಶೆಡ್ ಪ್ರದೇಶವನ್ನು ಉಲ್ಲಂಘಿಸುತ್ತದೆ. ಆವಿನ್​ ಅನ್ನು ದಶಕಗಳಿಂದ ನಿಜವಾದ ಸಹಕಾರ ಮನೋಭಾವದಿಂದ ಪೋಷಿಸಲಾಗಿದೆ. ಇದು ಹಾಲು ಉತ್ಪಾದಕರಿಗೆ ವರ್ಷವಿಡೀ ಲಾಭದಾಯಕ ಮತ್ತು ಏಕರೂಪದ ಬೆಲೆಗಳ ಭರವಸೆ ನೀಡುತ್ತಿದೆ. ಗ್ರಾಮೀಣ ಹಾಲು ಉತ್ಪಾದಕರ ಜೀವನೋಪಾಯವನ್ನು ಸುಧಾರಿಸುವಲ್ಲಿ ಮತ್ತು ಗ್ರಾಹಕರ ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸುವಲ್ಲಿ ಆವಿನ್ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ತಕ್ಷಣವೇ ಮಧ್ಯಸ್ಥಿಕೆವಹಿಸಿ ತಮಿಳುನಾಡಿನಲ್ಲಿ ಹಾಲು ಸಂಗ್ರಹಿಸದಂತೆ ಅಮುಲ್​ಗೆ ಸೂಚಿಸಲು ಅಮಿತ್ ಶಾರನ್ನು ಸ್ಟಾಲಿನ್​ ಒತ್ತಾಯಿಸಿದ್ದಾರೆ.

ಆವಿನ್ (Aavin)- ಇದು ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್‌ನ ಅಡಿಯಲ್ಲಿ ಬರುವ ರಾಜ್ಯ ಸರ್ಕಾರದ ಸಹಕಾರಿ ಸಂಸ್ಥೆಯಾಗಿದೆ.

ಕರ್ನಾಟಕದ ನಂದಿನಿ - ಅಮುಲ್​ ವಿವಾದ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅಮುಲ್​ ವಿವಾದ ಸೃಷ್ಟಿಸಿತ್ತು. ಕರ್ನಾಟಕದ ಹಾಲು ಸಹಕಾರಿ ಸಂಸ್ಥೆಯಾದ ಕೆಎಂಎಫ್​​ನ (Karnataka Milk Federation) ನಂದಿನಿ ಬ್ರ್ಯಾಂಡ್​ಗೆ ಸಡ್ಡು ಹೊಡೆಯಲು ಬೆಂಗಳೂರಿನ ಮಾರುಕಟ್ಟೆಗೆ ಗುಜರಾತ್​​ನ ಅಮುಲ್ ಡೈರಿ ಬ್ರ್ಯಾಂಡ್​ನ ಉತ್ಪನ್ನ ಲಗ್ಗೆ ಇಡುತ್ತಿರುವುದಕ್ಕೆ ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಲಕ್ಷಾಂತರ ರೈತರು ನಂದಿನಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ನಂದಿನಿ ಉಳಿಸಿ (#SaveNandini) ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಕನ್ನಡಿಗರು ಟ್ವೀಟ್​ ಮಾಡುತ್ತಾ "ನಂದಿನಿ ಉಳಿಸಿ - ಅಮುಲ್​ ಓಡಿಸಿ" ಎಂದು ಅಭಿಯಾನ ನಡೆಸಿದ್ದರು. ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ವಿವಾದ ಸದ್ಯ ತಣ್ಣಗಾಗಿದೆ.