ಪರಮ ದೈವಭಕ್ತ ಪ್ರಜ್ಞಾನಂದ 18 ವರ್ಷ ತುಂಬುವ ಮುನ್ನವೇ ಕೋಟ್ಯದೀಶ; ಈತ ವಿಶ್ವದ ಅತಿದೊಡ್ಡ ಇಂಟರ್‌ನೆಟ್ ಚೆಸ್ ಸಂಸ್ಥೆಯ ಮಾಲೀಕ!
Rameshbabu Praggnanandhaa: ಚೆಸ್ ಆಟದ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ ತಮಿಳುನಾಡಿನ ಆರ್ ಪ್ರಜ್ಞಾನಂದನ ಕುರಿತು ಯಾರಿಗೂ ತಿಳಿಯದ ಆಸಕ್ತಿಕರ ಸಂಗತಿಯನ್ನು ಈ ವರದಿಯಲ್ಲಿ ನೋಡೋಣ.
ಕ್ರೀಡಾ ಜಗತ್ತಿನಲ್ಲಿ ಇವತ್ತು ಎಲ್ಲಿ ನೋಡಿದರೂ, ಕೇಳಿದರೂ ಸದ್ದು ಮಾಡುತ್ತಿರುವ ಹೆಸರು ರಮೇಶ್ ಬಾಬು ಪ್ರಜ್ಞಾನಂದ (Rameshbabu Praggnanandhaa). ಅಖಾಡದಲ್ಲಿ ದಿಗ್ಗಜರಿಗೇ ನಡುಕ ಸೃಷ್ಟಿಸಿರುವ ಚತುರ, ಸದ್ಯ ವಿಶ್ವ ಚೆಸ್ ವಿಶ್ವಕಪ್ ಫೈನಲ್ನ (FIDE Chess World Cup Final) ಟೈ ಬ್ರೇಕರ್ ಪಂದ್ಯದಲ್ಲಿ ನಂಬರ್ 1 ಶ್ರೇಯಾಂಕಿತ, ದಿಗ್ಗಜ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ (Magnus Carlsen) ಅವರ ಎದುರು ಶರಣಾಗಿದ್ದಾರೆ. ಸೋತರೂ ಭಾರತೀಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಚೆಸ್ ಆಟದ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ ತಮಿಳುನಾಡಿನ ಹುಡುಗನ ಕುರಿತು ಯಾರಿಗೂ ತಿಳಿಯದ ಆಸಕ್ತಿಕರ ಸಂಗತಿಯನ್ನು ಈ ವರದಿಯಲ್ಲಿ ನೋಡೋಣ. ಭಾರತದ ಚೆಸ್ ದಿಗ್ಗಜನ ಉತ್ತರಾಧಿಕಾರಿ ಎಂದೇ ಖ್ಯಾತಿ ಪಡೆದಿರುವ ಪ್ರಜ್ಞಾನಂದ 18 ವರ್ಷ ತುಂಬುವ ಮೊದಲೇ ಕೋಟ್ಯದೀಶ ಎಂಬುದು ಅದೆಷ್ಟೋ ಜನರಿಗೆ ಗೊತ್ತೇ ಇಲ್ಲ. ಹೆಸರೇ ಸೂಚಿಸುವಂತೆ ಅಪಾರ ಪ್ರಜ್ಞೆ ಹೊಂದಿರುವ ಈತ, ವಿಶ್ವದ ಅತಿದೊಡ್ಡ ಇಂಟರ್‌ನೆಟ್ ಚೆಸ್ ಸಂಸ್ಥೆಯ ಮಾಲೀಕನೂ ಹೌದು.
ಅಪಾರ ದೈವ ಭಕ್ತನೂ ಹೌದು!
ದಿಗ್ಗಜ ಚೆಸ್ ಆಟಗಾರರ ಎದುರು ಅತಿ ಚಾಣಾಕ್ಷ ನಡೆಯ ಜೊತೆಗೆ ತಾಳ್ಮೆ, ಚತುರತೆ, ನಿಖರತೆಯ ಆಟದ ಮೂಲಕ ಇಡೀ ವಿಶ್ವವೇ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಮತ್ತೊಂದು ವಿಶೇಷ ಸಂಗತಿ ಎಂದರೆ ಪ್ರಜ್ಞಾನಂದ ಪರಮ ದೈವಭಕ್ತ. ಹಣೆಯಲ್ಲಿ ವಿಭೂತಿ ಹಚ್ಚಿಕೊಂಡು ಕಾಣಿಸಿಕೊಳ್ಳುವ ಪ್ರಜ್ಞಾನಂದನಿಗೆ ದೇವರ ಮೇಲೆ ನಂಬಿಕೆ ಹೆಚ್ಚಂತೆ. ಶ್ರದ್ಧಾ ಭಕ್ತಿಯ ಪ್ರತೀಕತೆಗೆ ಮತ್ತೊಂದು ಹೆಸರೇ ಪ್ರಜ್ಞಾನಂದ ಎನ್ನುತ್ತಾರೆ ಹಲವರು.
ಪ್ಲೇ ಮ್ಯಾಗ್ನಸ್‌ಗೆ ಪ್ರಜ್ಞಾನಂದ ಮಾಲೀಕ
18 ವರ್ಷ ತುಂಬುವ ಮುನ್ನವೇ ಕೋಟ್ಯಧಿಪತಿ. ಹೌದು, ಆತನು ಒಂದು ಚೆಸ್ ಸಂಸ್ಥೆಗೆ ಮಾಲೀಕನೂ ಹೌದು. ಪ್ರಜ್ಞಾನಂದನ ಹೆಸರಲ್ಲಿ ಒಂದು ಸಂಸ್ಥೆಯಿದೆ. ಅದರ ಹೆಸರು ಪ್ಲೇ ಮ್ಯಾಗ್ನಸ್. ಇದು, ವಿಶ್ವದ ಅತಿ ದೊಡ್ಡ ಇಂಟರ್‌ನೆಟ್ ಚೆಸ್ ಬ್ಯುಸಿನಸ್ ಸಂಸ್ಥೆ. ಈ ಸಂಸ್ಥೆಯ ಮೌಲ್ಯ 83 ಲಕ್ಷ ರೂಪಾಯಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಅವರು ನಿಖರವಾಗಿ ಎಷ್ಟು ಆದಾಯ ಗಳಿಸುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಭಾರತದಲ್ಲಿ ಚೆಸ್ ಗ್ರ್ಯಾಂಡ್‌ಮಾಸ್ಟರ್ ವೇತನ ವಾರ್ಷಿಕ 75 ಲಕ್ಷದಿಂದ 1 ಕೋಟಿವರೆಗೂ ಇದೆ. ಇದು 2019ರ ಮಾಹಿತಿ. ಸದ್ಯದ ಮಟ್ಟಿಗೆ ಈ ಸಂಬಳ ಇನ್ನಷ್ಟು ಹೆಚ್ಚಾಗಿರಬಹುದು. ಸದ್ಯ ಈ ಬಗ್ಗೆ ಜನಭಾರತ್ ಟೈಮ್ಸ್ ವರದಿ ಮಾಡಿದೆ.
10 ವರ್ಷಗಳ ಹಿಂದೆ ಹೀಗಿರಲಿಲ್ಲ!
ಸ್ವಂತ ಕಂಪನಿಯ ಮೂಲಕ ಕೋಟಿ ಕೋಟಿ ಆದಾಯ ಗಳಿಸುವ ಪ್ರಜ್ಞಾನಂದನ ವೇತನದಲ್ಲೂ ನಿಖರವಾದ ಮಾಹಿತಿ ಇಲ್ಲ. ಸದ್ಯ ಕೋಟಿ ಕೋಟಿ ದುಡಿಯುವ ಯುವ ತಾರೆಯ ಕುಟುಂಬ ಪರಿಸ್ಥಿತಿ 10 ವರ್ಷಗಳ ಹಿಂದೆ ಹೀಗಿರಲಿಲ್ಲ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಪ್ರಜ್ಞಾನಂದ ಅವರ ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದರು. ಅವರು ಪೊಲಿಯೋ ಪೀಡಿತರು. ಇಬ್ಬರು ಮಕ್ಕಳು. ಪ್ರಜ್ಞಾನಂದ ಮತ್ತು ವೈಶಾಲಿ. ಸದಾ ಕಾರ್ಟೂನ್ ನೋಡುತ್ತಿದ್ದ ಮಕ್ಕಳ ಗಮನ ಬೇರೆಡೆ ಸೆಳೆಯುವ ಸಲುವಾಗಿ ಚೆಸ್ ಬೋರ್ಡ್ ತಂದುಕೊಟ್ಟಿದ್ದರು.
ಅಂದು ಅಕ್ಕ ವೈಶಾಲಿ, ತಮ್ಮ ಪ್ರಜ್ಞಾನಂದನಿಗೆ ಚೆಸ್ ಹೇಳಿಕೊಟ್ಟಿದ್ದರು. ಚೆಸ್ ಬೋರ್ಡ್ ತಂದುಕೊಟ್ಟಿದ್ದು, ಅಕ್ಕ ಚೆಸ್ ಹೇಳಿಕೊಟ್ಟಿದ್ದು.. ಈ ಸಣ್ಣ ಬದಲಾವಣೆಗಳು ಇಡೀ ಕುಟುಂಬದ ಭವಿಷ್ಯವನ್ನೇ ಬದಲಾಯಿಸಿಬಿಟ್ಟವು. ಅಕ್ಕ ವೈಶಾಲಿ ಕೂಡ ಚೆಸ್ನಲ್ಲಿ ಪರಿಣಿತೆ. ತನಗೆ ಅಭ್ಯಾಸ ಮಾಡಿದ ಅಕ್ಕನನ್ನೇ ಮೀರಿಸಿ ಇದೀಗ ಚೆಸ್ ಲೋಕದಲ್ಲಿ ದಿಗ್ಗಜರಿಗೆ ನಡುಕ ಸೃಷ್ಟಿಸುತ್ತಿದ್ದಾನೆ ಪ್ರಜ್ಞಾನಂದ.