WTC Final 2023: ಭಾರತ ಸೋತರೂ ವೀಕ್ಷಣೆಯಲ್ಲಿ ದಾಖಲೆ ಬರೆದ ಡಬ್ಲ್ಯುಟಿಸಿ ಫೈನಲ್ ಪಂದ್ಯ; ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು
WTC Final 2023: ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋತಿದ್ದರೂ ಸ್ಟಾರ್ ವೀಕ್ಷಕರ ರೇಟಿಂಗ್ ದಾಖಲೆಗಳನ್ನು ಧೂಳೀಪಟಗೊಳಿಸಿದೆ. ಇದು ಟೆಸ್ಟ್ ಇತಿಹಾಸದಲ್ಲೇ ಮೊದಲು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ (WTC Final 2023) ಟೀಮ್ ಇಂಡಿಯಾ (Team India) ಹೀನಾಯ ಸೋಲು ಕಂಡಿದೆ. ಲಂಡನ್ನ ಓವಲ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು (Australia) ದಾಖಲೆಯ ವಿಶ್ವ ಟೆಸ್ಟ್ ಚಾಂಪಿಯನ್ ಪ್ರಶಸ್ತಿ ಗೆದ್ದಿತ್ತು. ಮೂರು ಮಾದರಿಯಲ್ಲೂ ವಿಶ್ವಕಪ್ ಗೆದ್ದ ಹೆಗ್ಗಳಿಕೆಗೆ ಆಸಿಸ್ ಪಾತ್ರವಾಯಿತು.
ನಿರೀಕ್ಷೆ ಹೆಚ್ಚಿಸಿದ್ದ ಟೀಮ್ ಇಂಡಿಯಾ, 209 ರನ್ಗಳ ಹೀನಾಯ ಸೋಲಿಗೆ ಶರಣಾಯಿತು. ಸತತ ಎರಡನೇ ಬಾರಿಯೂ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಜೊತೆಗೆ 10 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸುವಲ್ಲೂ ಎಡವಿತು. ಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋತಿದ್ದರೂ ಸ್ಟಾರ್ ವೀಕ್ಷಕರ ರೇಟಿಂಗ್ ದಾಖಲೆಗಳನ್ನು ಧೂಳೀಪಟಗೊಳಿಸಿದೆ. ಇದು ಟೆಸ್ಟ್ ಇತಿಹಾಸದಲ್ಲೇ ಮೊದಲು.
124 ಮಿಲಿಯನ್ ವೀಕ್ಷಣೆ
ವಿಶ್ವಾದ್ಯಂತ ಭಾರತ ಮತ್ತು ಆಸ್ಟ್ರೇಲಿಯಾ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಬರೋಬ್ಬರಿ 124 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಬಾರ್ಕ್ ಸಂಸ್ಥೆಯ ವರದಿ ಬಹಿರಂಗಪಡಿಸಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಪಂದ್ಯವೊಂದಕ್ಕೆ ಅತಿ ಹೆಚ್ಚು ವೀಕ್ಷಕರ ಸಂಖ್ಯೆಯಾಗಿದೆ. 2023ರ ಡಬ್ಲ್ಯುಟಿಸಿ ಫೈನಲ್ ವೀಕ್ಷಣೆಯ ದಾಖಲೆಯು 2021ರ ಫೈನಲ್ಗಿಂತ ಶೇ 32ರಷ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಟಾರ್ ಸ್ಪೋರ್ಟ್ಸ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಡಬ್ಲ್ಯುಟಿಸಿ ಫೈನಲ್ ಪಂದ್ಯವು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಪಡೆದಿದ್ದು ತುಂಬಾ ಖುಷಿಯಾಗಿದೆ. ಇದು ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಭಾವಿಸುತ್ತೇವೆ. ಸ್ಟಾರ್ ಸ್ಪೋರ್ಟ್ಸ್‌ನ ಮಾರ್ಕೆಟಿಂಗ್ ಕೌಶಲ್ಯಗಳು, ಗುಣಮಟ್ಟ, ಸುಧಾರಿತ ತಂತ್ರಜ್ಞಾನದಲ್ಲಿ ರಾಜಿಯಾಗದಂತೆ ನಾವು ಒದಗಿಸಿದ ಪ್ರಸಾರಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೇಶದಲ್ಲಿ ಕ್ರಿಕೆಟ್ ಮೇಲಿನ ಪ್ರೀತಿ ಈ ದಾಖಲೆಯನ್ನು ಸಾಧಿಸಲು ಕಾರಣವಾಯಿತು ಎಂದರು.
ಇಂಗ್ಲೆಂಡ್ನಲ್ಲಿ ಟೆಸ್ಟ್ ಕ್ರಿಕೆಟ್ ಅನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ. ತಮ್ಮ ದೇಶದ ತಂಡವಾದರೂ ಅಷ್ಟೇ ಬೇರೆ ದೇಶದ ತಂಡವಾದರೂ ಅಷ್ಟೇ ಬೆಂಬಲ ಸೂಚಿಸುತ್ತಾರೆ. ಪರಿಣಾಮ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು. 2018 ರಿಂದ 2022ರ ಐಪಿಎಲ್ವರೆಗೂ ಬಿಸಿಸಿಐ ಜೊತೆಗೆ ಟಿವಿ ಮತ್ತು ಡಿಜಿಟಲ್ ಹಕ್ಕುಗಳಿಗಾಗಿ ಸ್ಟಾರ್ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ವರ್ಷ ಡಿಜಿಟಲ್ ಹಕ್ಕುಗಳು ಜಿಯೋ ಪಡೆದುಕೊಂಡಿತ್ತು. ಸ್ಟಾರ್ ಮಾತ್ರ ಟಿವಿ ಹಕ್ಕುಗಳನ್ನು ಉಳಿಸಿಕೊಂಡಿತ್ತು.
ಸ್ಕೋರ್ ವಿವರ
3 ವಿಕೆಟ್ ನಷ್ಟಕ್ಕೆ 164 ರನ್ಗಳೊಂದಿಗೆ 5ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ ಗೆಲುವಿಗೆ ಇನ್ನೂ 280 ರನ್ ಬೇಕಿತ್ತು. ಆದರೆ, ಆಸಿಸ್ ಬೌಲರ್ಗಳ ಮಾರಕ ಬೌಲಿಂಗ್ ದಾಳಿಗೆ ಬೆದರಿದ ಭಾರತದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಇದರೊಂದಿಗೆ ಭೋಜನ ವಿರಾಮಕ್ಕೂ ಮುನ್ನವೇ ಸರ್ವಪತನ ಕಂಡಿತು. 5ನೇ ದಿನದಲ್ಲಿ 70 ರನ್ ಗಳಿಸಿ ಉಳಿದ 7 ವಿಕೆಟ್ಗಳನ್ನೂ ಕಳೆದುಕೊಂಡಿತು. 234 ರನ್ಗಳಿಗೆ ಸರ್ವಪತನ ಕಂಡಿತು.
ಸ್ಕೋರ್ ವಿವರ
- ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ - 469/10
- ಭಾರತ ತಂಡ ಮೊದಲ ಇನ್ನಿಂಗ್ಸ್ - 296/10
- ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ - 270/8 ಡಿಕ್ಲೇರ್
- ಭಾರತ ತಂಡ ಎರಡನೇ ಇನ್ನಿಂಗ್ಸ್ - 234/10
3 ಫಾರ್ಮೆಟ್ನಲ್ಲೂ ಆಸ್ಟ್ರೇಲಿಯಾ ಚಾಂಪಿಯನ್
ಡಬ್ಲ್ಯುಟಿಸಿ ಫೈನಲ್ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಐತಿಹಾಸಿಕ ದಾಖಲೆ ಬರೆದಿದೆ. ಏಕದಿನ, ಟಿ20 ಮತ್ತು ಟೆಸ್ಟ್ ಮೂರು ಫಾರ್ಮೆಟ್ನಲ್ಲೂ ಚಾಂಪಿಯನ್ ಆದ ವಿಶ್ವ ಕ್ರಿಕೆಟ್ನಲ್ಲಿ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.