Gold Silver Rate: ಬಜೆಟ್‌ನಲ್ಲಿ ಚಿನ್ನಬೆಳ್ಳಿಗೆ ಆಮದು ಸುಂಕ ವಿನಾಯ್ತಿ ಘೋಷಣೆ, ಆಗಸಕ್ಕೆ ಏರಿದ್ದ ಅಮೂಲ್ಯ ಲೋಹಗಳ ಬೆಲೆಗೆ ಬೀಳಬಹುದೇ ಕಡಿವಾಣ-union budget 2024 25 gold silver import duty reduced in budget may give boost for business in middle class indians kub ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Silver Rate: ಬಜೆಟ್‌ನಲ್ಲಿ ಚಿನ್ನಬೆಳ್ಳಿಗೆ ಆಮದು ಸುಂಕ ವಿನಾಯ್ತಿ ಘೋಷಣೆ, ಆಗಸಕ್ಕೆ ಏರಿದ್ದ ಅಮೂಲ್ಯ ಲೋಹಗಳ ಬೆಲೆಗೆ ಬೀಳಬಹುದೇ ಕಡಿವಾಣ

Gold Silver Rate: ಬಜೆಟ್‌ನಲ್ಲಿ ಚಿನ್ನಬೆಳ್ಳಿಗೆ ಆಮದು ಸುಂಕ ವಿನಾಯ್ತಿ ಘೋಷಣೆ, ಆಗಸಕ್ಕೆ ಏರಿದ್ದ ಅಮೂಲ್ಯ ಲೋಹಗಳ ಬೆಲೆಗೆ ಬೀಳಬಹುದೇ ಕಡಿವಾಣ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕ ಕಡಿತ ಮಾಡಿರುವುದರಿಂದ ದರ ಇಳಿಕೆ ಹಾಗೂ ವಹಿವಾಟು ವೃದ್ದಿ ಚಟುವಟಿಕೆ ನಿರೀಕ್ಷೆಗಳು ಗರಿಗೆದರಿವೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಚಿನ್ನ ಬೆಳ್ಳಿ ಆಮದು ಸುಂಕ ಕಡಿತದ ಘೋಷಣೆ ಮಾಡಿದ್ಧಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಚಿನ್ನ ಬೆಳ್ಳಿ ಆಮದು ಸುಂಕ ಕಡಿತದ ಘೋಷಣೆ ಮಾಡಿದ್ಧಾರೆ.

ದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌( Nirmala Sitharaman) ಅವರು ಮಧ್ಯಮ ವರ್ಗದವರ ಚಿನ್ನ ಹಾಗೂ ಬೆಳ್ಳಿಯ ಆಸೆಯ ಮೇಲೆ ಕೃಪೆ ತೋರಿದ್ದಾರೆ. ಈಗಾಗಲೇ ಗಗನಮುಖಿಯಾಗಿರುವ ಚಿನ್ನ, ಬೆಳ್ಳಿಯ( Gold silver Rate) ಆಮದು ಸುಂಕ ವಿನಾಯ್ತಿಯನ್ನು ಈ ಬಾರಿಯ ಆಯವ್ಯಯದಲ್ಲಿ ನೀಡಿರುವುದರಿಂದ ದರ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆ ಗರಿಗೆದರಿದೆ. ಚಿನ್ನ ಗ್ರಾಂಗೆ ಆರು ಸಾವಿರ ರೂ. ದಾಟಿ ಏಳು ಸಾವಿರದಷ್ಟಿದ್ದರೆ, ಬೆಳ್ಳಿಯ ದರವೂ ಗ್ರಾಂಗೆ ನೂರು ರೂ. ಸನಿಹದಲ್ಲಿದೆ. ಆಮದು ಸುಂಕ ಇಳಿಕೆ ಮಾಡಿ ಹೊರ ದೇಶಗಳಿಂದ ಇನ್ನಷ್ಟು ಚಿನ್ನ ಬೆಳ್ಳಿ ಭಾರತಕ್ಕೆ ಬರುವುದರಿಂದ ಆಗಸಕ್ಕೇ ಏರಿದ ಅಮೂಲ್ಯ ದರಗಳಲ್ಲೂ ವ್ಯತ್ಯಾಸವಾಗಬಹುದು. ಖರೀದಿಗೆ ಉತ್ತೇಜನ ನೀಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಂಗಳವಾರ ಮಂಡನೆಯಾದ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು ಶೇ. 6 ಕ್ಕೆ ಕಡಿತಗೊಳಿಸುವುದಾಗಿ ಘೋಷಿಸಿದರು. ಅಲ್ಲದೇ ಹೆಚ್ಚುವರಿಯಾಗಿ, ಪ್ಲಾಟಿನಂ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 4.6ಕ್ಕೆ ಹಣಕಾಸು ಸಚಿವರು ಇಳಿಸಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಕಡಿತಗೊಂಡ ಅಧಿಕ ಪ್ರಮಾಣದ ಸುಂಕವೇ.

ದೇಶದಲ್ಲಿ ಚಿನ್ನ ಮತ್ತು ಅಮೂಲ್ಯ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6 ಕ್ಕೆ ಮತ್ತು ಪ್ಲಾಟಿನಂ ಮೇಲಿನ ಸುಂಕವನ್ನು ಶೇಕಡಾ 6, ಹಾಗೂ ಶೇ. 4.6 ಕ್ಕೆ ಇಳಿಸಲಾಗುತ್ತಿದೆ ಎಂದು ನಿರ್ಮಲಾ ಹೇಳಿದರು.

ಚಿನಿವಾರ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಕೇಂದ್ರ ಸರ್ಕಾರದ ಆಮದು ಸುಂಕ ತಗ್ಗಿಸುವ ಕ್ರಮವು ಚಿನ್ನ ಮತ್ತು ಬೆಳ್ಳಿಯ ದೇಶೀಯ ಬೆಲೆಗಳಲ್ಲಿ ಕುಸಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ದೇಶದಲ್ಲಿ ಅಮೂಲ್ಯ ಲೋಹಗಳ ಬೇಡಿಕೆಯನ್ನು ಹೆಚ್ಚಿಸುವ ಜತೆಗೆ ಖರೀದಿಗೂ ದಾರಿ ಮಾಡಿಕೊಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗಾಗಲೇ ಚಿನ್ನ ಹಾಗೂ ಬೆಳ್ಳಿ ದರವು ಭಾರೀ ಏರಿಕೆ ಕಂಡಿದೆ. ಖರೀದಿ ಕಷ್ಟ ಎನ್ನುವಷ್ಟರ ಮಟ್ಟಿಗೆ ಅದು ಪ್ರಭಾವ ಬೀರುತ್ತದೆ. ಚಿನ್ನ ಹಾಗೂ ಬೆಳ್ಳಿ ದರದ ಏರಿಕೆಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಕ್ರಮ ಕೈಗೊಂಡಿರಬಹುದು ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ನುಡಿ.

ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಸರಕುಗಳ ಮುಖ್ಯಸ್ಥ ವಿ. ಹರೀಶ್ ಅವರ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 6 ಕ್ಕೆ ಇಳಿಸಲಾಗಿದೆ, ಇದು ದೇಶೀಯ ಬೆಲೆಗಳಲ್ಲಿ ಇಳಿಕೆಗೆ ಕಾರಣವಾಗಬಹುದು ಮತ್ತು ಬಹುಶಃ ಬೇಡಿಕೆಯನ್ನು ಹೆಚ್ಚಿಸಬಹುದು. ಚಿನ್ನ ಮತ್ತು ಬೆಳ್ಳಿಯ ಮೇಲೆ ಅಸ್ತಿತ್ವದಲ್ಲಿರುವ ಸುಂಕವು ಶೇಕಡಾ 15 ರಷ್ಟಿದೆ, ಇದು ಮೂಲ ಕಸ್ಟಮ್ ಸುಂಕದ ಶೇ. 10 ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಆಗಿ ಶೇ. 5 ಅನ್ನು ಒಳಗೊಂಡಿದೆ ಎನ್ನುವುದು ಅವರ ವಿವರಣೆ.

ಎಲ್ಕೆಪಿ ಸೆಕ್ಯುರಿಟೀಸ್ ನ ಸರಕು ಮತ್ತು ಕರೆನ್ಸಿಯ ವಿಪಿ ಸಂಶೋಧನಾ ವಿಶ್ಲೇಷಕ ಜತಿನ್ ತ್ರಿವೇದಿ ಅವರು, ಬಜೆಟ್‌ನಲ್ಲಿ, ಹಣಕಾಸು ಸಚಿವರು ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಆಮದು ಸುಂಕವನ್ನು ಶೇ. 10 ರಿಂದ ಶೇ. 6 ಕ್ಕೆ ಇಳಿಸಿದ್ದಾರೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಒಟ್ಟು ಆಮದು ಸುಂಕವನ್ನು ಈಗ ಶೇ. 15 ರಿಂದ 11 ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ, ಈಗಾಗಲೇ ಮಾರುಕಟ್ಟೆ ದರದಲ್ಲೂ ವ್ಯತ್ಯಾಸ ಕಾಣಬಹುದು.ಭಾರತದಿಂದ ಚಿನ್ನಕ್ಕೆ ಹೆಚ್ಚಿದ ಬೇಡಿಕೆಯು ಜಾಗತಿಕ ಬೆಲೆಗಳನ್ನು ಹೆಚ್ಚಿಸುತ್ತದೆ. ಇದು ಈ ವರ್ಷದ ಆರಂಭದಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಆದಾಗ್ಯೂ, ಇದು ಭಾರತದ ವ್ಯಾಪಾರ ಕೊರತೆಯನ್ನು ಹೆಚ್ಚಿಸಬಹುದು ಮತ್ತು ಹೆಣಗಾಡುತ್ತಿರುವ ರೂಪಾಯಿಗೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು. ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂನ ಮೂಲ ಕಸ್ಟಮ್ಸ್ ಸುಂಕದ ಕಡಿತವು ರತ್ನಗಳು ಮತ್ತು ಆಭರಣ ಉದ್ಯಮದ ದೀರ್ಘಕಾಲದ ಬೇಡಿಕೆಯಾಗಿದೆ ಎಂದು ಮಾರುಕಟ್ಟೆ ಸ್ಥಿತಿಗತಿ ಬಿಡಿಸಿಡುತ್ತಾರೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.