ಕನ್ನಡ ಸುದ್ದಿ  /  Sports  /  Uruguay Beat Argentina Loses First Match Since Fifa World Cup 2023 South America Wc Qualifying Match Lionel Messi Jra

ವಿಶ್ವಚಾಂಪಿಯನ್‌ ಅರ್ಜೆಂಟೀನಾಗೆ ಅಚ್ಚರಿಯ ಸೋಲುಣಿಸಿದ ಉರುಗ್ವೆ; ವಿಶ್ವಕಪ್‌ ಬಳಿಕ ಮೊದಲ ಸೋಲು

ಫುಟ್ಬಾಲ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅರ್ಜೆಂಟೀನಾ‌ ತಂಡವನ್ನು 2-0 ಗೋಲುಗಳಿಂದ ಉರುಗ್ವೆ ಸೋಲಿಸಿದೆ.

ಪಂದ್ಯದ ಸೋಲಿನ ನಂತರ ನಿರಾಶೆಗೊಂಡ ಲಿಯೋನೆಲ್ ಮೆಸ್ಸಿ
ಪಂದ್ಯದ ಸೋಲಿನ ನಂತರ ನಿರಾಶೆಗೊಂಡ ಲಿಯೋನೆಲ್ ಮೆಸ್ಸಿ (REUTERS)

ವಿಶ್ವಚಾಂಪಿಯನ್‌ ಅರ್ಜೆಂಟೀನಾಗೆ ಉರುಗ್ವೆ ಅಚ್ಚರಿಯ ಸೋಲುಣಿಸಿದೆ. ದಿಗ್ಗಜ ನಾಯಕ ಲಿಯೋನೆಲ್ ಮೆಸ್ಸಿ (Lionel Messi) ತಂಡದಲ್ಲಿದ್ದರೂ, ವಿಶ್ವಕಪ್ ಟ್ರೋಫಿ ಬಳಿಕ ಅಜೇಯವಾಗಿ ಮುನ್ನಡೆಯುತ್ತಿದ್ದ ಅರ್ಜೆಂಟೀನಾಗೆ ಉರುಗ್ವೆ ಶಾಕ್‌ ಕೊಟ್ಟಿದೆ. ಗೆಲುವಿನ ನಾಗಾಲೋಟದಲ್ಲಿದ್ದ ಅರ್ಜೆಂಟೀನಾದ ಅಜೇಯ ಓಟಕ್ಕೆ ತಾತ್ಕಾಲಿಕ ಬ್ರೇಕ್‌ ಸಿಕ್ಕಿದೆ.

ಟ್ರೆಂಡಿಂಗ್​ ಸುದ್ದಿ

ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಉರುಗ್ವೆ ಫುಟ್ಬಾಲ್‌ ತಂಡವು 2-0 ಗೋಲುಗಳ ಅಂತರದಿಂದ ವಿಶ್ವಚಾಂಪಿಯನ್ನರನ್ನು ಸೋಲಿಸಿದೆ. ನವೆಂಬರ್‌ 16ರ ಗುರುವಾರ ಬ್ಯೂನಸ್ ಐರಿಸ್‌ನ ಲಾ ಬೊಂಬೊನೆರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೆಸ್ಸಿ ಬಳಗಕ್ಕೆ ವಿಶ್ವಕಪ್‌ ಬಳಿಕ ಮೊದಲ ಸೋಲು ಎದುರಾಗಿದೆ. ನೂತನ ಕೋಚ್‌ ಮಾರ್ಸೆಲೊ ಬೀಲ್ಸಾ ನೇತೃತ್ವದಲ್ಲಿ ಉರುಗ್ವೆ ತಂಡಕ್ಕೆ ಇದು ಈವರೆಗಿನ ಅತಿದೊಡ್ಡ ಗೆಲುವಾಗಿದೆ.

ಫಿಫಾ ವಿಶ್ವಕಪ್‌ನಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋಲು

ಕಳೆದ ವರ್ಷ ಕತಾರ್‌ನಲ್ಲಿ ನಡೆದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸೌದಿ ಅರೇಬಿಯಾ ವಿರುದ್ಧದ ಗ್ರೂಪ್ ಹಂತದ ಆರಂಭಿಕ ಪಂದ್ಯದಲ್ಲಿ ಅರ್ಜೆಂಟೀನಾ ಅಚ್ಚರಿಯ ಸೋಲು ಕಂಡಿತ್ತು. ಅದಾದ ಬಳಿಕ ಅರ್ಜೆಂಟೀನಾ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಸೋತಿಲ್ಲ. ಆದರೆ, ಗುರುವಾರ ಶಾಕಿಂಗ್‌ ಸೋಲು ಕಂಡಿದೆ.

ಇದನ್ನೂ ಓದಿ: ಹಿಂದಿಗಿಂತ ಬಲಿಷ್ಠರಾಗಿದ್ದೇವೆ; ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಸಿದ್ಧರಾಗಿದ್ದೇವೆ: ಸುನಿಲ್‌ ಛೆಟ್ರಿ

ಪಂದ್ಯದ 10ನೇ ನಿಮಿಷದಲ್ಲಿ ಡಿಫೆಂಡರ್ ನಿಕೋಲಸ್ ಒಟಮೆಂಡಿ ಅವರ ತಪ್ಪಿನಿಂದಾಗಿ, ಡಾರ್ವಿನ್ ನೂನೆಜ್ ಕ್ರಾಸ್ ಮಾಡಿದ ಹೊಡೆತದಿಂದ ಉರುಗ್ವೆ ಗೋಲಿನ ಖಾತೆಯನ್ನು ತೆರೆಯಿತು. ಪಂದ್ಯದ 42ನೇ ನಿಮಿಷದಲ್ಲಿ ಮಟಿಯಾಸ್ ವಿನಾ ಸುಲಭವಾಗಿ ನಹುಯೆಲ್ ಮೊಲಿನಾ ಅವರಿಂದ ಚೆಂಡನ್ನು ವಶಪಡೆದು ಪೆನಾಲ್ಟಿ ಬಾಕ್ಸ್‌ಗೆ ನಿಧಾನವಾಗಿ ಕ್ರಾಸ್ ಮಾಡಿದರು. ರೊನಾಲ್ಡ್ ಅರಾಜೊ ಅದನ್ನು ನೆಟ್‌ನ ಹಿಂಭಾಗಕ್ಕೆ ಹೊಡೆದರು.

ಸೋತರೂ ಅಗ್ರಸ್ಥಾನ

ಪಂದ್ಯದಲ್ಲಿ ಸೋಲು ಕಂಡರೂ, ಮೆಸ್ಸಿ ಬಳಗ ಇನ್ನೂ 10 ತಂಡಗಳ ದಕ್ಷಿಣ ಅಮೆರಿಕಾದ ಅರ್ಹತಾ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ತಂಡವು ಈವರೆಗೆ ಆಡಿದ ಐದು ಪಂದ್ಯಗಳಿಂದ 12 ಅಂಕಗಳನ್ನು ಸಂಪಾದಿಸಿದೆ. ಅತ್ತ ಉರುಗ್ವೆ ತಂಡ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮತ್ತೆ ಒಂದಾದ ಅಪ್ಪ-ಮಗ; ಕಿಡ್ನಾಪ್‌ ಆಗಿದ್ದ ತಂದೆಯನ್ನು ತಬ್ಬಿಕೊಂಡ ಖ್ಯಾತ ಫುಟ್ಬಾಲ್‌ ಆಟಗಾರ

ಕೊಲಂಬಿಯಾ ಒಂಬತ್ತು ಅಂಕ ಮತ್ತು ವೆನೆಜುವೆಲಾ ಎಂಟು ಪಾಯಿಂಟ್‌ಗಳೊಂದಿಗೆ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿವೆ. ಬ್ರೆಜಿಲ್ ತಂಡವು ಏಳು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಈಕ್ವೆಡಾರ್, ಪರಾಗ್ವೆ ಮತ್ತು ಚಿಲಿ ತಲಾ ಐದು ಅಂಕಗಳನ್ನು ಹೊಂದಿದ್ದರೆ, ಬೊಲಿವಿಯಾ ಮೂರು ಮತ್ತು ಪೆರು ಒಂದು ಅಂಕ ಹೊಂದಿದೆ.

2026ರಲ್ಲಿ ಫಿಫಾ ವಿಶ್ವಕಪ್

2026ರ ಫಿಫಾ ವಿಶ್ವಕಪ್ ಪಂದ್ಯಾವಳಿಗೆ ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೋ ಮತ್ತು ಕೆನಡಾ ಆತಿಥ್ಯ ವಹಿಸುತ್ತಿದೆ. ಟೂರ್ನಿಗಾಗಿ ಈಗಲೇ ಅರ್ಹಾತಾ ಸುತ್ತು ನಡೆಯುತ್ತಿದೆ. ವಿಶ್ವಕಪ್‌ನಲ್ಲಿ ಒಟ್ಟು 48 ತಂಡಗಳು ಭಾಗವಹಿಸಲಿವೆ. ಹೀಗಾಗಿ ದಕ್ಷಿಣ ಅಮೆರಿಕಾ ಅರ್ಹತಾ ಪಂದ್ಯಾವಳಿಯಲ್ಲಿ ಅಗ್ರ ಆರು ತಂಡಗಳು ನೇರವಾಗಿ ಟೂರ್ನಿಗೆ ಪ್ರವೇಶ ಪಡೆಯುತ್ತವೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಪಡೆಯುವ ತಂಡವು ತಂಡವು ಖಂಡಾಂತರ ಪ್ಲೇಆಫ್‌ನಲ್ಲಿ ಗೆದ್ದು ಅರ್ಹತೆ ಪಡೆಯುವ ಅವಕಾಶ ಪಡೆಯುತ್ತದೆ.

ಸಂಬಂಧಿತ ಲೇಖನ