Rare Ganesha Sculpture : ತೆಲಂಗಾಣದಲ್ಲಿ 13ನೇ ಶತಮಾನದ ಪುಟ್ಟ ಗಣೇಶ ಪತ್ತೆ
13th century old small Kakatiya style Ganesha sculpture: ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಪತ್ತೆಯಾದ 13ನೇ ಶತಮಾನದಷ್ಟು ಹಳೆಯ ಕಾಕತೀಯ ಶೈಲಿಯ ಪುಟ್ಟ ಗಣೇಶನ ಮೂರ್ತಿ ಈ ಸಲ ಗಣೇಶನ ಹಬ್ಬದ ಸಂದರ್ಭದಲ್ಲಿ ಜನರ ಗಮನಸೆಳೆದಿದೆ. ಏನಿದರ ವಿಶೇಷ? ಇಲ್ಲಿದೆ ವಿವರ.
ಹೈದರಬಾದ್: ಗೌರಿ ಗಣೇಶ ಹಬ್ಬ (Ganesha Festival) ಬಂದೇ ಬಿಟ್ಟಿದೆ. ಕೋವಿಡ್ ಜಂಜಾಟದ ಗುಂಗುನಿಂದ ಹೊರ ಬಂದು ಆಚರಿಸುತ್ತಿರುವ ಮೊದಲ ಗಣೇಶ ಹಬ್ಬ ಇದು. ಈ ಸಂದರ್ಭದಲ್ಲಿ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಪತ್ತೆಯಾದ 13ನೇ ಶತಮಾನದಷ್ಟು ಹಳೆಯ ಕಾಕತೀಯ ಶೈಲಿಯ ಪುಟ್ಟ ಗಣೇಶನ ಮೂರ್ತಿ (13th century old small Kakatiya style Ganesha sculpture) ಈ ಸಲ ಗಣೇಶನ ಹಬ್ಬದ ಸಂದರ್ಭದಲ್ಲಿ ಜನರ ಗಮನಸೆಳೆದಿದೆ.
ಪರಾದ ಗ್ರಾಮದ ಹೊರವಲಯದಲ್ಲಿ ಹೊಸ ಶಿಲಾಯುಗ ಮತ್ತು ಕಬ್ಬಿಣಯುಗದ ಕುರುಹುಗಳನ್ನು ಪರಿಶೀಲಿಸುತ್ತಿರುವಾಗ ಈ ಪುಟ್ಟ ಮೂರ್ತಿ ಪತ್ತೆಯಾಗಿದೆ. ಬೌದ್ಧ ಸ್ತೂಪದ ಅವಶೇಷಗಳ ಜತೆಗೆ ಈ ಪುಟ್ಟ ಗಣೇಶನ ವಿಗ್ರಹ ಸಿಕ್ಕುರುವಂಥದ್ದು ಎಂದು ಪುರಾತತ್ತ್ವ ಸಂಶೋಧಕ ಮತ್ತು ಪ್ಲೀಚ್ ಇಂಡಿಯಾ ಫೌಂಡೇಶನ್ ಸಿಇಒ ಡಾ ಎಮಾನಿ ಶಿವನಾಗಿ ರೆಡ್ಡಿ ಮತ್ತು ಇತಿಹಾಸ ಸಂಶೋಧಕ ರಾಗಿ ಮುರಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಗ್ರಹ ವಿಶೇಷ
ಇದು ಕಾಕತೀಯರ ಕಾಲ (Kakatiya dynasty) ದ ಮೂರ್ತಿ. ನಲ್ಗೊಂಡ ಜಿಲ್ಲೆಯ ನಕ್ರೇಕಲ್ ಮಂಡಲದ ಪರಾದ ಗ್ರಾಮದಲ್ಲಿ ಪತ್ತೆಯಾಗಿದೆ. ಇದು ಈವರೆಗೆ ದಾಖಲೆಗೆ ಸಿಕ್ಕ ಪುರಾತನ ಮೂರ್ತಿಗಳಲ್ಲೇ ಪುಟ್ಟ ಮೂರ್ತಿ. ಇದರ ಎತ್ತರ 4 ಸೆಂಟಿ ಮೀಟರ್. ಅಗಲ ಮತ್ತು ದಪ್ಪ ತಲಾ ಎರಡು ಸೆಂಟಿಮೀಟರ್ ಎಂದು ಪುರಾತತ್ತ್ವ ಸಂಶೋಧಕರು ಹೇಳಿದ್ದಾರೆ.
ಗಣಪತಿಯ ಮೂರ್ತಿಯ ಆಕಾರ, ವಿನ್ಯಾಸ ಗಮನಿಸಿದರೆ, ಕಾಕತೀಯ ಶೈಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ತಲೆಯ ಮೇಲೆ ಕಾಕತೀಯ ಶೈಲಿಯ ಜಟಾಮಕುಟ, ಎಡಕ್ಕೆ ಸೊಂಡಿಲು, ಕೈಯಲ್ಲಿ ದಂತ, ಮೋದಕ, ತೊಡೆಯ ಮೇಲೆ ನಾಗ ಯಜ್ಞೋಪವೀತ ಹರಡಿದ್ದು, ಲಲಿತಾಸನ ಭಂಗಿಯಲ್ಲಿ ಕುಳಿತ ಗಣೇಶನ ಮೂರ್ತಿ ಇದು. ಕಾಕತೀಯರ ಕಾಲದ ಮನೆಗಳಲ್ಲಿ ಪೂಜಿಸುತ್ತಿದ್ದ ವಿಗ್ರಹ. ಇದನ್ನು ಮೃದುವಾದ ಕಲ್ಲಿನಲ್ಲಿ ಕೆತ್ತಿ ರೂಪಿಸಲಾಗಿದೆ.
ಇದಕ್ಕೂ ಮುನ್ನ ಕರ್ನೂಲ್ ಜಿಲ್ಲೆಯ ವೀರಾಪುರಂನಲ್ಲಿ ಕ್ರಿಸ್ತ ಶಕ ಮೂರನೇ ಶತಮಾನದ ಮಣ್ಣಿನ ಗಣೇಶನ ಮೂರ್ತಿ ಪತ್ತೆಯಾಗಿತ್ತು. ಅದು ಕೂಡ ಗಾತ್ರದಲ್ಲಿ ಬಹುತೇಕ ಇಷ್ಟೇ ಸಣ್ಣದಿತ್ತು. ಹಾಗೆಯೇ, ಕೀಸರಗುಟ್ಟದಲ್ಲಿ ಐದನೇ ಶತಮಾನದ ಗಣೇಶನ ಕಲ್ಲಿನ ಮೂರ್ತಿ ಪತ್ತೆಯಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.