2ನೇ ಎಲಿಮಿನೇಟರ್ನಲ್ಲಿ ಹರಿಯಾಣ ಸ್ಟೀಲರ್ಸ್ಗೆ ಭರ್ಜರಿ ಗೆಲುವು; ಸೆಮಿಫೈನಲ್ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರಾಳಿ
PKL 10 Eliminator 2: ಪ್ರೊ ಕಬಡ್ಡಿ ಲೀಗ್ನ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಹರಿಯಾಣ ಸ್ಟೀಲರ್ಸ್ ಸಮಿಫೈನಲ್ ಪ್ರವೇಶಿಸಿದೆ.
ಪ್ರೊ ಕಬಡ್ಡಿ ಲೀಗ್ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಹರಿಯಾಣ ಸ್ಟೀಲರ್ಸ್ (Haryana Steelers beats Gujarat Giants) ಸೆಮಿಫೈನಲ್ಗೆ ಕ್ವಾಲಿಫೈ ಆಗಿದೆ. ಹೈದರಾಬಾದ್ನ ಗಚ್ಚಿ ಬೋಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 25-42 ಅಂಕಗಳಿಂದ ಗೆದ್ದ ಹರಿಯಾಣ, ಎರಡನೇ ಸೆಮಿಫೈನಲ್ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಸೋತು ಮೊದಲು ರೇಡಿಂಗ್ ನಡೆಸಿದ ಗುಜರಾತ್, ಮೊದಲ ಅಂಕವನ್ನು ಎದುರಾಳಿಗೆ ಬಿಟ್ಟುಕೊಟ್ಟಿತು. ರೇಡಿಂಗ್ ಹೋದ ಹರಿಯಾಣ ಡಿಫೆನ್ಸ್ ಆಟಗಾರರ ಬಾಯಿಗೆ ಸಿಲುಕಿದರು. ಆರಂಭದಿಂದಲೂ ಮುನ್ನಡೆ ಸಾಧಿಸಿದ ಹರಿಯಾಣ ಮೊದಲಾರ್ಧದ ಅವಧಿಯಲ್ಲಿ 16-21 ಅಂಕ ಪಡೆದಿತ್ತು. ಸ್ಟೀಲರ್ಸ್ ಪರ ವಿನಯ್ ಬೊಂಬಾಟ್ ಪ್ರದರ್ಶನ ನೀಡಿದರು.
ಇನ್ನು ದ್ವಿತೀಯಾರ್ಧದಲ್ಲಿ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಗುಜರಾತ್ಗೆ ಹರಿಯಾಣ ಮತ್ತೆ ಶಾಕ್ ನೀಡಿತು. ಯಾವ ಹಂತದಲ್ಲೂ ಮುನ್ನಡೆ ಸಾಧಿಸಲು ಅವಕಾಶ ನೀಡದ ಸ್ಟೀಲರ್ಸ್, ಪ್ರತಿ ಅವಕಾಶವನ್ನೂ ಅಂಕವನ್ನಾಗಿ ಪರಿವರ್ತಿಸಿಕೊಂಡಿತು. ವಿನಯ್ಗೆ ಶಿವರಾಮ್ ಪರಾಟೆ 8 ಅಂಕ, ಮೋಹಿತ್ 7 ಅಂಕ ಪಡೆದರು ಸಾಥ್ ನೀಡಿದರು.
ಇನ್ನು ಗುಜರಾತ್ ಪರ ಪರ್ತೀಕ್ ದಾಹಿಯಾ, ರಾಕೇಶ್, ಸೋನು ಜಗಲನ್ ತಲಾ 5 ಅಂಕ ಪಡೆದರು. ಉಳಿದವರಿಂದ ಕಳಪೆ ಪ್ರದರ್ಶನ ಹೊರ ಬಂದ ಕಾರಣ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಗುಜರಾತ್, ಎಲಿಮಿನೇಟರ್ನಲ್ಲಿ ಸೋಲಿನೊಂದಿಗೆ ಹೊರ ಬಿತ್ತು.
ಮೊದಲ ಎಲಿಮಿನೇಟರ್ನಲ್ಲಿ ಪಾಟ್ನಾಗೆ ಗೆಲುವು
ಪ್ರೊ ಕಬಡ್ಡಿ ಲೀಗ್ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಜಯಿಸಿದ ಪಾಟ್ನಾ ಪೈರೇಟ್ಸ್, ಸೆಮಿಫೈನಲ್ಗೆ ಅರ್ಹತೆ ಪಡೆದಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ಪಾಟ್ನಾ, 35-37 ಅಂಕಗಳ ಅಂತರದಿಂದ ಗೆದ್ದು ಸೆಮೀಸ್ಗೆ ಎಂಟ್ರಿಕೊಟ್ಟಿದೆ. ಸೆಮಿಫೈನಲ್ನಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಪಾಟ್ನಾ ಎದುರಿಸಲಿದೆ.
2ನೇ ಸೆಮಿಫೈನಲ್ನಲ್ಲಿ ಜೈಪುರ ಮತ್ತು ಹರಿಯಾಣ
ಎಲಿಮಿನೇಟರ್ನಲ್ಲಿ ಜಯದ ನಗೆ ಬೀರಿದ ಹರಿಯಾಣ ತಂಡವು ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಫೆಬ್ರವರಿ 28ರಂದು ಸೆಮಿಫೈನಲ್ ಪಂದ್ಯ ನಡೆಯಲಿದೆ. ಜೈಪುರ ಲೀಗ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ನೇರವಾಗಿ ಸೆಮಿಫೈನಲ್ಗೆ ಪ್ರವೇಶಿಸಿತ್ತು.
ಮೊದಲ ಸೆಮಿಫೈನಲ್ ಪಂದ್ಯ (ಫೆಬ್ರವರಿ 28)
ಪುಣೇರಿ ಪಲ್ಟನ್ಸ್ vs ಪಾಟ್ನಾ ಪೈರೇಟ್ಸ್, ಗಚ್ಚಿಬೋಲಿ ಒಳಾಂಗಣ ಕ್ರೀಡಾಂಗಣ
ಎರಡನೇ ಸೆಮಿಫೈನಲ್ ಪಂದ್ಯ (ಫೆಬ್ರವರಿ 28)
ಜೈಪುರ ಪಿಂಕ್ ಪ್ಯಾಂಥರ್ಸ್ vs ಹರಿಯಾಣ ಸ್ಟೀಲರ್ಸ್, ಗಚ್ಚಿಬೋಲಿ ಒಳಾಂಗಣ ಕ್ರೀಡಾಂಗಣ
ಹರಿಯಾಣ ತಂಡದ ಪ್ಲೇಯಿಂಗ್ 7
ವಿನಯ್, ಜೈದೀಪ್ ದಾಹಿಯಾ, ಆಶಿಶ್, ಮೊಹಿತ್, ಶಿವಂ ಪರಾಟೆ, ಮೊಹಿತ್ ನಂದಲ್.
ಗುಜರಾತ್ ಜೈಂಟ್ಸ್ ತಂಡದ ಪ್ಲೇಯಿಂಗ್ 7
ಫಜಲ್ ಅತ್ರಾಚಲಿ, ಮೊಹಮ್ಮದ್ ನಬೀಬಶ್, ಸೋಂಬಿರ್, ಪರ್ತೀಕ್ ದಾಯಿಯಾ, ದೀಪಕ್ ಸಿಂಗ್, ಬಾಲಾಜಿ ಡಿ, ರಾಕೇಶ್.