US Open 2023: ಯುಎಸ್​ ಓಪನ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ ಜೋಡಿ; ವಿಶ್ವದಾಖಲೆ ಬರೆದ ಕನ್ನಡಿಗ
ಕನ್ನಡ ಸುದ್ದಿ  /  ಕ್ರೀಡೆ  /  Us Open 2023: ಯುಎಸ್​ ಓಪನ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ ಜೋಡಿ; ವಿಶ್ವದಾಖಲೆ ಬರೆದ ಕನ್ನಡಿಗ

US Open 2023: ಯುಎಸ್​ ಓಪನ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ ಜೋಡಿ; ವಿಶ್ವದಾಖಲೆ ಬರೆದ ಕನ್ನಡಿಗ

Rohan Bopanna-Matthew Ebden: ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಯುಎಸ್​​ ಓಪನ್​​ ಸೆಮಿಫೈನಲ್‌ನಲ್ಲಿ 7-6 (7-3), 6-2 ರಲ್ಲಿ ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು.

ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್
ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್

ಭಾರತದ ರೋಹನ್ ಬೋಪಣ್ಣ (Rohan Bopanna) 2023ರ ಯುಎಸ್ ಓಪನ್‌ನಲ್ಲಿ (US Open 2023) ಪುರುಷರ ಡಬಲ್ಸ್ ಪ್ರಶಸ್ತಿ ಸುತ್ತಿಗೇರುವ ಮೂಲಕ ಗ್ರ್ಯಾಂಡ್ ಸ್ಲಾಮ್‌ನ ಫೈನಲ್ ತಲುಪಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ (Matthew Ebden) 7-6 (7-3), 6-2 ಸೆಟ್​ಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.

ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ (Pierre-Hugues Herbert and Nicolas Mahut) ಅವರನ್ನು ಸೋಲಿಸಿದರು. 43 ವರ್ಷದ ಬೋಪಣ್ಣ ಗ್ರ್ಯಾಂಡ್ ಸ್ಲಾಮ್‌ ಇತಿಹಾಸದಲ್ಲಿ ಪುರುಷರ ಡಬಲ್ಸ್ ಫೈನಲ್‌ ತಲುಪಿದ್ದು ಎರಡನೇ ಬಾರಿಗೆ ಎಂಬುದು ವಿಶೇಷ. ಕೊನೆಯದಾಗಿ 2010 ಯುಎಸ್ ಓಪನ್‌ನಲ್ಲಿ ಅವರು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಅವರೊಂದಿಗೆ ಪ್ರಶಸ್ತಿ ಹಣಾಹಣಿ ತಲುಪಿದ್ದರು. ಸದ್ಯ ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಫೈನಲ್​ಗೇರಿದ ಮೊದಲ ಹಿರಿಯ ಆಟಗಾರ ಎನಿಸಿದ್ದಾರೆ.

ಮೊದಲ ಸೆಟ್‌ನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಒಂದು ಹಂತದಲ್ಲಿ 4-2 ರಿಂದ ಹಿನ್ನಡೆ ಅನುಭವಿಸಿದರು. ನಂತರ ಈ ಜೋಡಿಯು ಸರ್ವ್ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಫ್ರೆಂಚ್ ಜೋಡಿಗೆ ತಿರುಗೇಟು ನೀಡಿತು. ಅಲ್ಲದೆ, ಉಭಯ ಆಟಗಾರರು ಸಮಬಲದ ಹೋರಾಟ ನಡೆಸಿದರು. ಹಾಗಾಗಿ ಮೊದಲ ಸೆಟ್​ ಅನ್ನು ಟೈ ಬ್ರೇಕರ್​ನಲ್ಲಿ ಗೆಲ್ಲುವಂತಾಯಿತು. ಆದರೆ, 2ನೇ ಸೆಟ್​ ಅನ್ನು ಈ ಬೋಪಣ್ಣ ಜೋಡಿ ಸುಲಭವಾಗಿ ಗೆದ್ದುಕೊಂಡು ಫೈನಲ್ ಸುತ್ತಿಗೆ ಅರ್ಹತೆ ಪಡೆಯಿತು.

ಫೈನಲ್​ ಎದುರಾಳಿ ಯಾರು?

ರೋಹಣ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು ಫೈನಲ್​ನಲ್ಲಿ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟಿಷ್ ಆಟಗಾರ ಜೋ ಸಾಲಿಸ್ಬರಿ ಜೋಡಿಯನ್ನು ಎದುರಿಸಲಿದೆ. ಇಂದು ರಾತ್ರಿ (ಸೆಪ್ಟೆಂಬರ್ 8) 9.45ಕ್ಕೆ ಈ ಪಂದ್ಯ ನಡೆಯಲಿದೆ.

ಏಕೈಕ ಪ್ರಶಸ್ತಿ ಗೆದ್ದಿದ್ದಾರೆ!

ಬೋಪಣ್ಣ ತನ್ನ ವೃತ್ತಿಜೀವನದಲ್ಲಿ ಮಿಶ್ರ ಡಬಲ್ಸ್​​ನಲ್ಲಿ ಏಕೈಕ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು 2017ರಲ್ಲಿ ನಡೆದ ಫ್ರೆಂಚ್ ಓಪನ್‌ನಲ್ಲಿ ಗೆದ್ದಿದ್ದರು. ಕೆನಡಾದ ಗೇಬ್ರಿಯೆಲಾ ದಬ್ರೊವ್ಸ್ಕಿ ಅವರ ಜೊತೆಗಾರರಾಗಿದ್ದರು. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್​​ನಲ್ಲಿ ಮಿಶ್ರ ಡಬಲ್ಸ್ ಫೈನಲ್‌ಗೆ ತಲುಪಿದ್ದರು. ಆದರೆ, ಸಹ ಆಟಗಾರ್ತಿ ಸಾನಿಯಾ ಮಿರ್ಜಾ ಅವರೊಂದಿಗೆ ರನ್ನರ್​ ಅಪ್ ಸ್ಥಾನ ಪಡೆದರು. ಆ ಟೂರ್ನಿಯ ನಂತರ ಸಾನಿಯಾ ನಿವೃತ್ತರಾದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.