ಕನ್ನಡ ಸುದ್ದಿ  /  Sports  /  Danish Kaneria Says Kohli And Rohit No Need To Be Afraid Of Shaheen

Asia Cup: 'ಶಾಹೀನ್‌ ಅಫ್ರಿದಿಗೆ ಹೆದರುವ ಅಗತ್ಯವಿಲ್ಲ', ಕೊಹ್ಲಿ-ರೋಹಿತ್‌ಗೆ ಪಾಕ್‌ ಮಾಜಿ ಕ್ರಿಕೆಟಿಗನ ಸಲಹೆ

“ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ವದರ್ಜೆಯ ಬ್ಯಾಟ್ಸ್‌ಮನ್‌ಗಳಾಗಿರುವುದರಿಂದ, ಅವರು ಶಾಹೀನ್ ಅಫ್ರಿದಿ ಬಗ್ಗೆ ಭಯಪಡುವ ಅಗತ್ಯವಿಲ್ಲ. ಶಾಹೀನ್ ಪೂರ್ಣವಾಗಿ ಬೌಲ್ ಮಾಡಲು ಮತ್ತು ಚೆಂಡನ್ನು ಅವರತ್ತ ಸ್ವಿಂಗ್‌ ಮಾಡಲು ನೋಡುತ್ತಾರೆ ಎಂದು ಅವರು ತಿಳಿದಿರಬೇಕು.” ಎಂದು ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಸೋಲನ್ನು ಮರೆಯಲು ಸಾಧ್ಯವೇ?‌ ಖಂಡಿತಾ ಇಲ್ಲ. ಅದು ಕೂಡಾ 10 ವಿಕೆಟ್‌ಗಳ ಹೀನಾಯ ಸೋಲು. ಆ ಸೋಲಿನ ಬಳಿಕ, ಇದೇ ಮೊದಲ ಬಾರಿಗೆ ಏಷ್ಯಾಕಪ್‌ ಮೂಲಕ ಉಭಯ ರಾಷ್ಟ್ರಗಳು ಮುಖಾಮುಖಿಯಾಗುತ್ತಿದೆ. ಅದು ಕೂಡಾ, ವಿಶ್ವಕಪ್‌ ಸೋಲಿಗೆ ಕಾರಣವಾದ ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲೇ ಈ ಕಾದಾಟವೂ ನಡೆಯಲಿದೆ.

ಈ ಬಾರಿಯ ಏಷ್ಯಾ ಕಪ್‌ನಲ್ಲಿ ಭಾರತದ ಮೊದಲ ಮುಖಾಮುಖಿಯೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ. ಕಳೆದ ಬಾರಿಯ ವಿಶ್ವಕಪ್‌ ಸೋಲು, ಭಾರತದ ಕ್ರಿಕೆಟ್‌ ಇತಿಹಾಸದಲ್ಲಿ ಕಹಿ ಘಟನೆ ಎಂದರೆ ತಪ್ಪಲ್ಲ. ಯಾಕೆಂದರೆ, ಯಾವುದೇ ಮಾದರಿಯ ವಿಶ್ವಕಪ್ ಕೂಟದಲ್ಲಿ (ಏಕದಿನ ಮತ್ತು ಟಿ20) ಭಾರತದ ವಿರುದ್ಧ ಪಾಕಿಸ್ತಾನ ಗಳಿಸಿದ ಮೊದಲ ಗೆಲುವು ಇದಾಗಿತ್ತು. ಈ ಪಂದ್ಯದಲ್ಲಿ ಭಾರತಕ್ಕೆ ಮುಳುವಾಗಿದ್ದು, ವೇಗಿ ಶಾಹೀನ್‌ ಅಫ್ರಿದಿ. ಬಾರತದ ಅಗ್ರ ಕ್ರಮಾಂಕದ ಮೊದಲ ಮೂರು ವಿಕೆಟ್‌ಗಳನ್ನು ಕಿತ್ತು ಗೆಲುವಿನ ರೂವಾರಿಯಾದ್ರು. ಕೆಎಲ್ ರಾಹುಲ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಆರಂಭದಲ್ಲಿ ಔಟ್‌ ಮಾಡಿದ ಶಾಹೀನ್ ಆಫ್ರಿದಿ, ತಂಡವನ್ನು ಫೈನಲ್‌ವರೆಗೂ ಮುನ್ನಡೆಸಿದರು.

ಆದರೆ, ಏಷ್ಯಾಕಪ್ ನಡೆಯಲು ಕೆಲವೇ ದಿನಗಳು ಬಾಕಿ ಇರುವಂತೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಭಾರತಕ್ಕೊಂದು ಸಲಹೆ ನೀಡಿದ್ದಾರೆ. ಹೊಸ ಚೆಂಡಿನೊಂದಿಗೆ ಅಫ್ರಿದಿಯ ಬೌಲಿಂಗ್‌ಅನ್ನು ಭಾರತ ಹೇಗೆ ಎದುರಿಸುಬಹುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅಫ್ರಿದಿ ಉತ್ತಮ ಬೌಲರ್‌ಗಳಲ್ಲಿ ಒಬ್ಬರು. ಪವರ್‌ಪ್ಲೇನಲ್ಲಿ ಹೊಸ ಚೆಂಡಿನೊಂದಿಗೆ ಅವರ ಪೂರ್ಣ ಎಸೆತಗಳು ತಂಡಕ್ಕೆ ವರದಾನ. ತಮ್ಮ ಕರಾರುವಕ್‌ ಲೈನ್‌ ಆಂಡ್‌ ಲೆಂತ್‌ ದಾಳಿಯ ಮೂಲಕ ಎಂತಹ ಬ್ಯಾಟರ್‌ಗಳನ್ನಾದರೂ ಪೆವಿಲಿಯನ್‌ಗೆ ಕಳುಹಿಸುವ ಚಾಕಚಕ್ಯತೆ ಅವರಲ್ಲಿದೆ. ಅದೇ ರೀತಿಯಾಗಿ ಕಳೆದ ವಿಶ್ವಕಪ್‌ನಲ್ಲಿ ಅವರು ತಮ್ಮ ಮೊದಲ ಎರಡು ಓವರ್‌ಗಳಲ್ಲಿ ರೋಹಿತ್ ಮತ್ತು ರಾಹುಲ್ ಇಬ್ಬರನ್ನೂ ಔಟ್ ಮಾಡಿದ್ದರು. ಭಾರತವು 2.1 ಓವರ್‌ಗಳಲ್ಲಿ ಕೇವಲ ಆರು ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.

ಇದೇ ವಿಚಾರವಾಗಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕನೇರಿಯಾ; ಕೊಹ್ಲಿ ಮತ್ತು ರೋಹಿತ್ ಅಫ್ರಿದಿಯ ಸಂಪೂರ್ಣ ಎಸೆತಗಳನ್ನು ಹೇಗೆ ಎದುರಿಸಬಹುದು ಎಂಬುದನ್ನು ವಿವರಿಸಿದ್ದಾರೆ. ಸದ್ಯ ಉತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಉದಾಹರಣೆಯನ್ನು ನೀಡಿದ ಮಾಜಿ ಲೆಗ್ ಸ್ಪಿನ್ನರ್, ಸೂರ್ಯರಂತಹ ಉತ್ತಮ ಫ್ಲಿಕ್ ಶಾಟ್ ಮೂಲಕ ಎಡಗೈ ಸೀಮರ್‌ಗಳ ವಿರುದ್ಧ ಸೂಕ್ತವಾಗಿ ಬ್ಯಾಟ್‌ ಬೀಸಬಹುದು ಎಂದು ಸಲಹೆ ನೀಡಿದ್ದಾರೆ.

“ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ವದರ್ಜೆಯ ಬ್ಯಾಟ್ಸ್‌ಮನ್‌ಗಳಾಗಿರುವುದರಿಂದ, ಅವರು ಶಾಹೀನ್ ಅಫ್ರಿದಿ ಬಗ್ಗೆ ಭಯಪಡುವ ಅಗತ್ಯವಿಲ್ಲ. ಶಾಹೀನ್ ಪೂರ್ಣವಾಗಿ ಬೌಲ್ ಮಾಡಲು ಮತ್ತು ಚೆಂಡನ್ನು ಅವರತ್ತ ಸ್ವಿಂಗ್‌ ಮಾಡಲು ನೋಡುತ್ತಾರೆ ಎಂದು ಅವರು ತಿಳಿದಿರಬೇಕು. ಆದ್ದರಿಂದ ಅವರು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸ್ಕ್ವೇರ್ ಲೆಗ್‌ನತ್ತ ಸೂರ್ಯಕುಮಾರ್ ಯಾದವ್ ಬಾರಿಸುವ ಫ್ಲಿಕ್ ಶಾಟ್‌ಗಳು, ಶಾಹೀನ್ ಅವರ ಬೌಲಿಂಗ್‌ ವೇಳೆ ಮುಖ್ಯವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ.

“ಎಡಗೈ ವೇಗಿಗಳು ಈ ಹಿಂದೆಯೂ ಭಾರತದ ಅಗ್ರ ಕ್ರಮಾಂಕಕ್ಕೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದ್ದಾರೆ. ರೋಹಿತ್, ರಾಹುಲ್ ಮತ್ತು ಕೊಹ್ಲಿ, ಟ್ರೆಂಟ್ ಬೌಲ್ಟ್ ಮತ್ತು ಅಫ್ರಿದಿಯಂತಹ ಬೌಲರ್‌ಗಳನ್ನು ಎದುರಿಸಲು ಕಷ್ಟಪಟ್ಟಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನ ರೀಸ್ ಟೋಪ್ಲಿ ಮತ್ತು ವೆಸ್ಟ್ ಇಂಡೀಸ್‌ನ ಒಬೆಡ್ ಮೆಕಾಯ್ ಕೂಡಾ ಭಾರತದ ಬಲಗೈ ಆಟಗಾರರಿಗೆ ಕಾಟ ಕೊಟ್ಟಿದ್ದರು. ಆದರೆ ಅದನ್ನು ಸಮರ್ಥವಾಗಿ ಎದುರಿಸಲು ಭಾರತೀಯರು ಕಲಿಯಬೇಕು” ಎಂದು ಹೇಳಿದ್ದಾರೆ.

ವಿಭಾಗ