Kharge on Communalism: ಎಲ್ಲರೂ ಹಿಂದೂಗಳು ಎಂದಾದರೆ ಪರಿಶಿಷ್ಟ ಜಾತಿಯವರನ್ನು ದೇವಸ್ಥಾನದೊಳಕ್ಕೆ ಬಿಡಿ: ಖರ್ಗೆ ಸವಾಲು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kharge On Communalism: ಎಲ್ಲರೂ ಹಿಂದೂಗಳು ಎಂದಾದರೆ ಪರಿಶಿಷ್ಟ ಜಾತಿಯವರನ್ನು ದೇವಸ್ಥಾನದೊಳಕ್ಕೆ ಬಿಡಿ: ಖರ್ಗೆ ಸವಾಲು

Kharge on Communalism: ಎಲ್ಲರೂ ಹಿಂದೂಗಳು ಎಂದಾದರೆ ಪರಿಶಿಷ್ಟ ಜಾತಿಯವರನ್ನು ದೇವಸ್ಥಾನದೊಳಕ್ಕೆ ಬಿಡಿ: ಖರ್ಗೆ ಸವಾಲು

ಸಮಸ್ತ ಹಿಂದೂಗಳು ಒಂದೇ ಎಂದಾದರೆ ಪರಿಶಿಷ್ಟ ಜಾತಿಯವರನ್ನು, ಮೇಲ್ವರ್ಗದವರು ತಮ್ಮ ದೇವಸ್ಥಾನದೊಳಗೆ ಬಿಟ್ಟುಕೊಳ್ಳಬೇಕು. ಆಗ ಮಾತ್ರ ಸಮಾನತೆಗೆ ಅರ್ಥ ಬರುತ್ತದೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಖರ್ಗೆ ಅವರು ರಾಜ್ಯಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದರು. ಈ ಕುರಿತು ಇಲ್ಲಿದೆ ಮಾಹಿತಿ..

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ (ANI)

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಕೋಮುವಾದವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿರುವ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರದ ಸಚಿವರು ಹಾಗೂ ಸಂಸದರು ಬಾಯಿ ತೆಗೆದರೆ ಹಿಂದೂ-ಮುಸ್ಲಿಂ ಎಂದು ಬಡಿದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿ ಕೋಮುಭಾವನೆ ಹೆಚ್ಚಾಗುತ್ತಿದೆ. ಧರ್ಮಗಳ ನಡುವೆ ಅಂತರ ಸೃಷ್ಟಿಸಲಾಗುತ್ತಿದೆ. ಇದೆಲ್ಲಾ ಕೇವಲ ಅಧಿಕಾರಕ್ಕಾಗಿ ಎಂಬುದು ಜಗಜ್ಜಾಹೀರಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು.

ದೇಶದಲ್ಲಿ ಹೊದ್ದು ಮಲಗುವಷ್ಟು ಸಮಸ್ಯೆಗಳಿವೆ. ಆದರೆ ಮೋದಿ ಸರ್ಕಾರದ ಸಚಿವರು ಹಾಗೂ ಸಂಸದರು ಹಿಂದೂ-ಮುಸ್ಲಿಂ ಎಂದು ಕಿಡಿ ಹೊತ್ತಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಸಮಾಜವನ್ನು ಒಡೆಯುವುದು ಅತ್ಯಂತ ಆಘಾತಕಾರಿ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.

ಎಲ್ಲ ಧರ್ಮಗಳ ಸಾರ ಒಂದೇ. ಎಲ್ಲ ಧರ್ಮಗಳೂ ಶಾಂತಿ ಹಾಗೂ ಪ್ರೀತಿಯನ್ನು ಹಂಚುತ್ತವೆ. ಆದರೆ ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವುದು ಮಾನವೀಯ ಲಕ್ಷಣವಲ್ಲ. ಈ ಕೋಮುದ್ವೇಷವನ್ನು ಕಡಿಮೆ ಮಾಡಿ, ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಬೇಕಾದ ತುರ್ತು ಅಗತ್ಯವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಸಮಸ್ತ ಹಿಂದೂಗಳು ಒಂದೇ ಎಂದಾದರೆ ಪರಿಶಿಷ್ಟ ಜಾತಿಯವರನ್ನು, ಮೇಲ್ವರ್ಗದವರು ತಮ್ಮ ದೇವಸ್ಥಾನದೊಳಗೆ ಬಿಟ್ಟುಕೊಳ್ಳಬೇಕು. ಆಗ ಮಾತ್ರ ಸಮಾನತೆಗೆ ಅರ್ಥ ಬರುತ್ತದೆ. ಪರಿಶಿಷ್ಟ ಜಾತಿಯವರಿಗೆ ದೇವಸ್ಥಾನದೊಳಗೆ ಬಿಟ್ಟಾಗ ಮಾತ್ರ, ಅವರಿಗೂ ಸಮಾನ ಅಧಿಕಾರ ಇದೆ ಎಂಬ ಭಾವನೆ ಮೂಡುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ನುಡಿದರು.

ಕೆಳವರ್ಗದವರ ಮನೆಯಲ್ಲಿ ಊಟ ಮಾಡುವುದು, ಅವರೊಂದಿಗೆ ಫೋಟೋ ತೆಗೆದುಕೊಂಡು ಅದನ್ನು ಪ್ರಚಾರ ಮಾಡುವುದು ಇತ್ತೀಚಿಗೆ ಫ್ಯಾಶನ್‌ ಆಗಿ ಬಿಟ್ಟಿದೆ. ಕೆಳವರ್ಗದವರ ಮನೆಯಲ್ಲಿ ಊಟ ಮಾಡುವುದು ವಿಶೇಷ ಸಂಗತಿಯೇ ಎಂದು ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರಶ್ನಿಸಿದರು.

ಕೆಳವರ್ಗದವರ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ ಅವರನ್ನು ದೇವಸ್ಥಾನದೊಳಗೆ ಬಿಡಿ. ಅವರಿಗೆ ಸಮಾನ ಅವಕಾಶ ಕೊಡಿ. ಅದನ್ನು ಬಿಟ್ಟು ಅವರ ಮನೆಯಲ್ಲಿ ಊಟ ಮಾಡಿ ಫೋಟೋ ತೆಗೆದುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಗುಡುಗಿದರು.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆ, ಯಾರ ವಿರುದ್ಧವೂ ಕೈಗೊಂಡ ,ಯಾತ್ರೆಯಲ್ಲ. ದೇಶದ ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಕೈಗೊಂಡ ಯಾತ್ರೆ ಅದಾಗಿತ್ತು. ದೇಶದ ಜನ ಕೋಮುವಾದದ ವಿರುದ್ಧ ಇದ್ದಾರೆ ಎಂಬ ಸತ್ಯವನ್ನು ನಾವು ಈ ಯಾತ್ರೆಯಿಂದ ಕಂಡುಕೊಂಡಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಈ ಎಲ್ಲಾ ವಿಷಯಗಳಲ್ಲಿ ಪ್ರಧಾನಿ ಮೋದಿ ಮೌನವಾಗಿರುವುದು, ಇದೆಲ್ಲಕ್ಕಿಂತಲೂ ಹೆಚ್ಚಿನ ಆಘಾತಕಾರಿ ಸಂಗತಿ. ಪ್ರಧಾನಿ ಮೋದಿ ತಮ್ಮವರನ್ನು ಸುಮ್ಮನಾಗಿಸಬೇಕು. ಇಲ್ಲದಿದ್ದರೆ ಅವರ ದ್ವೇಷ ಭಾಷಣಗಳು ದೇಶವನ್ನು ಒಡೆಯಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಆಗ್ರಹಿಸಿದರು.

ಇಂದಿನ ಪ್ರಮುಖ ಸುದ್ದಿ

Lost Decade: ನಿಮ್ಮ ಅವಾಂತರಗಳಿಂದ ಭಾರತ ಒಂದು ದಶಕವನ್ನು ಕಳೆದುಕೊಂಡಿದೆ: ವಿಪಕ್ಷಗಳತ್ತ ಚಾಟಿ ಬೀಸಿದ ಪ್ರಧಾನಿ!

2004-2014 ಭಾರತದ ಪಾಲಿಗೆ ಅಭೂತಪೂರ್ವ ಅವಕಾಶಗಳನ್ನು ಕಳೆದುಕೊಂಡ ದಶಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಭಾಷಣ ಮಾಡಿದ ಪ್ರಧಾನಿ ಮೋದಿ, ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.