Maharashtra CM: ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು; ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿಕೆ ಬೆನ್ನಿಗೆ ಹೆಚ್ಚಾಗಿದೆ ಕುತೂಹಲ
ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು? ದೇವೇಂದ್ರ ಫಡ್ನವಿಸ್, ಏಕನಾಥ ಶಿಂಧೆ, ಅಜಿತ್ ಪವಾರ್ ಈ ಮೂವರು ನಾಯಕರು ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾದವರೇ ಆಗಿದ್ದು, ಮಹಾಯುತಿ ಮೈತ್ರಿ ಸರ್ಕಾರವಾದ ಕಾರಣ ನಾಯಕ ಯಾರೆಂಬುದು ಅಂತಿಮವಾಗಿಲ್ಲ. ಈ ನಡುವೆ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿಕೆಗೆ ಬೆನ್ನಿಗೆ ಕುತೂಹಲ ಹೆಚ್ಚಾಗಿದೆ.
ಮುಂಬಯಿ: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದು ಎರಡು ದಿನ ಆಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಮಹಾಯುತಿಯ ನೇತೃತ್ವ ವಹಿಸಿರುವ ಬಿಜೆಪಿ 132 ಸ್ಥಾನ, ಶಿವಸೇನಾ 57, ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿದ್ದು, ವಿಧಾನಸಭೆಯ 288 ಸ್ಥಾನಗಳ ಪೈಕಿ 230 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಕಳೆದ ಅವಧಿಯಲ್ಲಿ ಇದೇ ಮೈತ್ರಿ ಸರ್ಕಾರ ಇತ್ತು. ಶಿವಸೇನಾ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳಾಗಿದ್ದರು. ಅದಕ್ಕೂ ಮೊದಲು 2014 ರಿಂದ 2019ರ ಅವಧಿಯಲ್ಲಿ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದರು. ಅಂದು ಬಿಜೆಪಿಗೆ 122 ಸ್ಥಾನಗಳಿದ್ದವು. ಈಗ 2024ರಲ್ಲಿ ಬಿಜೆಪಿಗೆ 132 ಸ್ಥಾನ ಬಂದಿದ್ದು, ದೇವೇಂದ್ರ ಫಡ್ನವಿಸ್ ಹೆಸರು ಮುಂಚೂಣಿಯಲ್ಲಿದ್ದರೂ ಮಹಾಯುತಿಯ ಮೂರು ಪಕ್ಷಗಳ ನಾಯಕರು ಒಂದೇ ಮಾತಿಗೆ ಬದ್ಧರಾಗಿ ಹೇಳಿಕೆ ನೀಡಿರುವುದು ವಿಶೇಷ. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿರುವಂತೆಯೇ ದೇವೇಂದ್ರ ಫಡ್ನವಿಸ್ ಮತ್ತು ಏಕನಾಥ ಶಿಂಧೆ ಹೇಳಿಕೆ ನೀಡಿದ್ದರು. ಎರಡು ದಿನಗಳ ಬಳಿಕ ಅಜಿತ್ ಪವಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದು ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು; ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿಕೆ
ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯೂ ಆಗಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್ ಸೋಮವಾರ, ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಸೂತ್ರದ ಬಗ್ಗೆ ಚರ್ಚೆ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ನಿರ್ಣಯವಾಗಲಿದೆ ಎಂದಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಎದುರು ಭರ್ಜರಿ ಗೆಲುವಿನ ಕುರಿತು ಮಾತನಾಡಿದ ಅವರು, ಮಹಾಯುತಿ ಸರ್ಕಾರದ ಲಡ್ಕಿ ಬಹಿನ್ ಯೋಜನೆ ಮುಂತಾದ ಉಪಕ್ರಮಗಳು ಜನಮನವನ್ನು ಗೆದ್ದುಕೊಂಡಿದೆ. ಈ ಸಲದ ವಿಧಾನಸಭೆಯಲ್ಲಿ ವಿಪಕ್ಷವೇ ಇಲ್ಲ. ವಿಪಕ್ಷ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಅಗತ್ಯ ಸದಸ್ಯ ಬಲವೂ ಅವರಿಗೆ ಇಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮಿತ್ರ ಪಕ್ಷಗಳ ನಡುವೆ ಯಾವುದೇ ಫಾರ್ಮುಲಾ ಇಲ್ಲ. ಆ ಬಗ್ಗೆ ಚರ್ಚೆ ನಡೆದಿಲ್ಲ. ನಾವು ಮೂರು ಮಿತ್ರ ಪಕ್ಷಗಳ ನಾಯಕರು ಕುಳಿತು ಮಾತುಕತೆ ನಡೆಸಿ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ನಿನ್ನೆ (ನವೆಂಬರ್ 24) ಎನ್‌ಸಿಪಿ ಶಾಸಕರು ನನ್ನನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಶಿವಸೇನಾ ಶಾಸಕರು ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಬಿಜೆಪಿಯಲ್ಲೂ ಅದೇ ಪ್ರಕ್ರಿಯೆ ನಡೆದಿದೆ. ನಾವು ಒಟ್ಟು ಕುಳಿತುಕೊಂಡು ಮುಂದಿನ ಅವಧಿಗೆ ಸ್ಥಿರ ಸರ್ಕಾರ ಕೊಡುವುದರ ಕುರಿತು ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅಜಿತ್ ಪವಾರ್ ಹೇಳಿದರು.
ಗೆಲುವಿಗೆ ಭರ್ಜರಿ ಕೊಡುಗೆ ನೀಡಿದ್ದು ಲಡ್ಕಿ ಬಹಿನ್ ಯೋಜನೆ
ಮಹಾಯುತಿಯ ಭರ್ಜರಿ ಗೆಲುವಿಗೆ ಕೊಡುಗೆ ನೀಡಿದ್ದು ಕಳೆದ ಅವಧಿಯಲ್ಲಿ ಜಾರಿಗೊಳಿಸಿದ ಲಡ್ಕಿ ಬಹಿನ್ ಯೋಜನೆ. ಈ ಚುನಾವಣೆಯಲ್ಲಿ ಲಡ್ಕಿ ಬಹಿನ್ ಯೋಜನೆಯನ್ನು ನಿರ್ಲಕ್ಷ್ಯ ಮಾಡುವಂತೆ ಇಲ್ಲ. ನಾವು ಮಹಿಳಾ ಮತದಾರರಿಗೆ ಕೃತಜ್ಞರಾಗಿದ್ದೇವೆ. ರಾಜ್ಯದ ಹಣಕಾಸು ಸಚಿವನಾಗಿ ಲಡ್ಕಿ ಬಹಿನ್ ಯೋಜನೆಯನ್ನು ನಾನು ವಿರೋಧಿಸಿದ್ದರೆ ಅದನ್ನು ಸದನದಲ್ಲಿ ಮಂಡಿಸುತ್ತಿರಲಿಲ್ಲ. ನಾನು ಬಹಳಷ್ಟು ನಿವೃತ್ತ ಹಣಕಾಸು ಅಧಿಕಾರಿಗಳ ಸಮಾಲೋಚನೆ ನಡೆಸಿ ಆನಂತರವೇ ಅದನ್ನು ಅಂತಿಮಗೊಳಿಸಿದ್ದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಇದೇ ವೇಳೆ ಹೇಳಿಕೊಂಡರು.