ಕನ್ನಡ ಸುದ್ದಿ  /  ಕ್ರೀಡೆ  /  ಜಪಾನ್ ಮಾಸ್ಟರ್ಸ್‌: ಎಚ್‌ಎಸ್‌ ಪ್ರಣಯ್‌ಗೆ ಸೋಲು, ಭಾರತದ ಅಭಿಯಾನ ಅಂತ್ಯ

ಜಪಾನ್ ಮಾಸ್ಟರ್ಸ್‌: ಎಚ್‌ಎಸ್‌ ಪ್ರಣಯ್‌ಗೆ ಸೋಲು, ಭಾರತದ ಅಭಿಯಾನ ಅಂತ್ಯ

HS Prannoy: ಜಪಾನ್ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಎಚ್‌ ಎಸ್ ಪ್ರಣಯ್ ನಿರ್ಗಮಿಸಿದ್ದಾರೆ. ಈ ಸೋಲಿನೊಂದಿಗೆ ಭಾರತದ ಅಭಿಯಾನ ಅಂತ್ಯಗೊಂಡಿದೆ.

ಎಚ್‌ಎಸ್ ಪ್ರಣಯ್
ಎಚ್‌ಎಸ್ ಪ್ರಣಯ್ (PTI)

ಜಪಾನ್ ಮಾಸ್ಟರ್ಸ್ ಸೂಪರ್ 500 (Japan Masters Super 500 ) ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಶಟ್ಲರ್ ಎಚ್‌ಎಸ್ ಪ್ರಣಯ್ (HS Prannoy) ಸೋತು ನಿರ್ಗಮಿಸಿದ್ದಾರೆ. ಜಪಾನ್‌ನ ಕುಮಾಮೊಟೊದಲ್ಲಿ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ (Chou Tien Chen) ವಿರುದ್ಧ ಸೋತು ಪರಾಭವಗೊಂಡರು.

ಟ್ರೆಂಡಿಂಗ್​ ಸುದ್ದಿ

ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್‌ ತಾರೆ, ಬೆನ್ನುನೋವಿನಿಂದ ಚೇತರಿಸಿಕೊಂಡು ಮೈದಾನಕ್ಕೆ ಇಳಿದಿದ್ದಾರೆ. ಆರಂಭಿಕ ಸೆಟ್‌ನಲ್ಲಿ ಗೆದ್ದ ಅವರು, ಬಳಿಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಅಂತಿಮವಾಗಿ 21-19, 16-21 ಹಾಗೂ 19-21ರಿಂದ ಸೋತು ಹೊರಬಿದ್ದರು. ಬರೋಬ್ಬರಿ 73 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅಂತಿಮವಾಗಿ ವಿಶ್ವದ 12ನೇ ಶ್ರೇಯಾಂಕದ ಚೆನ್ ಮೇಲುಗೈ ಸಾಧಿಸಿದರು.

ವಿಶ್ವದ 8ನೇ ಶ್ರೇಯಾಂಕದ ಭಾರತೀಯ ಆಟಗಾರ, ಮೊದಲ ಗೇಮ್‌ನಲ್ಲಿ ಹಿಡಿತ ಸಾಧಿಸಿದರು. ಆ ನಂತರದ ಎರಡೂ ಗೇಮ್‌ಗಳನ್ನು ಕಳೆದುಕೊಂಡರು. ಆರಂಭಿಕ ಹಿನ್ನಡೆಯ ನಂತರವೂ ಚೆನ್ ಚಾಣಾಕ್ಷ ಆಟವಾಡಿದರು. ಹೀಗಾಗಿ ಪ್ರಣಯ್‌ಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.

ಕಳೆದ ತಿಂಗಳು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಪ್ರಣಯ್ ಭಾಗಿಯಾಗುತ್ತಿರುವ ಮೊದಲ ಪಂದ್ಯಾವಳಿ ಇದಾಗಿದೆ. ಬೆನ್ನುನೋವಿನಿಂದಾಗಿ ಅವರು ಡೆನ್ಮಾರ್ಕ್ ಮತ್ತು ಫ್ರೆಂಚ್ ಓಪನ್‌ನಿಂದ ಹೊರಗುಳಿಯಬೇಕಾಯಿತು.

ಪ್ರಣಯ್ ಅವರ ಸೋಲಿನೊಂದಿಗೆ ಜಪಾನ್ ಮಾಸ್ಟರ್ಸ್ ಸೂಪರ್ 500 ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಈಗಾಗಲೇ ಭಾರತದ ಭರವಸೆಯ ಶಟ್ಲರ್‌ಗಳಾದ ಲಕ್ಷ್ಯ ಸೇನ್, ಪ್ರಿಯಾಂಶು ರಾಜಾವತ್ ಮತ್ತು ಪುರುಷರ ಡಬಲ್ಸ್ ಅಗ್ರ ಶ್ರೇಯಾಂಕದ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎಲ್ಲರೂ ತಮ್ಮ ತಮ್ಮ ಆರಂಭಿಕ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ.

ವಿಭಾಗ