ರೈಲ್ವೆ ಮಂಡಳಿಗೆ ಹೊಸ ಬಾಸ್; 119 ವರ್ಷಗಳಲ್ಲಿ ದಲಿತ ಅಧಿಕಾರಿ ಮೊದಲ ಬಾರಿಗೆ ಸಿಇಒ; ಯಾರು ಈ ಸತೀಶ್ ಕುಮಾರ್?-who is satish kumar appointed as railway boards first dalit ceo and chairman in its 119 years history prs ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರೈಲ್ವೆ ಮಂಡಳಿಗೆ ಹೊಸ ಬಾಸ್; 119 ವರ್ಷಗಳಲ್ಲಿ ದಲಿತ ಅಧಿಕಾರಿ ಮೊದಲ ಬಾರಿಗೆ ಸಿಇಒ; ಯಾರು ಈ ಸತೀಶ್ ಕುಮಾರ್?

ರೈಲ್ವೆ ಮಂಡಳಿಗೆ ಹೊಸ ಬಾಸ್; 119 ವರ್ಷಗಳಲ್ಲಿ ದಲಿತ ಅಧಿಕಾರಿ ಮೊದಲ ಬಾರಿಗೆ ಸಿಇಒ; ಯಾರು ಈ ಸತೀಶ್ ಕುಮಾರ್?

Who is Satish Kumar: ರೈಲ್ವೆ ಮಂಡಳಿಯು 1986 ಬ್ಯಾಚ್‌ನ ರೈಲ್ವೇ ಮೆಕ್ಯಾನಿಕಲ್ ಇಂಜಿನಿಯರ್ ಸತೀಶ್ ಕುಮಾರ್ ಅವರನ್ನು ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ನೇಮಿಸಿದೆ. ಹಾಗಾದರೆ ಇವರು ಯಾರು?

ರೈಲ್ವೆ ಮಂಡಳಿ ನೂತನ ಅಧ್ಯಕ್ಷ ಮತ್ತು ಸಿಇಒ ಸತೀಶ್ ಕುಮಾರ್.
ರೈಲ್ವೆ ಮಂಡಳಿ ನೂತನ ಅಧ್ಯಕ್ಷ ಮತ್ತು ಸಿಇಒ ಸತೀಶ್ ಕುಮಾರ್.

Satish Kumar: ಭಾರತೀಯ ರೈಲ್ವೇ ನಿರ್ವಹಣಾ ಸೇವೆಯ (IRMS) ಅಧಿಕಾರಿ ಸತೀಶ್ ಕುಮಾರ್ ಅವರು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದಾರೆ. ಆಗಸ್ಟ್​ 27ರ ಮಂಗಳವಾರ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಇದರೊಂದಿಗೆ ಅವರು ರೈಲ್ವೆ ಮಂಡಳಿಯ ಉನ್ನತ ಹುದ್ದೆ ಅಲಂಕರಿಸಿದ ಪರಿಶಿಷ್ಟ ಜಾತಿ ಸಮುದಾಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, 119 ವರ್ಷಗಳ ಇತಿಹಾಸದಲ್ಲಿ ಮೊದಲ ದಲಿತ ಅಧ್ಯಕ್ಷರಾಗಲಿದ್ದಾರೆ.

ಸತೀಶ್ ಅವರ ಅಧಿಕಾರಾವಧಿಯು ಸೆಪ್ಟೆಂಬರ್ 1ರಿಂದ ಪ್ರಾರಂಭವಾಗಲಿದೆ. ಇದೇ ಆಗಸ್ಟ್ 31ರಂದು ನಿವೃತ್ತರಾಗಲಿರುವ ಜಯವರ್ಮ ಸಿನ್ಹಾ ಅವರ ಸ್ಥಾನವನ್ನು ಸತೀಶ್ ತುಂಬಲಿದ್ದಾರೆ. ಜಯ 2023ರ ಸೆಪ್ಟೆಂಬರ್ 1 ರಂದು ಸಿಇಒ ಆಗಿ ನೇಮಕಗೊಂಡಿದ್ದರು. ಇವರು ರೈಲ್ವೆ ಮಂಡಳಿಯ ಸಿಇಒ ಆಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ. ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಹುದ್ದೆಗೆ ಸತೀಶ್ ಅವರನ್ನು ನೇಮಿಸಲು ಸಂಪುಟದ ನೇಮಕಾತಿ ಸಮಿತಿ (ACC) ಅನುಮೋದನೆ ನೀಡಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಈ ಆದೇಶ ನೀಡಿದೆ. ಈ ನೇಮಕಾತಿಯು ಅಪೆಕ್ಸ್ ವೇತನ ಶ್ರೇಣಿಯಲ್ಲಿದೆ (7ನೇ ಕೇಂದ್ರ ವೇತನ ಆಯೋಗದ ಪ್ರಕಾರ ವೇತನ ಮಟ್ಟ 17). ಹಾಗಿದ್ದರೆ ರೈಲ್ವೆ ಮಂಡಳಿ ಸಿಇಒ ಹುದ್ದೆ ಅಲಂಕರಿಸಿದ ಮೊದಲ ದಲಿತ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸತೀಶ್ ಕುಮಾರ್ ಅವರು ಯಾರು? 

ಸತೀಶ್ ಕುಮಾರ್​ ಯಾರು?

ಇಂಡಿಯನ್ ರೈಲ್ವೇ ಸರ್ವಿಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್ (IRSME)ನ 1986-ಬ್ಯಾಚ್ ಅಧಿಕಾರಿಯಾಗಿರುವ ಸತೀಶ್ ಕುಮಾರ್ ರೈಲ್ವೆಗೆ ಗಮನಾರ್ಹ ಕೊಡುಗೆಗಳನ್ನು ನೀಡುವ ಮೂಲಕ 38 ವರ್ಷಗಳ ಕಾಲ ವಿಶಿಷ್ಟವಾದ ವೃತ್ತಿಜೀವನ ಹೊಂದಿದ್ದಾರೆ. ಆರಂಭದಲ್ಲಿ ಸೆಂಟ್ರಲ್ ರೈಲ್ವೇಯ ಝಾನ್ಸಿ ವಿಭಾಗ ಮತ್ತು ವಾರಣಾಸಿಯ ಡೀಸೆಲ್ ಲೊಕೊಮೊಟಿವ್ ವರ್ಕ್​​ನಲ್ಲಿ (BLW) ಸೇವೆ ಸಲ್ಲಿಸಿದ್ದರು.

ಈಶಾನ್ಯ ರೈಲ್ವೆ, ಗೋರಖ್‌ಪುರ ಮತ್ತು ಪಟಿಯಾಲ ಲೊಕೊಮೊಟಿವ್ ವರ್ಕ್ಸ್‌ನಲ್ಲೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜೈಪುರದ ಪ್ರತಿಷ್ಠಿತ ಮಾಳವೀಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಎನ್‌ಐಟಿ)ಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್​​ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಅವರು, ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಯಿಂದ ಆಪರೇಷನ್ ಮ್ಯಾನೇಜ್‌ಮೆಂಟ್ ಮತ್ತು ಸೈಬರ್ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೂಡ ಓದಿದ್ದಾರೆ.

2017ರ ಏಪ್ರಿಲ್​ನಿಂದ ರಿಂದ 2019 ರವರೆಗೆ ಉತ್ತರ ರೈಲ್ವೆಯ ಲಕ್ನೋ ವಿಭಾಗಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ (DRM) ಸೇವೆ ಸಲ್ಲಿಸಿದ್ದರು. ನವೆಂಬರ್ 8, 2022 ರಂದು, ಅವರು ಉತ್ತರ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಜೈಪುರದಲ್ಲಿ ವಾಯುವ್ಯ ರೈಲ್ವೆಯಲ್ಲಿ ಹಿರಿಯ ಉಪ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿದ್ದರು.

ಕುಮಾರ್ ಅವರು 2024ರ ಜನವರಿ 05 ರಂದು ರೈಲ್ವೆ ಸಚಿವಾಲಯದಲ್ಲಿ ರೈಲ್ವೆ ಮಂಡಳಿಯ ಸದಸ್ಯರಾಗಿ (ಟ್ರಾಕ್ಷನ್ ಮತ್ತು ರೋಲಿಂಗ್ ಸ್ಟಾಕ್) ಅಧಿಕಾರ ವಹಿಸಿಕೊಂಡಿದ್ದರು. ಜುಲೈ 29 ರಂದು ಕೇಂದ್ರ ಸರ್ಕಾರವು ನಿರ್ಗಮಿತ ರೈಲ್ವೆ ಮಂಡಳಿಯ ಅಧ್ಯಕ್ಷೆ ಜಯವರ್ಮ ಸಿನ್ಹಾ ಅವರನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಆಡಳಿತ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

 

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.