US Open 2023: ಪ್ರೀಕ್ವಾರ್ಟರ್​ ಫೈನಲ್ ಸುತ್ತಿಗೆ ಪ್ರವೇಶಿಸಿದ ಅಲ್ಕರಾಜ್, ಮೆಡ್ವಡೇವ್, ಜ್ವೆರೆವ್
ಕನ್ನಡ ಸುದ್ದಿ  /  ಕ್ರೀಡೆ  /  Us Open 2023: ಪ್ರೀಕ್ವಾರ್ಟರ್​ ಫೈನಲ್ ಸುತ್ತಿಗೆ ಪ್ರವೇಶಿಸಿದ ಅಲ್ಕರಾಜ್, ಮೆಡ್ವಡೇವ್, ಜ್ವೆರೆವ್

US Open 2023: ಪ್ರೀಕ್ವಾರ್ಟರ್​ ಫೈನಲ್ ಸುತ್ತಿಗೆ ಪ್ರವೇಶಿಸಿದ ಅಲ್ಕರಾಜ್, ಮೆಡ್ವಡೇವ್, ಜ್ವೆರೆವ್

US Open 2023: ಯುಎಸ್​ ಓಪನ್​ ಟೂರ್ನಿಯ 3ನೇ ಸುತ್ತಿನಲ್ಲಿ ಜಯಿಸಿದ ಕಾರ್ಲೋಸ್ ಅಲ್ಕರಾಜ್, ಡೇನಿಯಲ್ ಮೆಡ್ವಡೇವ್, ಅಲೆಕ್ಸಾಂಡರ್​ ಜ್ವೆರೆವ್ ಇದೀಗ ಪ್ರೀಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಪ್ರೀಕ್ವಾರ್ಟರ್​ ಫೈನಲ್ ಸುತ್ತಿಗೆ ಪ್ರವೇಶಿಸಿದ ಜ್ವೆರೆವ್, ಅಲ್ಕರಾಜ್, ಮೆಡ್ವಡೇವ್.
ಪ್ರೀಕ್ವಾರ್ಟರ್​ ಫೈನಲ್ ಸುತ್ತಿಗೆ ಪ್ರವೇಶಿಸಿದ ಜ್ವೆರೆವ್, ಅಲ್ಕರಾಜ್, ಮೆಡ್ವಡೇವ್.

ಸೆಪ್ಟೆಂಬರ್ 2ರಂದು ರಾತ್ರಿ ನಡೆದ 2023ರ ಯುಎಸ್ ಓಪನ್ ಟೆನಿಸ್ ಟೂರ್ನಿಯ (US Open 2023) ಸ್ಲಾಮ್‌ನಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್, 3ನೇ ಸುತ್ತಿನಲ್ಲೂ ಜಯಭೇರಿ ಬಾರಿಸಿದ್ದಾರೆ. ಡೇನಿಯಲ್ ಇವಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವತ್ತ ದಾಪುಗಾಲಿಟ್ಟಿದ್ದಾರೆ. ಕಾರ್ಲೋಸ್ ಅಲ್ಕರಾಜ್ (Carlos Alcaraz) 6-2, 6-3, 4-6, 6-3 ಗೇಮ್​​ಗಳಿಂದ ಇವಾನ್ಸ್ ಅವರನ್ನು ಸೋಲಿಸಿ 16ನೇ ಸುತ್ತಿಗೆ ಪ್ರವೇಶ ನೀಡಿದ್ದಾರೆ.

ಸತತ ಮೂರನೇ ಗೆಲುವು ದಾಖಲಿಸಿದ ಕಾರ್ಲೋಸ್ ಅಲ್ಕರಾಜ್ ಪ್ರೀ ಕ್ವಾರ್ಟರ್​​​ಫೈನಲ್​​ನಲ್ಲಿ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ ಅವರನ್ನು ಎದುರಿಸಲಿದ್ದಾರೆ. ಅರ್ನಾಲ್ಡಿ ಕೂಡ ಮೂರನೇ ಸುತ್ತಿನಲ್ಲಿ ಬ್ರಿಟಿಷ್​ ಕ್ಯಾಮರೂನ್ ನಾರ್ರಿ ವಿರುದ್ಧ 7-5, 6-4, 6-4 ಗೇಮ್​ಗಳಿಂದ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್​ಫೈನಲ್​ ಪ್ರವೇಶಿಸಿದ್ದಾರೆ. ಅಲ್ಕರಾಜ್​ 3 ಗಂಟೆ 10 ನಿಮಿಷಗಳ ಪೈಪೋಟಿಯಲ್ಲಿ ಜಯಭೇರಿ ಬಾರಿಸಿದರು.

ಈ ಬಗ್ಗೆ ಮಾತನಾಡಿದ ಅಲ್ಕರಾಜ್, ಇವಾನ್ಸ್​ ಕಠಿಣ ಎದುರಾಳಿ. ಕಠಿಣ ಹೋರಾಟಗಾರ. ಅದ್ಭುತ ಹೊಡೆತಗಳ ಮೂಲಕ ಭಾರಿ ಪೈಪೋಟಿ ಕೊಟ್ಟರು. ಯುಎಸ್ ಓಪನ್‌ನಲ್ಲಿ 4ನೇ ಸುತ್ತು ಪ್ರವೇಶಿಸಲು ನನಗೆ ನಿಜವಾಗಿಯೂ ಸಂತೋಷವಾಗಿದೆ ಎಂದು ಅಲ್ಕರಾಜ್ ತಿಳಿಸಿದ್ದಾರೆ. ಮೊದಲ ಸುತ್ತಿನಲ್ಲಿ ಜರ್ಮನಿ ಡೊಮಿನಿಕ್ ಕೊಯೆಫರ್ ವಿರುದ್ಧ ಗೆದ್ದ ಅಲ್ಕರಾಜ್, 2ನೇ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಲಾಯ್ಡ್ ಹ್ಯಾರಿಸ್ ವಿರುದ್ಧ ಜಯದ ನಗೆ ಬೀರಿದ್ದರು.

ಡೇನಿಯಲ್ ಮೆಡ್ವೆಡೇವ್​​ಗೂ ಜಯ

ರಷ್ಯಾದ ಸ್ಟಾರ್​ ಆಟಗಾರ ಡೇನಿಯಲ್ ಮೆಡ್ವಡೇವ್ ತನ್ನ ಮೂರನೇ ಸುತ್ತಿನಲ್ಲಿ ಅರ್ಜೆಟೀನಾದ ಸೆಬಾಸ್ಟಿಯನ್ ಬೇಜ್ ವಿರುದ್ಧ ಅಮೋಘ ಗೆಲುವು ದಾಖಲಿಸಿ, 16ನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ. 6-2, 6-2, 6-7(6), 6-2 ಅಂತರದಲ್ಲಿ ಜಯಿಸಿದರು. ಅಲೆಕ್ಸಾಂಡರ್​ ಜ್ವೆರೆವ್ ಕೂಡ 3ನೇ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ. ಗ್ರಿಗರ್ ಡಿಮಿಟ್ರೋವ್ ಎದುರು ಜಯಿಸಿದರು.

ನಾಳೆ ಜೋಕೋವಿಕ್ ಪ್ರೀ ಕ್ವಾರ್ಟರ್​​​ಫೈನಲ್ ಪಂದ್ಯ

ಸರ್ಬಿಯಾದ ದಿಗ್ಗದ ಟೆನಿಸ್ ತಾರೆ ನೋವಾಕ್ ಜೋಕೋವಿಕ್ ಅವರು ಸೆಪ್ಟೆಂಬರ್​ 4ರಂದು ಪ್ರೀಕ್ವಾರ್ಟರ್ ಫೈನಲ್​ನಲ್ಲಿ ಕ್ರೋವೆಷ್ಯಾದ ಬೊರ್ನಾ ಗೊಜೊ ಅವರನ್ನು ಎದುರಿಸಲಿದ್ದಾರೆ. ಮೂರನೇ ಜೋಕೋವಿಕ್ ಅವರು, ಲಾಸ್ಲೊ ಡಿಜೆರೆ ಅವರನ್ನು 4-6, 4-6, 6-1, 6-1, 6-3 ಸೆಟ್‌ಗಳಿಂದ ಸೋಲಿಸಿದ್ದರು. ಈ ಗೆಲುವಿನೊಂದಿಗೆ ದಿಗ್ಗಜ ಆಟಗಾರ ಪ್ರೀ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.