ಗೂಳಿಗಳ ಬಳಗಕ್ಕೆ ಹ್ಯಾಟ್ರಿಕ್‌ ಸೋಲಿನ ಕಹಿ; ಯುಪಿ ಯೋಧಾಸ್‌ ವಿರುದ್ಧ 57-36 ಅಂಕಗಳಿಂದ ಸೋತ ಬೆಂಗಳೂರು ಬುಲ್ಸ್
ಕನ್ನಡ ಸುದ್ದಿ  /  ಕ್ರೀಡೆ  /  ಗೂಳಿಗಳ ಬಳಗಕ್ಕೆ ಹ್ಯಾಟ್ರಿಕ್‌ ಸೋಲಿನ ಕಹಿ; ಯುಪಿ ಯೋಧಾಸ್‌ ವಿರುದ್ಧ 57-36 ಅಂಕಗಳಿಂದ ಸೋತ ಬೆಂಗಳೂರು ಬುಲ್ಸ್

ಗೂಳಿಗಳ ಬಳಗಕ್ಕೆ ಹ್ಯಾಟ್ರಿಕ್‌ ಸೋಲಿನ ಕಹಿ; ಯುಪಿ ಯೋಧಾಸ್‌ ವಿರುದ್ಧ 57-36 ಅಂಕಗಳಿಂದ ಸೋತ ಬೆಂಗಳೂರು ಬುಲ್ಸ್

ಬೆಂಗಳೂರು ಬುಲ್ಸ್‌ ಪರ ನಾಯಕ ಪರ್ದೀಪ್‌ ನರ್ವಾಲ್‌ ಆಕರ್ಷಕ 16 ಪಾಯಿಂಟ್‌ ಕಲೆ ಹಾಕಿದರು. ಆದರೆ ಅವರಿಂದ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇವರಿಗೆ ಉತ್ತಮ ಸಾಥ್‌ ನೀಡಿದ ಜತಿನ್‌ ಫೋಗತ್‌ ಕೂಡಾ 9 ಅಂಕ ಸಂಗ್ರಹಿಸಿದರು. ಟ್ಯಾಕಲ್‌ನಲ್ಲಿ ತಂಡದ ಅಂಕಗಳು ಕಡಿಮೆಯಾದವು.

PKL 11: ಯುಪಿ ಯೋಧಾಸ್‌ ವಿರುದ್ಧ 57-36 ಅಂಕಗಳಿಂದ ಸೋತ ಬೆಂಗಳೂರು ಬುಲ್ಸ್
PKL 11: ಯುಪಿ ಯೋಧಾಸ್‌ ವಿರುದ್ಧ 57-36 ಅಂಕಗಳಿಂದ ಸೋತ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯಲ್ಲಿ ಗೂಳಿಗಳು ಗುಮ್ಮೋದನ್ನು ಮರೆತಿರುವಂತಿದೆ. ಹಲವು ಹೊಸತನಗಳೊಂದಿಗೆ ಪಿಕೆಎಲ್‌ 2024ರ ಆವೃತ್ತಿಗೆ ಕಾಲಿಟ್ಟ ಬೆಂಗಳೂರು ಬುಲ್ಸ್‌, ಹ್ಯಾಟ್ರಿಕ್‌ ಸೋಲುಗಳೊಂದಿಗೆ ಆರಂಭದಲ್ಲೇ ಭಾರಿ ಹಿನ್ನಡೆ ಅನುಭವಿಸಿದೆ. ಯುಪಿ ಯೋಧಾಸ್‌ ವಿರುದ್ಧ ನಡೆದ ಪಂದ್ಯದಲ್ಲಿ ತಂಡವು 57-36 ಅಂಕಗಳ ಅಂತರದಿಂದ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಆಡಿದ ಮೊದಲ ಮೂರೂ ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಖಾತೆ ತೆರಯುವಲ್ಲಿ ವಿಫಲವಾಗಿದೆ.

ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಮುಗ್ಗರಿಸಿದ್ದ ತಂಡ, ಎರಡನೇ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ರೋಚಕ ಹೋರಾಟದ ಹೊರತಾಗಿಯೂ ಸೋಲು ಅನುಭವಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ 21 ಅಂಕಗಳ ಅಂತರದಿಂದ ಹೀನಾಯವಾಗಿ ಸೋತಿದೆ.

ಬೆಂಗಳೂರು ಬುಲ್ಸ್‌ ಪರ ಲಯಕ್ಕೆ ಮರಳಿದ ಪರ್ದೀಪ್‌ ನರ್ವಾಲ್‌ ಭರ್ಜರಿ ರೈಡಿಂಗ್‌ ಮೂಲಕ 16 ಪಾಯಿಂಟ್‌ ಕಲೆ ಹಾಕಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ಜತಿನ್‌ ಫೋಗತ್‌ ಕೂಡಾ 9 ಅಂಕ ಪಡೆದರು. ಅಜಿಂಕ್ಯಾ ಪವಾರ್‌ 5 ಅಂಕ ಸಂಪಾದಿಸಿದರು. ಆದರೆ ಟ್ಯಾಕಲ್‌ನಲ್ಲಿ ತಂಡದ ಪ್ರಯತ್ನ ನೀರಸವಾಗಿತ್ತು.

ಯೋಧಾಸ್‌ ಪರ ಅಬ್ಬರಿಸಿದ ಸುರೆಂದರ್ ಗಿಲ್‌ ಭರ್ಜರಿ 17 ರೈಡಿಂಗ್‌ ಪಾಯಿಂಟ್‌ ತಮ್ಮದಾಗಿಸಿಕೊಂಡರು. ಇದೇ ವೇಳೇ ಬೆಂಗಳೂರು ಬುಲ್ಸ್‌ ಮಾಜಿ ಆಟಗಾರ ಭರತ್‌ ಕೂಡಾ 14 ಪಾಯಿಂಟ್‌ ಸಂಗ್ರಹಿಸಿದರು. ಟ್ಯಾಕ್‌ಲ್‌ನಲ್ಲಿ ಮಿಂಚಿದ ಸುಮಿತ್‌ 9 ನಿರ್ಣಾಯಕ ಅಂಕ ಕಲೆ ಹಾಕಿದರು. ಯುಪಿ ಗೆಲುವಿನಲ್ಲಿ ಈ ಟ್ಯಾಕಲ್‌ಗಳು ಪ್ರಮುಖ ಪಾತ್ರ ವಹಿಸಿದವು. ಪಂದ್ಯದುದ್ದಕ್ಕೂ ಯುಪಿ ತಂಡ ಬುಲ್ಸ್‌ ಬಳಗವನ್ನು ಮೂರು ಬಾರಿ ಆಲೌಟ್‌ ಮಾಡಿತು.

ಪಿಂಕ್‌ ಪ್ಯಾಂಥರ್ಸ್‌ ಗೆಲುವು

ಇದಕ್ಕೂ ಮೊದಲು ನಡೆದ ದಿನದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಜೈಪುರ್‌ ಪಿಂಕ್ ಪ್ಯಾಂಥರ್ಸ್ 22-52 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ರೈಡಿಂಗ್‌ನಲ್ಲಿ ಅರ್ಜುನ್‌ ದೇಶ್ವಾಲ್‌ 19 ಅಂಕಗಳ ಭರ್ಜರಿ ಬೇಟೆ ನೆರವಿಂದ ತಂಡ ಸುಲಭ ಜಯ ಒಲಿಸಿಕೊಂಡಿತು. ಅಭಿಜೀತ್‌ ಮಲಿಕ್‌ 8 ಅಂಕ ಸಂಗ್ರಹಿಸಿದರು. ಟೈಟಾನ್ಸ್‌ ಪರ ಆಕ್ರಮಣದಲ್ಲಿ ವಿಫಲರಾದ ಪವನ್‌ ಸೆಹ್ರಾವತ್‌ 7 ಪಾಯಿಂಟ್‌ ಮಾತ್ರ ಪಡೆದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.