MS Dhoni: ಭಾರತದ ಕ್ರೀಡಾಸ್ಫೂರ್ತಿ ಆಸ್ಟ್ರೇಲಿಯಾಗಿರಬೇಕಿತ್ತು; ಬೈರ್‌ಸ್ಟೋ ರನೌಟ್ ವಿವಾದದ ಬೆನ್ನಲ್ಲೇ ಧೋನಿ ನೆನಪಿಸಿಕೊಂಡ ಅಭಿಮಾನಿಗಳು
Jonny Bairstow: ಆಸ್ಟ್ರೇಲಿಯಾವು ಬೈರ್‌ಸ್ಟೋ ಅವರ ವಿಕೆಟ್‌ಗೆ ಥರ್ಡ್ ಅಂಪೈರ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ, ಇಲ್ಲಿ ಅದರ ಅವಶ್ಯಕತೆಯೇ ಇರಲಿಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯ. ಇದಕ್ಕೆ ಭಾರತ ಕ್ರಿಕೆಟ್ ತಂಡದ ಕ್ರೀಡಾಸ್ಫೂರ್ತಿಯನ್ನು ನೆಟ್ಟಿಗರು ಉದಾಹರಣೆಯಾಗಿ ಮುನ್ನೆಲೆಗೆ ತಂದಿದ್ದಾರೆ.
ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳು ಸ್ಪರ್ಧೆ ಎಂಬ ನೆಲೆಗಟ್ಟಿನಲ್ಲಿ ನಡೆಯುವಾಗ ಅಲ್ಲಿ ನಿಯಮಗಳೇ ನಿರ್ಣಾಯಕ. ಆಯಾ ಕ್ರೀಡೆಯ ನಿಯಮಗಳ ಅನುಸಾರವಾಗಿ ನಿರ್ಧಾರ ಅಥವಾ ತೀರ್ಪು ಹೊರಬರುತ್ತದೆ. ಇದು ಕ್ರಿಕೆಟ್‌ಗೆ ಕೂಡಾ ಅನ್ವಯ. ಕೆಲವೊಂದು ಸಂದರ್ಭಗಳಲ್ಲಿ ನಿಯಮಗಳಿಗಿಂತ ಆಟಗಾರರ ಕ್ರೀಡಾಸ್ಪೂರ್ತಿಯೇ ಉನ್ನತವಾಗುತ್ತದೆ. ಅದು ಆಟದ ನಿಯಮಗಳಿಗಿಂದ ಮೇಲಾಗಿ ಪಂದ್ಯದ ಅಂಪೈಯರ್‌ಗಳು ಅಥವಾ ತೀರ್ಪುಗಾರರ ನಿರ್ಧಾರಕ್ಕೆ ಮಹತ್ವದ ಅಂಶವಾಗುತ್ತದೆ.
ಭಾನುವಾರವಷ್ಟೆ ಅಂತ್ಯಗೊಂಡ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋ ಅವರನ್ನು ಆಸೀಸ್ ವಿಕೆಟ್ ಕೀಪರ್ ಕ್ಯಾರಿ ವಿವಾದಾತ್ಮಕ ರೀತಿಯಲ್ಲಿ ಔಟಾಗಿಸಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರೀಡಾಸ್ಪೂರ್ತಿ ಕುರಿತಾಗಿ ಭಾರಿ ಚರ್ಚೆ ನಡೆಯುತ್ತಿದೆ. ನಿಯಮದ ಪ್ರಕಾರ ಬೈರ್‌ಸ್ಟೋ ಔಟಾಗಿದ್ದರೂ, ಇಲ್ಲಿ ಆಸೀಸ್ ತಂಡದ ಆಟಗಾರರು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಬೇಕಿತ್ತು ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಗಳಾಗುತ್ತಿವೆ.
ಆಸ್ಟ್ರೇಲಿಯಾವು ಬೈರ್‌ಸ್ಟೋ ಅವರ ವಿಕೆಟ್‌ಗೆ ಥರ್ಡ್ ಅಂಪೈರ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ, ಇಲ್ಲಿ ಅದರ ಅವಶ್ಯಕತೆಯೇ ಇರಲಿಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯ. ಇದಕ್ಕೆ ಭಾರತ ಕ್ರಿಕೆಟ್ ತಂಡದ ಕ್ರೀಡಾಸ್ಫೂರ್ತಿಯನ್ನು ನೆಟ್ಟಿಗರು ಉದಾಹರಣೆಯಾಗಿ ಮುನ್ನೆಲೆಗೆ ತಂದಿದ್ದಾರೆ. 2011ರಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಪಂದ್ಯದ ವೇಳೆ ಇಂತಹದೇ ಘಟನೆ ನಡೆದಿತ್ತು. ಆದರೆ ಭಾರತದ ನಾಯಕ ಎಂಎಸ್ ಧೋನಿ, ಇದೇ ರೀತಿಯ ರನೌಟ್ ಮನವಿಯನ್ನು ಹಿಂತೆಗೆದುಕೊಂಡಿದ್ದರು. ಭಾರತದ ನಾಯಕನ ಆ ಕ್ರೀಡಾಸ್ಫೂರ್ತಿಯನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.
2011ರಲ್ಲಿ ಏನಾಗಿತ್ತು?
ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಶಾಂತ್ ಶರ್ಮಾ ಎಸೆತವನ್ನು ಇಂಗ್ಲೆಂಡ್ ಬ್ಯಾಟರ್ ಇಯಾನ್ ಮಾರ್ಗನ್ ಲೆಗ್ ಸೈಡ್ ಕಡೆಗೆ ಹೊಡೆದರು. ಪ್ರವೀಣ್ ಕುಮಾರ್ ಸಮಯಕ್ಕೆ ಸರಿಯಾಗಿ ಚೆಂಡನ್ನು ಬೌಂಡರಿ ಲೈನ್ ದಾಟದಂತೆ ನಿಲ್ಲಿಸಿದರು. ಆರಂಭದಲ್ಲಿ ಇಂಗ್ಲೆಂಡ್ ಆಟಗಾರರು ಮತ್ತು ಭಾರತೀಯರು ಕೂಡ ಚೆಂಡು ಬೌಂಡರಿ ಲೈನ್ ಸ್ಪರ್ಶಿಸಿದೆ ಎಂದೇ ಭಾವಿಸಿದ್ದರು. ಆದರೆ, ಪ್ರವೀಣ್ ಕುಮಾರ್ ನಿಧಾನವಾಗಿ ಚೆಂಡನ್ನು ಎತ್ತಿಕೊಂಡು ವಿಕೆಟ್-ಕೀಪರ್ ಧೋನಿಯತ್ತ ಎಸೆದರು. ಅವರು ಚೆಂಡನ್ನು ಫೀಲ್ಡರ್ ಕೈಗೆ ಕೊಟ್ಟರು. ಈ ವೇಳೆ ಬ್ಯಾಟರ್‌ಗಳು ಕ್ರೀಸ್‌ನ ಹೊರಗೆ ನಿಂತಿದ್ದ ಕಾರಣ ಬೇಲ್‌ಗಳನ್ನು ಹಾರಿಸಿ ವಿಕೆಟ್‌ಗೆ ಅಪೀಲ್ ಮಾಡಿದರು.
ಪಂದ್ಯದ ಕಾಮೆಂಟೇಟರ್ ಮೈಕೆಲ್ ಹೋಲ್ಡಿಂಗ್, "ಬಾಲ್ ಡೆಡ್ ಆಗಿಲ್ಲ, ಇಲ್ಲಿ ಏನಾಗುತ್ತಿದೆ ಎಂದು ನನಗೆ ಖಚಿತವಿಲ್ಲ. ಇದು ತುಂಬಾ ಕುತೂಹಲಕಾರಿಯಾಗಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮೈದಾನದಿಂದ ಹೊರಗಿದ್ದರು," ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಶೇನ್ ವಾರ್ನ್, "ಬಾಲ್ ಡೆಡ್ ಆಗಿದೆ ಎಂದು ನಾನು ಭಾವಿಸುವುದಿಲ್ಲ. ಬ್ಯಾಟ್ಸ್‌ಮನ್‌ಗಳು ಅದನ್ನು ಫೋರ್ ಎಂದು ಭಾವಿಸಿದ್ದಾರೆ ಎಂದು ನನಗನಿಸುತ್ತಿದೆ. ಬ್ಯಾಟ್ಸ್‌ಮನ್‌ಗಳು ಹೊರನಡೆದವರು ಕ್ರೀಸ್‌ಗೆ ಬರಲಿಲ್ಲ. ಆದರೆ ಚೆಂಡು ಇನ್ನೂ ಜೀವಂತವಾಗಿತ್ತು. ಭಾರತೀಯ ಆಟಗಾರರು ಬೇಲ್‌ಗಳನ್ನು ಹಾರಿಸಿ ವಿಕೆಟ್‌ಗೆ ಮನವಿ ಮಾಡಿದರು. ಫೋರ್ ಅಲ್ಲದ ಕಾರಣ ಅದು ಔಟಾಗಬಹುದು, ಎಂದು ಅವರು ಹೇಳಿದರು.
ಅಂಪೈರ್‌ಗಳು ಅದು ಬೌಂಡರಿ ಅಲ್ಲ ಎಂಬುದನ್ನು ಖಚಿತಪಡಿಸಿದ ನಂತರ, ಅದನ್ನು ರನೌಟ್ ನೀಡಲಾಯಿತು. ಈ ವಿಕೆಟ್ ಪತನವಾದ ನಂತರ, ಚಹಾ ವಿರಾಮ ನೀಡಲಾಯ್ತು. ಆ ದಿನದ ಅಂತಿಮ ಅವಧಿ ಪುನರಾರಂಭಗೊಂಡಂತೆ, ಇಯಾನ್ ಬೆಲ್ ಮಾರ್ಗನ್ ಅವರೊಂದಿಗೆ ಮತ್ತೆ ಬ್ಯಾಟಿಂಗ್‌ಗೆ ಮರಳಿದರು. ಯಾಕೆಂದರೆ, ಕ್ರೀಡಾಸ್ಫೂರ್ತಿ ಮೆರೆದಿದ್ದ ಭಾರತ ತಂಡದ ನಾಯಕ ಧೋನಿ, ಇಂಗ್ಲೆಂಡ್ ಬ್ಯಾಟರ್ ಮೇಲ್ಮನವಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಆ ಮೂಲಕ ಗೊಂದಲಮಯ ಔಟನ್ನು ರದ್ದು ಮಾಡಿದರು. ಆ ಪಂದ್ಯದಲ್ಲಿ ಭಾರತವು 319 ರನ್‌ಗಳಿಂದ ಸೋತಿತು. ಆದರೆ, ಭಾರತದ ಕ್ರೀಡಾಸ್ಫೂರ್ತಿ ಈಗಲೂ ಅಭಿಮಾನಿಗಳು ನೆನಪಿಸಿಕೊಳ್ಳುವಂತಾಗಿದೆ.
ವಿಭಾಗ