PKL: ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಬೆಂಗಳೂರು ಬುಲ್ಸ್ ತಂಡ ಹೇಗಿದೆ; ಗೂಳಿಗಳ ಬಳಗದ ಅವಲೋಕನ
ಕನ್ನಡ ಸುದ್ದಿ  /  ಕ್ರೀಡೆ  /  Pkl: ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಬೆಂಗಳೂರು ಬುಲ್ಸ್ ತಂಡ ಹೇಗಿದೆ; ಗೂಳಿಗಳ ಬಳಗದ ಅವಲೋಕನ

PKL: ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಬೆಂಗಳೂರು ಬುಲ್ಸ್ ತಂಡ ಹೇಗಿದೆ; ಗೂಳಿಗಳ ಬಳಗದ ಅವಲೋಕನ

Bengaluru Bulls PKL Season 10: ಬೆಂಗಳೂರು ಬುಲ್ಸ್‌ ತಂಡವು ಹಳೆಯ ಜೋಶ್‌ ಹಾಗೂ ಒಂದಷ್ಟು ಹೊಸತನದೊಂದಿಗೆ ಪಿಕೆಎಲ್‌ 10ನೇ ಆವೃತ್ತಿಗೆ ಸಜ್ಜಾಗಿದೆ. ಕಬಡ್ಡಿ ಲೀಗ್‌ ಆರಂಭಕ್ಕೂ ಮುನ್ನ ಗೂಳಿಗಳ ಬಳಗದ ಬಲಾಬಲ ತಿಳಿಯೋಣ.

ಬೆಂಗಳೂರು ಬುಲ್ಸ್‌ ತಂಡದ ಸಂಗ್ರಹ ಚಿತ್ರ
ಬೆಂಗಳೂರು ಬುಲ್ಸ್‌ ತಂಡದ ಸಂಗ್ರಹ ಚಿತ್ರ

ಒಂದು ಬಾರಿಯ ಪ್ರೊ ಕಬಡ್ಡಿ ಲೀಗ್‌ (Pro Kabaddi League) ಚಾಂಪಿಯನ್‌ ಬೆಂಗಳೂರು ಬುಲ್ಸ್ (Bengaluru Bulls), ಹೊಸ ಆವೃತ್ತಿಗೆ ಸಜ್ಜಾಗಿ ನಿಂತಿದೆ. ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಗೂಳಿಗಳ ಸೈನ್ಯ, ಟ್ರೋಫಿ ಗೆಲ್ಲಲು ವಿಫಲವಾಗಿತ್ತು. ಆದರೆ, 10ನೇ ಆವೃತ್ತಿಗೆ ಮತ್ತಷ್ಟು ಹೊಸತನದೊಂದಿಗೆ ಮರಳುತ್ತಿರುವ ತಂಡವು, ಎರಡನೇ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಹಾಗಿದ್ದರೆ, ಈ ಬಾರಿ ಗುಮ್ಮೋ ಗೂಳಿಗಳ ಬಳಗ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ನೋಡೋಣ.

ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೆಲವು ಆಟಗಾರರನ್ನು ಹರಾಜಿಗೂ ಮುನ್ನವೇ ತಂಡ ರಿಟೈನ್‌ ಮಾಡಿಕೊಂಡಿತ್ತು. ಭರತ್, ಯಶ್ ಹೂಡಾ, ನೀರಜ್ ನರ್ವಾಲ್, ಸೌರಭ್ ನಂದಲ್ ಮತ್ತು ಅಮನ್ ಅವರನ್ನು 10ನೇ ಆವೃತ್ತಿಗೆ ಫ್ರಾಂಚೈಸಿ ಉಳಿಸಿಕೊಂಡಿತ್ತು. ಆ ಬಳಿಕ ಹರಾಜಿನ ವೇಳೆ ವಿಕಾಸ್ ಖಂಡೋಲಾ ಮತ್ತು ಸಚಿನ್ ನರ್ವಾಲ್ ಅವರನ್ನು ಫೈನಲ್ ಬಿಡ್ ಮ್ಯಾಚ್ (FBM) ಕಾರ್ಡ್ ಬಳಸಿ ಮತ್ತೆ ಖರೀದಿ ಮಾಡಿತು. ಆ ಮೂಲಕ ಹೊಸ ಆವೃತ್ತಿಗೆ ಬಲಿಷ್ಠ ತಂಡ ಕಟ್ಟುವ ಜೊತೆಗೆ ಹಳೆಯ ಆಟಗಾರರಿಗೆ ಮಣೆ ಹಾಕಿತು.

ಬಲಿಷ್ಠ ರೈಡರ್‌ಗಳು

ಗೂಳಿಗಳ ಪಾಳಯದಲ್ಲಿ ಗುಣಮಟ್ಟದ ರೈಡರ್‌ಗಳಿದ್ದಾರೆ. ಕಳೆದ ಆವೃತ್ತಿಯಲ್ಲಿ ರೈಡಿಂಗ್‌ನಲ್ಲಿ ಅಂಕಗಳ ಹೊಳೆ ಹರಿಸಿದ್ದ ಪ್ರಭಾವಶಾಲಿ ಯುವ ರೈಡರ್‌ಗಳಾದ ಭರತ್, ವಿಕಾಸ್ ಖಂಡೋಲಾ, ನೀರಜ್ ನರ್ವಾಲ್ ಮತ್ತು ಅಭಿಷೇಕ್ ಸಿಂಗ್ ತಂಡದ ಬಲ. ಕಳೆದ ವರ್ಷ ಬರೋಬ್ಬರಿ 279 ರೈಡ್ ಪಾಯಿಂಟ್‌ಗಳನ್ನು ಕಲೆಹಾಕಿದ್ದ ಭರತ್, ಬುಲ್ಸ್ ಪರ ಅಮೋಘ ಫಾರ್ಮ್‌ನಲ್ಲಿದ್ದರು. ಅಲ್ಲದೆ ಸೀಸನ್ 9ರ ಅತ್ಯುತ್ತಮ ರೈಡರ್ ಕೂಡ ಆಗಿದ್ದರು. ಇದೇ ವೇಳೆ ವಿಕಾಸ್ ಖಂಡೋಲಾ ಮತ್ತು ನೀರಜ್ ನರ್ವಾಲ್ ಕೂಡಾ ಕ್ರಮವಾಗಿ 135 ಮತ್ತು 92 ರೈಡ್‌ ಪಾಯಿಂಟ್‌ ಗಳಿಸಿದ್ದರು. ಹೀಗಾಗಿ ಈ ಬಾರಿಯೂ ತಂಡದಲ್ಲಿ ಈ ಮೂವರು ಪ್ರಮುಖ ರೈಡಿಂಗ್‌ ಅಸ್ತ್ರಗಳಾಗುವ ನಿರೀಕ್ಷೆ ಇದೆ.

ಈ ಬಾರಿ ತಂಡಕ್ಕೆ ಮೋನು ಮತ್ತು ಸುಶೀಲ್ ರೈಡಿಂಗ್‌ನಲ್ಲಿ ಪ್ರಮುಖ ಬ್ಯಾಕಪ್‌ ಆಯ್ಕೆಗಳಾದ್ದಾರೆ. ಅತ್ತ ಪಿಕೆಎಲ್‌ನ 7ನೇ ಆವೃತ್ತಿಯಲ್ಲಿ ತಂಡದ ಭಾಗವಾಗಿದ್ದ ಬಂಟಿ ಮತ್ತೆ ಬುಲ್ಸ್‌ ಬಳಗ ಸೇರಿಕೊಂಡಿದ್ದಾರೆ.

ಆಳವಾದ ಡಿಫೆನ್ಸ್‌

ಡಿಫೆನ್ಸ್‌ ವಿಭಾಗದಲ್ಲೂ ಬುಲ್ಸ್ ಬಲಿಷ್ಠವಾಗಿದೆ. ಪ್ರತಿ ಸ್ಥಾನಕ್ಕೂ ಡಿಫೆನ್ಸ್‌ನಲ್ಲಿ ಅನುಭವಿ ಡಿಫೆಂಡರ್‌ಗಳಿದ್ದಾರೆ. ಸೌರಭ್ ನಂದಲ್, ಅಮನ್, ವಿಶಾಲ್ ಮತ್ತು ಸುರ್ಜೀತ್ ಸಿಂಗ್ ಅವರಂಥ ಟ್ಯಾಕ್ಲರ್‌ಗಳು ತಂಡದ ಟ್ಯಾಕಲ್‌ ಪಾಯಿಂಟ್‌ ಹೆಚ್ಚಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ಸೌರಭ್ ನಂದಲ್ ಅವರು ಬುಲ್ಸ್‌ ಬಳಗದ ಪರ ಡಿಫೆನ್ಸ್‌ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದರು. 72 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ 9ನೇ ಸೀಸನ್‌ನ ಮೂರನೇ ಅತ್ಯುತ್ತಮ ಡಿಫೆಂಡರ್ ಆಗಿ ಹೊರಹೊಮ್ಮಿದರು. ಇದೇ ವೇಳೆ ಸಹ ಆಟಗಾರ ಅಮನ್‌ 60 ಟ್ಯಾಕಲ್ ಪಾಯಿಂಟ್ ಸಂಪಾದಿಸಿದ್ದರು.

ಈ ಬಾರಿ ಮತ್ತೊಬ್ಬ ಗುಣಮಟ್ಟದ ಆಟಗಾರ ವಿಶಾಲ್ ಅವರನ್ನು ಬುಲ್ಸ್‌ ಕರೆತಂದಿದೆ. ಹಿಂದಿನ ಆವೃತ್ತಿಯಲ್ಲಿ 58 ಟ್ಯಾಕಲ್ ಪಾಯಿಂಟ್ ‌ಗಳಿಸಿದ್ದ ಎಡ ಕವರ್ (left cover) ಡಿಫೆಂಡರ್‌ ಸೀಸನ್ 9ರಲ್ಲಿ ಮಿಂಚುವ ನಿರೀಕ್ಷೆ ಇದೆ. ಇದೇ ವೇಳೆ ಪಿಕೆಎಲ್‌ ಇತಿಹಾಸದಲ್ಲಿ ಅಗ್ರ ಐದು ಡಿಫೆಂಡರ್‌ಗಳಲ್ಲಿ ಒಬ್ಬರಾಗಿರುವ ಸುರ್ಜೀತ್ ಸಿಂಗ್ ತಂಡಕ್ಕೆ ಬಲ ತುಂಬಲಿದ್ದಾರೆ. 348 ಟ್ಯಾಕಲ್ ಪಾಯಿಂಟ್‌ಗಳನ್ನು ಕಲೆ ಹಾಕಿರುವ ಸುರ್ಜೀತ್ ಸಿಂಗ್ ಮತ್ತು ವಿಶಾಲ್, ಕವರ್ ಡಿಫೆಂಡರ್‌ಗಳಾಗಿ ಪಿಕೆಎಲ್‌ನಲ್ಲಿ ಮೊದಲ ಬಾರಿಗೆ ಜೋಡಿಯಾಗಿ ಮಿಂಚುವ ಸಾಧ್ಯತೆಯಿದೆ.

ಅನುಭವಿ ಆಲ್‌ರೌಂಡರ್‌ಗಳು

ರಣ್ ಸಿಂಗ್ ಮತ್ತು ಸಚಿನ್ ನರ್ವಾಲ್ ತಂಡಕ್ಕೆ ಸಮತೋಲನ ಒದಗಿಸಬಲ್ಲ ಇಬ್ಬರು ಆಲ್‌ರೌಂಡರ್‌ಗಳು. ಪ್ರೊ ಕಬಡ್ಡಿ ಲೀಗ್‌ನಲ್ಲಿ 142 ಪಂದ್ಯಗಳನ್ನು ಆಡಿರುವ ರಣ್‌ ಸಿಂಗ್ ಹೆಚ್ಚು ಅನುಭವ ಹೊಂದಿದ್ದು, ಈವರೆಗೆ 378 ಅಂಕಗಳನ್ನು ಗಳಿಸಿದ್ದಾರೆ. ಅತ್ತ ಸಚಿನ್ ನರ್ವಾಲ್ ಇದುವರೆಗೆ 63 ಅಂಕ ಸಂಪಾದಿಸಿದ್ದಾರೆ.

ರಣಧೀರ್ ಸಿಂಗ್ ಸೆಹ್ರಾವತ್ ತಂಡದ ಆಸ್ತಿ

ಸದ್ಯ ಮೇಲ್ನೋಟಕ್ಕೆ ಆಲ್‌ರೌಂಡ್‌ ತಂಡವಾಗಿರುವ ಬುಲ್ಸ್, ಸೀಸನ್ 10ರಲ್ಲಿ ಬಲಿಷ್ಠ ತಂಡವಾಗಿ ಕಾಣುತ್ತಿದೆ. ತಂಡಕ್ಕೆ ಕೋಚ್‌ ರಣಧೀರ್ ಸಿಂಗ್ ಸೆಹ್ರಾವತ್ ಪ್ರಮುಖ ಬಲ. ಪಿಕೆಎಲ್‌ನ ಎಲ್ಲಾ 10 ಆವೃತ್ತಿಗಳಲ್ಲಿಯೂ ಬುಲ್ಸ್‌ಗೆ ಬಲವಾಗಿರುವ ಅವರು, ತಂಡವನ್ನು ಮತ್ತೊಮ್ಮೆ ಯಶಸ್ವಿಯಾಗಿ ಮುನ್ನಡೆಸುವ ಗುರಿ ಹೊಂದಿದ್ದಾರೆ. ಆ ಮೂಲಕ ಪಿಕೆಎಲ್‌ನ ಎಲ್ಲಾ ಆವೃತ್ತಿಗಳಲ್ಲಿಯೂ ಒಂದೇ ಫ್ರಾಂಚೈಸಿಗೆ ಕೋಚ್‌ ಆಗಿ ಮುಂದುವರೆದ ಏಕೈಕ ತರಬೇತುದಾರ ಎಂಬ ದಾಖಲೆ ಮಾಡಿದ್ದಾರೆ. ಇದೀಗ ಮತ್ತೊಂದು ಯಶಶ್ವಿ ಆವೃತ್ತಿಗೆ ಬೆಂಗಳೂರು ಬುಲ್ಸ್‌ ಎದುರು ನೋಡುತ್ತಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.