Watch: ಖವಾಜಾ ವಿಕೆಟ್ ಉರುಳಿಸಲು ಹೊಸ ತಂತ್ರ ಪ್ರಯೋಗಿಸಿದ ಇಂಗ್ಲೆಂಡ್; ಏನಿದು ಬ್ರಂಬ್ರೆಲ್ಲಾ ತಂತ್ರ
ಕನ್ನಡ ಸುದ್ದಿ  /  ಕ್ರೀಡೆ  /  Watch: ಖವಾಜಾ ವಿಕೆಟ್ ಉರುಳಿಸಲು ಹೊಸ ತಂತ್ರ ಪ್ರಯೋಗಿಸಿದ ಇಂಗ್ಲೆಂಡ್; ಏನಿದು ಬ್ರಂಬ್ರೆಲ್ಲಾ ತಂತ್ರ

Watch: ಖವಾಜಾ ವಿಕೆಟ್ ಉರುಳಿಸಲು ಹೊಸ ತಂತ್ರ ಪ್ರಯೋಗಿಸಿದ ಇಂಗ್ಲೆಂಡ್; ಏನಿದು ಬ್ರಂಬ್ರೆಲ್ಲಾ ತಂತ್ರ

England vs Australia The Ashes: ಉಸ್ಮಾನ್‌ ಖವಾಜಾರನ್ನು ಔಟ್‌ ಮಾಡಲು ಅನುಸರಿಸಿದ ವಿನೂತನ ತಂತ್ರದಿಂದ ಇಂಗ್ಲೆಂಡ್‌ ತಂಡ ಹಾಗೂ ನಾಯಕ ಬೆನ್‌ ಸ್ಟ್ರೋಕ್ಸ್‌ ಭಾರಿ ಸುದ್ದಿಯಾಗಿದ್ದಾರೆ.

ಇಂಗ್ಲೆಂಡ್‌ ಫೀಲ್ಡಿಂಗ್‌ ತಂತ್ರ
ಇಂಗ್ಲೆಂಡ್‌ ಫೀಲ್ಡಿಂಗ್‌ ತಂತ್ರ

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ (The Ashes 2023) ಮೊದಲ ಟೆಸ್ಟ್ ಪಂದ್ಯದಲ್ಲಿ, ಎರಡು ಬಲಿಷ್ಠ ರಾಷ್ಟ್ರಗಳಾದ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವೆ ರೋಚಕ ಹಣಾಹಣಿ ನಡೆಯುತ್ತಿದೆ. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡವು ವೇಗದ ಆಟವಾಡಿ ಅಚ್ಚರಿಯ ಮೊತ್ತಕ್ಕೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಆ ಬಳಿಕ ತುಸು ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ತಂಡವನ್ನು ಕೂಡಾ ಆಲೌಟ್‌ ಮಾಡಿತು. ಈ ವೇಳೆ ಉಸ್ಮಾನ್‌ ಖವಾಜಾರನ್ನು ಔಟ್‌ ಮಾಡಲು ಅನುಸರಿಸಿದ ವಿನೂತನ ತಂತ್ರದಿಂದ ಇಂಗ್ಲೆಂಡ್‌ ತಂಡ ಹಾಗೂ ನಾಯಕ ಬೆನ್‌ ಸ್ಟ್ರೋಕ್ಸ್‌ ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಪರ ಜೋ ರೂಟ್ ಆಕರ್ಷಕ ಶತಕ ಸಿಡಿಸಿದ್ದರು. ಆ ಬಳಿಕ ಪಂದ್ಯದಲ್ಲಿ ಎರಡನೇ ಶತಕವು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಖವಾಜಾ ಅವರಿಂದ ಬಂತು. 321 ಎಸೆತಗಳಲ್ಲಿ 141 ರನ್ ಗಳಿಸಿದ ಖವಾಜಾ, ತಂಡದ ಮೊತ್ತ ಹಿಗ್ಗಿಸಿದರು. ಕ್ರೀಸ್‌ಕಚ್ಚಿ ಬ್ಯಾಟ್‌ ಬೀಸುತ್ತಿದ್ದ ಖವಾಜಾ ಅವರನ್ನು ಔಟ್‌ ಮಾಡುವುದು ಇಂಗ್ಲೆಂಡ್‌ಗೆ ಅನಿವಾರ್ಯವಾಗಿತ್ತು. ಇದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಬೇಕಾಯ್ತು. ಪಂದ್ಯದ 3ನೇ ದಿನದಾಟದಲ್ಲಿ, ಅಂತಹ ಒಂದು ತಂತ್ರಕ್ಕೆ ಇಂಗ್ಲೆಂಡ್‌ ಮುಂದಾಯ್ತು. ನಾಯಕ ಸ್ಟೋಕ್ಸ್ ಅವರು ಈ ಹಿಂದೆ ಎಂದೂ ಮಾಡದ ಫೀಲ್ಡ್ ಟ್ರ್ಯಾಪ್ ತಂತ್ರ ಅಳವಡಿಸಿ ಖವಾಜಾರನ್ನು ತಮ್ಮ ಖೆಡ್ಡಾಗೆ ಬೀಳಿಸಿದರು. ಇದು ದಿಗ್ಗಜ ಹಾಗೂ ಅನುಭವಿ ಆಟಗಾರರು ಕೂಡಾ ದಿಗ್ಭ್ರಮೆಗೊಳ್ಳುವಂತೆ ಮಾಡಿತು.

ಆಸೀಸ್‌ ಇನ್ನಿಂಗ್ಸ್‌ ವೇಳೆ 113ನೇ ಓವರ್‌ ಎಸೆಯಲು ರಾಬಿನ್ಸನ್‌ ಸಿದ್ಧರಾದರು. ತಮ್ಮ ಓವರ್‌ನ ಮೂರನೇ ಎಸೆತವನ್ನು ಬೌಲ್ ಮಾಡಲು ಆಲಿ ರಾಬಿನ್ಸನ್ ಸಿದ್ಧರಾಗುವ ಮುನ್ನ, ನಾಯಕ ಸ್ಟೋಕ್ಸ್ ಮೈದಾನದ ಫೀಲ್ಡಿಂಗ್‌ನಲ್ಲಿ ಒಂದು ಮಹತ್ವದ ಬದಲಾವಣೆ ಮಾಡಿದರು. ಪಿಚ್‌ ಬಳಿ "ಬ್ರಂಬ್ರೆಲ್ಲಾ(Brumbrella)" ಫೀಲ್ಡಿಂಗ್‌ ಸೆಟಪ್‌ ನಿರ್ಮಿಸಿ, ಖವಾಜಾ ವಿಕೆಟ್‌ ಪಡೆಯುವ ತಂತ್ರ ಮಾಡಿದರು. ಇಂದು ಒಂದು ರೀತಿಯಲ್ಲಿ ಷಷ್ಠ ದಿಗ್ಬಂಧನ.

ಏನಿದು ಬ್ರಂಬೆಲ್ಲಾ ತಂತ್ರ?

ಇಂಗ್ಲೆಂಡ್ ನಾಯಕನು ಪೋಪ್, ಹ್ಯಾರಿ ಬ್ರೂಕ್ ಮತ್ತು ಜೇಮ್ಸ್ ಆಂಡರ್ಸನ್ ಈ ಮೂವರನ್ನು ಕವರ್‌ನಲ್ಲಿ ಸಾಲಾಗಿ ನಿಲ್ಲಿಸಿದರು. ಅತ್ತ ಜೋ ರೂಟ್, ಸ್ಟುವರ್ಟ್ ಬ್ರಾಡ್ ಮತ್ತು ಖುದ್ದು ಸ್ಟೋಕ್ಸ್ ಅವರೇ ಆಫ್ ಸೈಡ್‌ನಲ್ಲಿ ಕ್ಯಾಚಿಂಗ್ ಮಿಡ್-ವಿಕೆಟ್ ಫೀಲ್ಡರ್‌ಗಳಾಗಿ ನಿಂತರು. ಆ ಮೂಲಕ ಅರ್ಧ ಚಂದ್ರ ಅಥವಾ ಬಿಡಿಸಿದ ಕೊಡೆಯ ಆಕಾರದಲ್ಲಿ ಫೀಲ್ಡ್ ಸೆಟಪ್ ಸಿದ್ಧವಾಯ್ತು. ಈ ತಂತ್ರವು ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಕುಳಿತಿದ್ದ ಕೆವಿನ್ ಪೀಟರ್ಸನ್ ಅವರನ್ನು ಸಂಪೂರ್ಣವಾಗಿ ಅಚ್ಚರಿಗೊಳಪಡಿಸಿತು. "ನೀವು ಎಂದಾದರೂ ಇಂತಹ ಫೀಲ್ಡಂಗ್‌‌ ಸೆಟಪ್‌ ನೋಡಿದ್ದೀರಾ?" ಎಂದು ಸ್ಕೈ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರದ ವೇಳೆ ಹೇಳಿದರು.

ಈ ಫೀಲ್ಡ್‌ ಸೆಟಪ್‌ ಇಂಗ್ಲೆಂಡ್‌ಗೆ ತ್ವರಿತ ಫಲಿತಾಂಶ ತಂದುಕೊಟ್ಟಿತು. ರಾಬಿನ್ಸನ್‌ ಎಸೆತ ಯಾರ್ಕರ್‌ಗೆ ಮುಂದೆ ಬಂದು ಹೊಡೆಯಲು ಖವಾಜಾ ಯತ್ನಿಸಿದರು. ಆದರೆ, ಚೆಂಡಿಗೆ ಬ್ಯಾಟ್‌ ಕನೆಕ್ಟ್‌ ಆಗಲಿಲ್ಲ. ಹೀಗಾಗಿ ಚೆಂಡು ನೇರವಾಗಿ ಸ್ಟಂಪ್‌ಗೆ ಬಡಿದು, ಖವಾಜಾ ವಿಕೆಟ್‌ ಒಪ್ಪಿಸಬೇಕಾಯ್ತು. ಅಲ್ಲಿಗೆ ಇಂಗ್ಲೆಂಡ್‌ ನಾಯಕ ಅನುಸರಿಸಿದ ತಂತ್ರ ಫಲ ನೀಡಿತು.

“ಯೋಜನೆಯು ಯಶಸ್ವಿಯಾಗಿದೆ” ಎಂದು ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ ಕಾಮೆಂಟರಿ ವೇಳೆ ಹೇಳಿದರು. “ಬೆನ್ ಸ್ಟೋಕ್ಸ್ ಅವರಿಂದ ಅತ್ಯುತ್ತಮ ನಾಯಕತ್ವ. ಆಟದಲ್ಲಿ ತಂತ್ರ ನಡೆಯದಿದ್ದಾಗ ಏನಾದರೂ ಸಂಭವಿಸುವಂತೆ ಮಾಡುತ್ತದೆ” ಎಂದು ಅವರು ಹೇಳಿದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.