ಯುಎಸ್ ಓಪನ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಅಲ್ಕರಾಜ್; ಪಂದ್ಯ ವೀಕ್ಷಿಸಿದ ಎಂಎಸ್ ಧೋನಿ, VIDEO
Carlos Alcaraz vs Alexander Zverev: ಯುಎಸ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಗೆದ್ದ ಕಾರ್ಲೋಸ್ ಅಲ್ಕರಾಜ್, ಸೆಮಿಫೈನಲ್ ಪ್ರವೇಶಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಬುಧವಾರ ರಾತ್ರಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 6-3, 6-2, 6-4 ನೇರ ಸೆಟ್‌ಗಳಿಂದ ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್ ಕದನ ಗೆದ್ದ ಸ್ಪೇನ್ನ ಕಾರ್ಲೋಸ್ ಅಲ್ಕರಾಜ್ (Carlos Alcaraz vs Alexander Zverev), ಯುಎಸ್ ಓಪನ್ ಸೆಮಿಫೈನಲ್ (US Open 2023) ಪ್ರವೇಶಿಸಿದ್ದಾರೆ. ಆ ಮೂಲಕ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಇನ್ನು ಎರಡು ಹೆಜ್ಜೆಯಷ್ಟೇ ಬಾಕಿ ಉಳಿದಿದ್ದಾರೆ.
ಕಳೆದ ತಿಂಗಳಷ್ಟೇ ವಿಂಬಲ್ಡನ್ ಪ್ರಶಸ್ತಿಯನ್ನು (Wimbledon 2023) ಗೆದ್ದಿರುವ 20 ವರ್ಷದ ಯುವಕ, ಸೆಪ್ಟೆಂಬರ್ 9ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ 2021 ರ ಯುಎಸ್ ಓಪನ್ ಚಾಂಪಿಯನ್ ಡೇನಿಯಲ್ ಮೆಡ್ವೆಡೆವ್ (Daniil Medvedev) ಅವರನ್ನು ಎದುರಿಸಲಿದ್ದಾರೆ. ಜ್ವೆರೆವ್ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡಿದ ಅಲ್ಕರಾಜ್, ನಂ. 1 ಪಟ್ಟದ ಮೇಲೂ ಕಣ್ಣಿಟ್ಟಿದ್ದಾರೆ.
ಅಲ್ಕರಾಜ್-ಜೋಕೋವಿಕ್ ಮತ್ತೊಮ್ಮೆ ಫೈನಲ್ ಸಾಧ್ಯತೆ?
ಅಲ್ಕರಾಜ್ ಜೊತೆಗೆ ಸರ್ಬಿಯಾದ ಟೆನಿಸ್ ದಿಗ್ಗಜ ಅಲ್ಕರಾಜ್ ಜೋಕೋವಿಕ್ ಕೂಡ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅಮೆರಿಕದ ಬೆನ್ ಶೆಲ್ಟನ್ ಅವರನ್ನು ಸೆಪ್ಟೆಂಬರ್ 9ರಂದು ಎದುರಿಸಲಿದ್ದಾರೆ. ಒಂದು ವೇಳೆ ಗೆದ್ದರೆ ಜೋಕೋವಿಕ್ ವಿಂಬಲ್ಡನ್ ಬಳಿಕ ಮತ್ತೊಮ್ಮೆ ಫೈನಲ್ ಪ್ರವೇಶಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್ನಲ್ಲಿ ಅಲ್ಕರಾಜ್ ಜಯಿಸಿದರೆ, ಫೈನಲ್ ಪ್ರವೇಶಿಸಲಿದ್ದಾರೆ.
ಆಗ ಅಲ್ಕರಾಜ್-ಜೋಕೋವಿಕ್ (Novak Djokovic VS Carlos Alcaraz) ಮತ್ತೊಮ್ಮೆ ಫೈನಲ್ನಲ್ಲಿ ಮುಖಾಮುಖಿಯಾಗಲಿದ್ದಾರೆ. ಇಲ್ಲಿಯೂ ಅಲ್ಕರಾಜ್ ಗೆಲುವಿನ ನಗೆ ಬೀರಿಸಿದರೆ ಯುಎಸ್ ಓಪನ್ ಪ್ರಶಸ್ತಿ ಉಳಿಸಿಕೊಳ್ಳುವುದರ ಜೊತೆಗೆ ನಂಬರ್ 1 ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಲಿದ್ದಾರೆ. ಜುಲೈನಲ್ಲಿ ನಡೆದ ವಿಂಬಲ್ಡನ್ ಫೈನಲ್ನಲ್ಲಿ ಅಲ್ಕರಾಜ್-ಜೋಕೋವಿಕ್ ಫೈನಲ್ನಲ್ಲಿ ಕಾದಾಟ ನಡೆಸಿದ್ದರು. ಅಲ್ಕರಾಜ್ ಚಾಂಪಿಯನ್ ಆಗಿದ್ದರು. ಒಂದು ವೇಳೆ ಜೋಕೋವಿಕ್ ಗೆದ್ದರೆ ವಿಶ್ವದಾಖಲೆಯ ಗ್ರ್ಯಾಂಡ್ ಸ್ಲಾಮ್ಗೆ ಮುತ್ತಿಕ್ಕಲಿದ್ದಾರೆ.
ಪಂದ್ಯ ವೀಕ್ಷಿಸಿದ ಧೋನಿ
ಯುಎಸ್ ಓಪನ್-2023ರ ಅಲ್ಕರಾಜ್-ಜ್ವೆರೆವ್ ನಡುವಿನ ಕ್ವಾರ್ಟರ್-ಫೈನಲ್ ಪಂದ್ಯವನ್ನು ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಕಣ್ತುಂಬಿಕೊಂಡರು. ಕಿಕ್ಕಿರಿದು ತುಂಬಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಕಾಣಿಸಿಕೊಂಡಿದ್ದನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ವಿಡಿಯೋ ಹಂಚಿಕೊಂಡಿದೆ. ಈ ವೇಳೆ ಧೋನಿ ತನ್ನ ಸ್ನೇಹಿತರೊಂದಿಗೆ ತಮಾಷೆ ಮಾಡುತ್ತಿರುವುದನ್ನು ಕಾಣಬಹುದು.
ಸೆಮಿಫೈನಲ್ಸ್ಗೆ ಸಬಲೆಂಕಾ
ವಿಶ್ವದ ನಂಬರ್ವನ್ ಶ್ರೇಯಾಂಕಿತ ಆಟಗಾರ್ತಿ ಅರೀನಾ ಸಬಲೆಂಕಾ ಮಹಿಳಾ ಸಿಂಗಲ್ಸ್ ವಿಭಾಗದ ಯುಎಸ್ ಓಪನ್ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಕ್ವಿನ್ವೆನ್ ಝೆಂಗ್ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್ ಕಾದಾಟದಲ್ಲಿ ಸಬಲೆಂಕಾ 6-1, 6-4 ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ತಮ್ಮ ಅಜೇಯ ದಾಖಲೆ ಉಳಿಸಿಕೊಂಡಿದ್ದಾರೆ. ಸೆಮಿಫೈನಲ್ನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ಅವರನ್ನು ಎದುರಿಸಲಿದ್ದಾರೆ.