Viral News: ವಧುವಿಗೆ ಸಮರ್ಪಿಸುವ ಚಿನ್ನಾಭರಣ ಇಷ್ಟು ಕಡಿಮೇನಾ, ಅತ್ತೆಯ ಪ್ರಶ್ನೆಗೆ ಅಳಿಯ ಕಂಗಾಲು, ಮುಂದೆ ನಡೆಯಿತು ನಾಟಕೀಯ ವಿದ್ಯಮಾನ
Viral news: ಮದುವೆ ಸಮಾರಂಭ ಪ್ರತಿಯೊಬ್ಬರ ಬದುಕಿನ ಸ್ಮರಣೀಯ ಘಟನೆ. ವಿರಳ ವಿದ್ಯಮಾನಗಳು ಈ ಸ್ಮರಣೀಯ ಘಟನೆಯಲ್ಲಿ ಕಹಿನೆನಪುಗಳನ್ನು ಉಳಿಸುತ್ತವೆ. ವಿಲಕ್ಷಣ ವಿದ್ಯಮಾನಗಳು ನಗು ಉಕ್ಕಿಸಿಬಿಡುತ್ತವೆ. ಅಂತಹ ಒಂದು ಘಟನೆ ಇದು. ವಧುವಿಗೆ ಸಮರ್ಪಿಸುವ ಚಿನ್ನಾಭರಣ ಇಷ್ಟು ಕಡಿಮೇನಾ, ಅತ್ತೆಯ ಪ್ರಶ್ನೆಗೆ ಅಳಿಯ ಕಂಗಾಲು, ಮುಂದೆ ನಡೆದ ನಾಟಕೀಯ ವಿದ್ಯಮಾನ ಗಮನಸೆಳದಿದೆ.
ಲಕ್ನೋ: ಮದುವೆ ಮಂಟಪದಲ್ಲಿ ವಧು ಸಪ್ತಪದಿ ತುಳಿಯುವ ಹೊತ್ತಿನಲ್ಲಿ, ವಧುವಿನ ತಟ್ಟೆಯಲ್ಲಿಟ್ಟ ಚಿನ್ನದ ಆಭರಣ ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು. ಉತ್ತರ ಪ್ರದೇಶದ ಫೈಜ್‌ಗಂಜ್ ಬೆಹ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಸರ್ಕಾ ಗ್ರಾಮದಲ್ಲಿ ಈ ಘಟನೆ ನಡೆಯಿತು.
ಸಿಸರ್ಕಾ ಗ್ರಾಮದಲ್ಲಿ ಗುರುವಾರ (ಜೂನ್ 20) ಈ ಘಟನೆ ನಡೆದಿದ್ದು, ವಧುವಿಗೆ ತಟ್ಟೆಯಲ್ಲಿಟ್ಟು ಸಮರ್ಪಿಸಲು ತಂದ ಚಿನ್ನಾಭರಣ ಕಡಿಮೆ ಇದ್ದುದನ್ನು ನೋಡಿದ ವಧುವಿನ ತಾಯಿ, “ಏನಪ್ಪಾ, ಇಷ್ಟು ಕಡಿಮೆ ಚಿನ್ನಾಭರಣ ಇಟ್ಟಿದ್ದೀಯಲ್ಲ” ಎಂದು ವರನನ್ನು ಉದ್ದೇಶಿಸಿ ಕೇಳಿದ್ದಾರೆ. ಮದುವೆ ಮಂಟಪದಲ್ಲಿ ಅಷ್ಟೊಂದು ಜನರ ಎದುರು ಈ ಘಟನೆ ನಡೆದ ಕಾರಣ ಅವಮಾನಿತನಾದ ವರ ಕೂಡಲೇ ಅಲ್ಲಿಂದ ಎದ್ದು ನಿಂತು ಅತ್ತೆಯ ವಿರುದ್ಧ ಕೂಗಾಡಿದ. ಬಳಿಕ ಮದುವೆ ಬೇಡ ಎಂದ. ಎರಡೂ ಕಡೆಯವರ ನಡುವೆ ವಾಕ್ಸಮರ ಏರ್ಪಟ್ಟಿತು. ಮದುವೆ ಮುರಿದು ಬೀಳುವ ಹಂತ ತಲುಪಿತು ಎಂದು ಎಚ್‌ಟಿ ಕನ್ನಡದ ಸೋದರ ತಾಣ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.
ಏನಿದು ಘಟನೆ; ಅತ್ತೆ- ಅಳಿಯನ ನಡುವಿನ ಜಟಾಪಟಿ
ವರನು ಮದುವೆಯ ಮೆರವಣಿಗೆಯೊಂದಿಗೆ ಬಾಗಿಲನ್ನು ತಲುಪಿದಾಗ, ಹುಡುಗಿಯ ಮನೆಯವರು ಅವನನ್ನು ಸ್ವಾಗತಿಸಿದರು. ದ್ವಾರಾಚಾರ್ ಸಮಾರಂಭದ ನಂತರ ಉತ್ಸವ ಪ್ರಾರಂಭವಾಯಿತು. ಜಯಮಾಲಾ ಅವರ ವಿಧಿ ವಿಧಾನವೂ ಮುಗಿದಿದೆ. ಇದಾದ ನಂತರ ಏಳುಸುತ್ತಿನ ಸರದಿ ಬಂದಾಗ, ಅಲ್ಲಿ ನಾಟಕೀಯ ವಿದ್ಯಮಾನ ನಡೆಯಿತು. ಈ ವೇಳೆ ಇದ್ದಕ್ಕಿದ್ದಂತೆ ವರ ಮಂಟಪದಿಂದ ಎದ್ದು ಹೊರ ಹೋದ. ವಧುವಿನ ತಾಯಿ ವರನಿಗೆ ಅವಮಾನ ಮಾಡಿದ್ದಾರೆ ಎಂಬುದು ಆರೋಪ. ಹುಡುಗಿಗೆ ಕಡಿಮೆ ಆಭರಣವನ್ನು ತಂದಿಟ್ಟಿದ್ದಾರೆ ಎಂಬುದು ವಧುವಿನ ತಾಯಿಯ ಆಕ್ಷೇಪ. ಆದರೆ, ಇದು ಹೇಳಿದ್ದಕ್ಕಿಂತ ಹೆಚ್ಚೇ ಇದೆ ಎಂಬುದು ವರನ ಕಡೆಯವರ ವಾದ. ಈ ವಿಚಾರವಾಗಿ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ.
ವರನ ಕಡೆಯವರು ವರದಕ್ಷಿಣೆಗೆ ಒತ್ತಾಯಿಸಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವಧುವಿನ ತಾಯಿ ಆರೋಪಿಸಿದ್ದಾರೆ. ಇದರಿಂದಾಗಿ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗಣ್ಯರ ಜೊತೆಗೂಡಿ ಮಧ್ಯಸ್ಥಿಕೆ ನಡೆಸಿದರು.
ಪೊಲೀಸ್ ಠಾಣೆ ಮೆಟ್ಟಿಲೇರಿತು ವಿವಾದ
ವಧುವಿನ ಕಡೆಯವರು ಕೂಡ ವರನ ವಿರುದ್ಧ ವರದಕ್ಷಿಣೆ ಪಡೆದುಕೊಂಡ ಪ್ರತಿದೂರು ದಾಖಲಿಸಿದರು. ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನ ತನಕ ಎರಡೂ ಕಡೆಯವರ ಜೊತೆಗೆ ಸತತ ಮಾತುಕತೆ ನಡೆಯಿತು. ಪೊಲೀಸರ ಜೊತೆಗೆ ಗಣ್ಯರೂ ಮಧ್ಯಸ್ಥಿಕೆಯಲ್ಲಿ ಭಾಗವಹಿಸಿದ್ದರು.
ವಧುವಿಗೆ ಸಮರ್ಪಿಸುವ ತಟ್ಟೆಯಲ್ಲಿ ನೆಪಮಾತ್ರಕ್ಕೆ ಚಿನ್ನಾಭರಣ ಇಟ್ಟದ್ದು ಸರಿಯಲ್ಲ ಎಂಬುದು ವಧುವಿನ ತಾಯಿಯ ಅಸಮಾಧಾನ ಮತ್ತು ಆಕ್ಷೇಪ. ಇದನ್ನು ತಾನು ಅಲ್ಲೇ ವರನ ಬಳಿ ಕೇಳಿದೆ. ಆತ ಹೇಗಿದ್ದರೂ ಅಳಿಯನಾಗುವವನಲ್ಲವೆ. ಕೇಳಿದ್ದರಲ್ಲಿ ತಪ್ಪೇನಿದೆ ಎಂದು ವಧುವಿನ ತಾಯಿ ಕೇಳಿದರು.
ಅಷ್ಟೊಂದು ಜನರ ಎದುರು ಆ ರೀತಿ ಕೇಳಿದ ಕಾರಣ ಅವಮಾನ ಮಾಡಿದಂತೆ ಆಯಿತು. ಇದು ಸರಿಯಲ್ಲ ಎಂದು ವರ ತನ್ನ ವರಸೆಯನ್ನು ಪೊಲೀಸರ ಎದುರು ಹೇಳಿದ. ವರದಕ್ಷಿಣೆ ತಗೊಂಡಿದ್ದಾರೆ ಎಂಬ ಮಾತು ವಧುವಿನ ಕಡೆಯವರಿಂದ ಬಂತು. ಎಲ್ಲವನ್ನೂ ಆಲಿಸಿದ ಪೊಲೀಸರು ಮತ್ತು ಗಣ್ಯರು ಎರಡೂ ಕಡೆಯವರ ಮನವೊಲಿಸಿ ಮದುವೆ ನಡೆಯುವಂತೆ ನೋಡಿಕೊಂಡರು.
ಇದಾದ ನಂತರ ವಧು ಸಂತೋಷದಿಂದ ತನ್ನ ಅತ್ತೆಯ ಮನೆಗೆ ಹೊರಟಳು. ಇಬ್ಬರ ನಡುವೆ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ವಿವಾಹ ವಿಧಿ ಮುಗಿದು ದಂಪತಿ ಮನೆಗೆ ತೆರಳಿದರು ಎಂದು ಬಿಲ್ಸಿ ಪೊಲೀಸ್ ಠಾಣೆ ಅಪರಾಧ ನಿರೀಕ್ಷಕ ಉಮೇಶ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.