Udaipur Killing: ಕನ್ಹಯ್ಯಲಾಲ್‌ ಹತ್ಯೆ ಅಚಾನಕ್‌ ಅಲ್ಲ, ಹೇಗಾಯಿತು - ಇಲ್ಲಿದೆ ಡಿಟೇಲ್ಸ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Udaipur Killing: ಕನ್ಹಯ್ಯಲಾಲ್‌ ಹತ್ಯೆ ಅಚಾನಕ್‌ ಅಲ್ಲ, ಹೇಗಾಯಿತು - ಇಲ್ಲಿದೆ ಡಿಟೇಲ್ಸ್

Udaipur Killing: ಕನ್ಹಯ್ಯಲಾಲ್‌ ಹತ್ಯೆ ಅಚಾನಕ್‌ ಅಲ್ಲ, ಹೇಗಾಯಿತು - ಇಲ್ಲಿದೆ ಡಿಟೇಲ್ಸ್

ರಾಜಸ್ಥಾನದ ಉದಯ್‌ಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆ ಅಚಾನಕ್‌ ಆಗಿ ಆಗಿರುವಂಥದ್ದಲ್ಲ. ಅದಕ್ಕೂ ಮೊದಲು ಕನ್ಹಯ್ಯಲಾಲ್‌ ಬಂಧನವೂ ಆಗಿತ್ತು. ಜೀವ ಬೆದರಿಕೆ ಇದೆ, ರಕ್ಷಣೆ ಒದಗಿಸಿ ಎಂದು ಮನವಿಯನ್ನೂ ಕನ್ಹಯ್ಯ ಲಾಲ್‌ ಸಲ್ಲಿಸಿದ್ದರು. ಹಾಗಾದರೆ ಯಾರು ಮತ್ತು ಎಲ್ಲಿ ಎಡವಿದ್ರು - ಇಲ್ಲಿದೆ ಪೂರ್ಣ ವಿವರ.

<p>ಉದಯಪುರದ ಟೈಲರ್‌ ಕನ್ಹಯ್ಯಲಾಲ್‌ ಶಾಪ್‌ನಲ್ಲಿ ಉಗ್ರರು ಅಳತೆ ತೆಗೆಸಿಕೊಳ್ಳುತ್ತಿದ್ದ ವಿಡಿಯೋ ಗ್ರ್ಯಾಬ್‌ ಚಿತ್ರ&nbsp;</p>
ಉದಯಪುರದ ಟೈಲರ್‌ ಕನ್ಹಯ್ಯಲಾಲ್‌ ಶಾಪ್‌ನಲ್ಲಿ ಉಗ್ರರು ಅಳತೆ ತೆಗೆಸಿಕೊಳ್ಳುತ್ತಿದ್ದ ವಿಡಿಯೋ ಗ್ರ್ಯಾಬ್‌ ಚಿತ್ರ&nbsp; (PTI)

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ನೂಪುರ್ ಶರ್ಮಾ ಅವರನ್ನು ಟೈಲರ್‌ ಕನ್ಹಯ್ಯಲಾಲ್‌ ಬೆಂಬಲಿಸಿದ್ದಕ್ಕಾಗಿ ಮತಾಂಧರು ಅವರ ಕತ್ತು ಸೀಳಿ ಹತ್ಯೆ ಮಾಡಿದರು.

ಬಟ್ಟೆ ಹೊಲಿಸುವ ನೆಪದಲ್ಲಿ ಅಂಗಡಿಗೆ ನುಗ್ಗಿದ ಆರೋಪಿಗಳು ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಇದಲ್ಲದೆ ಇನ್ನೊಂದು ವಿಡಿಯೋವನ್ನು ರೆಕಾರ್ಡ್‌ ಮಾಡಿದ್ದರು. ಪ್ರಧಾನಿ ಮೋದಿಯವರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕುವ ದೃಶ್ಯ ಈ ವಿಡಿಯೋದಲ್ಲಿದೆ. ಕನ್ಹಯ್ಯಲಾಲ್‌ ಕೊಲೆ ಪ್ರಕರಣದ ಹಿನ್ನೆಲೆ ಏನು? ಪ್ರಕರಣ ಶುರುವಾಗಿದ್ದು ಎಲ್ಲಿಂದ ಎಂಬುದರ ವಿವರ ಇಲ್ಲಿದೆ.

8 ವರ್ಷದ ಮಗ ಮಾಡಿದ ತಪ್ಪು?

ನೂಪುರ್‌ ಶರ್ಮಾ ಹೇಳಿಕೆ ವಿಚಾರ ವಿವಾದಕ್ಕೀಡಾದ ಸಂದರ್ಭ ಅದು. ಅವರನ್ನು ಬೆಂಬಲಿಸುವ ಪೋಸ್ಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಅದೇ ರೀತಿ ಪೋಸ್ಟ್‌ ಕನ್ಹಯ್ಯಲಾಲ್‌ ಮೊಬೈಲ್‌ಗೂ ಬಂದಿತ್ತು. ಅವರ 8 ವರ್ಷದ ಪುತ್ರ ಇದರಲ್ಲೊಂದು ಪೋಸ್ಟ್‌ ಅನ್ನು ವಾಟ್ಸಾಪ್‌ನಲ್ಲಿ ಫಾರ್ವರ್ಡ್‌ ಮಾಡಿದ್ದ ಎಂದು ಕನ್ಹಯ್ಯಲಾಲ್‌ ಹೇಳಿಕೊಂಡಿದ್ದರು. ಅಂದಿನಿಂದಲೇ ಕನ್ಹಯ್ಯಲಾಲ್‌ ಅವರಿಗೆ ಬೆದರಿಕೆ ಕರೆಗಳು ಬರತೊಡಗಿದ್ದವು.

10ಕ್ಕೆ ಕನ್ಹಯ್ಯಲಾಲ್‌ ಬಂಧನ

ಕನ್ಹಯ್ಯಲಾಲ್‌ ಅವರ ಮೊಬೈಲ್‌ನಿಂದ ಪೋಸ್ಟ್‌ ಫಾರ್ವಡ್‌ ಆಗಿರುವ ಕಾರಣ, ಕೆಲವರು ಉದಯಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಂತೆ ಪೊಲೀಸರು ಜೂ.10ರಂದು ಕನ್ಹಯ್ಯಲಾಲ್‌ ಅವರನ್ನು ಬಂಧಿಸಿದ್ದರು. ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕನ್ಹಯ್ಯಲಾಲ್‌ ಕೂಡಲೇ ಜಾಮೀನು ಪಡೆದು ಹೊರಬಂದಿದ್ದರು. ಅಲ್ಲದೆ, ಬೆದರಿಕೆ ಕರೆಗಳು ಬರುತ್ತಿರುವುದಾಗಿ ಪೊಲೀಸ್‌ ದೂರು ದಾಖಲಿಸಿದ್ದರು. ಅದೇ ರೀತಿ, ಭದ್ರತೆ ಒದಗಿಸುವಂತೆ ಕೋರಿದ್ದರು ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾಗಿ ವರದಿಯಾಗಿದೆ.

ರಾಜಸ್ಥಾನದ ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಹವಾ ಸಿಂಗ್ ಘುಮಾರಿಯಾ ಅವರು ಕನ್ಹಯ್ಯ ಲಾಲ್ ಅವರ ಪೋಸ್ಟ್‌ನಿಂದ ನೋಯಿಸಿರುವ ಕೆಲವರು ಉದಯಪುರ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರು ಜೂನ್ 10 ರಂದು ಕನ್ಹಯ್ಯ ಲಾಲ್ ವಿರುದ್ಧ ಪ್ರಕರಣ ದಾಖಲಿಸಿ ಅದೇ ದಿನ ಬಂಧಿಸಿದ್ದರು. ಆದರೆ, ಕನ್ಹಯ್ಯ ನ್ಯಾಯಾಲಯಕ್ಕೆ ಹಾಜರಾದ ಬಳಿಕ ಜಾಮೀನು ಪಡೆದಿದ್ದಾರೆ.

15ಕ್ಕೆ ಭದ್ರತೆ ಕೋರಿದ್ದ ಕನ್ಹಯ್ಯಲಾಲ್‌

ಕನ್ಹಯ್ಯ ಲಾಲ್ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅವರಿಗೆ ನಿರಂತರ ಬೆದರಿಕೆಗಳು ಬರಲಾರಂಭಿಸಿದವು. ಉಗ್ರರು ಆತನಿಗೆ ಕರೆ ಮತ್ತು ಸಂದೇಶಗಳ ಮೂಲಕ ಕೊಲೆ ಬೆದರಿಕೆ ಹಾಕಲಾರಂಭಿಸಿದರು. ಜೂನ್ 15 ರಂದು ಕನ್ಹಯ್ಯ ಪೊಲೀಸರಿಗೆ ದೂರು ನೀಡಿದ್ದರು. ತನಗೆ ಬೆದರಿಕೆ ಇದೆ ಎಂದು ಪೊಲೀಸ್ ರಕ್ಷಣೆ ಕೋರಿದ್ದರು ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಹವಾ ಸಿಂಗ್ ಘುಮಾರಿಯಾ ಖಚಿತಪಡಿಸಿದ್ದಾರೆ.

ಬಂಧಿಸದೆ ಸಂಧಾನ ಮಾಡಿದ ಪೊಲೀಸರು!

ಕನ್ಹಯ್ಯ ಲಾಲ್‌ನನ್ನು ಬಂಧಿಸುವಲ್ಲಿ ಜಾಣತನ ತೋರಿದ ರಾಜಸ್ಥಾನ ಪೊಲೀಸರು, ಆತನಿಗೆ ಬಂದ ಬೆದರಿಕೆಗಳನ್ನು ಗೌಣವಾಗಿ ಕಂಡರು. ಬೆದರಿಕೆ ಒಡ್ಡಿದವರನ್ನು ಬಂಧಿಸುವ ಗೋಜಿಗೆ ಹೋಗಲಿಲ್ಲ. ಅದರ ಬದಲಾಗಿ ಅವರನ್ನು ಠಾಣೆಗೆ ಕರೆಯಿಸಿ ರಾಜಿ ಸಂಧಾನ ಮಾಡಿದ್ದಾರೆ. ಎರಡೂ ಕಡೆಯವರ ಮನವೊಲಿಸಿ ಪೊಲೀಸರು ಮನೆಗೆ ಕಳುಹಿಸಿದರು. ಕನ್ಹಯ್ಯ ಕುಮಾರ್‌ಗೆ ಇದ್ದ ಪ್ರಾಣ ಬೆದರಿಕೆಯನ್ನು ನಿರ್ಲಕ್ಷಿಸಿದರು. ಭದ್ರತೆಯನ್ನು ಒದಗಿಸಲಿಲ್ಲ.

17ಕ್ಕೆ ಕೊಲೆ ಘೋಷಣೆ, 28ಕ್ಕೆ ಅನುಷ್ಠಾನ

ಆರೋಪಿ ಮೊಹಮ್ಮದ್ ರಿಯಾಜ್ ಜೂನ್ 17 ರಂದು ವಿಡಿಯೋ ಮಾಡಿ, ಪ್ರವಾದಿಯವರ ಮಹಿಮೆಯನ್ನು ಅವಹೇಳನ ಮಾಡುವವರ ತಲೆಯನ್ನು ಕತ್ತರಿಸುವುದಾಗಿ ಘೋಷಿಸಿದ್ದ. ಆತ ಹೇಳಿದಂತೆ ಮಾಡಿದ. ಈ ಘೋಷಣೆ ಮಾಡಿದ 11 ನೇ ದಿನ, ಆತ ತನ್ನ ಸಹಚರ ಗೌಸ್ ಮೊಹಮ್ಮದ್ ಜತೆಗೂಡಿ ಕನ್ಹಯ್ಯಾಲಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ.

ಐಸಿಸ್‌ ಉಗ್ರರ ವರ್ತನೆ

ಆರೋಪಿ ರಿಯಾಜ್ ಮತ್ತು ಗೌಸ್ ಕೃತ್ಯ ನಡೆಸಿದ ರೀತಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಕ್ರೌರ್ಯದೊಂದಿಗೆ ಹೋಲಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಅನೇಕ ಪಾಶ್ಚಿಮಾತ್ಯ ನಾಗರಿಕರನ್ನು ಇದೇ ಶೈಲಿಯಲ್ಲಿ ಕತ್ತು ಸೀಳಿ ಕೊಂದಿದ್ದರು. ರಿಯಾಜ್ ಮತ್ತು ಗೌಸ್ ಅವರ ಕ್ರೌರ್ಯ ಗಮನಿಸಿರುವ ತನಿಖಾ ತಂಡ, ಅವರಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಯಾವುದೇ ಸಂಬಂಧವಿದೆಯೇ ಎಂಬ ಬಗ್ಗೆಯೂ ತನಿಖೆ ಆರಂಭಿಸಿದೆ. ಎನ್‌ಐಎ ತಂಡವು ಭಯೋತ್ಪಾದನೆಯ ಕೋನದಿಂದ ತನಿಖೆಗಾಗಿ ದೆಹಲಿಯಿಂದ ಉದಯಪುರಕ್ಕೆ ತಲುಪಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.