ಸಂಕಷ್ಟದಲ್ಲಿ ಬೆಂಗಳೂರು ಬುಲ್ಸ್; ಪಿಕೆಎಲ್ ಪ್ಲೇ ಆಫ್ ರೇಸ್ನಿಂದ ಹೊರಬೀಳುವ ಭೀತಿಯಲ್ಲಿ ಪರ್ದೀಪ್ ನರ್ವಾಲ್ ಪಡೆ
ಪ್ರಸಕ್ತ ಪಿಕೆಎಲ್ ಋತುವಿನಲ್ಲಿ ಪರ್ದೀಪ್ ನರ್ವಾಲ್ ನೇತೃತ್ವದ ಬೆಂಗಳೂರು ಬುಲ್ಸ್ ತಂಡದ ಸ್ಥಿತಿ ತೀರಾ ಕಳಪೆಯಾಗಿದೆ. ಗೂಳಿಗಳ ಬಳಗ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಎಲ್ಲಾ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ತಂಡ ಕೊನೆಯ ಸ್ಥಾನದಲ್ಲಿದೆ.
ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನಲ್ಲಿ ಇದುವರೆಗೆ ಅನೇಕ ರೋಚಕ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಕೆಲವು ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು, ಇನ್ನೂ ಕೆಲವು ತಂಡಗಳ ಪ್ರದರ್ಶನ ತೀರಾ ಕಳಪೆಯಾಗಿದೆ. ಇದು ಇನ್ನೂ ಆರಂಭಿಕ ಹಂತವಾಗಿದ್ದರೂ, ಈ ಋತುವಿನಲ್ಲಿ ಯಾವ ತಂಡವು ಪ್ಲೇಆಫ್‌ಗೆ ಹೋಗಬಹುದು ಮತ್ತು ಯಾವ ತಂಡವು ಔಟ್ ಆಗಬಹುದು ಎಂಬ ಲೆಕ್ಕಾಚಾರ ಈಗಾಗಲೇ ಪ್ರಾರಂಭವಾಗಿದೆ. ಈ ಲಿಸ್ಟ್ನಲ್ಲಿ ಬೆಂಗಳೂರು ಬುಲ್ಸ್ ಕೂಡ ಇದೆ.
1. ಪಾಟ್ನಾ ಪೈರೇಟ್ಸ್
ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್‌ನ ಪರಿಸ್ಥಿತಿ ಈ ಋತುವಿನಲ್ಲಿ ಉತ್ತಮವಾಗಿಲ್ಲ. ತಂಡ ಇಲ್ಲಿಯವರೆಗೆ ಒಟ್ಟು 2 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಂದು ಪಂದ್ಯ ಗೆದ್ದು ಒಂದು ಪಂದ್ಯದಲ್ಲಿ ಸೋತಿದೆ. ಪಾಟ್ನಾ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಈ ಬಾರಿ ಪಾಟ್ನಾ ತಂಡ ಅಷ್ಟೊಂದು ಚೆನ್ನಾಗಿ ಕಾಣುತ್ತಿಲ್ಲ. ದೇವಾಂಕ್ ಅವರು ಕೊನೆಯ ಪಂದ್ಯವನ್ನು ಒಂಟಿಯಾಗಿ ಗೆಲ್ಲುವಂತೆ ಮಾಡಿದ್ದರು. ಆದರೆ ಇಡೀ ತಂಡದ ಪ್ರದರ್ಶನವನ್ನು ನೋಡಿದರೆ, ಪಾಟ್ನಾ ತಂಡವು ಪ್ಲೇ ಆಫ್‌ಗೆ ಪ್ರವೇಶಿಸುವುದು ಅನುಮಾನ ಎನ್ನಲಾಗಿದೆ.
2. ತೆಲುಗು ಟೈಟಾನ್ಸ್
ಪವನ್ ಸೆಹ್ರಾವತ್ ನಾಯಕತ್ವದ ತೆಲುಗು ಟೈಟಾನ್ಸ್‌ಗೆ ಈ ಋತುವಿನಲ್ಲಿ ಇದುವರೆಗೆ ಅದ್ಭುತ ಯಶಸ್ಸು ಸಿಕ್ಕಿಲ್ಲ. ತಂಡವು ಬೆಂಗಳೂರು ಬುಲ್ಸ್ ವಿರುದ್ಧದ ಮೊದಲ ಪಂದ್ಯವನ್ನು ಗೆದ್ದಿತ್ತು. ಈ ಮೂಲಕ ಶುಭಾರಂಭ ಮಾಡಿ ಭರವಸೆ ಮೂಡಿಸಿತ್ತು. ಆದರೆ, ಆ ಬಳಿಕ ಟೈಟಾನ್ಸ್ ತಂಡ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಕಳೆದ ಋತುವಿನ ತಪ್ಪುಗಳು ಈ ಬಾರಿಯೂ ಪುನರಾವರ್ತನೆಯಾಗುತ್ತಿವೆ. ಹೀಗಿರುವಾಗ ತೆಲುಗು ಟೈಟಾನ್ಸ್ ಪ್ಲೇಆಫ್ ಹಂತಕ್ಕೆ ಹೋಗುವ ಸಾಧ್ಯತೆ ಕಾಣುತ್ತಿಲ್ಲ.
3.ಬೆಂಗಳೂರು ಬುಲ್ಸ್
ಈ ಋತುವಿನಲ್ಲಿ ಪರ್ದೀಪ್ ನರ್ವಾಲ್ ನೇತೃತ್ವದ ಬೆಂಗಳೂರು ಬುಲ್ಸ್ ಸ್ಥಿತಿ ತುಂಬಾ ಕೆಟ್ಟದಾಗಿದೆ. ತಂಡ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ತಂಡ ಕೊನೆಯ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರು ಬುಲ್ಸ್ ಈ ಋತುವಿನಲ್ಲಿ ಪ್ಲೇಆಫ್‌ನಿಂದ ಹೊರಗುಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಪರ್ದೀಪ್ ನರ್ವಾಲ್ ಬಿಟ್ಟರೆ ಇತರ ಆಟಗಾರರ ಕಡೆಯಿಂದ ಉತ್ತಮ ಪ್ರದರ್ಶನ ಬರುತ್ತಿಲ್ಲ.
ಪ್ರೊ ಕಬಡ್ಡಿ ಲೀಗ್ 2024 ಪಾಯಿಂಟ್ಸ್ ಟೇಬಲ್
1. ಪುಣೇರಿ ಪಲ್ಟನ್ - 4 ಪಂದ್ಯಗಳಲ್ಲಿ 16 ಅಂಕಗಳು
2. ಯುಪಿ ಯೋಧಾ - 4 ಪಂದ್ಯಗಳಲ್ಲಿ 16 ಅಂಕಗಳು
3. ತಮಿಳ್ ತಲೈವಾಸ್ - 4 ಪಂದ್ಯಗಳಲ್ಲಿ 14 ಅಂಕಗಳು
4. ಜೈಪುರ ಪಿಂಕ್ ಪ್ಯಾಂಥರ್ಸ್ - 4 ಪಂದ್ಯಗಳಲ್ಲಿ 13 ಅಂಕಗಳು
5. ದಬಾಂಗ್ ಡೆಲ್ಲಿ - 4 ಪಂದ್ಯಗಳಲ್ಲಿ 12 ಅಂಕಗಳು
6. ತೆಲುಗು ಟೈಟಾನ್ಸ್ - 5 ಪಂದ್ಯಗಳಲ್ಲಿ 11 ಅಂಕಗಳು
7. ಹರಿಯಾಣ ಸ್ಟೀಲರ್ಸ್ - 3 ಪಂದ್ಯಗಳಲ್ಲಿ 10 ಅಂಕಗಳು
8. ಬೆಂಗಾಲ್ ವಾರಿಯರ್ಸ್ - 3 ಪಂದ್ಯಗಳಲ್ಲಿ 9 ಅಂಕಗಳು
9. ಯು -ಮುಂಬಾ – 3 ಪಂದ್ಯಗಳಲ್ಲಿ 8 ಅಂಕಗಳು
10. ಗುಜರಾತ್ ಜೈಂಟ್ಸ್ - 3 ಪಂದ್ಯಗಳಲ್ಲಿ 7 ಅಂಕಗಳು
11. ಪಟ್ನಾ ಪೈರೇಟ್ಸ್ - 3 ಪಂದ್ಯಗಳಲ್ಲಿ 6 ಅಂಕಗಳು
12. ಬೆಂಗಳೂರು ಬುಲ್ಸ್ - 4 ಪಂದ್ಯಗಳಲ್ಲಿ ಒಂದು ಅಂಕ
ವರದಿ: ವಿನಯ್ ಭಟ್.
ಇದನ್ನೂ ಓದಿ | ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್, ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದ ಈತ ಪಿಕೆಎಲ್ನಲ್ಲೂ ಅಬ್ಬರ