Najam Sethi: ಪಿಸಿಬಿ ಅಧ್ಯಕ್ಷ ಸ್ಥಾನ ಬೇಡ ಎಂದ ನಜಮ್ ಸೇಥಿ; ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅಸಮಾಧಾನದ ಸುಳಿವು
ಕನ್ನಡ ಸುದ್ದಿ  /  ಕ್ರೀಡೆ  /  Najam Sethi: ಪಿಸಿಬಿ ಅಧ್ಯಕ್ಷ ಸ್ಥಾನ ಬೇಡ ಎಂದ ನಜಮ್ ಸೇಥಿ; ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅಸಮಾಧಾನದ ಸುಳಿವು

Najam Sethi: ಪಿಸಿಬಿ ಅಧ್ಯಕ್ಷ ಸ್ಥಾನ ಬೇಡ ಎಂದ ನಜಮ್ ಸೇಥಿ; ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅಸಮಾಧಾನದ ಸುಳಿವು

Pakistan Cricket Board : ನಾನು ಆಸಿಫ್ ಜರ್ದಾರಿ ಮತ್ತು ಶೆಹಬಾಜ್ ಷರೀಫ್ ನಡುವೆ ವಿವಾದದ ವಸ್ತುವಾಗಲು ಬಯಸುವುದಿಲ್ಲ ಎಂದು ಪಿಸಿಬಿಯ ಹಾಲಿ ಮುಖ್ಯಸ್ಥ ನಜಮ್ ಸೇಥಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ನಜಮ್ ಸೇಥಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ನಜಮ್ ಸೇಥಿ (Getty Images)

ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ (Pakistan Cricket Board) ಅಸಮಾಧಾನ ಭುಗಿಲೆದ್ದಿರುವ ಸುಳಿವು ಸಿಕ್ಕಿದೆ. ಪಿಸಿಬಿಯ ಹಾಲಿ ಅಧ್ಯಕ್ಷರಾಗಿರುವ ನಜಮ್ ಸೇಥಿ (Najam Sethi), ಮಂಡಳಿಯ ಮುಂದಿನ ಅಧ್ಯಕ್ಷರಾಗುವ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಸೇಥಿ ಅವರು ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರ ಪಾತ್ರ ವಹಿಸಿಕೊಂಡರು. ಇವರು ಪಿಸಿಬಿಯ ಮಧ್ಯಂತರ ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿ ಜೂನ್ 21ರವರೆಗಿನ ಅಧಿಕಾರಾವಧಿ ಹೊಂದಿದ್ದಾರೆ.

ಸೇಥಿ ಅವರನ್ನು ಮಂಡಳಿಯ ನೂತನ ಅಧ್ಯಕ್ಷರಾಗಿ ಹೆಸರಿಸಲಾಗುವುದು ಎಂಬ ನಿರೀಕ್ಷೆಗಳಿದ್ದವು. ಆದರೆ, ಸದ್ಯ ಸೇಥಿ ಅವರು ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹಿಂದೆ ಸರಿಯುವುದಾಗಿ ಖುದ್ದು ಹೇಳಿಕೊಂಡಿದ್ದಾರೆ. ಕಳೆದ ಕೆಲವು ವಾರಗಳಿಂದ ಪಿಸಿಬಿಯ ಮಾಜಿ ಅಧ್ಯಕ್ಷರೂ ಆಗಿರುವ ಝಕಾ ಅಶ್ರಫ್ ಅವರು ಪಿಸಿಬಿ ಮುಖ್ಯಸ್ಥಾರಾಗಲಿದ್ದಾರೆ ಎಂಬ ವರದಿಗಳು ಮುನ್ನೆಲೆಗೆ ಬಂದಿವೆ. ಅಶ್ರಫ್ ಪಿಸಿಬಿ ಅಧ್ಯಕ್ಷ ಸ್ಥಾನವನ್ನು ಪಡೆಯುವ ಕುರಿತ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಅದಕ್ಕೂ ಮೊದಲೇ ನಜಮ್ ಸೇಥಿ ಅವರು ಇನ್ನು ಮುಂದೆ ತನ್ನ ಪಾತ್ರದಲ್ಲಿ ಮುಂದುವರೆಯುವುದಿಲ್ಲ ಎಂದು ಟ್ವೀಟ್‌ ಮೂಲಕ ಹೇಳಿಕೊಂಡಿದ್ದಾರೆ.

“ನಾನು ಆಸಿಫ್ ಜರ್ದಾರಿ ಮತ್ತು ಶೆಹಬಾಜ್ ಷರೀಫ್ ನಡುವೆ ವಿವಾದದ ವಸ್ತುವಾಗಲು ಬಯಸುವುದಿಲ್ಲ” ಎಂದು ಹಾಲಿ ಮುಖ್ಯಸ್ಥ ಸೇಥಿ ಟ್ವೀಟ್ ಮಾಡಿದ್ದಾರೆ. “ಇಂತಹ ಅಸ್ಥಿರತೆ ಮತ್ತು ಅನಿಶ್ಚಿತತೆಯು ಪಿಸಿಬಿಗೆ ಒಳ್ಳೆಯದಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಲು ಬಯಸುವುದಿಲ್ಲ. ಆಕಾಂಕ್ಷಿಗಳಿಗೆ ಶುಭವಾಗಲಿ" ಎಂದು ಸೇಥಿ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ಸೇಥಿ ಅವರ ಈ ಟ್ವೀಟ್, ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ದೀರ್ಘಕಾಲದ ರಾಜಕೀಯ ಸನ್ನಿವೇಶದ ಮೇಲೂ ಬೆಳಕು ಚೆಲ್ಲುತ್ತದೆ. ಏಕೆಂದರೆ, ಈ ಸ್ಥಾನವು ದೇಶದ ಪ್ರಧಾನ ಮಂತ್ರಿಯವರ ಶಿಫಾರಸಿನ ಮೇಲೆ ಆಗುತ್ತದೆ. ಹೀಗಾಗಿ ಪಿಸಿಬಿ ಮುಖ್ಯಸ್ಥರ ಸ್ಥಾನದಲ್ಲೂ ರಾಜಕೀಯದ ಮಧ್ಯಪ್ರವೇಶ ಕಂಡು ಬರುತ್ತಿದೆ.

ಈ ಹಿಂದೆ ರಮೀಜ್ ರಾಜಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಬಳಿಕ, ಸೇಥಿ ಪಿಸಿಬಿಯನ್ನು ಮುನ್ನಡೆಸುತ್ತಿದ್ದಾರೆ. ಆದರೆ ಈ ಸ್ಥಾನ ಕಾಯಂ ಅಲ್ಲ. ಅವರ ಆರು ತಿಂಗಳ ಅವಧಿಯಲ್ಲಿ, ಕ್ರಿಕೆಟ್‌ನ ಅರೆಕಾಲಿಕ ನಿರ್ದೇಶಕರಾಗಿ ಮಿಕ್ಕಿ ಆರ್ಥರ್ ಅವರನ್ನು ನೇಮಿಸಿಕೊಳ್ಳುವುದನ್ನು ಮ್ಯಾನೇಜ್‌ಮೆಂಟ್ ಮೇಲ್ವಿಚಾರಣೆ ಮಾಡಿತು. ಸೇಥಿ ಅವರ ಅಧಿಕಾರಾವಧಿಯಲ್ಲಿ ನಡೆದ ಅತ್ಯಂತ ಮಹತ್ವದ ಭಾಗವೆಂದರೆ, ಏಷ್ಯಾಕಪ್‌ನ ಆತಿಥ್ಯ ಮತ್ತು 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆ ಕುರಿತ ಚರ್ಚೆ. ಏಷ್ಯಾಕಪ್‌ ಅನ್ನು ಪೂರ್ಣ ಪ್ರಮಾಣದಲ್ಲಿ ಆಯೋಜಿಸಲು ಯಶಸ್ವಿಯಾಗುವಲ್ಲಿ ಸೇಥಿ ವಿಫಲರಾದರು. ಆದರೆ, ಹೈಬ್ರಿಡ್‌ ಮಾದರಿಯಲ್ಲಿ ನಡೆಸುವ ಅವಕಾಶವನ್ನು ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಸದ್ಯ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಭಾಗವಹಿಸುವಿಕೆಯ ಬಗ್ಗೆ ಪಾಕಿಸ್ತಾನದ ನಿಲುವಿನ ಕುರಿತು ಅಧಿಕೃತವಾಗಿ ಘೋಷಿಸಲು ಪಿಸಿಬಿಯ ಮುಂದಿನ ಅಧ್ಯಕ್ಷರಿಗೆ ಎರಡನೆಯದು ಪ್ರಮುಖ ಸವಾಲು ಉಳಿದಿದೆ. ಅದನ್ನು ಮುಂದಿನ ಅಧ್ಯಕ್ಷರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.