ಕನ್ನಡ ಸುದ್ದಿ  /  ಕ್ರೀಡೆ  /  Pkl Season 10: ವಿಶ್ವಕಪ್‌ ಮಾತ್ರ ಅಲ್ಲ, ಪ್ರೊ ಕಬಡ್ಡಿ ಲೀಗ್‌ ಕೂಡಾ ಉಚಿತವಾಗಿ ವೀಕ್ಷಿಸಬಹುದು

PKL Season 10: ವಿಶ್ವಕಪ್‌ ಮಾತ್ರ ಅಲ್ಲ, ಪ್ರೊ ಕಬಡ್ಡಿ ಲೀಗ್‌ ಕೂಡಾ ಉಚಿತವಾಗಿ ವೀಕ್ಷಿಸಬಹುದು

Pro Kabaddi League: ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯನ್ನು ಭಾರತದ ಎಲ್ಲಾ ಮೊಬೈಲ್ ಬಳಕೆದಾರರು ಉಚಿತವಾಗಿ ವೀಕ್ಷಿಸಬಹುದು.

ಪ್ರೊ ಕಬಡ್ಡಿ ಲೀಗ್ ಲೈವ್‌ ಸ್ಟ್ರೀಮಿಂಗ್
ಪ್ರೊ ಕಬಡ್ಡಿ ಲೀಗ್ ಲೈವ್‌ ಸ್ಟ್ರೀಮಿಂಗ್

ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಮತ್ತು ಅದಕ್ಕೂ ಮುನ್ನ ನಡೆದ ಏಷ್ಯಾಕಪ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಭಾರಿ ಯಶಸ್ಸು ಕಂಡ ಡಿಸ್ನಿ+ ಹಾಟ್‌ಸ್ಟಾರ್, ಇದೀಗ ಕಬಡ್ಡಿ ಪ್ರಿಯರಿಗೂ ಸಿಹಿಸುದ್ದಿ ನೀಡಿದೆ. ಏಷ್ಯಾಕಪ್ ಮತ್ತು ವಿಶ್ವಕಪ್ ಬಳಿಕ ಮುಂದಿನ ಆವೃತ್ತಿಯ ಪ್ರೊ ಕಬಡ್ಡಿ (PKL Season 10 ಆವೃತ್ತಿಯ ಲೈವ್ ಸ್ಟ್ರೀಮಿಂಗ್ ಅನ್ನು ಮೊಬೈಲ್ ಬಳಕೆದಾರರಿಗೆ ಉಚಿತವಾಗಿ ಉಣಬಡಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಪಿಕೆಎಲ್‌ ಸೀಸನ್ 10ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಡಿಸೆಂಬರ್ 2ರಿಂದ ಪ್ರೊ ಕಬಡ್ಡಿಯ ಹತ್ತನೇ ಆವೃತ್ತಿ ಆರಂಭವಾಗಲಿದೆ. ಆವೃತ್ತಿಯ ಪಂದ್ಯಗಳನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಲೈವ್‌ ಸ್ಟ್ರೀಮ್‌ ಮಾಡಲಿದ್ದು, ಮೊಬೈಲ್‌ನಲ್ಲಿ ಅದನ್ನು ಉಚಿತವಾಗಿ ವೀಕ್ಷಿಸಬಹುದು. ಭಾರತದಲ್ಲಿ ಕ್ರಿಕೆಟ್‌ನಂತೆಯೇ ಕಬಡ್ಡಿ ವೀಕ್ಷಿಸುವ ಅಭಿಮಾನಿಗಳ ಬಳಗ‌ ತುಂಬಾ ದೊಡ್ಡದಿದೆ. ಹೀಗಾಗಿ ಪ್ರೊ ಕಬಡ್ಡಿ ಲೀಗ್ ಪ್ರಸಾರದಲ್ಲೂ ಯಶಸ್ಸು‌ ಪಡೆಯಲು ಹಾಟ್‌ಸ್ಟಾರ್‌ ಮುಂದಾಗಿದೆ. ಇದೇ ವೇಳೆ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿ ಚಾನೆಲ್‌ ಮೂಲಕ ನೇರಪ್ರಸಾರ ಮಾಡಲಾಗುತ್ತದೆ.

ಪ್ರೊ ಕಬಡ್ಡಿ ಲೀಗ್‌ನ ಮುಂಬರುವ ಆವೃತ್ತಿಯನ್ನು ಡಿಸೆಂಬರ್ 2ರಿಂದ ಭಾರತದಲ್ಲಿನ ಎಲ್ಲಾ ಮೊಬೈಲ್ ಬಳಕೆದಾರರು ಉಚಿತವಾಗಿ ನೋಡಬಹುದು ಎಂದು ಪ್ಲಾಟ್‌ಫಾರ್ಮ್ ಘೋಷಿಸಿದೆ.

ಅತ್ತ ಜಿಯೋ ಸಂಸ್ಥೆಯು 2022ರ ಫಿಫಾ ವಿಶ್ವಕಪ್ ಮತ್ತು ಐಪಿಎಲ್‌ ಆವೃತ್ತಿಯನ್ನು ಭಾರತೀಯರಿಗೆ ಉಚಿತವಾಗಿ ಉಣಬಡಿಸಿತ್ತು. ಹೀಗಾಗಿ ಏಷ್ಯಾಕಪ್ ಮತ್ತು ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಕನಿಷ್ಠ ಮೊಬೈಲ್ ಬಳಕೆದಾರರಿಗೆ ನೀಡಲು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಮುಂದಾಯಿತು. ಆ ಪಟ್ಟಿಗೆ ಈಗ ಪಿಕೆಎಲ್‌ ಕೂಡಾ ಸೇರ್ಪಡೆಯಾಗಿದೆ.

ಅಹಮದಾಬಾದ್‌ನಲ್ಲಿ ಹತ್ತನೇ ಆವೃತ್ತಿಗೆ ಚಾಲನೆ

ಪ್ರೊ ಕಬಡ್ಡಿ ಲೀಗ್‌ನ ಮುಂಬರುವ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳುತ್ತಿವೆ. 2023ರ ಡಿಸೆಂಬರ್ 2ರಂದು ಅಹಮದಾಬಾದ್‌​ನ ಅರೆನಾ ಬೈ ಟ್ರಾನ್ಸ್‌ಸ್ಟಾಡಿಯಾ ಸ್ಟೇಡಿಯಂನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್​ ತಂಡಗಳು ಸೆಣಸಾಟ ನಡೆಸಲಿವೆ. ಆವೃತ್ತಿಯು 2024ರ ಫೆಬ್ರವರಿ 21ರರವರೆಗೂ ನಡೆಯಲಿದೆ.

ಸದ್ಯ ಮೊದಲ ಹಂತದ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿದ್ದು, ಫ್ಲೇ ಆಫ್​ ಮತ್ತು ಉಳಿದ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ಪಿಕೆಎಲ್‌ 10ನೇ ಆವೃತ್ತಿಯು ಡಿಸೆಂಬರ್ 2ರಿಂದ 7ರವರೆಗೆ ಅಹಮದಾಬಾದ್‌​ನಲ್ಲಿ ನಡೆಯಲಿದೆ. ಆ ಬಳಿಕ ತಂಡಗಳು ಬೆಂಗಳೂರಿಗೆ ಬರಲಿವೆ. ಉದ್ಯಾನ ನಗರಿಯಲ್ಲಿ ಡಿಸೆಂಬರ್ 8ರಿಂದ 13ರವರೆಗೆ ಕಬಡ್ಡಿ ಕಲಿಗಳ ಕಾದಾಟ ನಡೆಯಲಿದೆ. ಪುಣೆಯಲ್ಲಿ ಡಿಸೆಂಬರ್ 15ರಿಂದ 20, ಚೆನ್ನೈನಲ್ಲಿ ಡಿಸೆಂಬರ್ 22ರಿಂದ 27, ನೋಯ್ಡಾದಲ್ಲಿ ಡಿಸೆಂಬರ್ 29ರಿಂದ ಜನವರಿ 3, ಮುಂಬೈನಲ್ಲಿ ಜನವರಿ 5ರಿಂದ 10, ಜೈಪುರದಲ್ಲಿ ಜನವರಿ 12ರಿಂದ 17, ಹೈದರಾಬಾದ್‌ನಲ್ಲಿ ಜನವರಿ 19ರಿಂದ 24), ಪಾಟ್ನಾದಲ್ಲಿ ಜನವರಿ 26ರಿಂದ 31, ದೆಹಲಿಯಲ್ಲಿ ಫೆಬ್ರವರಿ 2ರಿಂದ 7, ಕೋಲ್ಕತ್ತಾದಲ್ಲಿ ಫೆಬ್ರವರಿ 9ರಿಂದ 14 ಮತ್ತು ಪಂಚಕುಲದಲ್ಲಿ ಫೆಬ್ರವರಿ 16ರಿಂದ 21ರವರೆಗೆ ನಡೆಯಲಿದೆ.