Javed Miandad: ಪಾಕಿಸ್ತಾನ ಕ್ರಿಕೆಟ್ ಉತ್ಕೃಷ್ಟವಾಗಿದೆ, ಭಾರತ ನರಕಕ್ಕೆ ಹೋಗಲಿ; ನಾಲಿಗೆ ಹರಿಬಿಟ್ಟ ಪಾಕ್ ಮಾಜಿ ಕ್ರಿಕೆಟಿಗ
India vs Pakistan : ಪಾಕಿಸ್ತಾನ ಕ್ರಿಕೆಟ್ ದೊಡ್ಡದಾಗಿದೆ. ನಮ್ಮಲ್ಲಿ ಗುಣಮಟ್ಟದ ಆಟಗಾರರನ್ನು ರೂಪಿಸುತ್ತಿದ್ದೇವೆ. ಭಾರತವು ನರಕಕ್ಕೆ ಹೋಗಲಿ. ನಾವು ಭಾರತಕ್ಕೆ ಹೋಗದಿದ್ದರೂ ಚಿಂತೆ ಇಲ್ಲ. ಇದರಿಂದ ಯಾವುದೇ ವ್ಯತ್ಯಾಸ ಆಗಲ್ಲ ಎಂದು ಜಾವೆದ್ ಮಿಯಾಂದಾದ್ ಹೇಳಿದ್ದಾರೆ.
ಈ ವರ್ಷ ನಡೆಯಲಿರುವ ಏಷ್ಯಾಕಪ್ ಟೂರ್ನಿಗೆ (Asia Cup 2023) ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ನಿರಾಕರಿಸಿರುವ ಬಿಸಿಸಿಐ ವಿರುದ್ಧ ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ (Javed Miandad), ಮತ್ತೊಮ್ಮೆ ಕಟು ವಾಗ್ದಾಳಿ ನಡೆಸಿದ್ದಾರೆ.
ಏಷ್ಯಾದ ಕ್ರಿಕೆಟ್ ಮಂಡಳಿಯ ಅನುಮೋದನೆಯ ಬಳಿಕ ಏಷ್ಯಾಕಪ್ ಟೂರ್ನಿಯು 'ಹೈಬ್ರಿಡ್ ಮಾಡೆಲ್' ಅನುಸಾರವಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಅದರ ಪ್ರಕಾರ, ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಈ ಪ್ರಸ್ತಾಪವು ಮಿಯಾಂದಾದ್ ಆಕ್ರೋಶಕ್ಕೆ ಕಾರಣವಾಗಿದೆ. ಭಾರತ ಕ್ರಿಕೆಟ್ ತಂಡವು ಸರಣಿಯನ್ನು ಆಡಲು ಒಪ್ಪದ ಹೊರತು ಪಾಕಿಸ್ತಾನ ಕೂಡಾ ಭಾರತ ಪ್ರವಾಸವನ್ನು ಬಹಿಷ್ಕರಿಸಬೇಕು ಎಂದು ಮಿಯಾಂದಾದ್ ಒತ್ತಾಯಿಸಿದ್ದಾರೆ.
“ಪಾಕಿಸ್ತಾನವು 2012ರಲ್ಲಿ ಭಾರತಕ್ಕೆ ಪ್ರಯಾಣಿಸಿತ್ತು. ಆ ಬಳಿಕ 2016ರಲ್ಲಿ ಕೂಡ ಹಾಗೆಯೇ ನಡೆದಿದೆ. ಆದರೆ, ಈಗ ಭಾರತ ಯೂಟರ್ನ್ ಹೊಡೆಯುತ್ತಿದೆ. ಒಂದು ವೇಳೆ ನಾನು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ, ಯಾವುದೇ ಕಾರಣಕ್ಕೂ ಭಾರತಕ್ಕೆ ಹೋಗುತ್ತಿರಲಿಲ್ಲ. ವಿಶ್ವಕಪ್ ಪಂದ್ಯಾವಳಿಯೇ ಆಗಿದ್ದರೂ ನಾನು ಪಾಕ್ ತಂಡವನ್ನು ಭಾರತಕ್ಕೆ ಕಳುಹಿಸಲ್ಲ. ನಾವು ಭಾರತಕ್ಕೆ ಆತಿಥ್ಯ ನೀಡಲು ಸಿದ್ಧರಿದ್ದೇವೆ. ಆದರೆ ಭಾರತ ಇದುವರೆಗೂ ನಮ್ಮ ರೀತಿ ಯೋಚಿಸಿಯೂ ಇಲ್ಲ, ಪ್ರತಿಕ್ರಿಯಿಸಿಯೂ ಇಲ್ಲ. ಪಾಕಿಸ್ತಾನ ಕ್ರಿಕೆಟ್ ದೊಡ್ಡದಾಗಿದೆ. ನಮ್ಮಲ್ಲಿ ಗುಣಮಟ್ಟದ ಆಟಗಾರರನ್ನು ರೂಪಿಸುತ್ತಿದ್ದೇವೆ. ಭಾರತವು ನರಕಕ್ಕೆ ಹೋಗಬಹುದು. ನಾವು ಭಾರತಕ್ಕೆ ಹೋಗದಿದ್ದರೂ ಚಿಂತೆ ಇಲ್ಲ. ಇದರಿಂದ ಯಾವುದೇ ವ್ಯತ್ಯಾಸ ಆಗಲ್ಲ,” ಎಂದು ಮಿಯಾಂದಾದ್ ಸುದ್ದಿಗಾರರಿಗೆ ತಿಳಿಸಿದರು.
ಭಾರತ-ಪಾಕಿಸ್ತಾನದ ನಡುವಿನ ಈ ಜಟಾಪಟಿ ಏಷ್ಯಾಕಪ್‌ಗಷ್ಟೇ ಸೀಮಿತವಾಗಿಲ್ಲ. ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆಯ ಬಗ್ಗೆಯೂ ಸಾಕಷ್ಟು ಕೂಗು ಎದ್ದಿದೆ. ಪಂದ್ಯಾವಳಿಯ ಬಗ್ಗೆ ಐಸಿಸಿ ಇನ್ನೂ ಅಧಿಕೃತ ಹಾಗೂ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಆದರೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಕದನವು ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆ ಇದೆ. ಇತ್ತೀಚಿನ ವರದಿಗಳ ಪ್ರಕಾರ, ಪಿಸಿಬಿಯ ವಿಶ್ಲೇಷಕರ ತಂಡವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ವಿಶ್ವಕಪ್ ಪಂದ್ಯವು ಚೆನ್ನೈನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಡಬಾರದು ಎಂದು ಸೂಚಿಸಿದೆ.
ರಾಜತಾಂತ್ರಿಕ ಕಾರಣಗಳಿಂದಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ಆಯಾ ದೇಶಗಳಲ್ಲಿ ನಡೆಯುತ್ತಿಲ್ಲ. 26/11ರ ದಾಳಿಯ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದೆ. ಭಾರತವು ಕೊನೆಯದಾಗಿ 2008ರಲ್ಲಿ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಉಭಯ ರಾಷ್ಟ್ರಗಳ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿಯು 2012-2013ರಲ್ಲಿ ನಡೆದಿತ್ತು. ಆಗ ಪಾಕಿಸ್ತಾನವು ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಬಂದಿತ್ತು.
"ಪ್ರತಿಬಾರಿಯೂ ನೆರೆಹೊರೆಯ ದೇಶಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪರಸ್ಪರ ಸಹಕಾರದಿಂದ ಬದುಕುವುದು ಉತ್ತಮ ಎಂದು ನಾನು ಯಾವಾಗಲೂ ಹೇಳುತ್ತೇನೆ. ಕ್ರೀಡೆಯು ಅಭಿಮಾನಿಗಳನ್ನು ಪರಸ್ಪರ ಹತ್ತಿರ ತರುವ ಮತ್ತು ದೇಶಗಳ ನಡುವಿನ ತಪ್ಪು ತಿಳುವಳಿಕೆ ಮತ್ತು ಸಮಸ್ಯೆಗಳನ್ನು ಹೋಗಲಾಡಿಸುವ ಏಕೈಕ ಮಾರ್ಗ. ಅವರು ಮತ್ತೆ ತಮ್ಮ ತಂಡವನ್ನು ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ನಾವು ಈಗ ದೃಢವಾದ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ,” ಎಂದು ಮಿಯಾಂದಾದ್ ಹೇಳಿದ್ದಾರೆ.