Novak Djokovic: ಸೋಲಿನ ಬಳಿಕ ಭಾವುಕರಾದ ಜೊಕೊವಿಕ್, ವಿಂಬಲ್ಡನ್ ಸೋಲನ್ನು ಫೆಡರರ್ ಸೇಡು ಎಂದ ಟೆನಿಸ್ ದೊರೆ
ಸೋಲಿನ ಬಳಿಕ ಜೊಕೊವಿಕ್ ಭಾವುಕರಾದರು. ಈ ಸೋಲಿನ ಬಳಿಕ ಅಚ್ಚರಿಯ ಮಾತುಗಳನ್ನಾಡಿದ ಸೆರ್ಬಿಯಾದ ಟೆನ್ನಿಸ್ ದೊರೆ, 2019ರ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ತಾನು ಗೆಲ್ಲಬಾರದಿತ್ತು ಎಂದು ಹೇಳಿಕೊಂಡರು.
ಭಾನುವಾರ ನಡೆದ ವಿಂಬಲ್ಡನ್ (Wimbledon) ಫೈನಲ್‌ನಲ್ಲಿ ವಿಶ್ವ ಟೆನ್ನಿಸ್ ಲೋಕದ ದಾಖಲೆಯ ಸರದಾರ ನೊವಾಕ್ ಜೊಕೊವಿಕ್‌ಗೆ (Novak Djokovic) ಯುವ ಆಟಗಾರನೊಬ್ಬ ಅಚ್ಚರಿಯ ಸೋಲುಣಿಸಿದರು. ಆರಂಭಿಕ ಸೆಟ್ ಗೆದ್ದ ಬಳಿಕ, ಇದುವರೆಗೂ ಜೊಕೊವಿಕ್ ಗ್ರ್ಯಾಂಡ್ ಸ್ಲಾಮ್ ಪಂದ್ಯವನ್ನು ಸೋತ ಇತಿಹಾಸವೇ ಇಲ್ಲ. ಅವರ ಈ ರೆಕಾರ್ಡ್ ಒಂದೋ ಎರಡೋ ಪಂದ್ಯಗಳದ್ದಲ್ಲ. ಬರೋಬ್ಬರಿ 78-0ಯ ದಾಖಲೆಯನ್ನು ಜೊಕೊವಿಕ್ ಹೊಂದಿದ್ದಾರೆ. ಇಂತಹ ಅನುಭವಿ, ದಿಗ್ಗಜ ಹಾಗೂ ದಾಖಲೆಯ ಆಟಗಾರನಿಗೆ ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್‌ನ ಯುವ ಆಟಗಾರ ಕಾರ್ಲೊಸ್ ಅಲ್ಕರಾಜ್ (Carlos Alcaraz ಸೋಲುಣಿಸಿ ತಮ್ಮ ನಂಬರ್ ವನ್ ಪಟ್ಟವನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ.
ಅನುಭವಿ ಜೊಕೊವಿಕ್ ವಿರುದ್ಧ ದಿಟ್ಟ ಹೋರಾಟ ನಡೆಸಿದ ಕಾರ್ಲೊಸ್ ಅಲ್ಕರಾಜ್, 1-6, 7-6 (6), 6-1, 3-6, 6-4ರ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಬಲಿಷ್ಠ ಆಟಗಾರರ ನಡುವೆ ಫೈನಲ್ ಪಂದ್ಯ ನಡೆಯುತ್ತಿರುವುದರಿಂದ ನೇರ ಸೆಟ್‌ಗಳ ನಿರೀಕ್ಷೆ ಅಭಿಮಾನಿಗಳಿಗೂ ಇರಲಿಲ್ಲ. ಅದರಂತೆಯೇ ಒಟ್ಟು ಐದು ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಸುತ್ತಿನಲ್ಲಿ ಅಂತಿಮವಾಗಿ 6-4 ಅಂಕಗಳಿಂದ ಮೇಲುಗೈ ಸಾಧಿಸಿ, 3-2 ಸೆಟ್‌ಗಳಿಂದ ಗೆದ್ದರು. ಆ ಮೂಲಕ ಚೊಚ್ಚಲ ವಿಂಬಲ್ಡನ್ ಗೆದ್ದರೆ, ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿದರು.
ಅತ್ತ ಅಚ್ಚರಿಯ ಸೋಲಿನ ಬಳಿಕ ಜೊಕೊವಿಕ್ ಕಣ್ಣೀರು ಹಾಕಿದರು. ಈ ಸೋಲಿನ ಬಳಿಕ ಅಚ್ಚರಿಯ ಮಾತುಗಳನ್ನಾಡಿದ ಸೆರ್ಬಿಯಾದ ಟೆನ್ನಿಸ್ ದೊರೆ, 2019ರ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ತಾನು ಗೆಲ್ಲಬಾರದಿತ್ತು ಎಂದು ಹೇಳಿಕೊಂಡರು.
ಮೊದಲ ಗ್ರ್ಯಾನ್‌ಸ್ಲಾಮ್ ಸೋಲು
2013ರ ಜುಲೈ 7ರಂದು ಆಂಡಿ ಮುರ್ರೆ ವಿರುದ್ಧ ಸೋತ ಬಳಿಕ, ವಿಂಬಲ್ಡನ್ ಪಂದ್ಯಗಳು ನಡೆಯುವ ಇಂಗ್ಲೆಂಡ್‌ನ ಪ್ರಮುಖ ಮೈದಾನ ಸೆಂಟರ್ ಕೋರ್ಟ್‌ನಲ್ಲಿ 46 ಪಂದ್ಯಗಳಲ್ಲಿ ಜೊಕೊವಿಕ್ ಅವರ ಮೊದಲ ಸೋಲು ಇದು. ಅವರು ವಿಂಬಲ್ಡನ್ ಫೈನಲ್‌ನಲ್ಲಿ ಸೋತ ಏಕೈಕ ಬಾರಿ. ಇದು 2017ರ ಪಂದ್ಯಾವಳಿ ಬಳಿಕ ಅವರ ಮೊದಲ ಸೋಲು. ಅಲ್ಲದೆ 27 ಗ್ರ್ಯಾನ್‌ಸ್ಲಾಮ್ ಪಂದ್ಯಗಳಲ್ಲಿ ಇದು ಅವರ ಮೊದಲ ಸೋಲು. 2022ರ ಫ್ರೆಂಚ್ ಓಪನ್ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ನ ಮತ್ತೊಬ್ಬ ಬಲಿಷ್ಠ ಆಟಗಾರ ರಾಫೆಲ್ ನಡಾಲ್ ವಿರುದ್ಧ ಕೊನೆಯದಾಗಿ ಜೊಕೊವಿಕ್ ಸೋತಿದ್ದರು.
ಪಂದ್ಯದ ಬಳಿಕ ತಮ್ಮ ಕಿರಿಯ ಮಗ ಸ್ಟೀಫನ್ ಅವರನ್ನು ಉದ್ದೇಶಿಸಿ ಮಾತನಾಡಿದ ಜೊಕೊವಿಕ್, ನಾಲ್ಕು ಗಂಟೆ 42 ನಿಮಿಷಗಳ ಸುದೀರ್ಘ ಪಂದ್ಯದುದ್ದಕ್ಕೂ ಕುಳಿತು ನಗುತ್ತಾ ಪಂದ್ಯ ನೋಡುತ್ತಿದ್ದ ಮಗನ ಬಗ್ಗೆ ಹೇಳುತ್ತಾ ಕಣ್ಣೀರು ಸುರಿಸಿದರು.
"ನನ್ನ ಮಗ ಇನ್ನೂ ನಗುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ. ಐ ಲವ್ ಯೂ, ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದ. ನಾನು ನಿನಗೆ ಬಿಸಿ ಅಪ್ಪುಗೆಯನ್ನು ನೀಡುತ್ತೇನೆ. ನಾವೆಲ್ಲರೂ ಪರಸ್ಪರ ಪ್ರೀತಿಸೋಣ" ಎಂದು ಹೇಳಿದ್ದಾರೆ.
ಮಣ್ಣಿನ ಮತ್ತು ಹಾರ್ಡ್ ಕೋರ್ಟ್‌ಗಳಲ್ಲಿ ಕಾಡಿದ ಬಳಿಕ ಹುಲ್ಲಿನ ಮೈದಾನದಲ್ಲೂ ಅಲ್ಕರಾಜ್ ತಮಗೆ ತೊಂದರೆ ನೀಡುತ್ತಾನೆ ಎಂದು ತನಗೆ ತಿಳಿದಿರಲಿಲ್ಲ ಎಂದು ವಿಶ್ವದ ನಂ.2 ಆಟಗಾರ ತಮಾಷೆ ಧ್ವನಿಯಲ್ಲಿ ಹೇಳಿದರು.
ಭಾರಿ ರೋಚಕತೆಯಿಂದ ಕೂಡಿದ್ದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ವಿರುದ್ಧ ಅಲ್ಕರಾಜ್ 1-6, 7-6(6), 6-1, 3-6, 6-4 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.
ಮೊದಲ ಸೆಟ್‌ನಲ್ಲಿ 1-6 ಸೆಟ್‌ಗಳ ಹಿನ್ನಡೆ ಅನುಭವಿಸಿದ ಸ್ಪೇನ್ ಆಟಗಾರ ಅಲ್ಕರಾಜ್ ಎರಡನೇ ಸೆಟ್‌ನಲ್ಲಿ 7-6 ಸಮಬಲದ ಹೋರಾಟ ನೀಡಿದರು. ಬಳಿಕ ಮೂರನೇ ಸೆಟ್‌ನಲ್ಲಿ 6-1 ಸೆಟ್‌ಗಳಿಂದ ತಿರುಗೇಟು ನೀಡಿ ಮುನ್ನಡೆ ಪಡೆದುಕೊಂಡರು. ನಾಲ್ಕು ಸೆಟ್‌ನಲ್ಲಿ 3-6 ಹಾಗೂ ಅಂತಿಮ ಸೆಟ್‌ನಲ್ಲಿ 6-4ರ ಮುನ್ನಡೆ ಪಡೆದು ಜಯಭೇರಿ ಬಾರಿಸಿದರು. ಸೆರ್ಬಿಯಾದ ಟೆನಿಸ್ ತಾರೆಯನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟರು.