ಪ್ರಯಾಗ್‌ರಾಜ್: ಪತ್ನಿಯ ಶವ ತಗೊಂಡು ಆಸ್ಪತ್ರೆಯಿಂದ ಮನೆಗೆ ಬಂದರೆ ಬಾಗಿಲು ತೆರೆದಿತ್ತು, ಕಂಗಾಲಾಗಿ ಕುಸಿದು ಬಿದ್ದ ಪತಿ
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಪತ್ನಿಯ ಶವ ತಗೊಂಡು ಆಸ್ಪತ್ರೆಯಿಂದ ಮನೆಗೆ ಬಂದ ಪತಿ, ಬಾಗಿಲು ತೆರೆದಿರುವುದು ಕಂಡು ಓಡೋಡಿ ಹೋಗಿ ನೋಡಿ ಕಂಗಾಲಾಗಿ ಕುಸಿದು ಬಿದ್ದ ಘಟನೆ ನಡೆದಿದೆ. ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ ಚಿಕಿತ್ಸೆಗೆ ದೆಹಲಿ ಹೋದ ಕುಟುಂಬದ ಮನೆಯನ್ನೂ ಕಳ್ಳರು ದೋಚಿದ್ದಾರೆ.
ಲಖನೌ: ಪತ್ನಿಯ ಶವ ತಗೊಂಡು ಆಸ್ಪತ್ರೆಯಿಂದ ಮನೆಗೆ ಬಂದಾಗ, ಬಾಗಿಲು ತೆರೆದಿತ್ತು. ಒಳಗೆ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. ಇವನ್ನೆಲ್ಲ ನೋಡಿದ ಪತಿ ಪ್ರಜ್ಞೆ ತಪ್ಪಿ ಬಿದ್ದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ನಡೆದಿದೆ. ಹನುಮಂಗಂಜ್‌ನ ಸರೈನಾಯತ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮುನಿಪುರ ಬೆಲ್ವಾರ್ ಗ್ರಾಮದ ರೈಲ್ವೆಯ ನಿವೃತ್ತ ಅಕೌಂಟ್ಸ್ ಅಧಿಕಾರಿ ವಿಜಯ್ ಶಂಕರ್ ಪಾಂಡೆ ಈ ರೀತಿ ಎರಡೆರಡು ಆಘಾತಕ್ಕೆ ಒಳಗಾದವರು.
ಆಸ್ಪತ್ರೆಯಿಂದ ಪತ್ನಿಯ ಮೃತದೇಹದೊಂದಿಗೆ ದುಃಖತಪ್ತರಾಗಿ ಮನೆಗೆ ಬಂದಾಗ ಮನೆ ಕಳವು ಆಗಿರುವುದು ನೋಡಿ ವಿಜಯ್ ಶಂಕರ್ ಪಾಂಡೆ ಕಂಗಲಾದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಘಟನೆ ಕುರಿತು ಮಾಹಿತಿ ಪಡೆದರು ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.
ಪತ್ನಿಯ ಸಾವು, ಮನೆ ಕಳವು, ಕಂಗಾಲಾದ ರೈಲ್ವೆಯ ನಿವೃತ್ತ ಅಧಿಕಾರಿ, ಏನಿದು ಘಟನೆ
ವಿಜಯ್ ಶಂಕರ್ ಪಾಂಡೆ ಅವರ ಪತ್ನಿ ಸೀತಾದೇವಿ (65) ಹತ್ತು ದಿನಗಳ ಹಿಂದೆ ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದರು. ಅವರನ್ನು ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವಿಜಯ್ ಶಂಕರ್ ಅವರು ಆಸ್ಪತ್ರೆಯಲ್ಲಿ ಪತ್ನಿಯ ಆರೈಕೆಗಾಗಿ ತಂಗಿದ್ದರು. ಮನೆಗೆ ಬೀಗ ಹಾಕಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಸೀತಾದೇವಿ ಮಂಗಳವಾರ (ಜುಲೈ 16) ಬೆಳಗ್ಗೆ ಮೃತಪಟ್ಟರು.
ದುಃಖಿತರಾದ ವಿಜಯ್ ತನ್ನ ಪತ್ನಿಯ ಮೃತದೇಹದೊಂದಿಗೆ ಜಮುನಿಪುರ್ ಬೆಲ್ವಾರ್ ಗ್ರಾಮದಲ್ಲಿರುವ ಮನೆಗೆ ತಲುಪಿದಾಗ, ಮನೆ ಬಳಿ ಗ್ರಾಮಸ್ಥರು ನೆರೆದಿದ್ದರು. ವಿಜಯ್ ಆಂಬುಲೆನ್ಸ್‌ನಿಂದ ಪತ್ನಿಯ ಶವವನ್ನು ಕೆಳಗಿಳಿಸಿರಲಿಲ್ಲ. ಆಗಲೇ ಅವರಿಗೆ ಮನೆ ಕಳವು ಸುದ್ದಿ ತಿಳಿಯಿರು. ಕೂಡಲೇ ಮನೆಗೆ ಓಡಿ ನೋಡಿದಾಗ ಮುಂಭಾಗದ ಬಾಗಿಲ ಬೀಗದಿಂದ ಹಿಡಿದು ಕೊಠಡಿ, ಬೀಗದವರೆಗಿನ ಎಲ್ಲ ಬೀಗಗಳು ಮುರಿದು ಹೋಗಿರುವುದು ಕಂಡು ಬಂದಿದೆ. ಬೀರು ತಿಜೋರಿಯಲ್ಲಿಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾಗಿದ್ದವು. ಇದನ್ನು ನೋಡಿ ಕಂಗಾಲಾದ ವಿಜಯ್ ಶಂಕರ್ ಪಾಂಡೆ ಅಲ್ಲೇ ಕುಸಿದು ಕುಳಿತರು.
ಈ ಘಟನೆ ಕುರಿತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ, ಇನ್‌ಸ್ಪೆಕ್ಟರ್ ಪಂಕಜ್ ಕುಮಾರ್ ರಾಯ್ ಮಾತನಾಡಿ, "ವಿಜಯ್ ಅವರ ಪತ್ನಿಯ ಸಾವಿನ ಬಾಗಿಲಲ್ಲಿಯೇ ಜನಜಂಗುಳಿ ನೆರೆದಿತ್ತು. ಇಂತಹ ವಾತಾವರಣದಲ್ಲಿ ತನಿಖೆ ನಡೆಸುವುದು ಸರಿಯಲ್ಲ. ಅವರು ದೂರು ಕೂಡ ನೀಡಿಲ್ಲ. ದೂರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾಗಿ ವರದಿ ವಿವರಿಸಿದೆ.
ಮನೆಯವರು ಚಿಕಿತ್ಸೆಗಾಗಿ ದೆಹಲಿಗೆ ಹೋದರು, ಕಳ್ಳರು ಮನೆ ದೋಚಿದರು
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಉತ್ತರ ಪ್ರದೇಶ ನೈನಿ ಕೊತ್ವಾಲಿ ಪ್ರದೇಶದ ರೆಫ್ಯೂಜಿ ಕಾಲನಿಯ ಕುಟುಂಬವೊಂದು ಸದಸ್ಯರೊಬ್ಬರ ಚಿಕಿತ್ಸೆಗಾಗಿ ದೆಹಲಿಗೆ ತೆರಳಿತ್ತು. ಇದೇ ವೇಳೆ ಕಿಟಕಿ ಒಡೆದು ಅವರ ಮನೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚಿಸಿದ್ದಾರೆ. ಲಕ್ಷಾಂತರ ಮೌಲ್ಯದ ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ.
ಕಾಲೋನಿ ನಿವಾಸಿ ರಾಜ್‌ಕುಮಾರ್ ಅರೋರಾ ಅವರು ಕಂಪನಿಯೊಂದರಿಂದ ನಿವೃತ್ತರಾಗಿದ್ದಾರೆ. ಮಗ ಗೌರವ್ ಅರೋರಾ ಮುಂಬೈನಲ್ಲಿ ಮತ್ತು ಮಗಳು ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಾಜ್‌ಕುಮಾರ್ ಮನೆಗೆ ಬೀಗ ಹಾಕಿ ಚಿಕಿತ್ಸೆಗಾಗಿ ದೆಹಲಿಗೆ ತೆರಳಿದ್ದರು. ಆಗ ಈ ಕಳವು ನಡೆದಿತ್ತು.
ಗಿಡಗಳಿಗೆ ನೀರು ಹಾಕಲು ಹೋಗಿದ್ದ ಅವರ ಪರಿಚಯಸ್ಥರು, ಮನೆ ಕಳ್ಳತನವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್‌ಕುಮಾರ್ ಮಂಗಳವಾರ ಬೆಳಗ್ಗೆ ದೆಹಲಿಯಿಂದ ಬಂದು, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಗಿ ವರದಿ ಹೇಳಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.