Korea Open: ಮತ್ತೆ ಮಿಂಚಿದ ಭಾರತದ ಬ್ಯಾಡ್ಮಿಂಟನ್‌ ಜೋಡಿ; ಕೊರಿಯಾ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್
ಕನ್ನಡ ಸುದ್ದಿ  /  ಕ್ರೀಡೆ  /  Korea Open: ಮತ್ತೆ ಮಿಂಚಿದ ಭಾರತದ ಬ್ಯಾಡ್ಮಿಂಟನ್‌ ಜೋಡಿ; ಕೊರಿಯಾ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್

Korea Open: ಮತ್ತೆ ಮಿಂಚಿದ ಭಾರತದ ಬ್ಯಾಡ್ಮಿಂಟನ್‌ ಜೋಡಿ; ಕೊರಿಯಾ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್

Satwiksairaj Rankireddy and Chirag Shetty: ಇಂಡೋನೇಷ್ಯಾ ಓಪನ್ ಸೂಪರ್ 1000 ಗೆದ್ದ ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಜೋಡಿ, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇದೀಗ ಕೊರಿಯಾ ಓಪನ್‌ ಗೆಲ್ಲುವತ್ತ ಮುನ್ನಡೆದಿದ್ದಾರೆ.

ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸಂಭ್ರಮ
ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸಂಭ್ರಮ (BAI Media twitter)

ಭಾರತದ ಸ್ಟಾರ್‌ ಷಟ್ಲರ್‌ಗಳಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಮತ್ತೆ ಪರಾಕ್ರಮ ಮೆರೆದಿದ್ದಾರೆ. ಶುಕ್ರವಾರ (ಜುಲೈ 21) ನಡೆದ ಕೊರಿಯಾ ಓಪನ್ ಸೂಪರ್ 500 (Korea Open Super 500) ಟೂರ್ನಿಯಲ್ಲಿ ಭಾರತದ ಸ್ಟಾರ್ ಜೋಡಿ ಪುರುಷರ ಡಬಲ್ಸ್‌ ವಿಭಾಗದಲ್ಲಿ ಜಪಾನ್‌ನ ಟಕುರೊ ಹಾಕಿ ಮತ್ತು ಯುಗೊ ಕೊಬಯಾಶಿ ಯೆಯೊಸು ವಿರುದ್ಧ ನೇರ ಗೇಮ್‌ಗಳಿಂದ ಜಯ ಸಾಧಿಸಿದ್ದಾರೆ. ಆ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ವಿಶ್ವದ ಮೂರನೇ ಶ್ರೇಯಾಂಕದ ಭಾರತದ ಜೋಡಿ, ಐದನೇ ಶ್ರೇಯಾಂಕದ ಜಪಾನ್ ಜೋಡಿಯನ್ನು 21-14 ಹಾಗೂ 21-17ರಿಂದ ಸುಲಭವಾಗಿ ಮಣಿಸಿದರು. ಕೇವಲ 40 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು.

ಸಾತ್ವಿಕ್ ಮತ್ತು ಚಿರಾಗ್ ಅವರು ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಜೋಡಿಯಾದ ಚೀನಾದ ವೀ ಕೆಂಗ್ ಲಿಯಾಂಗ್ ಮತ್ತು ಚಾಂಗ್ ವಾಂಗ್ ಅವರನ್ನು ಎದುರಿಸಲಿದ್ದಾರೆ. ಈ ಜೋಡಿಯು 2021ರಲ್ಲಿ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು. ಹೀಗಾಗಿ ಭಾರತದ ಜೋಡಿಗೆ ಸೆಮಿಕದನದಲ್ಲಿ ಕಠಿಣ ಸವಾಲು ಎದುರಾಗಲಿದೆ.

ಇಂಡೋನೇಷ್ಯಾ ಓಪನ್ ಬಳಿಕ ಮತ್ತೊಂದು ಗೆಲುವಿನ ನಿರೀಕ್ಷೆ

ಈಗಾಗಲೇ ಪಿವಿ ಸಿಂಧು, ಎಚ್‌ಎಸ್ ಪ್ರಣಯ್, ಕಿಡಂಬಿ ಶ್ರೀಕಾಂತ್ ಸೇರಿದಂತೆ ಇತರ ಆಟಗಾರರು ಪ್ರಶಸ್ತಿ ಸುತ್ತಿನಿಂದ ಹೊಡಬಿದ್ದಿದ್ದಾರೆ. ಹೀಗಾಗಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಮೇಲೆ ಭರವಸೆ ಹೆಚ್ಚಿದೆ. ಕಳೆದ ತಿಂಗಳು ಇಂಡೋನೇಷ್ಯಾ ಓಪನ್ ಸೂಪರ್ 1000 ಗೆದ್ದ ಈ ಜೋಡಿ, ಮತ್ತೊಂದು ಟೂರ್ನಿ ಗೆಲ್ಲುವತ್ತ ಹೆಜ್ಜೆ ಹಾಕಿದೆ.

ರೋಚಕ ಕಾದಾಟ

ಕ್ವಾರ್ಟರ್‌ ಫೈನಲ್‌ ಪಂದ್ಯವು ರೋಚಕವಾಗಿ ಸಾಗಿತು. ಎರಡನೇ ಗೇಮ್‌ನಲ್ಲಿ 3-6 ಹಿನ್ನಡೆಯಲ್ಲಿದ್ದ ಭಾರತೀಯರು ನಿಧಾನಗತಿಯಲ್ಲಿ ಮತ್ತೆ ಪುಟಿದೆದ್ದರು. ಆ ಬಳಿಕ ಸತತ ಆರು ಪಾಯಿಂಟ್‌ಗಳನ್ನು ಗಳಿಸಿ 14-9ರ ಮುನ್ನಡೆ ಸಾಧಿಸಿದರು. ಭಾರತೀಯರಿಗೆ ತೀವ್ರ ಪೈಪೋಟಿ ನೀಡಿದ ಜಪಾನಿನ ಜೋಡಿ ಕೂಡಾ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಆಕ್ರಮಣಕಾರಿಯಾಗಿ ಆಡಿ ಒಂದು ಹಂತದಲ್ಲಿ 16-16ರಿಂದ ಅಂಕ ಸಮಬಲಗೊಂಡಿತು. ಆ ಬಳಿಕ ಅನಗತ್ಯ ತಪ್ಪುಗಳನ್ನು ಮಾಡದ ಭಾರತೀಯರು ನಿರಂತರ ಅಂಕಗಳನ್ನು ಗಳಿಸಿ ಗೆದ್ದರು.

ಭಾರತದ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಯುವ ಬ್ಯಾಡ್ಮಿಂಟನ್ ತಾರೆಗಳಾದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಜೋಡಿ ಚರಿತ್ರೆಯ ಪುಟಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಬ್ಯಾಡ್ಮಿಂಟನ್ ಸೂಪರ್-1000 ಫೈನಲ್​ ಪಂದ್ಯದಲ್ಲಿ (Indonesia Open 2023) ಅಮೋಘ ಜಯ ಸಾಧಿಸಿ, ಚಾರಿತ್ರಿಕ ಸಾಧನೆ ಮಾಡಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.