Asia Cup 2022: ಒಂದಲ್ಲಾ ಎರಡಲ್ಲಾ, ಏಷ್ಯಾಕಪ್‌ನಲ್ಲಿ ಮೂರು ಬಾರಿ ಕಾದಾಡಲಿವೆ ಭಾರತ-ಪಾಕಿಸ್ತಾನ
ಯಾವುದೇ ತಂಡದ ವಿರುದ್ಧವಾದರೂ, ಐಸಿಸಿ ಪಂದ್ಯಗಳಲ್ಲಿ ಭಾರತ ಅಮೋಘ ಫಲಿತಾಂಶ ನೀಡುತ್ತದೆ. ಹೀಗಾಗಿ ಪಾಕಿಸ್ತಾನ ಸೇರಿದಂತೆ ಇತರ ತಂಡಗಳ ಎದುರು ಸೋಲುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಸೆಪ್ಟೆಂಬರ್ 11ರಂದು ಭಾರತ ಮತ್ತು ಪಾಕಿಸ್ತಾನ ತಂಡ ಫೈನಲ್‌ನಲ್ಲಿ ಆಡುವ ಸಾಧ್ಯತೆ ದಟ್ಟವಾಗಿದೆ.
ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಬದ್ಧ ವೈರಿಗಳಾದ ಇಂಡೋ-ಪಾಕ್ ಕದನಕ್ಕೆ ಅಖಾಡ ಸಿದ್ಧವಾಗುತ್ತಿದೆ. ಆಗಸ್ಟ್ 27ರಿಂದ ಪ್ರಾರಂಭವಾಗುವ ಏಷ್ಯಾ ಕಪ್‌ನಲ್ಲಿ, ಎರಡು ಪ್ರಬಲ ರಾಷ್ಟ್ರಗಳ ಕಾದಾಟಕ್ಕೆ ದಿನಗಣನೆ ಆರಂಭವಾಗಿದೆ. ಈ ಪಂದ್ಯಕ್ಕಾಗಿ ಬಲು ನಿರೀಕ್ಷೆಯಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ಇದೆ.
ಜಾಗತಿಕ ಆಕರ್ಷಣೆಗೆ ಕಾರಣವಾಗುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಈ ಬಾರಿ ಒಮ್ಮೆ ಮಾತ್ರ ಅಲ್ಲ. ಎಲ್ಲವೂ ಅಂದುಕೊಂಡಂತೆ ಲೆಕ್ಕಾಚಾರದ ಪ್ರಕಾರವೇ ನಡೆದರೆ, ಒಟ್ಟು ಮೂರು ಬಾರಿ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗಲಿವೆ. ಅದು ಹೇಗೆ ಸಾಧ್ಯ ಎಂಬ ಬಗ್ಗೆ ಇಲ್ಲಿದೆ ನೋಡಿ.
ಆಗಸ್ಟ್ 27ರಿಂದ ಏಷ್ಯಾಕಪ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವು ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದರ ನಂತರ ಆಗಸ್ಟ್ 28ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ತಂಡವು ಎ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಬಿ ಗುಂಪಿನಲ್ಲಿದೆ. ಪ್ರತಿ ಗುಂಪಿನ ಅಗ್ರ-ಎರಡು ತಂಡಗಳು 'ಸೂಪರ್ 4' ಸುತ್ತಿನಲ್ಲಿ ಮುಖಾಮುಖಿಯಾಗಲಿವೆ.
ಪ್ರತಿ ಗುಂಪಿನಿಂದ ಎರಡು ತಂಡಗಳು ʼಸೂಪರ್ ಫೋರ್ʼ ಹಂತಕ್ಕೆ ಅರ್ಹತೆ ಪಡೆಯುವುದರಿಂದ, ಎ ಗುಂಪಿನಲ್ಲಿರುವ ಭಾರತ ಮತ್ತು ಪಾಕಿಸ್ತಾನವು ತಮ್ಮ ಗುಂಪಿನಲ್ಲಿರುವ ಕ್ವಾಲಿಫೈಯರ್ ತಂಡವನ್ನು ಸೋಲಿಸುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ; ಯುಎಇ, ಕುವೈತ್, ಸಿಂಗಾಪುರ ಮತ್ತು ಹಾಂಗ್ ಕಾಂಗ್ ದೇಶಗಳ ನಡುವೆ ಅರ್ಹತಾ ಸುತ್ತು ನಡೆಯುತ್ತದೆ. ಇದರಲ್ಲಿ ಅಗ್ರಸ್ಥಾನಿಯಾದ ಒಂದು ತಂಡ ಭಾರತ ಇರುವ ಗುಂಪನ್ನು ಸೇರಿಕೊಳ್ಳಲಿದೆ. ಈ ತಂಡಗಳು ಬಲಿಷ್ಠ ಅಲ್ಲದ ಕಾರಣ, ಇದರ ಲಾಭವನ್ನು ಭಾರತ ಮತ್ತು ಪಾಕ್ ತಂಡಗಳು ಪಡೆಯಲಿದೆ. ಈ ಗ್ರೂಪ್ ಹಂತದ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ಎರಡು ತಂಡಗಳು ಸೆಪ್ಟೆಂಬರ್ 4ರಂದು ಸೂಪರ್ ಫೋರ್ ಹಂತದಲ್ಲಿ ಮುಖಾಮುಖಿಯಾಗಲಿವೆ. ಹೀಗಾಗಿ ಎ ಗ್ರೂಪ್‌ನಲ್ಲಿ ಭಾರತ ಮತ್ತು ಪಾಕ್ ಅಗ್ರಸ್ಥಾನದಲ್ಲಿ ಉಳಿಯುವುದು 99 ಪ್ರತಿಶತ ಖಚಿತ. ಹೀಗಾಗಿ ಸೂಪರ್ ಫೋರ್ ಹಂತದಲ್ಲಿ ಈ ಎರಡು ತಂಡಗಳ ನಡುವೆ ಪಂದ್ಯ ನಡೆಯುವುದು ಖಚಿತವಾಗಿದೆ.
ಇದು ಮೊದಲ ಸನ್ನಿವೇಶ. ಇನ್ನು ಇದೇ ಎರಡು ತಂಡಗಳ ನಡುವೆ ಮೂರನೇ ಪಂದ್ಯ ಕೂಡಾ ನಡೆಯುವ ಸಾಧ್ಯತೆ ಇದು. ಅದು ಫೈನಲ್‌ನಲ್ಲಿ. ಸೂಪರ್ ಫೋರ್ ಹಂತದಲ್ಲಿ ಅಗ್ರಸ್ಥಾನದಲ್ಲಿ ಬರುವ ಎರಡು ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇಲ್ಲಿ ಸೆಮಿಫೈನಲ್ ಇರುವುದಿಲ್ಲ. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನವು ವಿಶ್ವದ ಎರಡು ಬಲಿಷ್ಠ ತಂಡಗಳು. ಇದರೊಂದಿಗೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ಉತ್ತಮ ತಂಡಗಳು ತೀವ್ರ ಪೈಪೋಟಿ ನೀಡಲಿದೆ. ಇದರ ಹೊರತಾಗಿಯೂ, ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಪಡೆ ಅಗ್ರ ಸ್ಥಾನದಲ್ಲಿ ಫೈನಲ್ ಪ್ರವೇಶಿಸುವ ಲೆಕ್ಕಾಚಾರವಿದೆ.
ಯಾವುದೇ ತಂಡದ ವಿರುದ್ಧವಾದರೂ, ಐಸಿಸಿ ಪಂದ್ಯಗಳಲ್ಲಿ ಭಾರತ ಅಮೋಘ ಫಲಿತಾಂಶ ನೀಡುತ್ತದೆ. ಹೀಗಾಗಿ ಪಾಕಿಸ್ತಾನ ಸೇರಿದಂತೆ ಇತರ ತಂಡಗಳ ಎದುರು ಸೋಲುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಸೆಪ್ಟೆಂಬರ್ 11ರಂದು ಭಾರತ ಮತ್ತು ಪಾಕಿಸ್ತಾನ ತಂಡ ಫೈನಲ್‌ನಲ್ಲಿ ಆಡುವ ಸಾಧ್ಯತೆ ದಟ್ಟವಾಗಿದೆ.
ಕಳೆದ ವರ್ಷ ಟಿ20 ವಿಶ್ವಕಪ್ ಪಂದ್ಯದ ನಂತರ ಮೊದಲ ಬಾರಿಗೆ ಏಷ್ಯಾ ಕಪ್ ಮೂಲಕ ಭಾರತ ಮತ್ತು ಪಾಕಿಸ್ತಾನ ತಂಡಗಳ ಕಾದಾಟ ನಡೆಯಲಿದೆ. ವಿಶ್ವಕಪ್‌ನ ಬಹು ನಿರೀಕ್ಷಿತ ಪೈಪೋಟಿಯಲ್ಲಿ ಪಾಕಿಸ್ತಾನವು ಭಾರತವನ್ನು ಬರೋಬ್ಬರಿ 10 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತ್ತು. ಟಿ20 ಅಥವಾ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕ್ ಗಳಿಸಿದ ಮೊದಲ ಮತ್ತು ಏಕೈಕ ಗೆಲುವು ಅದಾಗಿತ್ತು.