ಕೆಲಸದ ವಿರಾಮದ ವೇಳೆ ಸೆಕ್ಸ್‌ ಮಾಡಿ; ಜನನ ಪ್ರಮಾಣ ಹೆಚ್ಚಿಸಲು ನಾಗರಿಕರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ-russia president vladimir putin urges citizens to use lunch breaks for intimate encounters to boost population jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೆಲಸದ ವಿರಾಮದ ವೇಳೆ ಸೆಕ್ಸ್‌ ಮಾಡಿ; ಜನನ ಪ್ರಮಾಣ ಹೆಚ್ಚಿಸಲು ನಾಗರಿಕರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ

ಕೆಲಸದ ವಿರಾಮದ ವೇಳೆ ಸೆಕ್ಸ್‌ ಮಾಡಿ; ಜನನ ಪ್ರಮಾಣ ಹೆಚ್ಚಿಸಲು ನಾಗರಿಕರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ

ವಿಶ್ವದ ಅತಿ ದೊಡ್ಡ ದೇಶವಾದ ರಷ್ಯಾದಲ್ಲಿ ಜನನ ಪ್ರಮಾಣ ಭಾರಿ ಇಳಿಕೆಯಾಗಿದೆ. ಇದು ಸರ್ಕಾರ ಚಿಂತಿಸುವಂತೆ ಮಾಡಿದೆ. ಹೀಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದೇಶದ ನಾಗರಿಕರಿಗೆ ಜನಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುವಂತೆ ಕರೆ ನೀಡಿದ್ದಾರೆ. ಕೆಲಸದ ಬ್ರೇಕ್‌ ನಡುವೆ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಹೇಳಿದ್ದಾರೆ.

ಕೆಲಸದ ವಿರಾಮದ ವೇಳೆ ಸೆಕ್ಸ್‌ ಮಾಡಿ ಎಂದು ನಾಗರಿಕರಿಗೆ ಕರೆ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್
ಕೆಲಸದ ವಿರಾಮದ ವೇಳೆ ಸೆಕ್ಸ್‌ ಮಾಡಿ ಎಂದು ನಾಗರಿಕರಿಗೆ ಕರೆ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್ (AP)

ರಷ್ಯಾ ದೇಶದಲ್ಲಿ ಜನಸಂಖ್ಯೆಯಲ್ಲಿ ಕುಸಿತ ಕಾಣುತ್ತಿದೆ. ಹೀಗಾಗಿ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ನಾಗರಿಕರಿಗೆ ವಿಶೇಷ ಮನವಿ ಮಾಡಿದ್ದಾರೆ. ದೇಶದಲ್ಲಿ ಜನನ ಪ್ರಮಾಣ (birth rate) ಕುಸಿಯುತ್ತಿದ್ದು, ಇದನ್ನು ನಿಭಾಯಿಸಲು ನಾಗರಿಕರು ಕೆಲಸದ ವಿರಾಮದ ಸಮಯದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆ ಮೂಲಕ ಭವಿಷ್ಯದಲ್ಲಿ ದೇಶದ ಜನಸಂಖ್ಯೆಯಲ್ಲಾಗುವ ಸಂಭಾವ್ಯ ಜನಸಂಖ್ಯಾ ಕುಸಿತವನ್ನು ನಿಭಾಯಿಸಲು ಕರೆ ಕೊಟ್ಟಿದ್ದಾರೆ.

ಸುದ್ದಿಸಂಸ್ಥೆ ಮೆಟ್ರೊ ವರದಿ ಪ್ರಕಾರ, ರಷ್ಯಾ ದೇಶದಲ್ಲಿ ಜನನ ದರವು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಪ್ರಸ್ತುತ ರಷ್ಯಾ ದೇಶದ ಜನನ ಪ್ರಮಾಣವು ಪ್ರತಿ ಮಹಿಳೆಗೆ 1.5 ಮಕ್ಕಳು ಮಾತ್ರ. ವಿಸ್ತೀರ್ಣದಲ್ಲಿ ವಿಶ್ವದ ಅತಿ ದೊಡ್ಡ ದೇಶದ ಜನಸಂಖ್ಯೆಯಲ್ಲಿ ಸ್ಥಿರತೆ ಸಾಧಿಸಬೇಕೆಂದರೆ ಈ ಪ್ರಮಾಣವು 2.1ಕ್ಕಿಂತ ಹೆಚ್ಚಿರಬೇಕು. ಹೀಗಾಗಿ ಜನಸಂಖ್ಯೆ ಹೆಚ್ಚಿಸುವ ಸಲುವಾಗಿ ಎಲ್ಲರೂ ಜಾಗೃತರಾಗಬೇಕು ಎಂದು ರಷ್ಯಾದ ಅಧ್ಯಕ್ಷರು ಈ ಮನವಿ ಮಾಡಿದ್ದಾರೆ.

ರಾಷ್ಟ್ರದ ಜನಸಂಖ್ಯೆಯನ್ನು ಹೆಚ್ಚಿಸಲು ಉದ್ಯೋಗಿಗಳು ತಮ್ಮ ಊಟ ಮತ್ತು ಕಾಫಿ ವಿರಾಮಗಳಲ್ಲಿ ಲೈಂಗಿಕ ಚಟುವಟಿಕೆಗಳಿಗಾಗಿ ಬಳಸಬೇಕೆಂದು ಪುಟಿನ್ ಪ್ರಸ್ತಾಪಿಸಿದ್ದಾರೆ. "ರಷ್ಯಾದ ಜನರ ಸಂರಕ್ಷಣೆ ನಮ್ಮೆಲ್ಲರ ಅತ್ಯುನ್ನತ ರಾಷ್ಟ್ರೀಯ ಆದ್ಯತೆ. ರಷ್ಯಾದ ಭವಿಷ್ಯವು ನಮ್ಮ ದೇಶದಲ್ಲಿ ಎಷ್ಟು ಮಂದಿ ಇರುತ್ತಾರೆ ಎಂಬುದರ ಮೇಲೆ ನಿಂತಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಶ್ನೆಯಾಗಿದೆ,” ಎಂದು ಪುಟಿನ್‌ ಹೇಳಿಕೆಯನ್ನು ಮೆಟ್ರೋ ವರದಿ ಉಲ್ಲೇಖಿಸಿದೆ.

ಪುಟಿನ್‌ ಹೇಳಿಕೆ ಸಮರ್ಥಿಸಿದ ಆರೋಗ್ಯ ಸಚಿವ ಶೆಸ್ಟೊಪಾಲೋವ್

ಅಧ್ಯಕ್ಷರ ಹೇಳಿಕೆಯನ್ನೇ ಪ್ರತಿಧ್ವನಿಸಿದ ರಷ್ಯಾದ ಆರೋಗ್ಯ ಸಚಿವ ಯೆವ್ಗೆನಿ ಶೆಸ್ಟೊಪಾಲೋವ್, ದೇಶದ ನಾಗರಿಕರ ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯಿಂದಾಗಿ ಜನಸಂಖ್ಯೆ ಕುಸಿಯುತ್ತಿದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಿದ್ದಾರೆ. ಅದಕ್ಕೆ ಪರಿಹಾರವಾಗಿ ಪುಟಿನ್‌ ಹೇಳಿಕೆಯನ್ನು ಸಮರ್ಥಿಸಿದ್ದಾರೆ. “ಊಟ, ಕಾಫಿ ಹೀಗೆ ಕೆಲಸದ ವಿರಾಮದ ಸಮಯದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಬಹುದು. ಏಕೆಂದರೆ ಜೀವನವು ತುಂಬಾ ವೇಗವಾಗಿ ಸಾಗುತ್ತದೆ” ಎಂದು ಹೇಳಿದ್ದಾರೆ.

ವಿರಾಮದ ಸಮಯ ಸಂತಾನೋತ್ಪತ್ತಿಗೆ ವಿನಿಯೋಗಿಸಿ

ಪ್ರತಿನಿತ್ಯ 12ರಿಂದ 14 ಗಂಟೆಗಳ ಕಾಲ ಕೆಲಸ ಮಾಡುವವರು ಕುಟುಂಬ ಯೋಜನೆಗೆ ಸಮಯ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ವಿರಾಮದ ಸಮಯದಲ್ಲಿ” ಎಂದು ಸರಳವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಸ್ತೀರ್ಣದಲ್ಲಿ ವಿಶ್ವದ ಅತಿದೊಡ್ಡ ದೇಶವಾಗಿರುವ ರಷ್ಯಾದ ಜನಸಂಖ್ಯೆಯು ಕಳೆದ ಹಲವು ವರ್ಷಗಳಿಂದ ಇಳಿಮುಖವಾಗಿದೆ. 2050ರ ವೇಳೆಗೆ ಇಲ್ಲಿನ ಜನಸಂಖ್ಯೆಯು ಪ್ರಸ್ತುತ ಇರುವ 144 ಮಿಲಿಯನ್‌ನಿಂದ ಸುಮಾರು 130 ಮಿಲಿಯನ್‌ಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಸದ್ಯ ಈ ಅಂದಾಜು ದೇಶದ ರಾಷ್ಟ್ರೀಯ ಕಾಳಜಿಯಾಗಿದೆ. ಹೀಗಾಗಿ ಸರ್ಕಾರವು ಎಚ್ಚೆತ್ತುಕೊಂಡು ಜನಸಂಖ್ಯೆ ಹೆಚ್ಚಿಸುವ ಪ್ರಯತ್ನಕ್ಕೆ ಇಳಿದಿದೆ.

ವಿವಿಧ ಯೋಜನೆ, ಆರ್ಥಿಕ ನೆರವು

ದೇಶದ ಜನನ ದರವನ್ನು ಮತ್ತೆ ಏರುಗತಿಗೆ ತರಲು ರಷ್ಯಾ ಸರ್ಕಾರವು ಹಲವಾರು ಕ್ರಮಗಳನ್ನು ಪರಿಚಯಿಸಿದೆ. ರಾಜಧಾನಿ ಮಾಸ್ಕೋದಲ್ಲಿ 18ರಿಂದ 40 ವರ್ಷ ವಯಸ್ಸಿನ ಮಹಿಳೆಯರಿಗೆ ಉಚಿತ ಫಲವತ್ತತೆ ತಪಾಸಣೆ ಶಿಬಿರಗಳನ್ನು ನಡೆಸುತ್ತಿದೆ. ಇದೇ ವೇಳೆ ಮೊದಲ ಮಗುವನ್ನು ಹೆರುವ 24 ವರ್ಷದೊಳಗಿನ ವಿದ್ಯಾರ್ಥಿನಿಯರಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದೆ. ಗರ್ಭಪಾತಕ್ಕೆ ನಿರ್ಬಂಧ ವಿಧಿಸಲಾಗಿದೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.