India vs Bangladesh Women: ಒಟ್ಟು 62 ಎಸೆತ ಡಾಟ್ ಮಾಡಿದ ಬಾಂಗ್ಲಾದೇಶ; ಮೊದಲ ಟಿ20ಯಲ್ಲಿ ಭಾರತ ವನಿತೆಯರಿಗೆ ಜಯ
Harmanpreet kaur: ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತವು 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಪಂದ್ಯವು ಜುಲೈ 11ರಂದು ನಡೆಯಲಿದೆ. ಆ ಬಳಿಕ ಮೂರನೇ ಪಂದ್ಯವು 13ರಂದು ನಡೆಯಲಿದೆ.
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ (India Women tour of Bangladesh) ಮೊದಲ ಪಂದ್ಯದಲ್ಲಿ ಭಾರತ ವನಿತೆಯರ ತಂಡವು ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅಜೇಯ ಅರ್ಧಶತಕದ ನೆರವಿನಿಂದ ಭಾರತ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಮೀರ್‌ಪುರದಲ್ಲಿ ಭಾನುವಾರ (ಜುಲೈ 09) ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಬೌಲಿಂಗ್ ಮಾಡಿದ ಭಾರತ ತಂಡವು, ಬಾಂಗ್ಲಾದೇಶವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿತು. ಭಾರತದ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದರು. ಅಂತಿಮವಾಗಿ ಆತಿಥೇಯರು 5 ವಿಕೆಟ್ ಕಳೆದುಕೊಂಡು 114 ರನ್ ಗಳಿಸಲಷ್ಟೇ ಸಾಧ್ಯವಾಯ್ತು.
ಗುರಿ ಬೆನ್ನಟ್ಟಿದ ಭಾರತವು ಕೇವಲ 16.2 ಓವರ್‌ಗಳಲ್ಲಿ ಜಯಭೇರಿ ಬಾರಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ 35 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿ ಪಂದ್ಯಶ್ರೇಷ್ಠರಾದರು. ಉಪನಾಯಕಿ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನ 34 ಎಸೆತಗಳಲ್ಲಿ 38 ರನ್ ಗಳಿಸಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಅನುಭವಿ ಆಟಗಾರ್ತಿಯರಿಬ್ಬರೂ ಮೂರನೇ ವಿಕೆಟ್‌ಗೆ 70 ರನ್ ಕಲೆ ಹಾಕಿದರು. ಅರ್ಧಶತಕ ಸಿಡಿಸಿದ ಕೌರ್, ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸಿದರು.
ಭಾರತ ಚೇಸ್ ಆರಂಭಿಸುತ್ತಿದ್ದಂತೆಯೇ ಶಫಾಲಿ ವರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಈ ವೇಳೆ ಕ್ರೀಸ್‌ಗೆ ಬಂದ ಜೆಮಿಮಾ ರೋಡ್ರಿಗಸ್ 11 ರನ್ ಗಳಿಸಿ ಔಟಾದರು. ಆ ಬಳಿಕ ಹರ್ಮನ್‌ಪ್ರೀತ್ ಮತ್ತು ಮಂಧನ ಜೊತೆ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟಿದರು.
62 ಎಸೆತ ಡಾಟ್
ಭಾರತದ ಸ್ಪಿನ್ನರ್‌ಗಳು ಬಾಂಗ್ಲಾ ವನಿತೆಯರಿಗೆ ಹೆಚ್ಚು ರನ್ ಗಳಿಸುವ ಅವಕಾಶ ನೀಡಲಿಲ್ಲ. ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 14 ರನ್ ಮಾತ್ರ ಬಿಟ್ಟುಕೊಟ್ಟರು. ಅನುಷಾ ಬಾರೆಡ್ಡಿ 24 ರನ್ ಬಿಟ್ಟುಕೊಟ್ಟರೆ, ಆಫ್-ಬ್ರೇಕ್ ಬೌಲರ್ ಮಿನ್ನು ಮನ್ನಿ 21 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಶಫಾಲಿ ವರ್ಮಾ ಕೂಡಾ ಎಸೆತಕ್ಕೊಂದರಂತೆ ರನ್ ಕೊಟ್ಟು 1 ವಿಕೆಟ್ ಪಡೆದರು.
ಬಾಂಗ್ಲಾ ಪರ ಶಮೀಮಾ ಸುಲ್ತಾನಾ 17 ರನ್ ಗಳಿಸಿದರೆ, ಶಾತಿ ರಾಣಿ 22 ರನ್ ಗಳಿಸಿ ಔಟಾದರು. ಅನುಭವಿ ಆಟಗಾರ್ತಿ ಹಾಗೂ ಬಾಂಗ್ಲಾದೇಶದ ನಾಯಕಿ ನಿಗರ್ ಸುಲ್ತಾನ 2 ರನ್ ಗಳಿಸಿದ್ದಾಗ ರನೌಟ್ ಆದರು. ತಂಡದ ಇನ್ನಿಂಗ್ಸ್‌ನ ಅರ್ಧಕ್ಕಿಂತ ಹೆಚ್ಚು ಅಂದರೆ 62 ಎಸೆತಗಳನ್ನು ಬಾಂಗ್ಲಾ ವನಿತೆಯರು ಡಾಟ್ ಮಾಡಿದರು. ಈ ನಡುವೆ ಒಟ್ಟು ಎಂಟು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳು ಕೂಡಾ ಸಿಡಿದರು.
ಸರಣಿಯಲ್ಲಿ ಮುನ್ನಡೆ
ಸದ್ಯ ಮೂರು ಪಂದ್ಯಗಳ ಸರಣಿಯಲ್ಲಿ ಭಾರತವು 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಪಂದ್ಯವು ಜುಲೈ 11ರಂದು ನಡೆಯಲಿದೆ. ಆ ಬಳಿಕ ಮೂರನೇ ಪಂದ್ಯವು 13ರಂದು ನಡೆಯಲಿದೆ.
ಬಾಂಗ್ಲಾದೇಶ ಪ್ರವಾಸಕ್ಕೆ ಭಾರತದ ಟಿ20 ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಎಸ್ ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಮಿನ್ನು ಮಣಿ.