ಡಿಸೆಂಬರ್‌ನಲ್ಲೇ ಪಿವಿ ಸಿಂಧು ಮದುವೆ; ಒಲಿಂಪಿಕ್ ಪದಕ ವಿಜೇತೆ ಕೈಹಿಡಿಯುವ ಹುಡುಗ ವೆಂಕಟ ದತ್ತ ಸಾಯಿ ಯಾರು?
ಕನ್ನಡ ಸುದ್ದಿ  /  ಕ್ರೀಡೆ  /  ಡಿಸೆಂಬರ್‌ನಲ್ಲೇ ಪಿವಿ ಸಿಂಧು ಮದುವೆ; ಒಲಿಂಪಿಕ್ ಪದಕ ವಿಜೇತೆ ಕೈಹಿಡಿಯುವ ಹುಡುಗ ವೆಂಕಟ ದತ್ತ ಸಾಯಿ ಯಾರು?

ಡಿಸೆಂಬರ್‌ನಲ್ಲೇ ಪಿವಿ ಸಿಂಧು ಮದುವೆ; ಒಲಿಂಪಿಕ್ ಪದಕ ವಿಜೇತೆ ಕೈಹಿಡಿಯುವ ಹುಡುಗ ವೆಂಕಟ ದತ್ತ ಸಾಯಿ ಯಾರು?

ಪಿವಿ ಸಿಂಧು ಡಿಸೆಂಬರ್ 22ರಂದು ಐಟಿ ಉದ್ಯೋಗಿ ವೆಂಕಟ ದತ್ತ ಸಾಯಿ ಅವರನ್ನು ಮದುವೆಯಾಗಲಿದ್ದಾರೆ. ಈ ಬಗ್ಗೆ ಕುಟುಂಬ ಮಾಹಿತಿ ನೀಡಿದೆ. ಜನವರಿ ತಿಂಗಳಿಂದ ಸಿಂಧುಗೆ ಬ್ಯುಸಿ ಶೆಡ್ಯೂಲ್‌ ಇರುವುದರಿಂದ, ಈ ತಿಂಗಳೇ ಮದುವೆ ಕಾರ್ಯ ಮುಗಿಸಲು ಎರಡೂ ಕುಟುಂಬಗಳು ನಿರ್ಧರಿಸಿವೆ.

ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಕೈಹಿಡಿಯುವ ಹುಡುಗ ವೆಂಕಟ ದತ್ತ ಸಾಯಿ ಯಾರು?
ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಕೈಹಿಡಿಯುವ ಹುಡುಗ ವೆಂಕಟ ದತ್ತ ಸಾಯಿ ಯಾರು? (X, Linked in)

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು‌ (PV Sindhu) ಮದುವೆಯಾಗುತ್ತಿದ್ದಾರೆ. ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಭಾರತೀಯ ಬ್ಯಾಡ್ಮಿಂಟನ್‌ ತಾರೆ ಹಸೆಮಣೆ ಏರುವುದು ಖಚಿತವಾಗಿದೆ. ಈ ಸಂಬಂಧ ಎರಡೂ ಕುಟುಂಬಗಳ ಮಾತುಕತೆ ಅಂತಿಮವಾಗಿದ್ದು, ಡಿಸೆಂಬರ್ 22ರಂದು ಉದಯಪುರದಲ್ಲಿ ನಡೆಯಲಿರುವ ಮದುವೆ ಸಮಾರಂಭದಲ್ಲಿ ಹಿರಿಯ ಐಟಿ ಉದ್ಯೋಗಿ ವೆಂಕಟ ದತ್ತ ಸಾಯಿ ಅವರ ಕೈಹಿಡಿಯಲಿದ್ದಾರೆ ಎಂದು ತಿಳಿದುಬಂದಿದೆ.

ಒಂದು ತಿಂಗಳ ಹಿಂದೆಯಷ್ಟೇ ಮದುವೆ ಮಾತುಕತೆ ಅಂತಿಮವಾಯ್ತು. ಜನವರಿಯಿಂದ 2025ರ ಋತುವನ್ನು ಸಿಂಧು ಪ್ರಾರಂಭಿಸುವುದರಿಂದ, ಈ ತಿಂಗಳು ಮದುವೆ ಮಾಡಬೇಕೆಂದು ಎರಡೂ ಕುಟುಂಬಗಳು ನಿರ್ಧರಿಸಿವೆ ಎಂದು ಸಿಂಧು ತಂದೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

“ಎರಡೂ ಕುಟುಂಬಗಳ ಬಗ್ಗೆ ಪರಸ್ಪರ ತಿಳಿದಿದೆ. ಆದರೆ ಒಂದು ತಿಂಗಳ ಹಿಂದೆಯಷ್ಟೇ ಎಲ್ಲ ರೀತಿಯ ಮಾತುಕತೆ ಅಂತಿಮಗೊಳಿಸಲಾಯಿತು. ಜನವರಿಯಿಂದ ಸಿಂಧು ಅವರ ವೇಳಾಪಟ್ಟಿಯಲ್ಲಿ ಬಿಡುವಿಲ್ಲದ ಕಾರಣ ಅವರಿಗೆ ಪಂದ್ಯಗಳಿಲ್ಲದ ಏಕೈಕ ಅವಧಿ ಇದು,” ಎಂದು ಪಿವಿ ರಮಣ ತಿಳಿಸಿದ್ದಾರೆ. “ಈ ಕಾರಣಕ್ಕಾಗಿಯೇ ಎರಡೂ ಕುಟುಂಬಗಳು ಡಿಸೆಂಬರ್ 22ರಂದು ವಿವಾಹ ಸಮಾರಂಭ ನಡೆಸಲು ನಿರ್ಧರಿಸಿವೆ. ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಮುಂದಿನ ಋತು ತುಂಬಾ ಮುಖ್ಯವಾಗಲಿರುವುದರಿಂದ ಅವರು ಶೀಘ್ರದಲ್ಲೇ ತಮ್ಮ ತರಬೇತಿ ಆರಂಭಿಸಲಿದ್ದಾರೆ,” ಎಂದು ಅವರು ಹೇಳಿದರು.

ಸಿಂಧು ಪತಿ ವೆಂಕಟ ದತ್ತ ಸಾಯಿ ಯಾರು?

ವೆಂಕಟ ದತ್ತ ಸಾಯಿ, ಪೊಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ. ಅವರ ಸಂಸ್ಥೆಯ ಹೊಸ ಲೋಗೋವನ್ನು ಕಳೆದ ತಿಂಗಳು ಸಿಂಧು ಅನಾವರಣಗೊಳಿಸಿದ್ದರು. ಸಾಯಿ ಅವರು ಭಾರತೀಯ ಕಂದಾಯ ಸೇವೆಯ (IRS) ಭಾಗವಾಗಿದ್ದ ಪೊಸಿಡೆಕ್ಸ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿಟಿ ವೆಂಕಟೇಶ್ವರ ರಾವ್ ಅವರ ಪುತ್ರ.

ಸಾಯಿ ಅವರು, ಫೌಂಡೇಶನ್ ಆಫ್ ಲಿಬರಲ್ ಅಂಡ್ ಮ್ಯಾನೇಜ್ಮೆಂಟ್ ಎಜುಕೇಶನ್‌ನಿಂದ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್ / ಲಿಬರಲ್ ಸ್ಟಡೀಸ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. 2018ರಲ್ಲಿ ಫ್ಲೇಮ್ ಯೂನಿವರ್ಸಿಟಿ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಬಿಬಿಎ ಅಕೌಂಟಿಂಗ್ ಮತ್ತು ಫೈನಾನ್ಸ್ ಓದಿದಿದ್ದಾರೆ. ಆ ನಂತರ ಬೆಂಗಳೂರಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್‌ಮೇಷನ್ ಟೆಕ್ನಾಲಜಿಯಿಂದ ಡೇಟಾ ಸೈನ್ಸ್ ಮತ್ತು ಮಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸಿಂಧು ಮದುವೆಯಾಗುತ್ತಿರುವ ಸಾಯಿ ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಸಾಯಿ 2019ರ ಡಿಸೆಂಬರ್‌ನಿಂದ ಪೊಸಿಡೆಕ್ಸ್‌ನಲ್ಲಿ ಪ್ರಾರಂಭಿಸುವ ಮೊದಲು ಜೆಎಸ್‌ಡಬ್ಲ್ಯೂನಲ್ಲಿ ಮತ್ತು ನಂತರ ಸೋರ್ ಆಪಲ್ ಅಸೆಟ್ ಮ್ಯಾನೇಜ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಭಾರತ ಶ್ರೇಷ್ಠ‌ ಬ್ಯಾಡ್ಮಿಂಟನ್‌ ಆಟಗಾರ್ತಿ

ಸಿಂಧು ಅವರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಸತತ ಪದಕ ಗೆದ್ದಿರುವ ಆಟಗಾರ್ತಿ. 2019ರಲ್ಲಿ ಚಿನ್ನ ಸೇರಿದಂತೆ ಐದು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಗೆದ್ದ ಭಾರತದ ಶ್ರೇಷ್ಠ ಅಥ್ಲೀಟ್‌ಗಳಲ್ಲಿ ಒಬ್ಬರು. 2016ರ ರಿಯೊ ಮತ್ತು 2020ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸತತ ಪದಕಗಳನ್ನು ಗೆದ್ದರು. 2017ರಲ್ಲಿ ತಮ್ಮ ವೃತ್ತಿಜೀವನದ-ಉನ್ನತ ವಿಶ್ವ ನಂಬರ್‌ 2 ಶ್ರೇಯಾಂಕವನ್ನು ಸಾಧಿಸಿದರು.

ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ 2024 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 18ನೇ ಸ್ಥಾನದಲ್ಲಿರುವ ಪಿವಿ ಸಿಂಧು, ಬಿಡಬ್ಲ್ಯುಎಫ್ ಸೂಪರ್ 300 ಟೂರ್ನಿಯ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 17ರ ಹರೆಯದ ಉನ್ನತಿ ಹೂಡಾ ಅವರನ್ನು 21-12, 21-9 ಸೆಟ್‌ಗಳಿಂದ ಸೋಲಿಸಿದರು. ಭಾನುವಾರ (ಡಿ.8) ನಡೆಯಲಿರುವ ಫೈನಲ್‌ನಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ 119ನೇ ಶ್ರೇಯಾಂಕದ ವು ಲುವೊ ಯು ಅವರನ್ನು ಎದುರಿಸಲಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.