Suchana Seth: ನೀನು ಏಕೆ ಹೀಗೆ ಮಾಡಿದೆ, ನಾನೇನು ಮಾಡಿಲ್ಲ: ಗೋವಾ ಪೊಲೀಸರೆದರು ಸುಚನಾ- ವೆಂಕಟರಮಣ ವಾಗ್ವಾದ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Suchana Seth: ನೀನು ಏಕೆ ಹೀಗೆ ಮಾಡಿದೆ, ನಾನೇನು ಮಾಡಿಲ್ಲ: ಗೋವಾ ಪೊಲೀಸರೆದರು ಸುಚನಾ- ವೆಂಕಟರಮಣ ವಾಗ್ವಾದ

Suchana Seth: ನೀನು ಏಕೆ ಹೀಗೆ ಮಾಡಿದೆ, ನಾನೇನು ಮಾಡಿಲ್ಲ: ಗೋವಾ ಪೊಲೀಸರೆದರು ಸುಚನಾ- ವೆಂಕಟರಮಣ ವಾಗ್ವಾದ

Goa Murder Case ಗೋವಾದಲ್ಲಿ ಕಳೆದ ವಾರ ನಡೆದಿದ್ದ ಮಗುವಿನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಚನಾ ಸೇಥ್‌ ಹಾಗೂ ಆಕೆಯ ಪತಿ ವೆಂಕಟರಮಣ ಗೋವಾ ಪೊಲೀಸರ ಎದುರು ಮುಖಾಮುಖಿಯಾದರು.

ಕೊಲೆ ಆಪಾದನೆ ಎದುರಿಸುತ್ತಿರುವ ಸುಚನಾ ಸೇಥ್‌ ಹಾಗೂ ಆಕೆಯ ಪತಿ ವೆಂಕಟರಮಣ ಗೋವಾ ಪೊಲೀಸರ ಎದುರು ಮುಖಾಮುಖಿಯಾದರು.
ಕೊಲೆ ಆಪಾದನೆ ಎದುರಿಸುತ್ತಿರುವ ಸುಚನಾ ಸೇಥ್‌ ಹಾಗೂ ಆಕೆಯ ಪತಿ ವೆಂಕಟರಮಣ ಗೋವಾ ಪೊಲೀಸರ ಎದುರು ಮುಖಾಮುಖಿಯಾದರು.

ಪಣಜಿ: ನನ್ನ ಮಗುವನ್ನು ನೀನು ಏನು ಮಾಡಿದ್ದೀಯಾ, ನನ್ನ ಮೇಲಿನ ಸಿಟ್ಟಿಗೆ ಮಗುವನ್ನು ಏಕೆ ಕೊಂದು ಹಾಕಿದೆ. ಅಂತಹ ಮನಸ್ಸಾದರೂ ನಿನಗೆ ಹೇಗೆ ಬಂದಿತು... ಹೀಗೆ ಆತ ಕೇಳುತ್ತಲೇ ಇದ್ದ. ಅತ್ತ ಕಡೆಯಿಂದ ಬರುತ್ತಿದ್ದ ಉತ್ತರ, ನನಗೇನೂ ಗೊತ್ತಿಲ್ಲ. ನಾನೇನು ಮಾಡಿಲ್ಲ. ಇದು ಐದು ದಿನದ ಹಿಂದೆ ಮಗುವಿನ ಮೃತ ದೇಹವನ್ನು ಗೋವಾದಿಂದ ಸಾಗಿಸುವಾಗ ಚಿತ್ರದುರ್ಗ ಬಳಿ ಸಿಕ್ಕಿಬಿದ್ದ ಬೆಂಗಳೂರಿನ ಕಂಪೆನಿಯೊಂದರ ಸಿಇಒ ಸುಚನಾ ಸೇಥ್‌ ಹಾಗೂ ಆಕೆಯ ಪತಿ, ಇಂಡೋನೇಷಿಯಾದಿಂದ ಬಂದಿರುವ ವೆಂಕಟರಮಣ ನಡುವೆ ನಡೆದ ಮಾತುಕತೆಯ ಪ್ರಮುಖಾಂಶ.

ಗೋವಾದ ಪೊಲೀಶರು ಇಬ್ಬರ ಮುಕ್ತ ಮಾತುಕತೆಗೆ ಅವಕಾಶ ನೀಡಿದ್ದರು. ಆಗಲೂ ಇಬ್ಬರ ನಡುವೆ ಏರಿದ ದನಿಯಲ್ಲೇ ಮಾತಿನ ಸಂಘರ್ಷವೇ ಇತ್ತು. ವೆಂಕಟರಮಣ ಮಗು ಮೃತಪಟ್ಟ ಬಗ್ಗೆ ದುಃಖದಲ್ಲಿಯೇ ಮಾತನಾಡಿದರೆ ಸುಚನಾ ಮುಖಭಾವದಲ್ಲಿ ಅಂತಹ ಬೇಸರವೇನೂ ಕಂಡು ಬರಲಿಲ್ಲ.

ಠಾಣೆಯಲ್ಲಿ ಮುಖಾಮುಖಿ

ಈಗಾಗಲೇ ನಾಲ್ಕು ದಿನದಿಂದ ಗೋವಾದ ಕಲ್ಲಂಗೂಟ್‌ ಪೊಲೀಸರ ವಶದಲ್ಲಿರುವ ಸುಚನಾ ಸೇಥ್‌ ಅವರ ನಿರಂತರ ವಿಚಾರಣೆ ನಡೆದಿದೆ. ಘಟನೆ ನಡೆದ ಸ್ಥಳ, ಅಲ್ಲಿನ ಘಟನಾವಳಿಗಳ ಕುರಿತು ನಿಖರ ಮಾಹಿತಿಯನ್ನು ಪೊಲೀಸರು ಪಡೆಯುತ್ತಿದ್ದಾರೆ. ಸುಚನಾ ಸಮರ್ಪಕವಾಗಿ ಏನನ್ನೂ ಹೇಳುತ್ತಿಲ್ಲ ಎನ್ನುವ ಅಭಿಪ್ರಾಯ ಗೋವಾ ಪೊಲೀಸರಿಂದ ಬರುತ್ತಿದೆ.

ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದ ಸುಚನಾ ಪತಿ ವೆಂಕಟರಮಣ ಅಲ್ಲಿಂದ ಗೋವಾಕ್ಕೂ ಬಂದಿದ್ದರು. ಅಲ್ಲಿ ಸುಚನಾ ಹಾಗೂ ವೆಂಕಟರಮಣ ಅವರ ಮುಖಾಮುಖಿಗೆ ಅವಕಾಶ ಮಾಡಿಕೊಡಲಾಗಿತ್ತು.15 ನಿಮಿಷಗಳ ಇಬ್ಬರ ನಡುವೆ ಮಾತುಕತೆ ನಡೆಯಿತು. ಇಬ್ಬರೂ ಪರಸ್ಪರ ದೂಷಣೆಯಲ್ಲೇ ಹೆಚ್ಚು ಸಮಯವನ್ನು ಕಳೆದರು.

ವೆಂಕಟರಮಣ ಅವರನ್ನು ಗೋವಾ ಪೊಲೀಸರ ಮುಂದೆ ಹಾಜರುಪಡಿಸಿ ತನಿಖೆಯ ಭಾಗವಾಗಿ ತನಿಖಾಧಿಕಾರಿ (ಐಒ) ಪರೇಶ್ ನಾಯಕ್ ಅವರ ಮುಂದೆ ಹೇಳಿಕೆ ದಾಖಲಿಸಿದ ನಂತರ ಈ ಮಾತಿನ ಚಕಮಕಿ ನಡೆದಿದೆ. ವೆಂಕಟರಮಣ ಅವರು ಡಿಸೆಂಬರ್ 10 ರಂದು ತಮ್ಮ ಮಗನನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕಳೆದ ಐದು ಭಾನುವಾರಗಳಿಂದ ತಮ್ಮ ಮಗುವನ್ನು ಭೇಟಿಯಾಗಲು ಸುಚನಾ ಅವಕಾಶ ನೀಡಲಿಲ್ಲ ಎಂದು ಹೇಳಿಕೆ ದಾಖಲಿಸಿದರು.

ಹೀಗೆಕೆ ಮಾಡಿದೆ. ನನ್ನ ಮಗುವಿಗೆ ಹೀಗೆ ಮಾಡಿದ್ದೇಕೆ. ನನ್ನ ಮೇಲೆ ಸಿಟ್ಟಿಗೆ ಮಗುವನ್ನು ಕೊಂದದ್ದು ಯಾಕೆ ಎಂದು ವೆಂಕಟರಮಣ ಆಕೆಯ ಎದುರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಸುಚನಾ ಮಾತ್ರ, ನನಗೇನೂ ಗೊತ್ತಿಲ್ಲ. ನಾನೇನು ಮಾಡಿಲ್ಲ ಎನ್ನುವ ಉತ್ತರವನ್ನೇ ನೀಡುತ್ತಿರುವುದು ಕಂಡು ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಕೀಲರು ಹೇಳಿದ್ದೇನು

ವಿಚಾರಣೆ ಬಳಿಕ ವೆಂಕಟರಮಣ ಅವರು ವಕೀಲ ಅಜರ್ ಮೀರ್‌ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ಒಂದು ವರ್ಷದಿಂದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಮಗನ ಕಸ್ಟಡಿ ಪ್ರಕರಣ ನಡೆಯುತ್ತಿದೆ. ಆರಂಭದಲ್ಲಿ ನ್ಯಾಯಾಲಯವು ಮಗುವಿನೊಂದಿಗೆ ಫೋನ್ ಅಥವಾ ವೀಡಿಯೊ ಕರೆ ಮೂಲಕ ಮಾತನಾಡಲು ತಂದೆಗೆ ಅವಕಾಶ ನೀಡಿತ್ತು. ತರುವಾಯ, ಅವರಿಗೆ ಎರಡು ವಾರಗಳಿಗೊಮ್ಮೆ ನ್ಯಾಯಾಲಯದ ಒಳಗೆ, ನಂತರ ಸಾರ್ವಜನಿಕ ಸ್ಥಳದಲ್ಲಿ ಭೇಟಿಯಾಗಲು ಅವಕಾಶ ನೀಡಿತು. ನವೆಂಬರ್‌ನಲ್ಲಿ, ನ್ಯಾಯಾಲಯವು ಮಗುವನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಮನೆಯಲ್ಲಿ ಭೇಟಿ ಮಾಡಲು ತಂದೆಗೆ ಅನುಮತಿ ನೀಡಿತು. ಹೀಗಿದ್ದರೂ ಕಳೆದ ಐದು ಭಾನುವಾರಗಳಿಂದ ಮಗನನ್ನು ಭೇಟಿಯಾಗಲು

ಸುಚನಾ ಸೇಥ್‌ ಅವಕಾಶ ನೀಡಲಿಲ್ಲ. ಡಿಸೆಂಬರ್ 10ರ ಭಾನುವಾರ ಅವರು ತಮ್ಮ ಮಗನನ್ನು ಕೊನೆಯ ಬಾರಿಗೆ ಭೇಟಿಯಾದರು ಎಂದು ಹೇಳಿದರು.

ಜನವರಿ 6 ರಂದು (ಶನಿವಾರ) ಸುಚನಾ ವೆಂಕಟರಮಣ ಅವರಿಗೆ ಇಮೇಲ್ ಬರೆದು ಬೆಂಗಳೂರಿನ ಸದಾಶಿವ ನಗರಕ್ಕೆ ಬಂದು ಭಾನುವಾರ ತನ್ನ ಮಗನನ್ನು ಕರೆದೊಯ್ಯುವಂತೆ ಕೇಳಿಕೊಂಡರು. ಅವರು ಬೆಳಿಗ್ಗೆ10 ಗಂಟೆಗೆ ಅಲ್ಲಿಗೆ ಹೋಗಿ ಕಾಯುತ್ತಿದ್ದರು. ಸಂಜೆವರೆಗೂ ಮಗುವನ್ನು ತೋರಿಸದೇ ಇದ್ದಾಗ ಅವರು ಕೆಲಸಕ್ಕಾಗಿ (ಇಂಡೋನೇಷ್ಯಾಕ್ಕೆ) ತೆರಳಿದರು. ಘಟನೆ ಕುರಿತು ತನಿಖೆ ನಡೆಯುತ್ತಿದೆ. ಮಗುವನ್ನು ಜತೆಯಲ್ಲಿ ಕರೆತಂದಿದ್ದ ಸುಚನಾ ಅವರೇ ಘಟನೆ ಬಗ್ಗೆ ಹೇಳಲು ಶಕ್ತರು ಎಂದು ಮೀರ್ ವಿವರಿಸಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.