ಚುನಾವಣೆ ಘೋಷಣೆ ಮುನ್ನವೇ ಸರ್‌ಪಂಚ್‌ ಹುದ್ದೆ ಹರಾಜು; ಪ್ರತಿ ಮತದಾರರಿಗೆ 1000 ರೂ., ಗ್ರಾಮಾಭಿವೃದ್ದಿ ಭರವಸೆ, ವಿವಾದಕ್ಕೀಡಾದ ವಿಜಯೋತ್ಸವ-telengana news before sarpanch elections announcement at telangana this village elected sarpanch warngal district kub ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚುನಾವಣೆ ಘೋಷಣೆ ಮುನ್ನವೇ ಸರ್‌ಪಂಚ್‌ ಹುದ್ದೆ ಹರಾಜು; ಪ್ರತಿ ಮತದಾರರಿಗೆ 1000 ರೂ., ಗ್ರಾಮಾಭಿವೃದ್ದಿ ಭರವಸೆ, ವಿವಾದಕ್ಕೀಡಾದ ವಿಜಯೋತ್ಸವ

ಚುನಾವಣೆ ಘೋಷಣೆ ಮುನ್ನವೇ ಸರ್‌ಪಂಚ್‌ ಹುದ್ದೆ ಹರಾಜು; ಪ್ರತಿ ಮತದಾರರಿಗೆ 1000 ರೂ., ಗ್ರಾಮಾಭಿವೃದ್ದಿ ಭರವಸೆ, ವಿವಾದಕ್ಕೀಡಾದ ವಿಜಯೋತ್ಸವ

Village sarpanch ತೆಲಂಗಾಣ ರಾಜ್ಯ ವಾರಂಗಲ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಚುನಾವಣೆ ಘೋಷಣೆ ಮುನ್ನವೇ ಸರ್‌ ಪಂಚ್‌ ಹುದ್ದೆ ಆಯ್ಕೆ ಪ್ರಕ್ರಿಯೆ ನಡೆದಿರುವುದು ವಿವಾದ ಸೃಷ್ಟಿಸಿದೆ.

ತೆಲಂಗಾಣದ ವಾರಂಗಲ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಗ್ರಾಮಸ್ಥರ ಸಮ್ಮುಖದಲ್ಲೇ ಸರ್‌ ಪಂಚ್‌ ಆಯ್ಕೆ ನಡೆದಿದೆ.
ತೆಲಂಗಾಣದ ವಾರಂಗಲ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಗ್ರಾಮಸ್ಥರ ಸಮ್ಮುಖದಲ್ಲೇ ಸರ್‌ ಪಂಚ್‌ ಆಯ್ಕೆ ನಡೆದಿದೆ.

Village Sarpanch: ಅದು ತೆಲಂಗಾಣ ರಾಜ್ಯದ ವಾರಂಗಲ್‌ ಜಿಲ್ಲೆಯ ಪುಟ್ಟ ಹಳ್ಳಿ. ಚೇವೂರು ಕೊಮ್ಮ ತಾಂಡದಲ್ಲಿರುವುದೇ 883 ಜನಸಂಖ್ಯೆ. ಇದರಲ್ಲಿ ಮತದಾರರ ಸಂಖ್ಯೆಯೇ 700. ಗ್ರಾಮದ ಪಂಚಾಯಿತಿ ಪ್ರಧಾನ ಹುದ್ದೆಗೆ ಅಲ್ಲಿ ಸರಪಂಚ್‌ ಎಂದು ಕರೆಯುತ್ತಾರೆ. ಇನ್ನೇನು ಚುನಾವಣೆ ಘೋಷಣೆಯಾಗುವುದು ಬಾಕಿಯಿದೆ. ಆಗಲೇ ಗ್ರಾಮದಲ್ಲಿ ಸರಪಂಚ್‌ ಆಯ್ಕೆ ಮಾಡಿಕೊಂಡೇ ಬಿಟ್ಟರು. ವಿಜಯೋತ್ಸವವೂ ನಡೆಯಿತು. ಊರವರಿಂದ ಪ್ರಮಾಣ ಪತ್ರಕ್ಕೂ ಸಹಿ ಹಾಕಿಸಿಕೊಳ್ಳಲಾಯಿತು. ಅಷ್ಟೇ ಅಲ್ಲ. ಇದನ್ನು ವಿರೋಧಿಸಿ ಯಾರಾದರೂ ಚುನಾವಣೆಗೆ ಸ್ಪರ್ಧಿಸಿದರೆ 50 ಲಕ್ಷ ದಂಡ ರೂ. ಪಾವತಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಇದು ಕೊಮ್ಮ ತಾಂಡದಲ್ಲಿ ಮಾತ್ರವಲ್ಲ. ಸುತ್ತಮುತ್ತಲ ಹಳ್ಳಿಯಲ್ಲೂ ಸುದ್ದಿಯಾಯಿತು. ಈಗ ಇಡೀ ತೆಲಂಗಾಣ ರಾಜ್ಯದಲ್ಲೇ ವಿವಾದದ ಕೇಂದ್ರ ಬಿಂದುವೂ ಆಗಿದೆ.

ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಮಹತ್ವವಿದೆ. ಇಲ್ಲಿ ಚುನಾವಣೆಗಿಂತ ಅಭ್ಯರ್ಥಿಯಾಗಬಯಸುವ ವ್ಯಕ್ತಿ ಹಣದಿಂದಲೇ ಎಲ್ಲವನ್ನೂ ಖರೀದಿಸಿ ಚುನಾವಣೆ ಪ್ರಕ್ರಿಯೆಯೆ ನಡೆಯದಂತೆ ಅವಿರೋಧ ಆಯ್ಕೆಯಾಗಲು ಹುನ್ನಾರ ನಡೆಸಿರುವುದು ಚರ್ಚೆಯನ್ನು ಹುಟ್ಟು ಹಾಕಿದೆ ಎಂದು ಹಿಂದೂಸ್ತಾನ್‌ ಟೈಂಸ್‌ ತೆಲುಗು ವರದಿ ಮಾಡಿದೆ.

ಗ್ರಾಮದಲ್ಲಿ ಧಾರ್ವತ್ ಬಾಲಾಜಿ ಎಂಬಾತನಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಉಮೇದು. ಇನ್ನೇನು ಪಂಚಾಯಿತಿ ಚುನಾವಣೆಗಳು ತೆಲಂಗಾಣದಲ್ಲಿ ಘೋಷಣೆಯಾಗುವುದರಿಂದ ಹೇಗಾದರೂ ಮಾಡಿ ಸರಪಂಚ್‌ ಹುದ್ದೆ ಹಿಡಿದೇ ತೀರಬೇಕು ಎನ್ನುವ ಹಠಕ್ಕೆ ಬಿದ್ದರು. ಇದಕ್ಕಾಗಿ ಮಾಡಿದ್ದು ಊರಲ್ಲಿ ಮತದಾರರನ್ನು ಸೆಳೆಯುವುದು ಹಾಗೂ ಊರಿನ ಅಭಿವೃದ್ದಿಗೆ ನೆರವಾಗುವ ಘೋಷಣೆ ಮಾಡುವುದು. ನಾಲ್ಕೈದು ಮಂದಿ ಹಿರಿಯರು, ಸ್ನೇಹಿತರೊಂದಿಗೆ ಬಾಲಾಜಿ ಚರ್ಚಿಸಿದರು.

ಆಗಲಿ. ಊರ ಅಭಿವೃದ್ದಿಗೆ ನೆರವಾಗುತ್ತೀರಿ ಎಂದರೆ ನೀವೇ ಅವಿರೋಧವಾಗಿ ಆಯ್ಕೆಯಾಗಬಹುದು ಎನ್ನುವ ಗ್ರೀನ್‌ ಸಿಗ್ನಲ್‌ ಕೂಡ ಸಿಕ್ಕಿತು. ಕೊನೆಗೂ ಸ್ನೇಹಿತರು ಸೇರಿ ಊರಲ್ಲಿ ಒಂದು ಪಂಚಾಯಿತಿ ಸೇರಿಸಿದರು.

ಹಿಂದಿನ ಆಡಳಿತದ ಅವಧಿಯಲ್ಲಿ, ಹಣದ ಕೊರತೆಯಿಂದಾಗಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಇದು ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಜನರು ತೊಂದರೆ ಅನುಭವಿಸಬೇಕಾಯಿತು. ಇದಲ್ಲದೆ, ಹಳ್ಳಿಯ ದೇವತೆಗಳಾದ ಬೋದ್ರೈ ಮತ್ತು ಕನಕದುರ್ಗ ದೇವಾಲಯ ಉತ್ಸವಗಳು ಮತ್ತು ಗ್ರಾಮದಲ್ಲಿ ಭಗವಾನ್ ಹನುಮಂತನ ವಿಗ್ರಹದ ಅನುಪಸ್ಥಿತಿಯು ಗ್ರಾಮದಲ್ಲಿ ಸಾಕಷ್ಟು ತೊಂದರೆ ಉಂಟುಮಾಡಿದೆ. ಹೀಗೆಯೇ ಹೋದರೆ ನಮ್ಮೂರು ಅಭಿವೃದ್ದಿ ಕಾಣುವುದಿಲ್ಲ. ಇದರಿಂದ ನಮ್ಮೂರ ಅಭಿವೃದ್ದಿಗೆ ಶ್ರಮಿಸುವವರನ್ನು ಆಯ್ಕೆ ಮಾಡಿಕೊಳ್ಳೋಣ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದರು.

ಈ ವೇಳೆ ಸಭೆಗೆ ಬಂದ ಗ್ರಾಮದ ಮಾಜಿ ಸರ್ಪಂಚ್ ಧರವತ್ ಬಾಲಾಜಿ ಇಡೀ ಗ್ರಾಮವು ಒಪ್ಪಿದರೆ ತಾನು ಸರ್ಪಂಚ್ ಆಗುತ್ತೇನೆ, ಇದಕ್ಕೆ ನಿಮ್ಮೆಲ್ಲರ ಸಹಕಾರಬೇಕು. ನಾನು ಸರ್ಪಂಚ್ ಆಗಿ ಚುನಾಯಿತರಾದರೆ, ಹಳ್ಳಿಯ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಸ್ವಂತ ಹಣದಿಂದ ಹಳ್ಳಿಯಲ್ಲಿ ಪೋಚಮ್ಮಳ ತಾಯಿ ಮತ್ತು ಅಂಜನೇಯರ ದೇಗುಲ ಮತ್ತು ಪ್ರತಿಮೆಗಳನ್ನು ನಿರ್ಮಿಸುತ್ತೇನೆ. ಅಲ್ಲದೇ ಪ್ರತಿಯೊಬ್ಬರಿಗೂ 1000 ರೂ. ನೀಡುವುದಾಗಿ ಭರವಸೆ ನೀಡಿದರು.

ನನ್ನ ಮಾತಿಗೆ ಬದ್ದವಾಗಿರುತ್ತೇನೆ. ಗ್ರಾಮದಲ್ಲಿ ದೇವಸ್ಥಾನಗಳ ಕೆಲಸ, ಅಭಿವೃದ್ದಿ ಮಾಡಿಸಕೊಡುತ್ತೇನೆ ಎಂದು ಗ್ರಾಮದ ಸಭೆಯಲ್ಲಿ ತಿಳಿವಳಿಕೆ ಒಪ್ಪಂದಕ್ಕೂ ಮುಂದಾದರು. ಈ ಒಪ್ಪಂದಕ್ಕೆ ಸರ್ಪಂಚ್ ಅಭ್ಯರ್ಥಿ ಧಾರ್ವತ್ ಬಾಲಾಜಿ ಮತ್ತು ಗ್ರಾಮಸ್ಥರು ಸಹಿ ಹಾಕಿದರು.

ಇದಕ್ಕೆಲ್ಲಾ ಒಪ್ಪಿ ಪರಸ್ಪರ ಸಹಿ ಹಾಕಿದ ಮೇಲೆ ಬಾಲಾಜಿ ಒಂದು ಬೇಡಿಕೆಯನ್ನು ಗ್ರಾಮಸ್ಥರ ಮುಂದೆ ಇರಿಸಿದ್ದರು. ಅದು ತನ್ನ ವಿರುದ್ದ ಯಾರೂ ಚುನಾವಣೆಗೆ ಸ್ಪರ್ಧೆ ಮಾಡುವ ಹಾಗಿಲ್ಲ. ಹಾಗೇನಾದರೂ ಸ್ಪರ್ಧೆ ಮಾಡುವುದಾದರೆ 50 ಲಕ್ಷ ದಂಡವನ್ನು ಗ್ರಾಮದ ಅಭಿವೃದ್ದಿಗೆ ಪಾವತಿಸಬೇಕಾಗುತ್ತದೆ ಎನ್ನುವ ಷರತ್ತನ್ನು ವಿಧಿಸಿದರು.ಇದಕ್ಕೂ ಗ್ರಾಮಸ್ಥರು ಒಪ್ಪಿಗೆ ಸೂಚಿಸಿ ಸಹಿ ಹಾಕಿಯೇ ಬಿಟ್ಟರು.

ಇದಾಗುತ್ತಲೇ ಗುಲಾಲು ಚಲ್ಲಿ ಬಾಲಾಜಿ ಅವರನ್ನು ಅಭಿನಂದಿಸಿದರು. ಗ್ರಾಮದಲ್ಲಿ ವಿಜಯೋತ್ಸವವೂ ನಡೆಯಿತು.

ಇದು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಊರವರು ಮಾತ್ರ ಈ ಕುರಿತಾಗಿ ಮಾತನಾಡುತ್ತಿಲ್ಲ. ವಿಚಾರಣೆ ನಡೆಸುವ ಸಂಬಂಧ ವಾರಂಗಲ್‌ ಅಧಿಕಾರಿಗಳು ಸ್ಥಳೀಯರಿಗೆ ಸೂಚನೆಗಳನ್ನೂ ನೀಡಿದ್ದಾರೆ. ಸ್ಥಳೀಯ ಕಂದಾಯ ಅಧಿಕಾರಿಗಳು ಹಳ್ಳಿಯ ವಿವರಗಳನ್ನು ಸಂಗ್ರಹಿಸಿದ್ದು ಈ ವಿಷಯವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.