Paris 2024: ವರ್ಷದೊಂದಿಗೆ ನಿರೀಕ್ಷೆಯೂ ಆರಂಭ; ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಎರಡಂಕಿ ಪದಕ
ಕನ್ನಡ ಸುದ್ದಿ  /  ಕ್ರೀಡೆ  /  Paris 2024: ವರ್ಷದೊಂದಿಗೆ ನಿರೀಕ್ಷೆಯೂ ಆರಂಭ; ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಎರಡಂಕಿ ಪದಕ

Paris 2024: ವರ್ಷದೊಂದಿಗೆ ನಿರೀಕ್ಷೆಯೂ ಆರಂಭ; ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಎರಡಂಕಿ ಪದಕ

Paris 2024 Olympics: ಭಾರತೀಯ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ ಪದಕ ಗಳಿಕೆಯಲ್ಲಿ ಮೂರಂಕಿ ತಲುಪಿದ್ದಾರೆ. ಈಗ ಜಾಗತಿಕ ಕ್ರೀಡಾಜಾತ್ರೆ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಎರಡಂಕಿ ತಲುಪವ ಸಮಯ.

ಒಲಿಂಪಿಕ್ಸ್‌ ಪದಕ ನಿರೀಕ್ಷೆಯಲ್ಲಿ ಭಾರತದ ಅಥ್ಲೀಟ್‌ಗಳು
ಒಲಿಂಪಿಕ್ಸ್‌ ಪದಕ ನಿರೀಕ್ಷೆಯಲ್ಲಿ ಭಾರತದ ಅಥ್ಲೀಟ್‌ಗಳು (PTI)

ಹೊಸ ವರ್ಷ 2024ರಲ್ಲಿ ಹಲವಾರು ಪ್ರಮುಖ ಕ್ರೀಡಾಕೂಟಗಳು ನಡೆಯಲಿವೆ. ಅದರಲ್ಲಿ ಮಹತ್ವದ ಕೂಟವೇ ಜಾಗತಿಕ ಕ್ರೀಡಾಜಾತ್ರೆ ಒಲಿಂಪಿಕ್ಸ್ (Olympics). ಜುಲೈ 26ರಿಂದ ಆಗಸ್ಟ್ 11ರವರೆಗೆ ಫ್ರಾನ್ಸ್‌ನ ರಾಜಧಾನಿ ಪ್ರೇಮನಗರಿ ಪ್ಯಾರಿಸ್‌ನಲ್ಲಿ ವಿಶ್ವದ ಕ್ರೀಡಾಪಟುಗಳು ಸೇರಲಿದ್ದಾರೆ. ಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳ ಪ್ರದರ್ಶನ ಹಾಗೂ ಪದಕ ಗಳಿಕೆ ಕುರಿತು ಈಗಲೇ ಲೆಕ್ಕಾಚಾರ ಆರಂಭವಾಗಿದೆ.

2016ರ ರಿಯೋ ಒಲಿಂಪಿಕ್ಸ್ ಬಳಿಕ, ಇದೇ ಮೊದಲ ಬಾರಿಗೆ ನಡೆಯುತ್ತಿರುವ ವಿಶ್ವದ ಮೊದಲ ಬೇಸಿಗೆ ಒಲಿಂಪಿಕ್ಸ್ ಇದಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ‌ ಜಾಗತಿಕ ಕ್ರೀಡಾ ಕಾರ್ಯಕ್ರಮಗಳೆಲ್ಲಾ ವಿಳಂಬವಾಗಿದ್ದು ಗೊತ್ತೇ ಇದೆ. ಕೊನೆಯ ಆವೃತ್ತಿಯ ಟೋಕಿಯೊ ಒಲಿಂಪಿಕ್ಸ್‌ ಪ್ರೇಕ್ಷಕರ ಸಂಭ್ರಮವಿಲ್ಲದೆ ನೀರಸವಾಗಿ ನಡೆದಿತ್ತು. ಹೀಗಾಗಿ ಈ ಬಾರಿ ದುಪ್ಪಟ್ಟು ಸಂಭ್ರಮಕ್ಕೆ ಪ್ರೇಮನಗರ ಸಜ್ಜಾಗಿದೆ.

ಪ್ರಸ್ತುತ ಹೊಸ ವರ್ಷ ಹೊಸ ಹುರುಪಿನೊಂದಿಗೆ ಭಾರತದ ಕ್ರೀಡಾಪಟುಗಳು ಕ್ರೀಡಾಕೂಟಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಕೊನೆಯದಾಗಿ 2022ರಲ್ಲಿ ನಡೆದ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 61 ಪದಕಗಳನ್ನು ಗೆದ್ದಿತ್ತು. ಆಸ್ಟ್ರೇಲಿಯಾ (178), ಇಂಗ್ಲೆಂಡ್ (176) ಮತ್ತು ಕೆನಡಾ (92) ನಂತರ ನಾಲ್ಕನೇ ಸ್ಥಾನದಲ್ಲಿ ಭಾರತ ಕೂಟಕ್ಕೆ ವಿದಾಯ ಹೇಳಿತು. ಕಳೆದ ಬಾರಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶದ ಒಟ್ಟಾರೆ ಪದಕ ಗಳಿಕೆ ಏಳು ಮಾತ್ರ. ಇದು ಕ್ರೀಡಾಕೂಟದಲ್ಲಿ ಭಾರತದ ಅತ್ಯಧಿಕ ಪದಕ ಗಳಿಕೆಯಾಗಿದೆ.

ಇದನ್ನೂ ಓದಿ | ಖೇಲ್ ರತ್ನ, ಅರ್ಜುನ ಪ್ರಶಸ್ತಿ ಮರಳಿಸಿದ ವಿನೇಶ್ ಫೋಗಾಟ್; ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ಬಂದ ಕುಸ್ತಿಪಟು

ಚೀನಾದ ಹ್ಯಾಂಗ್‌ಜೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತದ ಅತ್ಯುನ್ನತ ಸಾಧನೆ. ಈವರೆಗಿನ ಪದಕ ಗಳಿಕೆಯ ಎಲ್ಲಾ ದಾಖಲೆಯನ್ನು ಅಥ್ಲೀಟ್‌ಗಳು ಬ್ರೇಕ್‌ ಮಾಡಿದರು. ಶತಕ ಸಾಧನೆಯೊಂದಿಗೆ 107 ಪದಕ ಹೊತ್ತು ಅಥ್ಲೀಟ್‌ಗಳು ತವರಿಗೆ ಮರಳಿದರು.

ಏಷ್ಯನ್ ಗೇಮ್ಸ್ ಪದಕ ಗಳಿಕೆಯಲ್ಲಿ ಮೂರಂಕಿ ತಲುಪಿದ ಭಾರತವು, ಒಲಿಂಪಿಕ್ಸ್‌ನಲ್ಲಿ ಪದಕ ಗಳಿಕೆಯ ಸಂಖ್ಯೆಯನ್ನು ಎರಡಂಕಿಗೆ ಪರಿವರ್ತಿಸಬೇಕು ಎಂಬುದೇ ಸದ್ಯದ ನಿರೀಕ್ಷೆ.

ಚಿನ್ನದ ಹುಡಗನ ಮೇಲೆ ಹೆಚ್ಚಿದ ನಿರೀಕ್ಷೆ

ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ ಈಗಾಗಲೇ ವಿಶ್ವದ ಅತ್ಯುತ್ತಮ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. 2023ರಲ್ಲಿ ಪದಕಗಳೊಂದಿಗೆ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಚಿನ್ನ ಮತ್ತು ಡೈಮಂಡ್ ಲೀಗ್‌ನಲ್ಲಿ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ಟೋಕಿಯೊ ಕ್ರೀಡಾಕೂಟದಲ್ಲಿ ಐತಿಹಾಸಿಕ ಬಂಗಾರ ಗೆಲ್ಲುವ ಮೂಲಕ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮತ್ತು ಏಷ್ಯನ್‌ ಅಥ್ಲೀಟ್‌ ಎಂಬ ಸಾಧನೆ ಮಾಡಿದರು. ಇದು ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಬದಲಾವಣೆ ಪರ್ವಕ್ಕೆ ಮುನ್ನುಡಿಯಾಯ್ತು.

ಏಷ್ಯನ್ ಕ್ರೀಡಾಕೂಟದಲ್ಲಿಯೂ ಚೋಪ್ರಾ ತಮ್ಮ ಬಂಗಾರವನ್ನು ಯಶಸ್ವಿಯಾಗಿ ಉಳಿಸಿಕೊಂಡರು. ಇದೇ ವೇಳೆ ಮತ್ತೋರ್ವ ಭಾರತೀಯ ಕಿಶೋರ್ ಜೆನಾ ಬೆಳ್ಳಿ ಗೆದ್ದು ಮಿಂಚಿದರು. ಒಂದು ವೇಳೆ ಚೋಪ್ರಾ ಪ್ಯಾರಿಸ್‌ನಲ್ಲಿ ಮತ್ತೆ ಬಂಗಾರ ಗೆದ್ದರೆ, ಅದು ಮತ್ತೊಂದು ಇತಿಹಾಸವಾಗಲಿದೆ. ಸತತ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಯಾವುದೇ ಭಾರತೀಯ ಇದುವರೆಗೆ ಸತತ ಚಿನ್ನ ಗೆದ್ದಿಲ್ಲ.

2022 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 3000 ಮೀಟರ್ ಸ್ಟೀಪಲ್ಚೇಸ್ನಲ್ಲಿ ಕೀನ್ಯಾದ ಹಿಡಿತವನ್ನು ಮುರಿದು, ಭಾರತದ ಅವಿನಾಶ್ ಸಾಬ್ಲೆ ಬೆಳ್ಳಿ ಗೆದ್ದರು. ಅದರ ಬೆನ್ನಲ್ಲೇ ಏಷ್ಯನ್ ಕ್ರೀಡಾಕೂಟದಲ್ಲಿ ಬಂಗಾರಕ್ಕೆ ಕೊರಳೊಡ್ಡಿದರು. ಟ್ರಿಪಲ್ ಜಂಪರ್‌ಗಳಾದ ಎಲ್ದೋಸ್ ಪಾಲ್ ಮತ್ತು ಅಬ್ದುಲ್ಲಾ ಅಬೂಬಕ್ಕರ್, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಅಪರೂಪದ ಗೆಲುವು ತಂದುಕೊಟ್ಟರು. ಮುರಳಿ ಶ್ರೀಶಂಕರ್ ಲಾಂಗ್ ಜಂಪ್ ನಲ್ಲಿ ಬೆಳ್ಳಿ ಗೆದ್ದರೆ, ತೇಜಸ್ವಿನ್ ಶಂಕರ್ ಹೈಜಂಪ್‌ನಲ್ಲಿ ಕಂಚಿನ ಪದಕ ಗೆದ್ದರು.‌

ಹಾಕಿ ಗತವೈಭಯ ಮರುಕಳಿಸುತ್ತಾ?

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಮತ್ತೊಂದು ಭರವಸೆ ಹಾಕಿ. ಒಂದು ಕಾಲದಲ್ಲಿ ಬಲಿಷ್ಠ ಹಾಕಿ ರಾಷ್ಟ್ರವಾಗಿದ್ದ ಭಾರತ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಆದರೆ ಟೋಕಿಯೊದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಗತವೈಭವವನ್ನು ಮರುಕಳಿಸಿತು. ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಪದಕ ಗೆದ್ದಿತು. ಅತ್ತ ಮಹಿಳಾ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಸದ್ಯ ಏಷ್ಯನ್ ಗೇಮ್ಸ್ ಚಿನ್ನದೊಂದಿಗೆ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ.

ಇನ್ನು ಪಿವಿ ಸಿಂಧು ಮೇಲೆ ಭರವಸೆ ಇದ್ದೇ ಇದೆ. ಒಂದಕ್ಕಿಂತ ಹೆಚ್ಚು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಏಕೈಕ ಮಹಿಳೆ ಸಿಂಧು. 28 ವರ್ಷದ ಬ್ಯಾಡ್ಮಿಂಟನ್ ತಾರೆ ಸದ್ಯ ಸುದೀರ್ಘ ವಿಶ್ರಾಂತಿಯಲ್ಲಿದ್ದಾರೆ. ಇತ್ತೀಚೆಗೆ ಅವರ ಫಾರ್ಮ್‌ ಏಳು ಬೀಳುಗಳನ್ನು ಕಂಡಿದೆ. ಆದರೆ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಟೋಕಿಯೊದಲ್ಲಿ ಕಂಚಿನ ಪದಕ ಗೆದ್ದ ದಿಟ್ಟೆಗೆ ಪುಟಿದೇಳುವುದು ಕಷ್ಟವಲ್ಲ. ಅವರ ಮುಂದಿನ ಗುರಿ ಹ್ಯಾಟ್ರಾಕ್‌ ಪದಕ ಸಾಧನೆಯೊಂದಿಗೆ ಬಂಗಾರಕ್ಕೆ ಮುತ್ತಿಡುವುದು.

ವಿಡಿಯೋ ನೋಡಿ: Vikram simha:ರಾಜಕೀಯ ಕಾರಣಕ್ಕೆ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ; ಅಧಿಕಾರಿಗಳ ಬಂಡವಾಳ ಬಿಚ್ಚಿಡ್ತೀನಿ -ವಿಕ್ರಂ ಸಿಂಹ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.