Explained: ಎರಡು ವರ್ಷಗಳ ವನವಾಸದ ಬಳಿಕ ಮುಂಬೈ ಇಂಡಿಯನ್ಸ್ ಅನಿರೀಕ್ಷಿತವಾಗಿ ಪ್ಲೇಆಫ್ ಪ್ರವೇಶಿಸಿದ್ದು ಹೀಗೆ
ಆರಂಭದ ಎರಡು ಪಂದ್ಯಗಳಲ್ಲಿ ಸತತ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್, ಕೊನೆಗೂ ಐಪಿಎಲ್ ಪ್ಲೇಆಫ್ ಪ್ರವೇಶಿಸಿದೆ. ತಂಡದ ಪ್ಲೇ ಆಫ್ ಜರ್ನಿ ಹೇಗಿತ್ತು ಎಂಬುದರ ಮೆಲುಕು ಇಲ್ಲಿದೆ.
ಸತತ ಎರಡು ವರ್ಷಗಳ ಕಾಲ ಟ್ರೋಫಿ ಸಮೀಪ ತಲುಪಲು ವಿಫಲವಾಗಿದ್ದ ಮುಂಬೈ ಇಂಡಿಯನ್ಸ್, 2023ರ ಆವೃತ್ತಿಯಲ್ಲಿ ಮತ್ತೆ ಐಪಿಎಲ್ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಆವೃತಿಯ ಆರಂಭದಲ್ಲಿ ಸತತ ಎರಡು ಸೋಲುಗಳೊಂದಿಗೆ ಏಳುಬೀಳುಗಳ ಆವೃತ್ತಿ ಆರಂಭಿಸಿದ ರೋಹಿತ್ ಪಡೆ, ಗುಂಪು ಹಂತದ ಅಂತಿಮ ದಿನದ ಪಂದ್ಯದಲ್ಲಿ ನಿಟ್ಟುಸಿರು ಬಿಟ್ಟಿತು.
ಗುಜರಾತ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಅದಾಗಲೇ ಪ್ಲೇಆಫ್ ಪ್ರವೇಶಿಸಿದ್ದವು. ಭಾನುವಾರ (ಮೇ 21)ದ ಪಂದ್ಯಗಳಲ್ಲಿ ನಾಲ್ಕನೇ ಸ್ಥಾನಿಯಾಗಿ ಪ್ಲೇ ಆಫ್‌ಗೆ ಲಗ್ಗೆ ಹಾಕುವ ಅಂತಿಮ ಸ್ಪರ್ಧಿಯನ್ನು ನಿರ್ಧರಿಸಲು ಪಂದ್ಯ ನಡೆಯಿತು. ಈ ಒಂದು ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ತ್ರಿಕೋನ ಕದನ ಏರ್ಪಟ್ಟಿತ್ತು. ಅಂತಿಮವಾಗಿ ಋತುವಿನ ಅಂತಿಮ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ಸೋಲಿನೊಂದಿಗೆ, ಐದು ಬಾರಿಯ ಚಾಂಪಿಯನ್ ಮುಂಬೈ ಪ್ಲೇ ಆಫ್‌ಗೆ ಲಗ್ಗೆ ಹಾಕಿತು.
ಪ್ರಸಕ್ತ ಆವೃತ್ತಿಯ ಕೊನೆಯ ಡಬಲ್-ಹೆಡರ್ ಪಂದ್ಯದಲ್ಲಿ ಮುಂಬೈ ಮತ್ತು ಆರ್‌ಸಿಬಿ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಗೆಲುವಿನೊಂದಿಗೆ ಉಭಯ ತಂಡಗಳು ಕೂಡಾ ಪ್ಲೇ ಆಫ್ ಪ್ರವೇಶದ ಅವಕಾಶ ಹೊಂದಿತ್ತು. ಆದರೆ ರಾಜಸ್ಥಾನವು ಈ ಎರಡು ತಂಡಗಳ ಸೋಲಿಗಾಗಿ ಕಾದು ನೋಡಬೇಕಾಗಿತ್ತು. ಎಲ್ಲಾ ಮೂರು ತಂಡಗಳು 14 ಅಂಕಗಳನ್ನು ಪಡೆದಿದ್ದರಿಂದ, ಮುಂಬೈ, ಆರ್‌ಸಿಬಿ ಮತ್ತು ರಾಜಸ್ಥಾನಕ್ಕೆ ವಿಭಿನ್ನ ಫಲಿತಾಂಶಗಳು ಬೇಕಾಗಿದ್ದವು. ಆರ್‌ಸಿಬಿಯ ನೆಟ್ ರನ್ ರೇಟ್ ಹೆಚ್ಚಿದ್ದರಿಂದ, ಸಾಮಾನ್ಯ ಗೆಲುವು ತಂಡಕ್ಕೆ ಸಾಕಿತ್ತು. ಆದರೆ, ಮುಂಬೈಗೆ ಭರ್ಜರಿ ಗೆಲುವು ಅನಿವಾರ್ಯವಾಗಿತ್ತು. ಕೊನೆಗೂ ಆರ್‌ಸಿಬಿ ಆಸೆ ಫಲಿಸಲಿಲ್ಲ. ಹೀಗಾಗಿ ಗೆದ್ದ ಮುಂಬೈ ತಂಡ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು.
ಮುಂಬೈಗೆ ಅಂಕಪಟ್ಟಿಯ ಕೊನೆಯ ಸ್ಥಾನಿಯ ಸರಳ ಸವಾಲು ಸಿಕ್ಕಿತು. ಆದರೆ, ಆರ್‌ಸಿಬಿಗೆ ಅಂಕಪಟ್ಟಿಯ ಅಗ್ರಸ್ಥಾನಿಯ ಬಲಿಷ್ಠ ಸವಾಲಿತ್ತು. ಮೊದಲ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಬ್ಯಾಟಿಂಗ್ ಮಾಡಿದ ರೀತಿ ನೋಡಿದರೆ, ಮುಂಬೈಗೆ ಅದು ಸುಲಭ ತುತ್ತಾಗುವ ಸಾಧ್ಯತೆ ಇಲ್ಲವೆಂದೇ ಭಾವಿಸಲಾಗಿತ್ತು. ವಿವಾಂತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಭರ್ಜರಿ ಅರ್ಧಶತಕಗಳನ್ನು ಸಿಡಿಸಿ ತಮ್ಮ ತಂಡದ ಮೊತ್ತವನ್ನು ದ್ವಿಶತಕದತ್ತ ಕೊಂಡೊಯ್ದರು. ಈ ಬೃಹತ್ ಮೊತ್ತ ಮುಂಬೈಗೆ ಸುಲಭ ತುತ್ತಾಯಿತು. ನಾಯಕ ರೋಹಿತ್, ಮುಂಭಾಗದಲ್ಲಿ ನಿಂತು ಚೇಸಿಂಗ್ ಅನ್ನು ಮುನ್ನಡೆಸಿದರು. ಅಲ್ಲದೆ ಆವೃತ್ತಿಯಲ್ಲಿ ಎರಡನೇ ಅರ್ಧಶತಕ ಸಿಡಿಸಿದರು.
ಕ್ಯಾಮರೂನ್ ಗ್ರೀನ್ ಜೊತೆಗೂಡಿದ ರೋಹಿತ್, 10.1 ಓವರ್‌ಗಳಲ್ಲಿ 128 ರನ್ ಕಲೆ ಹಾಕಿದರು. ಗ್ರೀನ್ ಭರ್ಜರಿ ಶತಕದಿಂದಾಗಿ ತಂಡದ ಚೇಸಿಂಗ್ ಸುಲಭವಾಯ್ತು. ಆ ಮೂಲಕ ಎರಡು ಪೂರ್ಣ ಓವರ್‌ಗಳು ಬಾಕಿ ಇರುವಂತೆಯೇ ತಂಡ ಗುರಿ ಬೆನ್ನಟ್ಟಿತು. ಆದರೂ, ತಂಡದ ನೆಟ್ ರನ್ ರೇಟ್ (-0.044) ಆರ್‌ಸಿಬಿ(+0.135)ಗಿಂತ ಕಡಿಮೆ ಇತ್ತು. ಹೀಗಾಗಿ ಆರ್‌ಸಿಬಿ ಭವಿಷ್ಯವು ಕೊನೆಯ ಲೀಗ್ ಪಂದ್ಯದ ಫಲಿತಾಂಶದ ಮೇಲೆ ನಿಂತಿತು.
ಅತ್ತ ಬೆಂಗಳೂರಿನಲ್ಲಿ ಶನಿವಾರದಿಂದಲೇ ಮಳೆಯ ಆರ್ಭಟ ಜೋರಾಗಿತ್ತು. ಹೀಗಾಗಿ ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚಿತ್ತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಿ ಆರ್‌ಸಿಬಿಯ ಪ್ಲೇ ಆಫ್ ಕನಸಿಗೆ ವರುಣ ಅಡ್ಡಿಯಾಗುವ ಆತಂಕವಿತ್ತು. ಆದರೆ, ಒಂದು ಗಂಟೆ ತಡವಾಗಿ ಯಾವುದೇ ಓವರ್‌ಗಳ ಕಡಿತವಿಲ್ಲದೆ ಪಂದ್ಯ ಪ್ರಾರಂಭವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ವಿರಾಟ್ ಕೊಹ್ಲಿ ಅಬ್ಬರದ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 197 ರನ್ ಕಲೆ ಹಾಕಿತು. ಬೃಹತ್ ಗುರಿ ಪಡೆದ ಗುಜರಾತ್, 19.1 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ ಆ ಮೂಲಕ 6 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು. ಆ ಮೂಲಕ ಆರ್‌ಸಿಬಿಯ ಪ್ಲೇ ಆಫ್ ಕನಸಿಗೆ ತಣ್ಣೀರೆರಚಿತು.
ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್, ಆರಂಭದಲ್ಲೇ ವೃದ್ಧಿಮಾನ್ ಸಾಹಾ ವಿಕೆಟ್ ಕಳೆದುಕೊಂಡಿತು. ಆದರೆ, ಶುಬ್ಮನ್ ಗಿಲ್ ಮತ್ತು ವಿಜಯ್ ಶಂಕರ್ ತಂಡಕ್ಕೆ ನಿರಾಸೆ ಮಾಡಲಿಲ್ಲ. ಇವರಿಬ್ಬರೂ ಶತಕದ ಜೊತೆಯಾಟವಾಡಿದರು. ಇದರ ನಡುವೆ ಗಿಲ್ ಮತ್ತು ಶಂಕರ್ ಇಬ್ಬರೂ ಒಬ್ಬರ ಬಳಿಕ ಮತ್ತೊಬ್ಬರಂತೆ ಅರ್ಧಶತಕದ ಗಡಿ ದಾಟಿದರು. 53 ರನ್ ಗಳಿಸಿದ ಶಂಕರ್, ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ದಸುನ್ ಶನಕ, ಶೂನ್ಯಕ್ಕೆ ನಿರ್ಗಮಿಸಿದರು. ಆ ಬಳಿಕ ಬಂದ ಮಿಲ್ಲರ್ ಕೂಡಾ 6 ರನ್ ಗಳಿಸಿ ಔಟಾದರು. ಆದರೆ, ಸ್ಫೋಟಕ ಆಟ ಮುಂದುವರೆಸಿದ ಶುಬ್ಮನ್ ಗಿಲ್, ಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಕೊನೆಯ ಓವರ್‌ನಲ್ಲಿ, ಗುಜರಾತ್ ಗೆಲ್ಲಲು 8 ರನ್‌ಗಳ ಅಗತ್ಯವಿತ್ತು. ಬೌಲರ್ ವೇಯ್ನ್ ಪಾರ್ನೆಲ್ ಆ ಓವರ್‌ನಲ್ಲಿ ನೋಬಾಲ್ ಮತ್ತು ವೈಡ್ ಮೂಲಕ ಹೆಚ್ಚುವರಿ ರನ್ ಬಿಟ್ಟುಕೊಟ್ಟರು. 98 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಗಿಲ್, ಪಂದ್ಯವನ್ನು ಮುಗಿಸಲು 8ನೇ ಸಿಕ್ಸರ್ ಸಿಡಿಸಿದರು. ಅಲ್ಲಿಗೆ ಆರ್‌ಸಿಬಿ ಆಟಗಾರರು ಮತ್ತು ಅಭಿಮಾನಿಗಳ ಆಸೆ ಛಿದ್ರವಾಯ್ತು. ಇದೇ ವೇಳೆ ಬೆಂಗಳೂರಿನಿಂದ ಸಾವಿರಾರು ಮೈಲಿ ದೂರವಿದ್ದ ಮುಂಬೈ ಇಂಡಿಯನ್ಸ್ ಬಳಗದಲ್ಲಿ ಸಂಭ್ರಮ ಮನೆ ಮಾಡಿತು.
ಕಳೆದ ಆವೃತ್ತಿಯಲ್ಲಿ ಇದೇ ರೀತಿಯ ಸನ್ನಿವೇಶ ನಿರ್ಮಾಣವಾಗಿತ್ತು. ಅಂದು ಆರ್‌ಸಿಬಿಯ ಪ್ಲೇ ಆಫ್ ಭವಿಷ್ಯವನ್ನು ಮುಂಬೈ ನಿರ್ಧರಿಸಿತ್ತು. ಮುಂಬೈ ಗೆಲ್ಲುವುದರೊಂದಿಗೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿತ್ತು. ಈ ಬಾರಿ ಆರ್‌ಸಿಬಿ ಸೋಲುವುದರೊಂದಿಗೆ ಮುಂಬೈ ತಂಡವನ್ನು ಪ್ಲೇ ಆಫ್‌ಗೆ ಕಳುಹಿಸಿದೆ.
ವಿಭಾಗ