Virat Kohli: ಲಂಡನ್​​ನಲ್ಲೇ ಉಳಿದು ಭಜನೆ ಮಾಡ್ತಿರುವ ಕೊಹ್ಲಿ-ಅನುಷ್ಕಾ ಜೋಡಿ; ಕೀರ್ತನೆಯಲ್ಲಿ ವಿರಾಟ್ ದಂಪತಿ ಮಗ್ನ, ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರೀಡೆ  /  Virat Kohli: ಲಂಡನ್​​ನಲ್ಲೇ ಉಳಿದು ಭಜನೆ ಮಾಡ್ತಿರುವ ಕೊಹ್ಲಿ-ಅನುಷ್ಕಾ ಜೋಡಿ; ಕೀರ್ತನೆಯಲ್ಲಿ ವಿರಾಟ್ ದಂಪತಿ ಮಗ್ನ, ವಿಡಿಯೋ ವೈರಲ್

Virat Kohli: ಲಂಡನ್​​ನಲ್ಲೇ ಉಳಿದು ಭಜನೆ ಮಾಡ್ತಿರುವ ಕೊಹ್ಲಿ-ಅನುಷ್ಕಾ ಜೋಡಿ; ಕೀರ್ತನೆಯಲ್ಲಿ ವಿರಾಟ್ ದಂಪತಿ ಮಗ್ನ, ವಿಡಿಯೋ ವೈರಲ್

ಡಬ್ಲ್ಯುಟಿಸಿ ಫೈನಲ್​ ಬಳಿಕ ಟೀಮ್​ ಇಂಡಿಯಾದ ಕೆಲ ಆಟಗಾರರು ಮಾಲ್ಡೀವ್ಸ್​ನಲ್ಲಿ ರಜೆಯ ಮಜಾ ಎಂಜಾಯ್​ ಮಾಡುತ್ತಿದ್ದರೆ, ಲಂಡನ್​ನಲ್ಲೇ ಉಳಿದಿರುವ ವಿರಾಟ್​ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಆಧ್ಯಾತ್ಮಕ ಕಡೆ ವಾಲಿದಿದ್ದಾರೆ.

ಲಂಡನ್​ನಲ್ಲಿ ಕೃಷ್ಣದಾಸ್ ಕೀರ್ತನ ಕಾರ್ಯಕ್ರಮ ಹಾಜರಿಯಾಗಿದ್ದ ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ.
ಲಂಡನ್​ನಲ್ಲಿ ಕೃಷ್ಣದಾಸ್ ಕೀರ್ತನ ಕಾರ್ಯಕ್ರಮ ಹಾಜರಿಯಾಗಿದ್ದ ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ (WTC Final 2023) ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ (India vs Australia) ಹೀನಾಯ ಸೋಲು ಕಂಡಿದೆ. 209 ರನ್​ಗಳ ಅಂತರದಿಂದ ಕಾಂಗರೂ ಪಡೆಗೆ ಶರಣಾಯಿತು. ಈಗಾಗಲೇ ಪಂದ್ಯ ಮುಗಿದು ಒಂದು ವಾರವಾಗಿದೆ. ಒಂದೆಡೆ ಅಭಿಮಾನಿಗಳು ಐಸಿಸಿ ಟ್ರೋಫಿ (ICC Trophy) ಗೆಲ್ಲದ ಬೇಸರದಲ್ಲಿದ್ದರೆ, ಮತ್ತೊಂದೆಡೆ ಕ್ರಿಕೆಟಿಗರು ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದಾರೆ. ಕೆಲವು ಆಟಗಾರರು ಪಂದ್ಯ ಮುಗಿದು ಒಂದು ವಾರವಾದರೂ ಇನ್ನೂ ತವರಿಗೆ ಮರಳಿಲ್ಲ.

ಕೆಲ ಆಟಗಾರರು ಇಂಗ್ಲೆಂಡ್​​ನಿಂದ ನೇರವಾಗಿ ಮನೆಗೆ ಮರಳಿದ್ದು, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆರ್​ ಅಶ್ವಿನ್ ತಮಿಳುನಾಡು ಪ್ರೀಮಿಯರ್ ಲೀಗ್​​ನಲ್ಲಿ ಕಣಕ್ಕಿಳಿದಿದ್ದಾರೆ. ನಾಯಕ ರೋಹಿತ್​ ಶರ್ಮಾ ಮಾಲ್ಡೀವ್ಸ್​​ನಲ್ಲಿ ವೆಕೇಷನ್​ ಎಂಜಾಯ್​ ಮಾಡುತ್ತಿದ್ದಾರೆ. ಆದರೆ ಮಾಜಿ ನಾಯಕ ವಿರಾಟ್​ ಕೊಹ್ಲಿ ಮಾತ್ರ, ಇನ್ನೂ ಇಂಗ್ಲೆಂಡ್​​ನಲ್ಲೇ ಉಳಿದುಕೊಂಡಿದ್ದಾರೆ.

ಆಧ್ಯಾತ್ಮಿಕತೆಯತ್ತ ವಿರಾಟ್​ ಕೊಹ್ಲಿ

ಕೆಲ ಆಟಗಾರರು ಮಾಲ್ಡೀವ್ಸ್​ನಲ್ಲಿ ರಜೆಯ ಮಜಾ ಎಂಜಾಯ್​ ಮಾಡುತ್ತಿದ್ದರೆ, ಲಂಡನ್​ನಲ್ಲೇ ಉಳಿದಿರುವ ವಿರಾಟ್​ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ (Virat Kohli and Anushka Sharma) ಅವರು ಆಧ್ಯಾತ್ಮಕ ಕಡೆ ವಾಲಿದಿದ್ದಾರೆ. ಕಳೆದ ಒಂದು ವರ್ಷದಿಂದ ಭಾರತದಲ್ಲಿ ದೇವಸ್ಥಾನಗಳಿಗೆ ಪದೆಪದೇ ಭೇಟಿ ನೀಡುತ್ತಿರುವ ಕೊಹ್ಲಿ, ಇದೀಗ ಇಂಗ್ಲೆಂಡ್​ನಲ್ಲೂ ಆಧ್ಯಾತ್ನಿಕತೆ ಮುಂದುವರೆಸಿದ್ದಾರೆ. ಇದು ಅಭಿಮಾನಿಗಳನ್ನು ಮತ್ತಷ್ಟು ಅಚ್ಚರಿ ಮೂಡಿಸಿದೆ. ಹೀಗೆ ಆಧ್ಯಾತ್ಮಕದ ಕಡೆ ಮರಳಲು ಕಾರಣ ಏನೆಂದು ಹುಡುಕಾಟ ನಡೆಸುತ್ತಿದ್ದಾರೆ.

ಕೃಷ್ಣ ದಾಸ್ ಕೀರ್ತನ ಕಾರ್ಯಕ್ರಮ ಹಾಜರಿ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ನಡೆದ ಕೃಷ್ಣ ದಾಸ್ ಕೀರ್ತನ್ ಶೋನಲ್ಲಿ ವಿಶೇಷ ಕಾಣಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳನ್ನು ಸಂತೋಷಪಡಿಸಿದ್ದಾರೆ. ನಗರದ ಪ್ರತಿಷ್ಠಿತ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಜೋಡಿ, ಭಕ್ತಿ ಸಂಗೀತದ ಮನಮೋಹಕ ಮಧುರ ಗೀತೆಗಳಲ್ಲಿ ಸಂಪೂರ್ಣವಾಗಿ ಮಗ್ನವಾಗಿತ್ತು. ಅವರು ಹಾಜರಾಗಿದ್ದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ.

ಇತ್ತೀಚಿಗೆ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಮೂಲಕ ತಾತ್ವಿಕ ಉಲ್ಲೇಖಗಳು, ಸ್ಪೂರ್ತಿದಾಯಕ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿಯೂ ಸಹ ತಮ್ಮ ಅಭಿಮಾನಿಗಳನ್ನು ಪ್ರೇರೇಪಿಸುವಂತ ಕೋಟ್ಸ್​ ಹಂಚಿಕೊಂಡಿದ್ದರು. ತಂಡದ ಸೋಲಿನ ನಂತರ ಅವರು ಚೀನಾದ ತತ್ವಜ್ಞಾನಿ ಲಾವೊ ತ್ಸು ಅವರ 'ಮೌನವು ದೊಡ್ಡ ಶಕ್ತಿಯ ಮೂಲ' ಎಂಬ ಸುಭಾಷಿತವನ್ನು ಹಂಚಿಕೊಂಡಿದ್ದರು.

ಕೊಹ್ಲಿ ಮತ್ತೊಮ್ಮೆ ತಮ್ಮ ಇತ್ತೀಚಿನ ಪೋಸ್ಟ್‌ನೊಂದಿಗೆ ಹೊಸ ಚರ್ಚೆ ಹುಟ್ಟುಹಾಕಿದ್ದರು. ಇಂಗ್ಲಿಷ್ ಬರಹಗಾರ ಅಲನ್ ವಾಟ್ಸ್ ಅವರ ಸುಭಾಷಿತವನ್ನು ಹಂಚಿಕೊಂಡಿದ್ದರು. ಡಬ್ಲ್ಯುಟಿಸಿ ಫೈನಲ್​ನಲ್ಲಿ ವಿರಾಟ್​ ಕೊಹ್ಲಿ ಮೊದಲ ಇನ್ನಿಂಗ್ಸ್‌ 14 ಮತ್ತು 2ನೇ ಇನ್ನಿಂಗ್ಸ್​​ನಲ್ಲಿ 49 ರನ್ ಗಳಿಸಿದರು. ಆಸ್ಟ್ರೇಲಿಯಾ 444 ರನ್​ಗಳ ಬೃಹತ್​ ಟಾರ್ಗೆಟ್​ ನೀಡಿತ್ತು. ಕೊಹ್ಲಿ, ಅಜಿಂಕ್ಯ ರಹಾನೆ ಅಲ್ಪ ಹೋರಾಟದ ನಡುವೆ 209 ರನ್​ಗಳಿಂದ ಸೋಲು ಕಂಡಿತು.

ಇದಕ್ಕೂ ಮುನ್ನ ವಿರುಷ್ಕಾ ಜೋಡಿ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಉಜ್ಜಯನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

ಕೊಹ್ಲಿ-ಅನುಷ್ಕಾ ರಿಷಿಕೇಶಕ್ಕೆ ಭೇಟಿ!

ಫೆಬ್ರವರಿ 9ರಿಂದ ಇಂಡೋ-ಆಸಿಸ್​​ ಹೈವೋಲ್ಟೇಜ್​ ಟೆಸ್ಟ್​​ ಸಿರೀಸ್​​​ಗೂ ಮುನ್ನ ಆಧ್ಯಾತ್ಮದ ಕಡೆ ಒಲವು ತೋರಿದ್ದ ಕೊಹ್ಲಿ, ಅನುಷ್ಕಾ ಜೊತೆಗೆ ಉತ್ತರಾಖಾಂಡ್​​ನ ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ದಯಾನಂದ ಗಿರಿ ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಅಲ್ಲಿ ಯೋಗಾಭ್ಯಾಸ, ಪೂಜೆಯ ನಂತರ ಆಶ್ರಮದಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನ ಹಾಗೂ ಭಂಡಾರದಲ್ಲಿ ಕೊಹ್ಲಿ ಮತ್ತು ಕುಟುಂಬ ಭಾಗವಹಿಸಿತ್ತು.

ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ!

ಇದಕ್ಕೂ ಮುನ್ನ ಫೇಲ್ಯೂರ್ ಎಂಬ ಪೆಡಂಭೂತದಲ್ಲಿ ಸಿಲುಕಿದ್ದ ಕೊಹ್ಲಿ, ಏಷ್ಯಾಕಪ್​​​​ನಲ್ಲಿ ಆರ್ಭಟ ಮಾಡಿದ್ದರು. ಬಳಿಕ ಬಾಬಾ ಕರೋಲಿ ಫೋಟೋ ಶೇರ್​​​ ಮಾಡಿದ್ದರು. T20 ವಿಶ್ವಕಪ್​​ನಲ್ಲಿ ಭರ್ಜರಿ ಬ್ಯಾಟಿಂಗ್​​ ನಡೆಸಿ ಸ್ಟ್ರಾಂಗ್​​​ ಕಂ​ಬ್ಯಾಕ್​ ಮಾಡಿದ್ದರು. ಟೂರ್ನಿ ಮುಗಿಸಿದ ಬೆನ್ನಲ್ಲೇ ನವೆಂಬರ್​ನಲ್ಲಿ ಕೊಹ್ಲಿ, ಅನುಷ್ಕಾ ಜೊತೆಗೆ ಉತ್ತರ ಪ್ರದೇಶದ ಮಥುರಾದಲ್ಲಿರುವ ಪ್ರಸಿದ್ಧ ವೃಂದಾವನಕ್ಕೆ ಭೇಟಿ ನೀಡಿ ನೀಡಿ, ಶ್ರೀ ಪರಮಾನಂದರ ಆಶೀರ್ವಾದ ಪಡೆದಿದ್ದರು.

ಪ್ರೇಮಾನಂದ​ ಸ್ವಾಮಿಗಳ ಆಶೀರ್ವಾದ!

ನೀಮ್​ ಕರೋಲಿ ಬಾಬಾ ಆಶೀರ್ವಾದ ಪಡೆದ ಬಳಿಕ ಜನವರಿಯಲ್ಲಿ ಮತ್ತೊಂದು ಆಶ್ರಮಕ್ಕೆ ಕೊಹ್ಲಿ ದಂಪತಿ ಭೇಟಿ ನೀಡಿತ್ತು. ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಪ್ರೇಮಾನಂದ ಗೋವಿಂದ ಶರಣ್ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಿದ್ದರು. ಕೊಹ್ಲಿ, ಅನುಷ್ಕಾ, ಪುತ್ರಿ ವಮಿಕಾ ಜೊತೆ ಈ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು. ಬಳಿಕ ಶ್ರೀಲಂಕಾ ಸರಣಿಯಲ್ಲಿ ಕೊಹ್ಲಿ, ಎರಡು ಶತಕ ಸಿಡಿಸಿ ಮಿಂಚಿನ ಪ್ರದರ್ಶನ ನೀಡಿದ್ದರು.

ವೆಸ್ಟ್​ ಇಂಡೀಸ್​ ಸರಣಿಗೆ ವಿಶ್ರಾಂತಿ ಸಾಧ್ಯತೆ

ಜುಲೈ 12ರಿಂದ ಭಾರತ-ವೆಸ್ಟ್ ಇಂಡೀಸ್ ನಡುವೆ ಮೂರು ಫಾರ್ಮೆಟ್​​​ಗಳ ಸರಣಿ ನಡೆಯಲಿದೆ. ಬಿಸಿಸಿಐ ಶೀಘ್ರದಲ್ಲೇ ಈ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಲಿದೆ. ಏಕದಿನ ವಿಶ್ವಕಪ್ ಮತ್ತು ಏಷ್ಯಾಕಪ್ 2023 ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದರೂ ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಐಪಿಎಲ್ 2023ರಲ್ಲಿ 2 ಬ್ಯಾಕ್ ಟು ಬ್ಯಾಕ್ ಶತಕಗಳೊಂದಿಗೆ 639 ರನ್ ಗಳಿಸಿರುವ ಕೊಹ್ಲಿ, ಟಿ20 ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ. 2024 ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಂತಹ ಹಿರಿಯರನ್ನು ಕಡಿಮೆ ಸ್ವರೂಪದಿಂದ ದೂರವಿಡುತ್ತಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.