ಮತ್ತೆ ಒಂದಾದ ಅಪ್ಪ-ಮಗ; ಕಿಡ್ನಾಪ್ ಆಗಿದ್ದ ತಂದೆಯನ್ನು ತಬ್ಬಿಕೊಂಡ ಖ್ಯಾತ ಫುಟ್ಬಾಲ್ ಆಟಗಾರ
ಫುಟ್ಬಾಲ್ ಆಟಗಾರ ಲೂಯಿಸ್ ಡಯಾಸ್, ಕಿಡ್ನಾಪ್ ಆಗಿದ್ದ ತಮ್ಮ ತಂದೆಯನ್ನು ಕೊನೆಗೂ ಸೇರಿಕೊಂಡಿದ್ದಾರೆ.
ಕೊಲಂಬಿಯಾದ ಖ್ಯಾತ ಫುಟ್ಬಾಲ್ ಆಟಗಾರ ಲೂಯಿಸ್ ಡಯಾಸ್ (Luis Diaz), ಕೊನೆಗೂ ತಮ್ಮ ತಂದೆಯನ್ನು ಸೇರಿಕೊಂಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಉತ್ತರ ಕೊಲಂಬಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಡಯಾಸ್ ಅವರ ತಂದೆಯನ್ನು, ಕಳೆದ ವಾರ ಬಿಡುಗಡೆ ಮಾಡಲಾಗಿತ್ತು.
ಕೊಲಂಬಿಯನ್ ಫುಟ್‌ಬಾಲ್ ಫೆಡರೇಶನ್‌ನ ತನ್ನ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಲೂಯಿಸ್ ಡಯಾಸ್ ಮತ್ತು ಅವರ ತಂದೆ ಲೂಯಿಸ್ ಮ್ಯಾನುಯೆಲ್ ಡಯಾಸಾ ಜಿಮೆನೆಜ್ ಒಬ್ಬರನ್ನೊಬ್ಬರು ಪರಸ್ಪರ ತಬ್ಬಿಕೊಂಡಿರುವ ಫೋಟೋ ಹಂಚಿಕೊಳ್ಳಲಾಗಿದೆ.
ತಂದೆಯೊಂದಿಗೆ ಅಪಹರಣಕ್ಕೊಳಗಾಗಿದ್ದ ಡಯಾಸ್ ಅವರ ತಾಯಿಯನ್ನು ಕಳೆದ ತಿಂಗಳು ರಕ್ಷಿಸಲಾಗಿತ್ತು. ಆ ಕುರಿತು ಕೊಲಂಬಿಯಾ ದೇಶದ ಅಧ್ಯಕ್ಷರು ತಿಳಿಸಿದ್ದರು. ತಾಯಿ ಸಿಲೆನಿಸ್ ಮರುಲಾಂಡಾ ಅವರನ್ನು ರಕ್ಷಿಸಿರುವ ಕುರಿತು ಕೊಲಂಬಿಯಾ ಪೊಲೀಸರು ಖಚಿತಪಡಿಸಿದ್ದರು. ಆದರೆ, ತಂದೆಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ ಕಳೆದ ತಂದೆ ಕೂಡಾ ಪತ್ತೆಯಾಗಿದ್ದು, ಮಂಗಳವಾರವಷ್ಟೆ ಮಗನನ್ನು ಸೇರಿಕೊಂಡಿದ್ದಾರೆ.
ಲೂಯಿಸ್ ತಂದೆ ತಾಯಿಯಾದ ಲೂಯಿಸ್ ಮ್ಯಾನುಯೆಲ್ ಡಯಾಜ್ ಮತ್ತು ಸಿಲೆನಿಸ್ ಮರುಲಾಂಡ ಅವರು, ಅಕ್ಟೋಬರ್ 28ರಂದು ಸೇವಾ ಕೇಂದ್ರದಲ್ಲಿದ್ದಾಗ ಕಿಡ್ನಾಪ್ ಆಗಿದ್ದರು. ಮೋಟಾರ್ ಬೈಕ್‌ಗಳಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿತ್ತು. ಕೊಲಂಬಿಯಾದ ಗಡಿಯ ಸಮೀಪದಲ್ಲಿರುವ 40,000 ಜನರ ಪಟ್ಟಣದ ಸುತ್ತಲೂ ರಸ್ತೆಗಳಲ್ಲಿ ತಡೆವೊಡ್ಡಿ ತೀವ್ರಗತಿಯ ತಪಾಸಣೆ ನಡೆಸಿದ್ದ ಪೊಲೀಸರು, ಕೆಲವೇ ಗಂಟೆಗಳಲ್ಲಿ ತಾಯಿಯನ್ನು ರಕ್ಷಿಸಿದ್ದರು.
ಕೊಲಂಬಿಯಾ ಮತ್ತು ವೆನೆಜುವೆಲಾದ್ಯಂತ ವ್ಯಾಪಿಸಿರುವ ಪರ್ವತ ಶ್ರೇಣಿಯಲ್ಲಿ ಡಯಾಜ್ ಅವರ ತಂದೆಯನ್ನು ಹುಡುಕಲು ವಿಶೇಷ ಪಡೆಗಳನ್ನು ನಿಯೋಜಿಸಲಾಗಿತ್ತು. ಅವರ ಕುರಿತು ಮಾಹಿತಿ ನೀಡಿದವರಿಗೆ 48,000 ಡಾಲರ್ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು. ಗೆರಿಲ್ಲಾ ಗುಂಪಿನ ಘಟಕವು ಈ ಕಿಡ್ನಾಪ್ ಮಾಡಿರುವುದು ಖಚಿತವಾಗಿದೆ.
ವಿಭಾಗ