Watch: ಅರ್ಜುನ್‌ಗೆ ಕಚ್ಚಿದ ನಾಯಿ; ಲಖನೌ ಆಟಗಾರರಿಗೆ ನೋವಿನ ಕೈ ತೋರಿಸಿದ ಸಚಿನ್ ಪುತ್ರ
ಲಖನೌ ಮೈದಾನದಲ್ಲಿ ಲಖನೌ ತಂಡದ ಆಟಗಾರರನ್ನು ಅರ್ಜುನ್ ಭೇಟಿಯಾಗುತ್ತಾರೆ. ಈ ವೇಳೆ ನನಗೆ ನಾಯಿ ಕಡಿದಿದೆ ಎಂದು ತಮ್ಮ ಕೈ ತೋರಿಸುತ್ತಾ ಅರ್ಜುನ್ ಹೇಳುತ್ತಾರೆ. ಯಾವಾಗ ಎಂದು ಕೇಳಿದರೆ ನಿನ್ನೆ(ಮೇ 14, ಭಾನುವಾರ) ಎಂದು ಅರ್ಜುನ್ ಹೇಳುತ್ತಾರೆ. ಈ ವಿಡಿಯೋವನ್ನು ಲಖನೌ ಫ್ರಾಂಚೈಸಿ ಹಂಚಿಕೊಂಡಿದೆ.
ಮಂಗಳವಾರ (ಮೇ 16) ಲಖನೌನ ಎಕಾನಾ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಐಪಿಎಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ, 23 ವರ್ಷದ ಅರ್ಜುನ್ ತೆಂಡೂಲ್ಕರ್ ಆಡುವುದು ಬಹುತೇಕ ಅನುಮಾನ. ಯಾಕೆಂದರೆ, ಅರ್ಜುನ್ ಕೈಗೆ ನಾಯಿ ಕಚ್ಚಿದೆಯಂತೆ. ಹೀಗಾಗಿ ಮುಂಬೈ ಇಂಡಿಯನ್ಸ್ ಆಡುವ ಬಳಗಕ್ಕೆ ಅವರು ಹಿಂತಿರುಗುವುದು ಮತ್ತಷ್ಟು ವಿಳಂಬವಾಗಲಿದೆ.
ಏಪ್ರಿಲ್ 25ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತೆಂಡೂಲ್ಕರ್ ಪುತ್ರ ಕೊನೆಯ ಬಾರಿ ಮುಂಬೈ ಪರ ಕಣಕ್ಕಿಳಿದಿದ್ದರು. ಇಂದು ಲಖನೌ ವಿರುದ್ಧ ಅವರು ಕಣಕ್ಕಿಳಿಯುವ ನಿರೀಕ್ಷೆಯಿತ್ತು. ಆದರೆ ಅವರ ಕೈಗೆ ನಾಯಿ ಕಚ್ಚಿದ್ದು, ಹೀಗಾಗಿ ಇಂದು ಅವರು ಆಡುವ ಸಾಧ್ಯತೆ ಕಡಿಮೆ ಇದೆ. ಈ ಬಗ್ಗೆ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಿಂದ ಗೊತ್ತಾಗಿದೆ.
ಅರ್ಜುನ್ ಅವರು ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಮಿಲಿಯನ್ ಡಾಲರ್ ಟೂರ್ನಿಗೆ ಪದಾರ್ಪಣೆ ಮಾಡಿದರು. ಮುಂಬೈ ಪರ ಈವರೆಗೆ ಅವರು 4 ಪಂದ್ಯಗಳಲ್ಲಿ ಮಾತ್ರ ಆಡಿದ್ದು, ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಟೈಟಾನ್ಸ್ ವಿರುದ್ಧ ಅವರು 9 ರನ್ ಬಿಟ್ಟುಕೊಟ್ಟು 1 ರನ್ ಗಳಿಸಿದ್ದರು. 4 ಪಂದ್ಯಗಳನ್ನು ಆಡಿದ ಬಳಿಕ, ಅವರು ಮುಂಬೈನ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದರು. ಅವರ ಬದಲಿಗೆ ಆಕಾಶ್ ಮಧ್ವಲ್ ಮತ್ತು ಕುಮಾರ್ ಕಾರ್ತಿಕೇಯ ಆಡುತ್ತಿದ್ದಾರೆ. ಸದ್ಯ ತಿಲಕ್ ವರ್ಮಾ ಗಾಯದಿಂದ ಬಳಲುತ್ತಿದ್ದು, ಅವರ ಬದಲಿಗೆ ಅರ್ಜುನ್ ಆಡುವ ಬಳಗಕ್ಕೆ ಮರಳುವ ಸಾಧ್ಯತೆಗಳ ಬಗ್ಗೆ ಮಾತುಕತೆ ನಡೆದಿತ್ತು.
ಲಖನೌ ಮೈದಾನದಲ್ಲಿ ಲಖನೌ ತಂಡದ ಆಟಗಾರರನ್ನು ಅರ್ಜುನ್ ಭೇಟಿಯಾಗುತ್ತಾರೆ. ಈ ವೇಳೆ ನನಗೆ ನಾಯಿ ಕಡಿದಿದೆ ಎಂದು ತಮ್ಮ ಕೈ ತೋರಿಸುತ್ತಾ ಅರ್ಜುನ್ ಹೇಳುತ್ತಾರೆ. ಯಾವಾಗ ಎಂದು ಕೇಳಿದರೆ ನಿನ್ನೆ(ಮೇ 14, ಭಾನುವಾರ) ಎಂದು ಅರ್ಜುನ್ ಹೇಳುತ್ತಾರೆ. ಈ ವಿಡಿಯೋವನ್ನು ಲಖನೌ ಫ್ರಾಂಚೈಸಿ ಹಂಚಿಕೊಂಡಿದೆ.
ವಿಡಿಯೋ ಇಲ್ಲಿದೆ
ಈ ವಿಡಿಯೋವನ್ನು ಲಖನೌ ಫ್ರಾಂಚೈಸಿಯು ಹಂಚಿಕೊಂಡ ಬೆನ್ನಲ್ಲೇ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಹಲವರು ಬಗೆಬಗೆಯ ಮೆಮ್‌ಗಳನ್ನು ಹರಿಬಿಟ್ಟಿದ್ದಾರೆ.
ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಲಖನೌ ಸೂಪರ್ ಜೈಂಟ್ಸ್ ತಂಡ ಸವಾಲೆಸೆಯಲಿದೆ. ಪ್ಲೇ ಆಫ್ ಹಂತದ ದೃಷ್ಟಿಯಂದ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ.
ಮುಂಬೈ ತಂಡದಲ್ಲಿ ಸದ್ಯ ಸೂರ್ಯಕುಮಾರ್ ಯಾದವ್ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಆದರೆ ತಂಡದ ಪ್ರಮುಖ ಯುವ ಆಟಗಾರ ತಿಲಕ್ ವರ್ಮಾ ಗಾಯಗೊಂಡಿದ್ದು, ಅವರ ಲಭ್ಯತೆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಅತ್ತ ಜಸ್ಪ್ರೀತ್ ಬುಮ್ರಾ ಮತ್ತು ಜೋಫ್ರಾ ಆರ್ಚರ್ ಗಾಯದಿಂದಾಗಿ ಹೊರಗುಳಿದಿದ್ದಾರೆ. ಸದ್ಯ ತಂಡದಲ್ಲಿ ಬೇರೆ ಯಾರೂ ವಿಶ್ವದರ್ಜೆಯ ಬೌಲರ್ ಇಲ್ಲ. ಹೀಗಾಗಿ ತಂಡಕ್ಕೆ ಆ ಸಮಸ್ಯೆ ಕಾಡಲಿದೆ.
ಅತ್ತ ಕೃನಾಲ್ ಪಾಂಡ್ಯ ನೇತೃತ್ವದ ಎಲ್‌ಎಸ್‌ಜಿ, 12 ಪಂದ್ಯಗಳಲ್ಲಿ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತಮ್ಮ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ತಂಡವು ಮುಂಬೈ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ತಂಡ ಈ ಎರಡನ್ನೂ ಗೆಲ್ಲಬೇಕಾಗಿದೆ. ಒಂದು ವೇಳೆ ಒಂದನ್ನು ಮಾತ್ರ ಗೆದ್ದರೂ, ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದು. ಈ ಸಂದರ್ಭದಲ್ಲೂ ಅದು ಇತರ ಫಲಿತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ.