ಕನ್ನಡ ಸುದ್ದಿ  /  Sports  /  Cricket News I Want To Dedicate This Knock To My Parents Says Yashasvi Jaiswal After Scoring Century On Debut Vs Wi Prs

Yashasvi Jaiswal: ನನ್ನ ತಂದೆ-ತಾಯಿಗೆ ಈ ಶತಕ ಅರ್ಪಿಸಲು ಬಯಸುತ್ತೇನೆ; ವಿಂಡೀಸ್ ವಿರುದ್ಧ 171 ರನ್​ ಸಿಡಿಸಿದ ಯಶಸ್ವಿ ಜೈಸ್ವಾಲ್​ ಭಾವುಕ

WI vs IND: ನನಗೆ ಈವರೆಗೂ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಶತಕವನ್ನು ನನ್ನ ತಂದೆ-ತಾಯಿಗೆ ಅರ್ಪಿಸಲು ಬಯಸುತ್ತೇನೆ ಎಂದು ಯಶಸ್ವಿ ಜೈಸ್ವಾಲ್ ಭಾವುಕ ಮಾತುಗಳನ್ನಾಡಿದ್ದಾರೆ.

ಯಶಸ್ವಿ ಜೈಸ್ವಾಲ್​
ಯಶಸ್ವಿ ಜೈಸ್ವಾಲ್​

ಡೊಮಿನಿಕಾದ ವಿಂಡ್ಸರ್​ ಪಾರ್ಕ್​ನಲ್ಲಿ ನಡೆದ ವೆಸ್ಟ್​ ಇಂಡೀಸ್​ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ (West Indies vs India), ಭರ್ಜರಿ ಜಯ ಸಾಧಿಸಿದೆ. ಬೌಲಿಂಗ್​​ನಲ್ಲಿ ರವಿಚಂದ್ರನ್ ಅಶ್ವಿನ್ (Ravichandran), ಬ್ಯಾಟಿಂಗ್​​ನಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal), ರೋಹಿತ್​ ಶರ್ಮಾ (Rohit Sharma) ಅವರ ಆಟದ ನೆರವಿನಿಂದ ಭಾರತ ತಂಡವು ಇನ್ನಿಂಗ್ಸ್​ ಮತ್ತು 141 ರನ್​ಗಳ ಜಯ ದಾಖಲಿಸಿದೆ. ಇದರೊಂದಿಗೆ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟ್ರೆಂಡಿಂಗ್​ ಸುದ್ದಿ

ಈ ಪಂದ್ಯದಲ್ಲಿ ಎಲ್ಲರೂ ಅದ್ಭುತ ಪ್ರದರ್ಶನ ತೋರಿದರು. ಅಶ್ವಿನ್​ ಎರಡೂ ಇನ್ನಿಂಗ್ಸ್​ ಸೇರಿ 12 ವಿಕೆಟ್​ ಪಡೆದರು. ಯಶಸ್ವಿ ಜೈಸ್ವಾಲ್​ ಮತ್ತು ರೋಹಿತ್​ ಶರ್ಮಾ ಶತಕ ಸಿಡಿಸಿ ಮಿಂಚಿದರು. ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದರು. ಆದರೆ ಹೆಚ್ಚು ಆಕರ್ಷಿಸಿದ್ದು ಯಶಸ್ವಿ ಜೈಸ್ವಾಲ್​. ಏಕೆಂದರೆ ಇದು ಅವರಿಗೆ ಮೊದಲ ಟೆಸ್ಟ್ ಪಂದ್ಯ. ಚೊಚ್ಚಲ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ್ದು, ಗಮನ ಸೆಳೆಯಿತು.

ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಹಲವು ದಾಖಲೆಗಳನ್ನೂ ಮುರಿದಿದ್ದಾರೆ. ಪಂದ್ಯದ 2ನೇ ದಿನದಾಟದ ಅಂತ್ಯದವರೆಗೂ 143 ರನ್ ಗಳಿಸಿ ಅಜೇಯರಾಗಿದ್ದ ಯಶಸ್ವಿ, 3ನೇ ದಿನದಾಟದಲ್ಲಿ 171 ರನ್​ ಗಳಿಸಿ ಔಟಾದರು. ಇದೀಗ ಅವರ ಸ್ಮರಣೀಯ ಚೊಚ್ಚಲ ಶತಕವನ್ನು ಯಾರಿಗೆ ಅರ್ಪಿಸಿದ್ದೇನೆ ಎಂದೂ ಹೇಳಿದ್ದಾರೆ.

ಹೆತ್ತರಿಗೆ ಶತಕ ಅರ್ಪಣೆ

ಶತಕದ ಬಳಿಕ ಮಾತನಾಡಿದ ಯಶಸ್ವಿ ಜೈಸ್ವಾಲ್, ‘ಸೆಂಚುರಿ ಸಿಡಿಸಿದ ನಾನು ತುಂಬಾ ಭಾವುಕನಾಗಿದ್ದೆ. ನನಗೆ ಈವರೆಗೂ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಶತಕವನ್ನು ನನ್ನ ತಂದೆ-ತಾಯಿಗೆ ಅರ್ಪಿಸಲು ಬಯಸುತ್ತೇನೆ. ಅವರ ಕೊಡುಗೆ ಅಪಾರ. ಈ ಸಾಧನೆಗಾಗಿ ಬಹಳ ದೂರ ಪ್ರಯಾಣ ಮಾಡಿದ್ದೇನೆ. ಹೆಚ್ಚೇನು ಹೇಳುವುದಿಲ್ಲ. ತುಂಬಾ ಸಂತೋಷವಾಗಿದೆ. ಇದು ಆರಂಭವಷ್ಟೇ. ಭವಿಷ್ಯದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು' ಎಂದು ಹೇಳಿದ್ದಾರೆ.

ಜೈಸ್ವಾಲ್ ದಾಖಲೆಗಳು

ಈ ಟೆಸ್ಟ್ ಶತಕದ ಮೂಲಕ ಹಲವು ದಾಖಲೆಗಳನ್ನು ಮುರಿದಿರುವ ಯಶಸ್ವಿ, ವಿಶೇಷ ಯಶಸ್ಸನ್ನೂ ಗಳಿಸಿದ್ದಾರೆ. ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ 4ನೇ ಕಿರಿಯ ಆಟಗಾರ ಎನಿಸಿಕೊಂಡರು. ಯಶಸ್ವಿ 21 ವರ್ಷ 196 ದಿನಗಳಲ್ಲಿ ಪದಾರ್ಪಣೆ ಮಾಡಿದರು. ಈ ವಿಷಯದಲ್ಲಿ ಪೃಥ್ವಿ ಶಾ ಅಗ್ರಸ್ಥಾನದಲ್ಲಿದ್ದಾರೆ. ಅವರು 18 ವರ್ಷ ಮತ್ತು 329 ದಿನಗಳ ವಯಸ್ಸಿನಲ್ಲಿ ಶತಕ ಗಳಿಸಿದರು.

ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್‌ನಲ್ಲೇ ಶತಕ ಗಳಿಸಿದ 6ನೇ ಭಾರತೀಯ ಆಟಗಾರ. 1959ರಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬಾಸ್ ಅಲಿ ಬೇಗ್ ಈ ಸಾಧನೆ ಮಾಡಿದ ಮೊದಲ ಆಟಗಾರ. ಆಕ್ಲೆಂಡ್‌ನಲ್ಲಿ (1976) ಸುರೀಂದರ್ ಅಮರನಾಥ್, ಡರ್ಬನ್‌ನಲ್ಲಿ (1992) ದಕ್ಷಿಣ ಆಫ್ರಿಕಾ ವಿರುದ್ಧ ಪ್ರವೀಣ್ ಆಮ್ರೆ, ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ (1996) ಎದುರು ಸೌರವ್ ಗಂಗೂಲಿ, ದಕ್ಷಿಣ ಆಫ್ರಿಕಾ ವಿರುದ್ಧ ವೀರೇಂದ್ರ ಸೆಹ್ವಾಗ್ (2001) ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು.

ಡೆಬ್ಯೂ ಟೆಸ್ಟ್ ಪಂದ್ಯದಲ್ಲಿ 171 ರನ್​ ಗಳಿಸಿದ ಜೈಸ್ವಾಲ್, ವಿದೇಶಿ ನೆಲದಲ್ಲಿ ಈ ಸಾಧನೆಗೈದ ಮೊದಲ ಭಾರತೀಯ ಬ್ಯಾಟರ್ ಎನಿಸಿದ್ದಾರೆ. ಹಾಗೆ ಚೊಚ್ಚಲ ಟೆಸ್ಟ್‌ನಲ್ಲೇ ಭಾರತೀಯ ಬ್ಯಾಟರ್‌ ಕಲೆ ಹಾಕಿದ 3ನೇ ಗರಿಷ್ಠ ಸ್ಕೋರ್ ಇದಾಗಿದೆ.

ಹೆಚ್ಚಿನ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ಸಂಬಂಧಿತ ಲೇಖನ