ಕ್ರೆಮ್ಲಿನ್ ಸಭೆ: ಉಕ್ರೇನ್, ಇಂಡೋ ಪೆಸಿಫಿಕ್, ದ್ವಿಪಕ್ಷೀಯ ಸಹಕಾರಗಳ ಕುರಿತು ಚರ್ಚಿಸಲಿರುವ ಮೋದಿ, ಪುಟಿನ್; ಗಿರೀಶ್‌ ಲಿಂಗಣ್ಣ ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕ್ರೆಮ್ಲಿನ್ ಸಭೆ: ಉಕ್ರೇನ್, ಇಂಡೋ ಪೆಸಿಫಿಕ್, ದ್ವಿಪಕ್ಷೀಯ ಸಹಕಾರಗಳ ಕುರಿತು ಚರ್ಚಿಸಲಿರುವ ಮೋದಿ, ಪುಟಿನ್; ಗಿರೀಶ್‌ ಲಿಂಗಣ್ಣ ಬರಹ

ಕ್ರೆಮ್ಲಿನ್ ಸಭೆ: ಉಕ್ರೇನ್, ಇಂಡೋ ಪೆಸಿಫಿಕ್, ದ್ವಿಪಕ್ಷೀಯ ಸಹಕಾರಗಳ ಕುರಿತು ಚರ್ಚಿಸಲಿರುವ ಮೋದಿ, ಪುಟಿನ್; ಗಿರೀಶ್‌ ಲಿಂಗಣ್ಣ ಬರಹ

ಭಾರತ ರಷ್ಯಾದೊಡನೆ ಆರ್ಥಿಕ ಬಂಧವನ್ನು ಗಟ್ಟಿಗೊಳಿಸುವ ಗುರಿ ಹೊಂದಿದ್ದು, ಮೋದಿ ಮತ್ತು ಪುಟಿನ್‌ರ ಮಾತುಕತೆಯಲ್ಲಿ ಭಾರತ ರಷ್ಯಾದೊಡನೆ ರಪ್ತು ಹೆಚ್ಚಿಸುವ ಕುರಿತು ಸಮಾಲೋಚನೆ ನಡೆಸಲಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರ ಹೇಳಿದ್ದಾರೆ. ಈ ಕುರಿತು ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕರಾದ ಗಿರೀಶ್‌ ಲಿಂಗಣ್ಣ ಅವರ ಬರಹ ಓದಿ.

ಕ್ರೆಮ್ಲಿನ್ ಸಭೆ: ಉಕ್ರೇನ್, ಇಂಡೋ ಪೆಸಿಫಿಕ್, ದ್ವಿಪಕ್ಷೀಯ ಸಹಕಾರಗಳ ಕುರಿತು ಚರ್ಚಿಸಲಿರುವ ಮೋದಿ, ಪುಟಿನ್; ಗಿರೀಶ್‌ ಲಿಂಗಣ್ಣ ಬರಹ
ಕ್ರೆಮ್ಲಿನ್ ಸಭೆ: ಉಕ್ರೇನ್, ಇಂಡೋ ಪೆಸಿಫಿಕ್, ದ್ವಿಪಕ್ಷೀಯ ಸಹಕಾರಗಳ ಕುರಿತು ಚರ್ಚಿಸಲಿರುವ ಮೋದಿ, ಪುಟಿನ್; ಗಿರೀಶ್‌ ಲಿಂಗಣ್ಣ ಬರಹ

ಜುಲೈ 9ರಂದು ನಡೆಯಲಿರುವ 22ನೇ ರಷ್ಯಾ-ಭಾರತ ವಾರ್ಷಿಕ ಸಮಾವೇಶದ ಅಧ್ಯಕ್ಷತೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಜಂಟಿಯಾಗಿ ವಹಿಸಲಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರ ಘೋಷಿಸಿದ್ದಾರೆ. ಇಬ್ಬರು ನಾಯಕರು ಖಾಸಗಿ ಮತ್ತು ಪ್ರತಿನಿಧಿಗಳ ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜುಲೈ 8ರಂದು ಮಾಸ್ಕೋಗೆ ಆಗಮಿಸಲಿದ್ದಾರೆ. ಭಾರತ ರಷ್ಯಾದೊಡನೆ ಆರ್ಥಿಕ ಬಂಧವನ್ನು ಗಟ್ಟಿಗೊಳಿಸುವ ಗುರಿ ಹೊಂದಿದ್ದು, ಮೋದಿ ಮತ್ತು ಪುಟಿನ್‌ರ ಮಾತುಕತೆಯಲ್ಲಿ ಭಾರತ ರಷ್ಯಾದೊಡನೆ ರಪ್ತು ಹೆಚ್ಚಿಸುವ ಕುರಿತು ಸಮಾಲೋಚನೆ ನಡೆಸಲಿದೆ ಎಂದು ವಿನಯ್ ಕ್ವಾತ್ರ ಹೇಳಿದ್ದಾರೆ.

ಭಾರತ-ರಷ್ಯಾ ನಡುವಿನ ವ್ಯಾಪಾರ 2023-24ರಲ್ಲಿ ಗಣನೀಯವಾಗಿ ಹೆಚ್ಚಿದ್ದು, ಬಹುತೇಕ 65 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಇದಕ್ಕೆ ಬಹುಪಾಲು ಭಾರತ-ರಷ್ಯಾ ಹೊಂದಿರುವ ಇಂಧನ ಸಹಕಾರ ಕಾರಣವಾಗಿದೆ. ಆದರೆ, ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರ ಅಸಮತೋಲನದ ವ್ಯಾಪಾರವಾಗಿದ್ದು, ಭಾರತದ ರಫ್ತು ಮೌಲ್ಯ ಕೇವಲ 4 ಬಿಲಿಯನ್ ಡಾಲರ್ ಆದರೆ, ರಷ್ಯಾದಿಂದ ನಡೆಸುವ ಆಮದು ಮೌಲ್ಯ 60 ಬಿಲಿಯನ್ ಡಾಲರ್ ಆಗಿದೆ. ರಷ್ಯಾದೊಡನೆ ಈ ಬಾರಿಯ ಮಾತುಕತೆಯಲ್ಲಿ ಈ ವ್ಯಾಪಾರ ಅಸಮತೋಲನ ಮುಖ್ಯ ವಿಚಾರವಾಗಿರಲಿದೆ ಎಂದು ವಿನಯ್ ಕ್ವಾತ್ರಾ ನವದೆಹಲಿಯಲ್ಲಿ ವಿವರಿಸಿದ್ದಾರೆ.

ಎರಡು ದೇಶಗಳ ನಡುವಿನ ಹೂಡಿಕೆ ಸಂಬಂಧಗಳು, ಅದರಲ್ಲೂ ಇಂಧನ, ಬ್ಯಾಂಕಿಂಗ್, ರೈಲ್ವೇ ಮತ್ತು ಉಕ್ಕಿನ ಕ್ಷೇತ್ರದಲ್ಲಿನ ಸಂಬಂಧ ಈಗ ಅಭಿವೃದ್ಧಿ ಹೊಂದುತ್ತಿದೆ ಎಂದು ಕ್ವಾತ್ರ ಅಭಿಪ್ರಾಯ ಪಟ್ಟಿದ್ದಾರೆ. ಭಾರತದ ಇಂಧನ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ರಷ್ಯಾ ಪ್ರಮುಖ ಸಹಯೋಗಿ ರಾಷ್ಟ್ರವಾಗಿದೆ. ಇನ್ನು ಪರಮಾಣು ಇಂಧನಕ್ಕೆ ಸಂಬಂಧಿಸಿದಂತೆ, ಕೂಡಂಕುಳಂ ನ್ಯೂಕ್ಲಿಯರ್ ಪವರ್ ಪ್ಲ್ಯಾಂಟ್‌ನ (ಕೆಎನ್‌ಪಿಪಿ) 1 ಮತ್ತು ಎರಡನೇ ಘಟಕಗಳು ಈಗಾಗಲೇ ಕಾರ್ಯಾಚರಿಸುತ್ತಿದ್ದು, 3 ಮತ್ತು ನಾಲ್ಕನೇ ಘಟಕಗಳು ಸಿದ್ಧವಾಗುತ್ತಿವೆ ಎಂದು ಕ್ವಾತ್ರ ಹೇಳಿದ್ದಾರೆ. ಇತ್ತೀಚಿನ ಭೌಗೋಳಿಕ ರಾಜಕಾರಣದ ವಿವಿಧ ಸವಾಲುಗಳ ಹೊರತಾಗಿಯೂ, ಭಾರತ ಮತ್ತು ರಷ್ಯಾಗಳ ನಡುವಿನ ವಿಶೇಷ ಕಾರ್ಯತಂತ್ರದ ಸಹಯೋಗ ಅಬಾಧಿತವಾಗಿ ಮುಂದುವರಿದಿದೆ ಎಂದು ಕ್ವಾತ್ರ ಹೇಳಿದ್ದಾರೆ.

ರಷ್ಯಾ ಮೇಲಿನ ನಿರ್ಬಂಧಗಳ ಕುರಿತು ಜಿ7 ಜೊತೆ ಸಮಾಲೋಚನೆ

ಕಳೆದ ತಿಂಗಳು ಇಟಲಿಯ ಅಪುಲಿಯಾದಲ್ಲಿ ಜಿ7 ರಾಷ್ಟ್ರಗಳ ಶೃಂಗಸಭೆ ನೆರವೇರಿತು. ಜಿ7 ರಾಷ್ಟ್ರಗಳು ಈ ಶೃಂಗಸಭೆಯಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ಬೈಪಾಸ್ ಮಾಡಿ ರಷ್ಯಾದೊಡನೆ ವ್ಯಾಪಾರ ನಡೆಸುವ ವ್ಯಾಪಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮತ್ತು ರಷ್ಯನ್ ತೈಲದ ಮೇಲೆ ಗರಿಷ್ಠ ದರ ನಿಗದಿಪಡಿಸುವ ಕ್ರಮಗಳನ್ನು ಘೋಷಿಸಿದವು. ಇಂತಹ ಸಂದರ್ಭದಲ್ಲಿ, ರಷ್ಯಾದೊಡನೆ ವ್ಯಾಪಾರ ಅಸಮತೋಲನವನ್ನು ಸರಿದೂಗಿಸಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ತೊಂದರೆಗಳು ಎದುರಾಗಬಹುದೇ ಎಂಬ ಪ್ರಶ್ನೆಗಳು ಮೂಡಿವೆ. ಆದರೆ, ಇಂತಹ ನಿರ್ಬಂಧಗಳ ಅಪಾಯಗಳ ನಡುವೆಯೂ, ಭಾರತ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಂಡು, ರಷ್ಯಾದೊಡನೆ ತನ್ನ ವ್ಯಾಪಾರವನ್ನು ಮುಂದುವರಿಸಲಿದೆ ಎಂದು ವಿನಯ್ ಕ್ವಾತ್ರ ಹೇಳಿದ್ದಾರೆ.

ಕ್ವಾತ್ರ ಅವರು ಭಾರತ ಯಾವತ್ತೂ ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಪಾಲಿಸುವಲ್ಲಿ ಅತ್ಯಂತ ಜಾಗರೂಕವಾಗಿ ಕಾರ್ಯಾಚರಿಸಿದೆ ಎಂದಿದ್ದಾರೆ. ಇನ್ನು ಜಿ7 ವಿಧಿಸಿರುವ ನಿರ್ಬಂಧಗಳಿಗೆ ಸಂಬಂಧಿಸಿದಂತೆ, ಭಾರತ ಜಿ7 ಜೊತೆ ನಿರಂತರ ಸಂಪರ್ಕದಲ್ಲಿದ್ದು, ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪೂರಕವಾಗಿ ಕಾರ್ಯಾಚರಿಸುತ್ತಿದೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗಳು ಭಾರತದ ಆರ್ಥಿಕ ಮತ್ತು ರಾಜಕೀಯ ಆಸಕ್ತಿಗಳನ್ನೂ ಒಳಗೊಂಡಿವೆ ಎಂದು ವಿನಯ್ ಕ್ವಾತ್ರ ವಿವರಿಸಿದ್ದಾರೆ.

ವಾರ್ಷಿಕ ಸಮಾವೇಶದ ಕುರಿತು ಮೋದಿಯವರ ಯೋಜನೆಗಳೇನು?

ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅಧಿಕಾರಾವಧಿಯಲ್ಲಿ ವಾರ್ಷಿಕ ಸಮಾವೇಶವನ್ನು ಆಯೋಜಿಸುವುದು ಭಾರತಕ್ಕೆ ಆದ್ಯತೆಯ ವಿಚಾರವಾಗಿತ್ತು ಎಂದು ಕ್ವಾತ್ರ ಹೇಳಿದ್ದಾರೆ. ಜುಲೈನಲ್ಲಿ ಆಯೋಜನೆಗೊಂಡಿರುವ ಈ ದ್ವಿಪಕ್ಷೀಯ ನಾಯಕರ ಮಾತುಕತೆ ಡಿಸೆಂಬರ್ 2021ರಲ್ಲಿ ಪುಟಿನ್ ನವದೆಹಲಿಗೆ ಭೇಟಿ ನೀಡಿದ ಬಳಿಕ ನಡೆಯುತ್ತಿರುವ ಮೊದಲ ಸಮಾವೇಶವಾಗಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಪುಟಿನ್ ಅವರೊಡನೆ ಯಾವ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂಬ ಕುರಿತು ಕ್ವಾತ್ರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಸಮಾವೇಶದಲ್ಲಿ ಉಭಯ ನಾಯಕರು ರಕ್ಷಣೆ, ವ್ಯಾಪಾರ ಸಂಬಂಧ, ಹೂಡಿಕೆ, ಇಂಧನ ಸಹಕಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಸಂಸ್ಕೃತಿ, ಜನರ ನಡುವಿನ ವಿನಿಮಯಗಳು ಸೇರಿದಂತೆ, ವಿಶಾಲ ಶ್ರೇಣಿಯ ವಿಚಾರಗಳ ಕುರಿತು ಮಾತುಕತೆ ನಡೆಸುವ ನಿರೀಕ್ಷೆಗಳಿವೆ.

ಕ್ವಾತ್ರ ಅವರ ಪ್ರಕಾರ, ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಅವರು ಪರಸ್ಪರ ಹಿತಾಸಕ್ತಿಗಳಿಗೆ ಅನುಗುಣವಾಗಿ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಅದರೊಡನೆ, ಬ್ರಿಕ್ಸ್, ಶಾಂಘಾಯ್ ಕೋಆಪರೇಶನ್ ಆರ್ಗನೈಸೇಶನ್, ಜಿ20, ಈಸ್ಟ್ ಏಷ್ಯಾ ಸಮ್ಮಿಟ್ ಮತ್ತು ವಿಶ್ವಸಂಸ್ಥೆಗಳಂತಹ ಗುಂಪುಗಳಲ್ಲಿ ಪರಸ್ಪರ ಸಹಕಾರದ ಸ್ಥಿತಿಯ ಕುರಿತು ಅವಲೋಕನ ನಡೆಸಲಿದ್ದಾರೆ. ಮೋದಿಯವರು ರಷ್ಯನ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಪ್ರಜೆಗಳ ವಿಚಾರವನ್ನು ಚರ್ಚಿಸುವ ಸಾಧ್ಯತೆಗಳಿವೆ ಎಂದು ಕ್ವಾತ್ರ ಸುಳಿವು ನೀಡಿದ್ದಾರೆ. ಉಭಯ ನಾಯಕರ ಮಾತುಕತೆಯಲ್ಲಿ ಉಕ್ರೇನ್ ಪರಿಸ್ಥಿತಿ, ಲಡಾಖ್‌ನಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟು ಸೇರಿದಂತೆ ಇಂಡೋ-ಪೆಸಿಫಿಕ್ ಪರಿಸ್ಥಿತಿಗಳು ಚರ್ಚಿಸಲ್ಪಡುವ ನಿರೀಕ್ಷೆಗಳಿವೆ.

ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರ ಅವರು ಇಂಟರ್ನ್ಯಾಷನಲ್ ನಾರ್ತ್ - ಸೌತ್ ಟ್ರಾನ್ಸ್‌ಪೋರ್ಟ್‌ ಕಾರಿಡಾರ್ (ಐಎನ್ಎಸ್‌ಟಿಸಿ), ಚೆನ್ನೈ - ವ್ಲಾಡಿವೊಸ್ತೋಕ್ ಸಾಗರ ಕಾರಿಡಾರ್ ಮತ್ತು ಚಬಹಾರ್ ಬಂದರುಗಳಂತಹ ಸಂಪರ್ಕ ಯೋಜನೆಗಳಿಗೆ ಉತ್ತೇಜನ ನೀಡುವ ವಿಚಾರಗಳೂ ಮೋದಿ ಮತ್ತು ಪುಟಿನ್ ಅವರ ಸಭೆಯಲ್ಲಿ ಚರ್ಚಿಸಲ್ಪಡುವ ಮುಖ್ಯ ವಿಚಾರಗಳಾಗಿರಲಿವೆ ಎಂದಿದ್ದಾರೆ. ಎರಡು ದೇಶಗಳೂ ಸಭೆಗೆ ಸಂಬಂಧಿಸಿದ ಫಲಿತಾಂಶಗಳ ದಾಖಲಾತಿಗಳನ್ನು ಸಿದ್ಧಪಡಿಸಿದ್ದು, ಅವುಗಳನ್ನು ಮುಂದಿನ ವಾರ ಘೋಷಿಸಲಾಗುತ್ತದೆ ಎಂದು ಕ್ವಾತ್ರ ತಿಳಿಸಿದ್ದಾರೆ.

ಬರಹ: ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.