Babar Azam: ಕೆನಡಾ ಲೀಗ್ ಆಡ್ತೀನಿ ಅಂದ ಬಾಬರ್ಗೆ ಬೇಡ ಲಂಕಾ ಪ್ರೀಮಿಯರ್ ಲೀಗ್ ಆಡು ಎಂದೆ; ಕಾರಣ ತಿಳಿಸಿ ಮಗನಿಗೆ ಬುದ್ದಿ ಹೇಳಿದ ತಂದೆ
ಎಲ್ಪಿಎಲ್ಗೂ ಮೊದಲು ಬಾಬರ್ ಅಜಮ್ ಕೆನಡಾದ ಟಿ20 ಲೀಗ್ನಿಂದ (G20 League Canada) ಬಂದಿದ್ದ ಆಫರ್ ಅನ್ನು ತಿರಸ್ಕರಿಸಿದ್ದರು. ಇದಕ್ಕೆ ಕಾರಣ ಏನೆಂಬುದನ್ನು ಬಾಬರ್ ತಂದೆ ಅಜಮ್ ಸಿದ್ದಿಕಿ ಕಾರಣ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಅವರು ಸದ್ಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ (Lanka Premier League) ಆಡುತ್ತಿದ್ದಾರೆ. ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಗೆದ್ದ ಬಳಿಕ ಲಂಕಾದಲ್ಲೇ (SL vs PAK) ಉಳಿದಿರುವ ಪಾಕ್ ಆಟಗಾರರು, ಟಿ20 ಲೀಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಬಾಬರ್ ಮೊದಲು ಜಿ20 ಲೀಗ್ ಆಫರ್ ತಿರಸ್ಕರಿಸಿ, ಲಂಕಾ ಪ್ರೀಮಿಯರ್ ಲೀಗ್ ಆಡಲು ಕಾರಣ ಏನೆಂಬುದನ್ನು ಅವರ ತಂದೆ ಬಹಿರಂಗಪಡಿಸಿದ್ದಾರೆ.
ಐಸಿಸಿ ಶ್ರೇಯಾಂಕದಲ್ಲಿ ಎಲ್ಲಾ 3 ಸ್ವರೂಪಗಳಲ್ಲೂ ಅಗ್ರ ಐದರೊಳಗೆ ಸ್ಥಾನ ಪಡೆದಿರುವ ಏಕೈಕ ಕ್ರಿಕೆಟಿಗ ಅಂದರೆ ಅದು ಬಾಬರ್ ಅಜಮ್. ವರ್ಷಗಟ್ಟಲೇ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲೇ ಬೇರೂರಿರುವ ಬಾಬರ್ ಅಜಮ್, ಟೆಸ್ಟ್ನಲ್ಲಿ ಅಗ್ರ 4ರಲ್ಲಿ, ಟಿ20ಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ಎದುರು ಎರಡು ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ, ಕ್ಲೀನ್ ಸ್ವೀಪ್ ಸಾಧಿಸಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 (WTC 2023-2025) ಋತುವಿನಲ್ಲಿ 100 ಪ್ರತಿಶತ ಗೆಲುವುಗಳೊಂದಿಗೆ ಪಾಕಿಸ್ತಾನವು ಅಗ್ರಸ್ಥಾನದಲ್ಲಿದೆ. ಟೆಸ್ಟ್ ಸರಣಿ ಮುಗಿದ ಬಳಿಕ ಪಾಕಿಸ್ತಾನ ತಂಡದ ಕ್ರಿಕೆಟಿಗರು ಲಂಕಾದಲ್ಲೇ ತಂಗಿದ್ದು, ಸದ್ಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದ್ದಾರೆ. ಎಲ್ಪಿಎಲ್ನಲ್ಲಿ ಕೊಲಂಬೊ ಸ್ಟ್ರೈಕರ್ಸ್ (Colombo Strikers) ಪರ ಆಡುತ್ತಿರುವ ಬಾಬರ್, ಮೊದಲ ಪಂದ್ಯದಲ್ಲಿ 7 ರನ್, 2ನೇ ಪಂದ್ಯದಲ್ಲಿ 59 ರನ್ ಗಳಿಸಿದರು.
ಬಾಬರ್ಗೆ ತಂದೆ ಬುದ್ದಿ ಮಾತು
ಆದರೆ, ಎಲ್ಪಿಎಲ್ಗೂ ಮೊದಲು ಬಾಬರ್ ಅಜಮ್ ಕೆನಡಾದ ಟಿ20 ಲೀಗ್ನಿಂದ (G20 League Canada) ಬಂದಿದ್ದ ಆಫರ್ ಅನ್ನು ತಿರಸ್ಕರಿಸಿದ್ದರು. ಇದಕ್ಕೆ ಕಾರಣ ಏನೆಂಬುದನ್ನು ಬಾಬರ್ ತಂದೆ ಅಜಮ್ ಸಿದ್ದಿಕಿ ಕಾರಣ ಬಹಿರಂಗಪಡಿಸಿದ್ದಾರೆ. ಅಜಮ್ ಸಿದ್ದಿಕಿ (Azam Siddique) ಅವರು ಸಾಮಾಜಿಕ ಜಾಲತಾಣಗಳ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಂದೆಯ ಸಲಹೆಯಂತೆ ಬಾಬರ್ ಎಲ್ಪಿಎಲ್ ಆಡುತ್ತಿದ್ದಾರೆ.
ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಬಾಬರ್ ನನ್ನ ಬಳಿ ಕೇಳಿದ್ದ. ಕೆನಡಾ ಲೀಗ್‌ನಲ್ಲಿ 10 ದಿನ ಆಡಿದರೆ ಎಷ್ಟು ಮೊತ್ತ ಸಿಗುತ್ತಿತ್ತೋ, ಎಲ್ಪಿಎಲ್ನಲ್ಲಿ 25 ದಿನ ಆಡಿದರೆ ಅಷ್ಟು ಹಣ ಸಿಗುತ್ತದೆ. ಕೆನಡಾಗೆ ಹೋಲಿಸಿದರೆ, ಶ್ರೀಲಂಕಾದಲ್ಲಿ ಹವಮಾನ ಬಿಸಿ ಜಾಸ್ತಿ ಇರುತ್ತದೆ. ಹಾಗಾಗಿ ನಾನು ಲಂಕಾ ಪ್ರೀಮಿಯರ್ ಲೀಗ್ ಏಕೆ ಆಡಬೇಕು ಎಂದು ಕೇಳಿದ್ದ ಎಂದು ಬಾಬರ್ ತಂದೆ ಹೇಳಿದ್ದಾರೆ.
‘ವಿಶ್ವಕಪ್, ಏಷ್ಯಾಕಪ್ ಸಹಾಯ ಆಗುತ್ತೆ’
ಅದಕ್ಕೆ ಒಂದೇ ಉತ್ತರ ಹೇಳಿದೆ, ಶ್ರೀಲಂಕಾದಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಆಫ್ಘಾನಿಸ್ತಾನ ತಂಡದೊಂದಿಗೆ ಸರಣಿ ಸಹ ನಡೆಯಲಿದೆ. ಲಂಕಾದಲ್ಲಿರುವ ಪಿಚ್ಗಳು, ಭಾರತ ಪಿಚ್ಗಳಿಗೆ ಹೋಲುತ್ತವೆ. ಹಾಗಾಗಿ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅನುಭವ ಏಷ್ಯಾಕಪ್, ಏಕದಿನ ವಿಶ್ವಕಪ್, ಆಫ್ಘಾನಿಸ್ತಾನ ಸರಣಿಗೂ ಉಪಯೋಗವಾಗುತ್ತದೆ ಎಂದು ಮಗನಿಗೆ ಸಲಹೆ ನೀಡಿದೆ ಎಂದರು.
‘ಏನು ಬೇಕಾದರೂ ಮಾಡಲು ಸಿದ್ಧವಾಗು’
ಶೀತ ವಾತಾವರಣದಲ್ಲಿ 10 ದಿನಗಳ ಕಾಲ ಕೆನಡಾ ಲೀಗ್‌ನಲ್ಲಿ ಆಡುವುದಕ್ಕಿಂತ ಮನೆಗೆ ಬಂದು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ. ಬಾಬರ್ ಅಜಮ್ ಇಂದು ಕರೆ ಮಾಡಿ ಈ ಬಿಸಿಲನ್ನು ಸಹಿಸಲಾರೆ ಎಂದಿದ್ದ. ಪಾಕಿಸ್ತಾನಕ್ಕೆ ಏನು ಬೇಕಾದರೂ ಮಾಡಲು ಸಿದ್ಧ ಎನ್ನುವಂತಿರಬೇಕು. ಅದರಂತೆ ಪಾಕಿಸ್ತಾನವೂ ನಿನಗಾಗಿ ಪ್ರಾರ್ಥಿಸುತ್ತದೆ. ನಿಮಗಿಂತ ನನಗೆ ಹೆಚ್ಚು ತಿಳುವಳಿಕೆ ಇದೆ' ಎಂದು ಅಜಮ್ ಸಿದ್ದಿಕಿ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಬರೆದಿದ್ದಾರೆ.
ಆಗಸ್ಟ್ 30ರಿಂದ ಏಷ್ಯಾಕಪ್
ಲಂಕಾ ಪ್ರೀಮಿಯರ್ ಲೀಗ್ 2023 ಆಗಸ್ಟ್ 20ರವರೆಗೆ ನಡೆಯಲಿದೆ. ಆಗಸ್ಟ್ 22 ರಿಂದ ಶ್ರೀಲಂಕಾದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಏಷ್ಯಾ ಕಪ್ 2023 ಪಂದ್ಯಾವಳಿಯು ಆಗಸ್ಟ್ 30 ರಿಂದ ಪ್ರಾರಂಭವಾಗಲಿದೆ. ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಏಷ್ಯಾ ಕಪ್ 2023 ಟೂರ್ನಿಯಲ್ಲಿ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.