PKL 10: ತೆಲುಗು ಟೈಟಾನ್ಸ್ ಮಣಿಸಿದ ವಾರಿಯರ್ಸ್; ಪವನ್ ಸೆಹ್ರಾವತ್ ತಂಡಕ್ಕೆ ಹತ್ತನೇ ಹೀನಾಯ ಸೋಲು
ಕನ್ನಡ ಸುದ್ದಿ  /  ಕ್ರೀಡೆ  /  Pkl 10: ತೆಲುಗು ಟೈಟಾನ್ಸ್ ಮಣಿಸಿದ ವಾರಿಯರ್ಸ್; ಪವನ್ ಸೆಹ್ರಾವತ್ ತಂಡಕ್ಕೆ ಹತ್ತನೇ ಹೀನಾಯ ಸೋಲು

PKL 10: ತೆಲುಗು ಟೈಟಾನ್ಸ್ ಮಣಿಸಿದ ವಾರಿಯರ್ಸ್; ಪವನ್ ಸೆಹ್ರಾವತ್ ತಂಡಕ್ಕೆ ಹತ್ತನೇ ಹೀನಾಯ ಸೋಲು

Pro Kabaddi League: ತೆಲುಗು ಟೈಟಾನ್ಸ್ ಸೋಲಿಸುವ ಮೂಲಕ ಬೆಂಗಾಲ್ ವಾರಿಯರ್ಸ್ ತಂಡವು ಪಿಕೆಎಲ್‌ 10ನೇ ಆವೃತ್ತಿಯಲ್ಲಿ ಸತತ ನಾಲ್ಕು ಪಂದ್ಯಗಳ ಸೋಲಿನ ಸರಣಿಯನ್ನು ಕೊನೆಗೊಳಿಸಿತು.

ಬೆಂಗಾಲ್‌ ವಾರಿಯರ್ಸ್‌ಗೆ ಗೆಲುವು
ಬೆಂಗಾಲ್‌ ವಾರಿಯರ್ಸ್‌ಗೆ ಗೆಲುವು (ProKabaddi X)

ಡಿಫೆಂಡರ್ ವೈಭವ್ ಗರ್ಜೆ ಅಮೋಘ ಟ್ಯಾಕಲ್‌ಗಳ ನೆರವಿಂದ ಪ್ರೊ ಕಬಡ್ಡಿ ಲೀಗ್‌ನಲ್ಲಿ (Pro Kabaddi League) ಬೆಂಗಾಲ್ ವಾರಿಯರ್ಸ್ (Bengal Warriors) ತಂಡವು 46-26 ಅಂಕಗಳ ಅಂತದಿಂದ ತೆಲುಗು ಟೈಟಾನ್ಸ್ (Telugu Titans) ತಂಡವನ್ನು ಸೋಲಿಸಿದೆ. ಆ ಮೂಲಕ ಸತತ ನಾಲ್ಕು ಪಂದ್ಯಗಳ ಸೋಲಿನ ಸರಣಿ ಕೊನೆಗೊಳಿಸಿದೆ.

ಅತ್ತ ತೆಲುಗು ನಾಯಕ ಪವನ್ ಸೆಹ್ರಾವತ್ ಏಕಾಂಗಿ ಹೋರಾಟ ಫಲಪ್ರದವಾಗಲಿಲ್ಲ. ಮತ್ತೊಂದು ಸೂಪರ್ 10 ಪೂರ್ಣಗೊಳಿಸಿ, ಪಂದ್ಯದಲ್ಲೇ ಅಧಿಕ ಅಂಕ ಕಲೆ ಹಾಕಿದರೂ ತಂಡದ ಗೆಲುವು ಸಾಧ್ಯವಾಗಲಿಲ್ಲ. ಪಿಕೆಎಲ್‌ ಇತಿಹಾಸದಲ್ಲೇ ದುಬಾರಿ ಆಟಗಾರನ ನಾಯಕತ್ವದ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಇದನ್ನೂ ಓದಿ | ಶಮಿಗೆ ಅರ್ಜುನ, ಚಿರಾಗ್-ಸಾತ್ವಿಕ್‌ಗೆ ಖೇಲ್ ರತ್ನ; 2023ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ

ಬೆಂಗಾಲ್ ವಾರಿಯರ್ಸ್ ತಂಡವು ತನ್ನ ನಾಯಕ ಮತ್ತು ಪ್ರಮುಖ ರೈಡರ್ ಮಣಿಂದರ್ ಸಿಂಗ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ನಿತಿನ್ ಕುಮಾರ್‌ ಪಂದ್ಯದಲ್ಲಿ ಗಮನ ಸೆಳೆದರು. ಭರ್ಜರಿ 9 ರೈಡ್‌ ಪಾಯಿಂಟ್‌ ಕಲೆ ಹಾಕಿ ಮಿಂಚಿದರು.

ಪಂದ್ಯದುದ್ದಕ್ಕೂ ಟೈಟಾನ್ಸ್‌ನ ನಾಯಕ ಪವನ್ ಅಸಹಾಯಕರಾದರು. ಅವರ ಹೊರತಾಗಿ ತಂಡದ ರೈಡಿಂಗ್‌ ಸಪ್ಪೆಯಾಯ್ತು. ವಾರಿಯರ್ಸ್‌ ಬಳಗದ ಡಿಫೆಂಡಿಂಗ್‌ ಟೈಟಾನ್ಸ್‌ ದಾಂಡಿಗರನ್ನು ಕಟ್ಟಿಹಾಕಿತು.

ಮೊದಾಲರ್ಧದ ವೇಳೆಗೆ ಮಾಜಿ ಚಾಂಪಿಯನ್‌ಗಳು 27-10ರಿಂದ ಮುನ್ನಡೆ ಸಾಧಿಸಿದರು. ಮೊದಲಾರ್ಧದಲ್ಲಿ ಎರಡು ಬಾರಿ ಆಲೌಟ್‌ ಆಗಿದ್ದ ಟೈಟಾನ್ಸ್‌, ದ್ವಿತೀಯಾರ್ಧದಲ್ಲಿ ವಾರಿಯರ್ಸ್‌ಗೆ ಶಾಕ್‌ ಕೊಟ್ಟಿತು. 33ನೇ ನಿಮಿಷದಲ್ಲಿ ಪವನ್ ಅವರು ಶುಭಂ ಮತ್ತು ಆದಿತ್ಯ ಶಿಂಧೆ ಅವರನ್ನು ಔಟ್‌ ಮಾಡಿ ತಂಡವನ್ನು ಆಲ್ ಔಟ್ ಮಾಡಿದರು. ಈ ವೇಳೆ ವಾರಿಯರ್ಸ್ ಮುನ್ನಡೆಯು 33-24ಕ್ಕೆ ತಗ್ಗಿತು.

ಇದರಿಂದ ತಕ್ಷಣ ಪುಟಿದೆದ್ದ ಬೆಂಗಾಲ್‌, ಟೈಟಾನ್ಸ್‌ ಬಳಗವನ್ನು ಯಶಸ್ವಿಯಾಗಿ ಮೂರನೇ ಬಾರಿ ಆಲ್ ಔಟ್ ಮಾಡಿತು. ಕೊನೆಗೂ ಅಂತರ ಕಡಿಮೆ ಮಾಡಲು ಪವನ್ ಬಳಗದಿಂದ ಸಾಧ್ಯವಾಗಲಿಲ್ಲ. ಭರ್ಜರಿ 20 ಅಂಕಗಳ ಅಂತರದಿಂದ ವಾರಿಯರ್ಸ್‌ ಗೆಲುವು ಸಾಧಿಸಿತು.

ಪಂದ್ಯದ ಬಳಿಕ ಬೆಂಗಾಲ್‌ ವಾರಿಯರ್ಸ್‌ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದರೆ, ತೆಲುಗು ಟೈಟಾನ್ಸ್‌ ಕೊನೆಯ ಸ್ಥಾನದಲ್ಲೇ ಉಳಿದಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.