ಮಲೇಷ್ಯಾ ಓಪನ್ ಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್; 2ನೇ ಸೂಪರ್ 1000 ಪ್ರಶಸ್ತಿಗೆ ಒಂದೇ ಹೆಜ್ಜೆ
ಕನ್ನಡ ಸುದ್ದಿ  /  ಕ್ರೀಡೆ  /  ಮಲೇಷ್ಯಾ ಓಪನ್ ಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್; 2ನೇ ಸೂಪರ್ 1000 ಪ್ರಶಸ್ತಿಗೆ ಒಂದೇ ಹೆಜ್ಜೆ

ಮಲೇಷ್ಯಾ ಓಪನ್ ಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್; 2ನೇ ಸೂಪರ್ 1000 ಪ್ರಶಸ್ತಿಗೆ ಒಂದೇ ಹೆಜ್ಜೆ

Satwiksairaj Rankireddy and Chirag Shetty: ಭಾರತದ ಸ್ಟಾರ್‌ ಜೋಡಿಯಾದ ಸಾತ್ವಿಕ್ ಮತ್ತು ಚಿರಾಗ್ ತಮ್ಮ ಎರಡನೇ ಸೂಪರ್ 1000 ಪ್ರಶಸ್ತಿಯಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.

ಚಿರಾಗ್ ಶೆಟ್ಟಿ (ಬಲ) ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ
ಚಿರಾಗ್ ಶೆಟ್ಟಿ (ಬಲ) ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (AFP)

2024ರ ಮೊದಲ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಮುತ್ತಿಕ್ಕಲು ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಜೋಡಿ ಸಜ್ಜಾಗಿದೆ. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ‌ (Satwiksairaj Rankireddy and Chirag Shetty) ಮಲೇಷ್ಯಾ ಓಪನ್ ಸೂಪರ್ 1000 (Malaysia Open Super 1000) ಪುರುಷರ ಡಬಲ್ಸ್‌ ಫೈನಲ್‌ ಪ್ರವೇಶಿಸಿದ್ದಾರೆ.

ಜನವರಿ 12ರ ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಕೊರಿಯಾದ ಸಿಯೊ ಸೆಯುಂಗ್ ಜೇ ಮತ್ತು ಕಾಂಗ್ ಮಿನ್ ಹ್ಯುಕ್ದಿಶ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದ ಭಾರತದ ಜೋಡಿಯು ವರ್ಷದ ಮೊದಲ ಫೈನಲ್‌ಗೆ ಲಗ್ಗೆ ಇಟ್ಟಿದೆ.

ವಿಶ್ವದ ಎರಡನೇ ಶ್ರೇಯಾಂಕದ ಭಾರತೀಯ ಜೋಡಿಯು ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದರು. ಉಭಯ ದೇಶಗಳ ನೆಕ್‌ ಟು ನೆಕ್‌ ಫೈಟ್‌ನಲ್ಲಿ ಗೆಲುವು ಭಾರತದ್ದಾಯಿತು. ಎರಡನೇ ಗೇಮ್‌ನಲ್ಲಿ ರೋಚಕ ಕಾದಾಟ ನಡೆಸಿದ ಈ ಜೋಡಿ, ರೋಚಕವಾಗಿ ಕಂಬ್ಯಾಕ್‌ ಮಾಡಿದರು. ಅಂತಿಮವಾಗಿ ಕೊರಿಯನ್ ಜೋಡಿ ವಿರುದ್ಧ 21-18 22-20 ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದರು.

ಇದನ್ನೂ ಓದಿ | ಮಲೇಷ್ಯಾ ಓಪನ್‌: ಸೆಮಿ ಕದನಕ್ಕೆ ಸಾತ್ವಿಕ್-ಚಿರಾಗ್ ಮಾಸ್ ಎಂಟ್ರಿ; ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ-ತನಿಶಾಗೆ ಸೋಲು

ಸಾತ್ವಿಕ್ ಮತ್ತು ಚಿರಾಗ್ ತಮ್ಮ ಎರಡನೇ ಸೂಪರ್ 1000 ಪ್ರಶಸ್ತಿಯಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಇವರಿಬ್ಬರು ಇಂಡೋನೇಷಿಯನ್ ಓಪನ್‌ ಮೂಲಕ ಮೊದಲನೆ ಸೂಪರ್ 1000 ಪ್ರಶಸ್ತಿಗೆ ಮುತ್ತಕ್ಕಿದ್ದರು. ಕಳೆದ ಜೂನ್‌ನಲ್ಲಿಯೂ ಸೆಮಿಫೈನಲ್‌ ಪಂದ್ಯದಲ್ಲಿ ಭಾರತೀಯ ಜೋಡಿಯು ಇದೇ ಕೊರಿಯಾ ಜೋಡಿಯನ್ನು ಸೋಲಿಸಿದ್ದರು. ಸಾತ್ವಿಕ್ ಮತ್ತು ಚಿರಾಗ್ ಈಗ ವಿಶ್ವದ 3ನೇ ಶ್ರೇಯಾಂಕದ ಜೋಡಿ ವಿರುದ್ಧ‌ 3-1 ಅಂತರದ ಗೆಲುವಿನ ದಾಖಲೆ ಹೊಂದಿದ್ದಾರೆ.

ಏಷ್ಯನ್ ಚಾಂಪಿಯನ್‌ಶಿಪ್, ಇಂಡೋನೇಷಿಯನ್ ಸೂಪರ್ 1000, ಕೊರಿಯಾ ಸೂಪರ್ 500 ಮತ್ತು ಸ್ವಿಸ್ ಓಪನ್ ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿರುವ ಸಾತ್ವಿಕ್ ಮತ್ತು ಚಿರಾಗ್ ಕಳೆದ ವರ್ಷ ಭಾರತದ ಅತ್ಯಂತ ಯಶಸ್ವಿ ಆಟಗಾರರಾಗಿದ್ದಾರೆ. ಒಂದೇ ವರ್ಷ ಒಟ್ಟು ಆರು ಪ್ರಶಸ್ತಿ ಗೆದ್ದಿರುವ ಅವರು, ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾ ಮಾಸ್ಟರ್ಸ್ ಸೂಪರ್ 750ರ ಫೈನಲ್‌ಗೆ ತಲುಪಿದ್ದರು

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.